ಜಾನಪದ ಗೀತೆಗಳು
* ಜಾನಪದ ಗೀತೆಗಳು * - ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯ ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು. ನಮ್ಮ ಹಳ್ಳಿಗಳಲ್ಲಿಯ ಕಲೋಪಾಸಕತ್ವವನ್ನು, ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. *ಜನಪದಗಳಲ್ಲಿ ತ್ರಿಪದಿಗಳು*- ಹಾಲು ಜೇನು ಸುರಿದಂತೆ ಇದರ ಸವಿ. ಮೂರೇ ಪಾದಗಳು ಕಂಡರೂ ಹಾಡುವಾಗ ನಡುವಿನ ಪಾದದ ಪುನರಾವರ್ತನೆಯಿಂದ ತ್ರಿಪದಿಗೆ ನಾಲ್ಕು ಪಾದಗಳಾಗುತ್ತವೆ. ಕುಟ್ಟುವಾಗ, ಬೀಸುವಾಗ, ಜೋಗುಳ ಹಾಡುವಾಗ, ಪೂಜೆ ಮಾಡುವಾಗ ತ್ರಿಪದಿಯ ಹಾಡುಗಳನ್ನು ಜನ ಬಳಸುತ್ತಾರೆ. ದನಿಯಲ್ಲಿ ಎಳೆತದಲ್ಲಿ ತಾಳಲಯಗಳಲ್ಲಿ ದೇಸಿಯ ಸೊಗಡೇ ಹೆಚ್ಚು. ಮಹಿಳೆಯರು ತಾವು ಅನುಭವಿಸಿದ ಸುಖ-ದುಃಖ, ಆಶೆ-ನಿರಾಶೆ, ತಾಯ್ತನ,ಮುತ್ತೈದೆತನ, ದಾಪಂತ್ಯಜೀವನ,ತವರಿನ ಹಂಬಲ, ಸಹೋದರರ ವಾತ್ಸಲ್ಯ,ಬಂಜೆತನದ ಬವಣೆ ಹೃದಯದಿಂದ ಹಾಡಿದರು. ೧. ಉಪ್ಪರಿಗೆ ಮನೆ ಬೇಕು ಕೊಪ್ಪರಿಗೆ ಹಣ ಬೇಕು ಕೃಷ್ಣದೇವರಂತ ...