ಜಾನಪದ ಗೀತೆಗಳು
ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯ ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು. ನಮ್ಮ ಹಳ್ಳಿಗಳಲ್ಲಿಯ ಕಲೋಪಾಸಕತ್ವವನ್ನು, ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು.
ಹಾಲು ಜೇನು ಸುರಿದಂತೆ ಇದರ ಸವಿ. ಮೂರೇ ಪಾದಗಳು ಕಂಡರೂ ಹಾಡುವಾಗ ನಡುವಿನ ಪಾದದ ಪುನರಾವರ್ತನೆಯಿಂದ ತ್ರಿಪದಿಗೆ ನಾಲ್ಕು ಪಾದಗಳಾಗುತ್ತವೆ. ಕುಟ್ಟುವಾಗ, ಬೀಸುವಾಗ, ಜೋಗುಳ ಹಾಡುವಾಗ, ಪೂಜೆ ಮಾಡುವಾಗ ತ್ರಿಪದಿಯ ಹಾಡುಗಳನ್ನು ಜನ ಬಳಸುತ್ತಾರೆ. ದನಿಯಲ್ಲಿ ಎಳೆತದಲ್ಲಿ ತಾಳಲಯಗಳಲ್ಲಿ ದೇಸಿಯ ಸೊಗಡೇ ಹೆಚ್ಚು. ಮಹಿಳೆಯರು ತಾವು ಅನುಭವಿಸಿದ ಸುಖ-ದುಃಖ, ಆಶೆ-ನಿರಾಶೆ, ತಾಯ್ತನ,ಮುತ್ತೈದೆತನ, ದಾಪಂತ್ಯಜೀವನ,ತವರಿನ ಹಂಬಲ, ಸಹೋದರರ ವಾತ್ಸಲ್ಯ,ಬಂಜೆತನದ ಬವಣೆ ಹೃದಯದಿಂದ ಹಾಡಿದರು.
೧.
ಉಪ್ಪರಿಗೆ ಮನೆ ಬೇಕು
ಕೊಪ್ಪರಿಗೆ ಹಣ ಬೇಕು
ಕೃಷ್ಣದೇವರಂತ ಮಗ ಬೇಕು।
ಕೃಷ್ಣದೇವರಂತ ಮಗ ಬೇಕು
ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕು।।
ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ|
ಕೆಟ್ಟರೆ ಕೆಡಲಿ ಮನೆಗೆಲಸ
ಕಂದಮ್ಮನ ಎತ್ತಿ ಕೊಂಬಂಥ ಭಾಗ್ಯ ನಮಗಿರಲಿ।।
೩.
ಮಾಳಿಗೆ ಮನೆ ಬೇಕು,ಜೋಳಿಗೆ ಹಣ ಬೇಕು
ರಾಮದೇವರಂತ ಮಗ ಬೇಕು।
ರಾಮದೇವರಂತ ಮಗ ಬೇಕು
ನಮ್ಮನಿಗೆ ಜಾನಕಿಯಂತ ಸೊಸೆ ಬೇಕು।।
೪.
ಅತ್ತು ಕಾಡುವವನಲ್ಲ ಮತ್ತೆ ಬೇಡುವವನಲ್ಲ,
ಮೆತ್ತನೆ ಎರಡು ಅತಿರಸ ಕೊಟ್ಟರೆ।
ಮೆತ್ತನೆ ಎರಡು ಅತಿರಸ ಕೊಟ್ಟರೆ
ಗಪ್ಪುಚಿಪ್ಪಾಗಿ ಮಲಗ್ಯಾನು।।
೫.
ಕಾಶಿಗೆ ಹೋಗಾಕ ಏಸೋಂದ ದಿನ ಬೇಕ
ತಾಸಹೋತ್ತೀನಹಾದೀ ತವರೂರ। ತಾಸಹೋತ್ತೀನಹಾದೀ ತವರೂರ
ಕಾಶಿ ಕುಂತಾಳ ಹಡೆದವ್ವ।।
"ತಾಯಿಯೇ ಕಾಶಿ ಪುಣ್ಯಕ್ಷೇತ್ರ"
ತವರ ಮನಿಯ ದೀಪ ತವಕೇರೀ ನೋಡೇನ
ಹತ್ತು ಬೆರಳ ಹಚ್ಚಿ ಶರಣೇoದೆ।
ಹತ್ತು ಬೆರಳ ಹಚ್ಚಿ ಶರಣೇoದೆ
ತಮ್ಮಂದಿರು ಜಯವoತರಾಗಿ ಇರಲೆಂದೆ।।
೭.
ತಾಯಿ ಇದ್ದರೆ ತವರ ಹೆಚ್ಚು
ತಂದೆ ಇದ್ದರೆ ಬಳಗ ಹೆಚ್ಚು
ಸಾವಿರಕ್ಕೆ ಹೆಚ್ಚು ಪತಿ ಪುರುಷ।
ಸಾವಿರಕ್ಕೆ ಹೆಚ್ಚು ಪತಿ ಪುರುಷ
ಹೊಟ್ಟೆಲಿ ಹುಟ್ಟಿದ ಮಾಣಿಕ್ಯದಂಥ ಮಗ ಹೆಚ್ಚು।।
ಆಡಿ ಬಾ ನನ ಕಂದ ಅಂಗಾಲ ತೋಳದೇನ
ತೆಂಗಿನಕಾಯಿ ತಿಳಿನೀರ ತಕ್ಕೊಂಡು। ತೆಂಗಿನಕಾಯಿ ತಿಳಿನೀರ ತಕ್ಕೊಂಡು
ಬಂಗಾರದ ಮಾರೀ ತೋಳದೇನ।।
೯.
ಅತ್ತು ಕಾಡುವವನಲ್ಲ ಮತ್ತೆ ಬೇಡುವವನಲ್ಲ
ಎತ್ತಿ ಕೊಳ್ಳೆಂಬ ಹಠವಿಲ್ಲ।
ಎತ್ತಿ ಕೊಳ್ಳೆಂಬ ಹಠವಿಲ್ಲ
ನಿನ್ನಂಥ ಹತ್ತು ಮಕ್ಕಳು ಇರಬಹುದು।।
೧೦.
ಕೂಸು ಇದ್ದ ಮನೆಗೆ ಬಿಸಣಕಿ ಯಾತಕ
ಕೂಸು ಕಂದಯ್ಯ ಒಳಹೊರಗು।
ಕೂಸು ಕಂದಯ್ಯ ಒಳಹೊರಗು
ಆಡಿದರ ಬೀಸಣಿಗಿ ಗಾಳಿ ಸುಳಿದಾವ।।
೧೧.
ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು|
ನಾಕೆಮ್ಮೆ ಕರೆದ ನೊರೆ ಹಾಲು ಸಕ್ಕರೆ
ನೀ ಕೇಳಿದಾಗ ಕೊಡುವೇನು||
೧೨.
ಯಾತಕ ಅಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ|
ಕಾಯದ ಹಾಲ ಕೆನೆ ಬೇಡಿ ಕಂದಯ್ಯ
ಕಾಡಿ ಕೈಬಿಟ್ಟು ಇಳಿದಾನ||
ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ|
ಕುಡಿಹುಬ್ಬು ಬೇವಿನೆಸಳಂಗೆ
ಶಿವನ ಕೈಯಲಗು ಹೊಳೆದಂತೆ||
ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ|
ಕೆಟ್ಟರೆ ಕೆಡಲಿ ಮನೆಗೆಲಸ
ಮಕ್ಕಳಿರಲವ್ವ ಮನೆತುಂಬ||
೧೫.
ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು|
ಹಾಲ ಹಂಬಲವ ಮರೆತಾನು
ಕಂದಂಗೆ ಜೋಗೂಳ ರಾಗ ಅತಿಮುದ್ದು||
೧೬.
ಆಡಿ ಬಾ ಎನ್ನ ಕಂದ ಅಂಗಳ ತೊಳೆದೇನ
ತೆಂಗಿನ ಕಾಯಿ ತಿಳಿನೀರ।
ತೆಂಗಿನ ಕಾಯಿ ತಿಳಿನೀರ ತಕ್ಕೊಂಡು
ಬಂಗಾರದ ಮೊರೆ ತೊಳೆದೇನ||
೧೭.
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ।
ಕೂಸು ಕಂದಯ್ಯ ಒಳ ಹೊರಗ ಆಡಿದರೆ
ಬೀಸಣಿಗೆ ಗಾಳಿ ಸುಳಿದಾವ||
೧೮.
ಅಳಬುರಕ ಗಿಳಬುರಕ ಇದು ಎಂಥ ಮಗನವ್ವ
ಉಣಗೋಡದ ರೊಟ್ಟಿ,ಸುಡುಗೋಡದ ಬಾನ।
ಉಣಗೋಡದ ರೊಟ್ಟಿ, ಸುಡುಗೋಡದ ಬಾನ
ನನ್ನ ಮಗನ ಎತ್ತಿ ಕೊಳ್ಳುವವರ ಯಾರಿಲ್ಲ।।
ಮಾಳಿಗೆ ಮನೆ ಬೇಕ, ಜೋಳಿಗೆ ಹಣ ಬೇಕ
ರಾಮ ದೇವರಂತ ಮಗ ಬೇಕ।
ರಾಮ ದೇವರಂತ ಮಗ ಬೇಕ
ನಮ್ಮನಿಗೆ ಜಾನಕಿಯಂತ ಸೊಸಿ ಬೇಕ।।
೨೦.
ಉಪ್ಪರಿಗೆ ಮನಿ ಬೇಕ, ಕೊಪ್ಪರಿಗೆ ಹಣ ಬೇಕ
ತಂಬಿಗೆ ಹಿಡಿಯಾಕ ಸೊಸಿ ಬೇಕ।
ತಂಬಿಗೆ ಹಿಡಿಯಾಕ ಸೊಸಿ ಬೇಕ
ಕೂಡಲಸಂಗಮಕ ಹೋಗಿ ಬರಬೇಕ।।
೨೧.
ಹಾಲ ಬೀದಿ ಹರಿದಿತ್ತು
ನೀರು ಬೀದಿ ನಿಂತಿತ್ತು
ಮೊಸರು ಬೀದಿ ಕೆಸರು ತುಳಿದಿತ್ತು।
ಮೊಸರು ಬೀದಿ ಕೆಸರುತುಳಿದಿತ್ತು ಕಂದಮ್ಮಗೆ
ಕೆನೆ ಮೊಸರು ಕೊಟ್ಟೇನು।।
೨೨)
ಆರುಸೇರಿನ ಸರಗಿ ಅರಗಿಲ್ಲದ ಕಟ್ಟಾಣಿ
ನತ್ತು ಬೇಡಿದರೆ ನಗುವಂಥ।
ನತ್ತು ಬೇಡಿದರೆ ನಗುವಂಥ ರಾಯರನು
ನಿಂತು ಬೇಡೇನಿ ಶಿವನಲ್ಲಿ।।
೨೩)
ಓಲೆ ಒಳ್ಳೇದು ಒಳಗೆ ಚಿನ್ನವಿಲ್ಲ
ಸೀರೆ ಒಳ್ಳೇದು ಸೆರಗಿಲ್ಲ।
ಸೀರೆ ಒಳ್ಳೇದು ಸೆರಗಿಲ್ಲ ತಾಯಮ್ಮ
ರಾಯರೊಳ್ಳೆವ್ರು ಗುಣವಿಲ್ಲ।।
೨೪)
ಹೋಗಿ ಬಾರೆ ಹೊನ್ನೋಲೆ ಕಿವಿಯೋಳೆ
ಕೆನ್ನೇಲಿ ಸೂರ್ಯ ಹೊಳೆಯೋಳೆ।
ಕೆನ್ನೇಲಿ ಸೂರ್ಯ ಹೊಳೆಯೋಳೆ ಸೊಸೆಮುದ್ದಿ
ತೌರು ಒಳ್ಳೇದೆಂದು ಇರಬೇಡ।।
೨೫)
ಕನ್ನೇಯ ಬಡಿಬ್ಯಾಡ ಕೈಬಳಿ ಒಡೆದಾವು
ಸಣ್ಣಂಚಿನೋಲೆ ಮುರಿದಾವು।
ಸಣ್ಣಂಚಿನೋಲೆ ಮುರಿದಾವು ನನ ಮಗನೆ
ನನ್ನಾಣೆ ಮಡದಿ ಬಡಿಬ್ಯಾಡ।।
೨೬)
ಮತ್ತಿನ ಮೊಗುತಿ ನನ್ನಪ್ಪ ಮಾಡಿಸಿಕೊಟ್ಟ
ಮುತ್ತೈದೆತನವ ಶಿವಕೊಟ್ಟ ಮೇಲೆ।
ಮುತ್ತೈದೆತನವ ಶಿವಕೊಟ್ಟ ಮೇಲೆ ಬಹು
ಭಾಗ್ಯವನು ಕೊಟ್ಟ ಶ್ರೀಹರಿಯು।।
೨೭)
ಕಟ್ಟಾಣಿ ಗುಂದಿಗೆ ಕಲ್ಲು ಹಾಕಿದ ಉಂಗುರ
ಸಿಟ್ಟು ಮಾಡಿದರೆ ನಗುವಂಥ।
ಸಿಟ್ಟು ಮಾಡಿದರೆ ನಗುವಂಥ ರಾಯರನು
ಬಿಟ್ಟ್ಹೆಂಗೆ ಬರಲೆ ಹಡೆದವ್ವ।।
ಬಂಗಾರದ ಬಳಿ ಸಾಕು ನನ್ನ ಬಲಗೈಗೆ
ನಾಲ್ಕೇವರಹದ ವಾಲಿ ಹೂ ಬುಗುಡಿ।
ನಾಲ್ಕೇವರಹದ ವಾಲಿ ಹೂ ಬುಗುಡಿ ಗೆಜ್ಜೆಟೀಕಿ
ಸಾಕು ತವರವರು ಬಡವರು।।
೨೯)
ಹಡೆದವ್ವನಿದ್ದಾಗ ನಡುಮನಿ ನನಗಿತ್ತ
ಕಡಗದ ಸೊಸಿ ಬಂದು।
ಕಡಗದ ಸೊಸಿ ಬಂದುನಡೆದಾಗ
ತವರು ಮನೆ ನನಗೆ ಎರವಾಯ್ತು।।
೩೦)
ಬಂಗಾರ ಬಳಿಯಿಟ್ಟು ಬೈಬ್ಯಾಡ ಬಡವರಿಗೆ
ಬಂಗಾರ ನಿನಗೆ ಸ್ಥಿರವಲ್ಲ।
ಬಂಗಾರ ನಿನಗೆ ಸ್ಥಿರವಲ್ಲ ಮಧ್ಯ್ನಾನದ
ಬಿಸಿಲು ಹೊಳ್ಳೋದು ತಡವಲ್ಲ।।
೩೧)
ಚೆಲ್ವಿ ಚೆಲ್ವಿ ಎಂದು ಅತಿಯಾಸೆ ಪಡಬೇಡ
ಚೆಲ್ವು ಇದ್ದರೇನು ಗುಣವಿಲ್ಲ।
ಚೆಲ್ವು ಇದ್ದರೇನು ಗುಣವಿಲ್ಲ
ಹೊಳೆನೀರು ತಿಳಿ ಇದ್ದರೇನು ರುಚಿ ಇಲ್ಲಾ।।
೩೨)
ಕಪ್ಪು ಹೆಂಡತಿಯೆಂದು ಕಳವಳ ಪಡಬೇಡ
ನೇರಳೆ ಹಣ್ಣು ಬಲು ಕಪ್ಪು।
ನೇರಳೆ ಹಣ್ಣು ಬಲು ಕಪ್ಪು
ಇದ್ದರೂ ತಿಂದು ನೋಡಿದರೆ ರುಚಿ ಬಹಳ।।
೩೩)
ಹತ್ತಿಯ ಹಣ್ಣು ಬಲು ಕೆಂಪು।
ಹತ್ತಿಯ ಹಣ್ಣು ಬಲು ಕೆಂಪು
ಇದ್ದರೂ ಒಡೆದು ನೋಡಿದರೆ ಹುಳು ಬಹಳಾ।।
೩೪)
ಕಾಲುಂಗ್ರದ ತಂಗೀಯ ಕರೆಯಾಕೆ ಬಂದವ್ರೆ
ಕಾರೋಡ್ಡಿ ಹುಯ್ಯೋ ಮಳೆರಾಯ।
ಕಾರೋಡ್ಡಿ ಹುಯ್ಯೋ ಮಳೆರಾಯ
ತಂಗಿಯ ಇಂದಿನ ಪಯಣ ಉಳಿಯಲಿ।।
೩೫)
ಹೆಣ್ಣಿನ ಜನುಮಾಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರು ಸಭೆಯೊಳಗೆ।
ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ
ಹೊನ್ನು ಕಟ್ಟುವರು ಉಡಿಯೊಳಗೆ||
೩೬)
ಎನಗೆ ಯಾರಿಲ್ಲಂತ ಮನದಾಗ ಮರುಗಿದರ
ಪರನಾಡಲೊಬ್ಬ ಪ್ರತಿಸೂರ್ಯ ।
ಪರನಾಡಲೊಬ್ಬ ಪ್ರತಿಸೂರ್ಯ ನನ್ನಣ್ಣ
ಬಿದಿಗೆ ಚಂದ್ರಾಮ ಉದಿಯಾದ।l
೩೭)
ಮನೆಯ ಹಿಂದಿಲ ಮಾವು ನೆನೆದಾರೆ
ಘಮ್ಮೆಂದು ನೆನೆದಂಗೆ ಬಂದ ನನ ಅಣ್ಣ|
ಘಮ್ಮೆಂದು ನೆನೆದಂಗೆ ಬಂದ ನನ ಅಣ್ಣ ಬಾಳೆ
ಗೊನೆಯಾಂಗೆ ತೋಳ ತಿರುವೂತ।।
೩೮)
ಸರದಾರ ಬರುವಾಗ ಸುರಿದಾವು ಮಲ್ಲಿಗೆ
ದೊರೆ ನನ್ನ ತಮ್ಮ ಬರುವಾಗ|
ದೊರೆ ನನ್ನ ತಮ್ಮ ಬರುವಾಗ ಯಾಲಕ್ಕಿ
ಗೊನೆ ಬಾಗಿಲ ಹಾಲು ಸುರಿದಾವು।।
೩೯)
ಅಣ್ಣ ಬರುತಾನಂತ ಅಂಗಳಕೆ ಕೈಕೊಟ್ಟು
ರನ್ನ ಬಚ್ಚಲಿಗೆ ಮಣೆ ಹಾಕಿ |
ರನ್ನ ಬಚ್ಚಲಿಗೆ ಮಣೆ ಹಾಕಿ ಕೇಳೇನು
ತಣ್ಣಗಿಹ ರಣ್ಣ ತವರವರು।।
ತಾವರಿಯ ಗಿಡ ಹುಟ್ಟಿ ದೇವರಿಗೆ ನೆರಳಾಗಿ
ನಾ ಹುಟ್ಟಿ ಮನಿಗಿ ಎರವಾದೆ।
ನಾ ಹುಟ್ಟಿ ಮನಿಗಿ ಎರವಾದೆ ನನ ತಮ್ಮ
ತಾ ಹುಟ್ಟಿ ಮನೆಗೆ ಧಣಿಯಾದ।।
೪೧)
ತಂಗೀಗಿ ಕಳುವ್ಯಾನ ತೆವರೇರಿ ನಿಂತಾನ
ಅಂಗೀಲಿ ಕಣ್ಣೀರು ವರಸ್ಯಾನ।
ಅಂಗೀಲಿ ಕಣ್ಣೀರು ವರಸ್ಯಾನ ನನ್ನಣ್ಣ
ಇಂದೀಗಿ ತಂಗಿ ಎರವೆಂದಾ।।
೪೨)
ಕಾರ್ಹುಣವಿ ಹಬ್ಬಕ ಕರಿಲಾಕ ಬರಬ್ಯಾಡ
ಕಾಲಬಾಡೀಗಿ ಕೊಡಬ್ಯಾಡ।
ಕಾಲಬಾಡೀಗಿ ಕೊಡಬ್ಯಾಡ ನನ್ನಣ್ಣ
ಹೊನ್ನ ದೀವಳಿಗಿ ಮರಿಬ್ಯಾಡ।।
೪೩)
ಕೋಪವ್ಯಾಕಣ್ಣ ಕೊಳ್ಳೊ ಕಾಲಿಗೆ ನೀರ
ಬಾಯ ತಂಬುಲವ ಉಗುಳಣ್ಣ।
ಬಾಯ ತಂಬುಲವ ಉಗುಳಣ್ಣ ನೀ ಬರುವ
ದಾರೀಯ ನೋಡಿ ಬಡವಾದೆ।।
೪೪)
ಬಾವೂಲಿ ಇಟಗೊಂಡು ಕಾವೂಲಿ ತಿದ್ದುವ
ಗಾಳಿ ಬಂದತ್ತ ಬಳಕೂವ।
ಗಾಳಿ ಬಂದತ್ತ ಬಳಕೂವ ನನ ತಮ್ಮ
ಬಾಳಿಯೆಲೆಗಿಂತ ಬಲು ಚಲುವ।।
೪೫)
ಅಚ್ಚ ಕೆಂಪಿನ ಬಳೆ ಪಚ್ಚೆ ಹಸುರಿನ ಬಳೆ
ಎನ್ನ ಹಡೆದವ್ವಗೆ ಬಲು ಆಸೆ।
ಎನ್ನ ಹಡೆದವ್ವಗೆ ಬಲು ಆಸೆ ಭಾಗ್ಯದ
ಬಳೆಗಾರ ಹೋಗಿ ಬಾ ನನ್ನ ತವರೀಗೆ।।
೪೬)
ತವರೂರು ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸಿವೆಯಷ್ಟು ಮರಳಿಲ್ಲ।
ಸಾಸಿವೆಯಷ್ಟು ಮರಳಿಲ್ಲ ಬಾನಲ್ಲಿ
ಬಿಸಲೀನ ಬೇಗೆ ಸುಡಲಿಲ್ಲ।।
೪೭)
ತೊಟ್ಟೀಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ।
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತೌರೂರ
ತಿಟ್ತತ್ತಿ ತಿರುಗಿ ನೋಡ್ಯಾಳೊ।।
೪೮)
ತೌರು ಮನೆಯ ಜ್ಯೋತಿ ತಣ್ಣಾಗೆ ಉರಿಯವ್ವ
ತಣ್ಣೀರಾಗೆ ಮಿಂದು ಮಡಿಯುಟ್ಟು ।
ತಣ್ಣೀರಾಗೆ ಮಿಂದು ಮಡಿಯುಟ್ಟು ಬರುತೀನಿ
ತಣ್ಣಾಗೆ ಉರಿಯೆ ಜಗಜೋತಿ।।
ಯಾರು ಆದರೂ ಹೆತ್ತ ತಾಯಂತೆ ಆದಾರೋ
ಸಾವಿರ ಸೌದೆ ಒಲೆಯಲ್ಲಿ ।
ಸಾವಿರ ಸೌದೆ ಒಲೆಯಲ್ಲಿ ಉರಿದಾರೂ
ದೀವಿಗೆಯಂತೆ ಬೆಳಕುಂಟೆ।।
೫೦)
ಮೊಲೆಹಾಲ ಕುಡಿಸಿದ್ದಿ ಕಲಸಕ್ರಿ ತಿನಿಸಿದ್ದಿ
ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ।
ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ್ನ ಸೆರಗ
ಅಳುವುದೀಗೆಷ್ಟು ಹಡೆದವ್ವ।।
೫೧)
ಬಾಲಕರಿಲ್ಲದ ಬಾಳೆದ್ಯಾತರ, ಜನ್ಮ
ಬಾಡಗಿ ಎತ್ತ ದುಡದoಗ।
ಬಾಡಗಿ ಎತ್ತ ದುಡದoಗ
ಬಾಳೆಲೆ ಹಾಸುನ್ಡು ಬೀಸಿ ಒಗೆದoಗ।।
೫೨)
ಎದ್ದೋನೆ ನಿಮಗ್ಯಾನ ಏಳುತಲಿ ನಿಮಗ್ಯಾನ
ಸಿದ್ಧಾರ ಗ್ಯಾನ ಶಿವೂ ಗ್ಯಾನ।
ಸಿದ್ಧಾರ ಗ್ಯಾನ ಶಿವೂ ಗ್ಯಾನ ಮಾ ಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ।।
೫೩)
ಆರೇಲಿ ಮಾವಿನ ಬೇರಾಗಿ ಇರುವೋಳೆ
ಓಲ್ಗಾದ ಸದ್ದಿಗೆ ಒದಗೋಳೆ।
ಓಲ್ಗಾದ ಸದ್ದೀಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡಿರ ಬಿಡಿಸವ್ವಾ।।
೫೪)
ಎಂಟೆಲಿ ಮಾವಿನ ದಂಟಾಗಿ ಇರುವೋಳೆ
ಗಂಟೆ ಸದ್ದೀಗೆ ಒದಗೋಳೆ।
ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ
ನಮ್ ಗಂಟಾಲ ತೊಡರ ಬಿಡಿಸವ್ವಾ।।
೫೫)
ರಾಗಿ ಬೀಸೋಕಲ್ಲೆ ರಾಜಾನ ಒಡಿಗಲ್ಲೆ
ರಾಯ ಅಣ್ಣಯ್ನ ಅರಮನೆ।
ರಾಯ ಅಣ್ಣಯ್ನ ಅರಮನೆಯ ಈ ಕಲ್ಲೆ
ನೀ ರಾಜಾ ಬೀದೀಲಿ ದನಿದೋರೆ।।
ಕಲ್ಲವ್ವಾ ಮಾತಾಯಿ ಮಲ್ಲವ್ವಾ ರಾಗೀಯ
ಜಲ್ಲಾ ಜಲ್ಲಾನೆ ಉದುರವ್ವಾ।
ಜಲ್ಲಾ ಜಲ್ಲಾನೆ ಉದುರವ್ವ ನಾ ನಿನಗೆ
ಬೆಲ್ಲಾದಾರತಿಯ ಬೆಳಗೇನು।।
೫೭)
ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ
ಎಳ್ಳು ಜೀರಿಗೆ ಬೆಳಿಯೋಳ|
ಎಳ್ಳು ಜೀರಿಗೆ ಬೆಳಿಯೋಳ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು ||
೫೮)
ಮಣ್ಣಲ್ಲಿ ಹುಟ್ಟೋಳೆ ಮಣ್ಣಾಲಿ ಬೆಳೆವೋಳೆ
ಎಣ್ಣೇಲಿ ಕಣ್ಣಾಬಿಡುವೋಳೆ|
ಎಣ್ಣೇಲಿ ಕಣ್ಣಾಬಿಡುವೋಳೆ ಜಗಜ್ಯೋತಿ
ಸತ್ಯಾದಿಂದುರಿಯೆ ನಮಗಾಗಿ||
ತಾವರಿಯ ಗಿಡ ಹುಟ್ಟಿ ದೇವರಿಗೆ ನೆರಳಾಗಿ
ನಾ ಹುಟ್ಟಿ ಮನಿಗಿ ಎರವಾದೆ।
ನಾ ಹುಟ್ಟಿ ಮನಿಗಿ ಎರವಾದೆ ಹಡೆದವ್ವ
ನಿ ಕೊಟ್ಟ ಮನೆಗೆ ಹೆಸರಾದೆ।।
೬೦)
ಯಾತಕಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ|
ಕಾಯದ ಹಾಲ ಕೆನೆ ಬೇಡಿ ಕಂದಯ್ಯ
ಕಾಡಿ ಕೈಬಿಟ್ಟು ಇಳಿದಾನ||
೬೧)
ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ|
ಕೆಟ್ಟರೆ ಕೆಡಲಿ ಮನೆಗೆಲಸ ಕಂದನಂತ
ಮಕ್ಕಳಿರಲವ್ವ ಮನೆತುಂಬ||
೬೨)
ಹಾಲ್ಬೇಡಿ ಅತ್ತಾನ ಕೋಲಬೇಡಿ ಕುಣದಾನ
ಮೊಸರ್ಬೇಡಿ ಕೆಸರ ತುಳದಾನ|
ಮೊಸರ್ಬೇಡಿ ಕೆಸರ ತುಳದಾನ
ನನ ಕಂದನ ಕುಶಲಾದ ಗೆಜ್ಜಿ ಕೆಸರಾಗಿ।।
ಅತ್ತರ ಅಳಲವ್ವ ಈ ಮುತ್ತ ನನಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ |
ಕೆಟ್ಟರ ಕೆಡಲಿ ಮನಿಗೆಲಸ
ಸಮರ್ಥನಂಥ ಮಕ್ಕಲಿರಲೆವ್ವ ಮನಿಯಾಗ।।
೬೪)
ಅಕಿ ನನ್ನ ಶಿವಾನಿ ಮಾತೀಲಿ ಶ್ಯಾನ್ಯಾಕಿ
ಮಾತ ಮಾತೀಗಿ ನಗುವಾಕಿ |
ಮಾತ ಮಾತೀಗಿ ನಗುವಾಕಿ ಶಿವಾನಿ
ಮಾತ ಬಲ್ಲವರ ಮಗಳವ್ವ।।
೬೫)
ಅತ್ತರ ನನ ಕಂದನ ಮುತ್ತೆಲ್ಲಿ ಉದರ್ಯಾವ
ಸತ್ತೀಗಿ ಮಾನೆದ ಹೊಲದಾಗ |
ಸತ್ತೀಗಿ ಮಾನೆದ ಹೊಲದಾಗ ಅವರನ್ನ
ಸುಪ್ಪಲಿ ಒಯ್ದ ಬಳತಂದ ।।
ಅತ್ತ ಕಾಡವನಲ್ಲ ಮತ್ತ ಬೇಡವನಲ್ಲ
ಮೆತ್ತನ್ನ ಎರಡು ಕೈ ಮುಟಗಿ।
ಮೆತ್ತನ್ನ ಎರಡು ಕೈ ಮುಟಗಿಕೊಟ್ಟರೆ
ಗಪ್ಪುಚಿಪ್ಪಾಗಿ ಮಲಗ್ಯಾನ।।
೬೭)
ಯಾತರ್ಯಾತರ ಗಾಳಿ ಎಳೆಯ ತೋಟದ ಗಾಳಿ
ಸುತ್ತಲೂ ಗಾಳಿ ಸುಳಿಗಾಳಿ |
ಸುತ್ತಲೂ ಗಾಳಿ ಸುಳಿಗಾಳಿ ನನ ಕಂದನ
ನಿನ್ನ ತೊಟ್ಟಿಲ ಗಾಳಿ ಮನೆತುಂಬಾ।।
ಸಂಗಮಕ ಹೋಗಾಕ ಸಂಗಾಟ ಮಗ ಬೇಕ
ತಂಬಿಗಿ ಹಿಡಿಯಾಕ ಸೋಸಿ ಬೇಕ |
ತಂಬಿಗಿ ಹಿಡಿಯಾಕ ಸೋಸಿ ಬೇಕ
ಕೂಡಲ ಸಂಗಮಕ ಹೋಗಿ ಬರಬೇಕ।।
೬೯)
ಮಡದೀನ ಬಡಿದಾನ ಮನದಾಗ ಮರುಗ್ಯಾನ
ಸೆರಗ ಹಿಡಿಯೂತ ಕೇಳ್ಯಾನ।
ಸೆರಗ ಹಿಡಿಯೂತ ಕೇಳ್ಯಾನ
ನಾ ಹೆಚ್ಚೊ ನಿನ್ನ ತವರ್ಹೆಚ್ಚೊ।।
೭೦)
ಆಷಾಢಮಾಸ ಬಂದಿತಮ್ಮ
ತೌರಿಂದ ಅಣ್ಣಾ ಬರಲಿಲ್ಲ
ತೌರಿಂದ ಅಣ್ಣಾ ಬರಲಿಲ್ಲ ಎಷ್ಟು ನೆನೆಯಾಲಿ ಅಣ್ಣಾನ ದಾರಿಯ ಸುವ್ವನಾರೀ ಸುವ್ವೋನಾರಿ।।
೭೧)
ಅರಕೆರೆ ಬನ್ನೂರು ಅದೇ ನನ್ನ ತವರೂರು
ಸರಕಾನೆ ಎದ್ದು ಬರುತೀಯೆ ।
ಸರಕಾನೆ ಎದ್ದು ಬರುತೀಯೆ ಅಣ್ಣಯ್ಯ
ಸರ ಕಾಣೋ ನಿ ನನ್ನ ದೊರೆತಾನೆ ।।
೭೨)
ಕೆಂದೆತ್ತು ಕೈಯಲ್ಲಿ ಕೆಂಪಂಗಿ ಮೈಯಲ್ಲಿ
ಚಿನ್ನದ ಬಾರುಕೋಲು ತಕ್ಕೊಂಡು ।
ಚಿನ್ನದ ಬಾರುಕೋಲು ತಕ್ಕೊಂಡು ಬರುತಾನೆ
ಅಣ್ಣಯ್ಯ ತಂಗಿಯ ಕರೆಯೋಕೆ ।।
ತವರೂರ ದಾರೀಲಿ ತೆಗೆ ಸಣ್ಣ ಬಾವಿಯ
ಅಕ್ಕ– ತಂಗಿರು ತಿರೋಗಾಡೋ ।
ಅಕ್ಕ –ತಂಗಿರು ತಿರೋಗಾಡೋ ದಾರೀಲಿ
ತೆಗೆಸಣ್ಣ ಕಲ್ಯಾಣದ ಬಾವೀಯ।।
೭೪)
ತೌರೂರು ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸಿವೆಯಷ್ಟು ಮರಳಿಲ್ಲ ।
ಸಾಸಿವೆಯಷ್ಟು ಮರಳಿಲ್ಲ ದಾರೀಲಿ
ಬಿಸಿಲಿನ ಬೇಗೆಯು ಸುಡಲಿಲ್ಲ ।।
೭೫)
ಶರಣರ ನೆನೆದಾರ ಸರಿಗೀಯ ಇಟ್ಟಂಗ
ಅರಳ ಮಲ್ಲೀಗೆ ಮುಡಿದ್ಹಂಗ।
ಅರಳ ಮಲ್ಲೀಗೆ ಮುಡಿದ್ಹಂಗ ಕಲ್ಯಾಣ
ಶರಣರ ನೆನೆಯೊ ನನ ಮನವೆ।।
ಕರುಣ ಬಂದರೆ ಕಾಯೊ ಮರಣ ಬಂದರೆ ಒಯ್ಯೊ ಕರುಣಿ ಕಲ್ಯಾಣ ಬಸವಣ್ಣ।
ಕರುಣಿ ಕಲ್ಯಾಣ ಬಸವಣ್ಣ ಶಿವಲಿಂಗ
ಕಡೆತನಕ ಕಾಯೊ ಅಭಿಮಾನ।।
೭೭)
ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ ಚೆಲ್ಲಿದನು ತಂದು ಶಿವಬೆಳಕ।
ಚೆಲ್ಲಿದನು ತಂದು ಶಿವಬೆಳಕ ನಾಡೊಳಗೆ
ಸೊಲ್ಲೆತ್ತಿ ಜನವು ಹಾಡುವದು।।
೭೮)
ಕಾಯಕವ ಕಲಿಸುದಕ ನಾಯಕನು ಬಸವಯ್ಯ ಜೀಯ ಹೊಸಮತಕೆ ಶಿವಭಕ್ತಿ।
ಜೀಯ ಹೊಸಮತಕೆ ಶಿವಭಕ್ತಿ ಸಾರುದಕೆ
ರಾಯ ಜೀವನದ ಹೊಸ ನುಡಿಗೆ।।
೭೯)
ಮುಗ್ಧ ಶರಣರ ಹಾಡು ಸಿದ್ದಿ ಮಂತ್ರವು ನೋಡು ಸಿದ್ಧಾಗೊ ಹಾಡು ಹಾಡುದಕೆ।
ಸಿದ್ಧಾಗೊ ಹಾಡು ಹಾಡುದಕೆ ಎಲೆ ಜೀವ
ಶುದ್ಧಾಗಿ ಹೊಂದು ಶಿವಪದವ।।
ಹಂತಿಪದಕೊಂದಿಲ್ಲ ನಿಂತು ಬೆನಕನ ಪೂಜೆ ಹಂತಿಯೊಳು ಪೂಜೆ ಶರಣರಿಗೆ।
ಹಂತಿಯೊಳು ಪೂಜೆ ಶರಣರಿಗೆ ಗಣಪತಿಗೆ
ಸ್ವಂತ ನೆನೆಯೆಂದ ಒಕ್ಕಲಿಗ।।
೮೧)
ಹಂತಿ ಹೊಡೆಯುತ ನೆನದೆ ಸಂತಸದಿ ಶರಣರನು ಕಂತು ಹರ ನಿನ್ನ ಭಕ್ತರನು।
ಕಂತು ಹರ ನಿನ್ನ ಭಕ್ತರನು ನೆನೆಸಿದರೆ
ಸಂತಸದಿ ನೀಡೊ ವರ ಶಿವನೆ।।
೮೨)
ಉಘೇ ಗುರು ಪ್ರಭುದೇವ ಉಘೇ ಭಕ್ತನಿಧಿ ಬಸವ ಉಘೇ ಜ್ಞಾನಿ ಚೆನ್ನಬಸವನೆ।
ಉಘೇ ಜ್ಞಾನಿ ಚೆನ್ನಬಸವನೆ ಉಘೇಲಿಂಗ
ಉಘೇ ಶರಣರೆ ಲಿಂಗವಂತರೆ।।
೮೩)
ಹೂವಿನಾಗ ಹುದುಗ್ಯಾನ ಮಾಲ್ಯಾಗ ಮಲಗ್ಯಾನ
ಮೊಗ್ಗಾಗಿ ಕಣ್ಣ ತೆರದಾನ।
ಮೊಗ್ಗಾಗಿ ಕಣ್ಣ ತೆರದಾನ ಲಿಂಗಯ್ಯನ
ನೋಡುತಲೆ ನಿದ್ದಿ ಬಯಲಾದೊ||
ಮುಂಗೋಳಿ ಕೂಗ್ಯಾವು ಮೂಡುಕೆಂಪೇರ್ಯಾವು
ನಾರಾಯಣಸಾಮಿ ರಥವೇರಿ। ನಾರಾಯಣಸಾಮಿ ರಥವೇರಿ ಬರುವಾಗ
ನಾವೆದ್ದು ಕೈಯಾ ಮುಗಿದೇವು||
೮೫)
ಹೊತ್ತು ಮುಳುಗಿದರೇನು ಕತ್ತಲಾದರೇನು
ಅಪ್ಪನಿನ ಗುಡಿಗೆ ಬರುವೇನು।
ಅಪ್ಪನಿನ ಗುಡಿಗೆ ಬರುವೇನು ಮಾದಯ್ಯ
ಮುತ್ತಿನ ಬಾಗಿಲ ತೆರದೀರು||
ಅತ್ತೆ ಮಾವಗೆ ಶರಣು ಮತ್ತೆ ಗುರುವಿಗೂ ಶರಣು
ಮತ್ತೊಂದು ಶರಣು ಶಿವನಿಗೆ|
ಮತ್ತೊಂದು ಶರಣು ಶಿವನಿಗೆ ಒಪ್ಪವೆಂದು
ನಾ ಬಗ್ಗಿದೆ ಮನೆಯ ಕೆಲಸಕ್ಕೆ।।
೮೭)
ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ
ಶರಣೆಂಬೆ ಶಿವನ ಮಡದಿಗೆ|
ಶರಣೆಂಬೆ ಶಿವನ ಮಡದಿ ಗೌರಮ್ಮಗೆ
ಶರಣೆಂದು ಕಲ್ಲು ಹಿಡಿದೇನ||
೮೮)
ಕರಿಸೀರೆ ಉಡಬ್ಯಾಡ ಕಡಿವಾಣ ಬಿಡಬೇಡ
ನಡು ಓಣ್ಯಾಗ ನಿಂತು ನಗಬೇಡ|
ನಡು ಓಣ್ಯಾಗ ನಿಂತು ನಗಬೇಡ ನನ ಮಗಳೆ
ತವರಿಗೆ ಮಾತ ತರಬೇಡ।।
೮೯)
ಮಾತ್ಗಂಟಿ ಮಗಳಲ್ಲ ತಾಟ್ಗಿತ್ತಿ ಸೊಸೆಯಲ್ಲ
ಧೂಪರದ ಚಕ್ಕಿ ಒಲೆಗಲ್ಲ|
ಧೂಪರದ ಚಕ್ಕಿ ಒಲೆಗಲ್ಲ ತವರಿಗೆ
ಮಾತು ತಂದೋಳಲ್ಲ ಮಗಳಲ್ಲ।।
೯೦)
ಅತ್ತೆ ಮಾವರಿಗಂಜಿ ಸುತ್ತೇಳು ನೆರೆಗಂಜಿ
ಮತ್ತೆ ಆಳುವ ದೊರೆಗಂಜಿ| ಮತ್ತೆ ಆಳುವ ದೊರೆಗಂಜಿ ನನ ಮಗಳೆ
ಅತ್ತೀ ಮನೆಯೊಳಗ ಬಾಳವ್ವ।।
ನೆರೆಮನೆಯ ಸಿರಿದೇವಿ ನೀನಾಗು ಮಗಳೆ
ಮನೆಯಾಗ ಭೇದ ಬಗಿಬಾಡ|
ಮನೆಯಾಗ ಭೇದ ಬಗಿಬಾಡ ಮಗಳೆ
ತುಂಬಿದ ಮನೆಯ ಒಡಿಬಾಡ||
೯೨)
ಅತ್ತೆ ಮನೆಯಲಿ ಮುತ್ತಾಗಿ ಇರಬೇಕು
ಹೊತ್ತಾಗಿ ನೀಡಿದರೂ ಉಣಬೇಕು|
ಹೊತ್ತಾಗಿ ನೀಡಿದರೂ ಉಣಬೇಕು ಮಗಳೆ
ತವರಿಗೆ ಹೆಸರು ತರಬೇಕು।।
೯೩)
ಗಂಡನೇ ಗುರು ಅವ್ವ ಗಂಡನೇ ದೇವರು ಕೇಳು
ಗಂಡನೆ ಹೊರತು ಗತಿಯಿಲ್ಲ|
ಗಂಡನೆ ಹೊರತು ಗತಿಯಿಲ್ಲ ಹೆಣ್ಣಿಗೆ
ಗಂಡನೆ ಸಕಲ ಸೌಭಾಗ್ಯ।।
೯೪)
ಹಾಲು ಬಾನ ಉಣಿಸಿ ಮಾರಿ ಸೆರಗಲಿ ಒರಸಿ
ನೀ ಯಾರಿಗ್ಯಾದೋ ನನ ಮಗನೆ|
ನೀ ಯಾರಿಗ್ಯಾದೋ ನನ ಮಗನೆ ಬಂದಂತ
ನಾರಿಗಾದ್ಯಲ್ಲೋ ಹಡದಪ್ಪ।।
ಎಲ್ಲೆಲ್ಲಿ ನೋಡಿದರ ನಲ್ಲನಂಥವರಿಲ್ಲ
ಹಲ್ಲು ನೋಡಿದರ ಹವಳವ|
ಹಲ್ಲು ನೋಡಿದರ ಹವಳವ ನಲ್ಲನ
ಸೊಲ್ಲು ಕೇಳಿದರ ಸಮಾಧಾನ।।
೯೬)
ಸರದಾರ ನಿಮ್ಮಿಂದ ಸರುವೆಲ್ಲ ಮರೆತೀನ
ಸರದಾರ ಇರುವ ಗುಳದಾಳಿ|
ಸರದಾರ ಇರುವ ಗುಳದಾಳಿ ನಿಮ್ಮಿಂದ
ಸರುವ ಬಳಗೆಲ್ಲ ಮರೆತೀನ।।
೯೭)
ಅತ್ತೆ ಅತ್ತಿಕಾಯಿ ಮಾವ ಮಲ್ಲಿಗ್ಹೂವ
ಬಂಗಾರಕೋಲ ಹಿರಿಭಾವ|
ಬಂಗಾರಕೋಲ ಹಿರಿಭಾವ ನನಮನಿಯ
ಅರಸರು ಹಾರ ಪರಿಮಳ।।
೯೮)
ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನಮಗ ನಮರಾಯ ಜಡಮೇನ|
ನಮಗ ನಮರಾಯ ಜಡಮೇನ ಬಂಗಾರ
ಮಾಲ ಇದ್ಹಾಂಗ ಮನಿಯಾಗ।।
ಹಚ್ಚಡದ ಪದರಾಗ ಅಚ್ಚಮಲ್ಲಿಗೆ ಹೂವ
ಬಿಚ್ಚಿ ನನಮ್ಯಾಗ ಒಗೆವಂಥ|
ನನಮ್ಯಾಗ ಒಗೆವಂಥ ರಾಯರನ
ಬಿಟ್ಟು ಹೆಂಗೆ ಬರಲೇ ಹಡೆದವ್ವ।।
೧೦೦)
ಬಟ್ಟಲಗಣ್ಣೀಲಿ ದಿಟ್ಟಿಸಿ ನೋಡ್ಯಾರ
ಸಿಟ್ಟ್ಯಾಕೋ ರಾಯ ನನಮ್ಯಾಗ|
ಸಿಟ್ಟ್ಯಾಕೋ ರಾಯ ನನಮ್ಯಾಗ ನಾ
ಅಂಥ ಹುಟ್ಟಿಸ್ಯಾಡವರ ಮಗಳಲ್ಲ।।
೧೦೧)
ಕಟ್ಟಾಣಿ ಗುಂಡೀಗಿ ಸಿಟ್ಟು ಮಾಡಲಿ ಬೇಡ
ಬಿಟ್ಟು ಬಂದದೆ ಬಳಗೆಲ್ಲ|
ಬಿಟ್ಟು ಬಂದದೆ ಬಳಗೆಲ್ಲ ಪತಿರಾಯ
ಕಟ್ಟ್ಯಾರ ತಮ್ಮ ಪದರಾಗ।।
೧೦೨)
ಚಿಂತಾಕ ಇಟಗೊಂಡು ಚಿಪ್ಪಾಡಿ ಬಳಿವಾಕೆ
ಚಿಂತಿಲ್ಲ ಏನ ನಿನಗಿಷ್ಟು|
ಚಿಂತಿಲ್ಲ ಏನ ನಿನಗಿಷ್ಟು ನಿನ ಗಂಡ
ಅಲ್ಲೊಬ್ಬಳ ಕೂಡ ನಗುತಿದ್ದ।।
೧೦೩)
ನಕ್ಕರೆ ನಗಲೆವ್ವ ನಗಿ ಮುಖದಿ ಕ್ಯಾದಿಗಿ
ನಾ ಮುಚ್ಚಿ ಮುಡಿವ ಪರಿಮಳದ|
ನಾ ಮುಚ್ಚಿ ಮುಡಿವ ಪರಿಮಳದ ಆ ಹೂವ
ಅವಳೊಂದು ಗಳಿಗೆ ಮುಡಿಯಲಿ।।
೧೦೪)
ಎಲ್ಲಿ ಹೋಗಿದ್ದಿ ರಾಯ ಸೆಲ್ಲ್ಯಾಕ ಮಾಸೇದ ಪ
ಅಲ್ಲೊಬ್ಬಳ ಕೂಡ ಸಲಗೀಯ|
ಅಲ್ಲೊಬ್ಬಳ ಕೂಡ ಸಲಗೀಯ ಮಾಡಿ
ಇಲ್ಲೆಂಬುದೇನ ನನಮುಂದೆ।।
೧೦೫)
ಅಂಗಿಯ ಮ್ಯಾಲಂಗಿ ಛಂದೇನೋ ನನರಾಯ
ರಂಭೀಯ ಮ್ಯಾಲ ಪ್ರತಿರಂಭಿ |
ರಂಭೀಯ ಮ್ಯಾಲ ಪ್ರತಿರಂಭಿ ಬಂದಾರ
ಛಂದೇನೋ ರಾಯ ಮನಿಯಾಗ।।
ಹಣ್ಣ ಹಾಗಲಕಾಯಿ ಎಣ್ಣ್ಯಾಗ ಕರಿದೀನಿ
ಉಂಡಾರೆ ನೋಡು ಸವಿಗಾರ|
ಉಂಡಾರೆ ನೋಡು ಸವಿಗಾರ ನನಮ್ಯಾಗ
ತಂದರೆ ನೋಡು ಸವತೀನ।।
೧೦೭)
ವಾರಿ ರುಂಬಾಲು ಸುತ್ತಿ ದಾರ‍್ಯಾಗ ನಿಂತಿದ್ದು
ಹ್ವಾರ‍್ಯಾ ಇಲ್ಲೇನೋ ಮನಿಯಾಗ|
ಹ್ವಾರ‍್ಯಾ ಇಲ್ಲೇನೋ ಮನಿಯಾಗ ನನ ತಮ್ಮ
ನಾರಿಯಿಲ್ಲೋನೋ ಮನಿಯಾಗ।।
೧೦೮)
ಹೆಣ್ಣೆಂದು ರಾವಣ ಮಣ್ಣು ಮುಕ್ಕಿದವನಯ್ಯ
ಹೆರವರ ಹೆಣ್ಣು ಬಯಸದೆ|
ಹೆರವರ ಹೆಣ್ಣು ಬಯಸದೆ ಲಗ್ನದ
ಸತಿಯೊಡನೆ ಸುಖದಿ ಬಾಳಣ್ಣ।।
೧೦೯)
ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಯಲಿರುವ ಕರಕೀಯ।
ಹೊಳೆದಂಡಿಯಲಿರುವ ಕರಕೀಯ ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ।।
೧೧೦)
ಯಾರೂ ಇದ್ದರು ನನ್ನ ತಾಯವ್ವನ್ಹೋಲಾರ
ಸಾವಿರ ಕೊಳ್ಳಿ ಒಲಿಯಾಗ|
ಸಾವಿರ ಕೊಳ್ಳಿ ಒಲಿಯಾಗ ಇದ್ದರೂ
ಜ್ಯೋತಿ ನೀನ್ಯಾರು ಹೋಲರು"
ಕಣ್ಣೆಂಜಲ ಕಾಡಿಗೆ ಬಾಯೆಂಜಲ ವೀಳ್ಯವ
ಯಾರೆಂಜಲುಂಡಿ ನನ ಮನವೆ| ಯಾರೆಂಜಲುಂಡಿ ನನ ಮನವೆ ಹಡೆದವ್ವ
ಬಾಯೆಂಜಲುಂಡು ಬೆಳೆದೇನ।l
೧೧೨)
ಉಂಗುರ ಉಡುದಾರ ಮುರಿದರ ಮಾಡಿಸಬಹುದು.
ಮಡದಿ ಸತ್ತರ ತರಬಹುದು|
ಮಡದಿ ಸತ್ತರ ತರಬಹುದು ಹಡೆದ
ತಂದೆ-ತಾಯಿಯೆಲ್ಲಿ ಸಿಕ್ಕಾರ।।
೧೧೩)
ಅರಗಿನಂಥ ತಾಯಿ ಮರದಂಥ ಮಕ್ಕಳು
ಕರಗಿದರ ಬೆಣ್ಣೆ ತಿಳಿತುಪ್ಪ|
ಕರಗಿದರ ಬೆಣ್ಣೆ ತಿಳಿತುಪ್ಪ ದಂಥಕಿ
ಕರಗದಂಥ ತಾಯಿ ಇರಬೇಕು।।
೧೧೪)
ಮಕ್ಕಳ ಕೊಡು ಶಿವನೇ ಬಾಳ ಮಕ್ಕಳಿರಲಿ
ಮ್ಯಾಗ ಗುರುವಿನ ದಯವಿರಲಿ|
ಗುರುವಿನ ದಯವಿರಲಿ ನನ ಗುರುವೆ
ಬಡತನದ ಚಿಂತೆ ನನಗಿರಲಿ||
ಬಸಿರ ಬಯಕೆ ಚಂದ ಹಸಿರು ಕುಪ್ಪಸ ಚಂದ
ನಸುಗೆಂಪಿನವಳ ನಗೆ ಚೆಂದ| ನಸುಗೆಂಪಿನವಳ ನಗೆ ಚೆಂದ ನನ ಮಗಳು
ಬಸುರಾದರೆ ಚಂದ ಬಳಗಕ।।
೧೧೬)
ಅತ್ತಾನ ಕಾಡ್ಯಾಗ ಮತ್ತೇನು ಬೇಡ್ಯಾನ
ಮೆತ್ತ ಮೆತ್ತನ್ನ ದಿಂಭವ|
ಮೆತ್ತ ಮೆತ್ತನ್ನ ದಿಂಭವಕೊಟ್ಟರೆ
ಗುಪ್ಪು ಚಿಪ್ಪಾಗಿ ಮಲಗ್ಯಾನೆ।।
೧೧೭)
ಅತ್ತರೆ ಅಳಲಿ ಈ ಕೂಸು ನನಗಿರಲಿ
ಕೂಸ ಕಂದಯ್ಯ ತೊಡಿಮ್ಯಾಗ।
ಕೂಸ ಕಂದಯ್ಯ ತೊಡಿಮ್ಯಾಗ ಆಡಿದರ ಬಂದ ಬ್ಯಾಸರಕಿ ಬಯಲಾಯ್ತು।।
೧೧೮)
ಹತ್ತು ಗಂಡ್ಹೆಡೆದರೂ ಮತ್ತೆ ಬಂಜೆಂಬರು
ದಟ್ಟಿಯ ಉಡುವ ಧರಣೀಯ|
ದಟ್ಟಿಯ ಉಡುವ ಧರಣೀಯ ಹಡೆದರ
ಹೆತ್ತಾಯಿಯೆಂದು ಕರೆದಾರ।।
೧೧೯)
ನಾಕು ಮಕ್ಕಳ ಕೊಟ್ಟು ಸಾಕು ಮಾಡೋ ಶಿವನೇ
ನಾಕರ ಮ್ಯಾಲೆ ಆರತಿ ಹಿಡಿಯೋಕೆ।
ನಾಕರ ಮ್ಯಾಲೆ ಆರತಿ ಹಿಡಿಯೋಕೆ
ನಾರಿಯ ಕೊಟ್ಟು ಕಡೆ ಮಾಡೋ।।
೧೨೦)
ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು|
ಮಾತಿನಲಿ ಚೂಡಾಮಣಿಯಾಗು ನನಕಂದ
ಜ್ಯೋತಿಯೆ ಆಗು ಜಗಕೆಲ್ಲ।।
೧೨೧)
ಬಂಜೆ ಬಾಗಿಲ ಮಂದೆ ಅಂಜೂರ ಗಿಡ ಹುಟ್ಟಿ
ಟೊಂಗಿ ಟೊಂಗೆಲ್ಲ ಗಿಳಿ ಕುಂತು|
ಟೊಂಗಿ ಟೊಂಗೆಲ್ಲ ಗಿಳಿ ಕುಂತು ಹೇಳ್ಯಾವ
ಬಂಜೆಯ ಬದುಕು ಹೆರವರಿಗೆ।।
೧೨೨)
ಅತ್ತು ಕಾಡುವವನಲ್ಲ ಹಸ್ತರುಂಬುವವನಲ್ಲ
ಲಕ್ಷಣವಂತ ಗುಣವಂತ|
ಲಕ್ಷಣವಂತ ಗುಣವಂತ ತಮ್ಮಯ್ಯ
ಲಕ್ಷಣಕ ಲಕ್ಷ್ಮಿ ಒಲಿದಾಳೋ।।
೧೨೩)
ಬಾಳಾ,ನೀ ಅಳದಿರು ಬಾಗಿಲಿಗೆ ಬರದಿರು
ಬಾಳೆಯೊಳಗಿನ ತಿಳಿನೀರು|
ಬಾಳೆಯೊಳಗಿನ ತಿಳಿನೀರು ತಕ್ಕೊಂಡು
ಬಾಳಾ,ನಿನ್ನ ಮಾರಿ ತೊಳೆದೇನು।।
ಅತ್ತರ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ|
ಕೆಟ್ಟರೆ ಕೆಡಲಿ ಮನೆಗೆಲಸ ಕೆಟ್ಟರೂ
ಮತ್ತೊಮ್ಮೆ ಮಾಡಿ ಮುಗಿಸೇನಿ।।
೧೨೫)
ಕಂದಯ್ಯ ಅತ್ತರ ಕಣಗೀಲ ಕಾಣತಾವ
ಒಣಗಿದ್ದ ಬಾಳೆ ಚಿಗಿತಾವ|
ಒಣಗಿದ್ದ ಬಾಳೆ ಚಿಗಿತಾವ ಬರಡು
ಆಕಳೆಲ್ಲ ಹಯನಾಗಿ।।
೧೨೬)
ಜನಕರಾಯನ ಮಗಳು ವನಕ ತೊಟ್ಟಿಲ ಕಟ್ಟಿ
ಲವಕುಶರನಿಟ್ಟು ತೂಗ್ಯಾಳೆ|
ಲವಕುಶರನಿಟ್ಟು ತೂಗ್ಯಾಳೆ ನಗುತ
ವನವಾಸ ಕಳೆದಾಳ।।
೧೨೭)
ಕಂದಮ್ಮ ಕಾಪೀತು ಕವಳಿಯ ಹಣ್ಣಿಗೆ
ತುಂಬುಚ್ಚಿ ಬಿದ್ದ ಮಗಿಮಾವು|
ತುಂಬುಚ್ಚಿ ಬಿದ್ದ ಮಗಿಮಾವು ಸಕ್ಕರಿ
ನೀ ಕೇಳಿದಾಗ ನಾ ಕೊಡುವೆ।।
ಹೆಣ್ಣಿದ್ದ ಮನೆಗೆ ಕನ್ನಡಿಯಾತಕ್ಕ
ಹೆಣ್ಣು ಕಂದವ್ವ ಒಳಹೊರಗು|
ಹೆಣ್ಣು ಕಂದವ್ವ ಒಳಹೊರಗು ಓಡಾಡಿದರ
ಕನ್ನಡಿ ಹಂಗ ಹೊಳೆವಳು।।
೧೨೯)
ಬಂಗಾರ ಬಾ ನಿನ್ನ ಸಿಂಗಾರ ಮಾಡೇನ
ಗೊಂಡೆ ಹಾಕೇನಿ ಹೆರಳೀಗೆ|
ಗೊಂಡೆ ಹಾಕೇನಿ ಹೆರಳೀಗೆ ಪುಟ್ಟಕ್ಕ
ಗೊಂಬೀಯ ಆಟ ಕಲಿಸೇನ।।
೧೩೦)
ನನ್ನಯ್ಯ ನಂಥೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಲಿ। ಹೊನ್ನೆಯ ಮರದ ನೆರಳಲಿ ಆಡುವಾಗ
ಸಂನ್ಯಾಸಿ ಜಪವ ಮರೆತಾನು।।
ಕಾಣದೆ ಇರಲಾರೆ ಕನ್ನಡಿ ಮುಖದವರ
ಕಾಮನಿಗಿಂತ ಚೆಲುವ್ಹಾರ|
ಕಾಮನಿಗಿಂತ ಚೆಲುವ್ಹಾರ ಚೆನ್ನಿಗರ
ಕಾಣದರಗಳಿಗೆ ಇರಲಾರೆ।।
೧೩೨)
ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನನಗ ನನ ರಾಮ ಬಡವೇನ|
ನನಗ ನನ ರಾಮ ಬಡವೇನ ಬಂಗಾರದ
ಮಾಲ ಇದ್ಹಾಂಗ ಮನಿಯಾಗ।।
೧೩೩)
ಹಾಸಿಗೆ ಹಾಸೆಂದ ಮಲ್ಲೀಗಿ ಮುಡಿ ಎಂದ
ಬ್ಯಾಸತ್ತರೆ ಮಡದಿ ಮಲಗೆಂದ|
ಬ್ಯಾಸತ್ತರೆ ಮಡದಿ ಮಲಗೆಂದ ತನರಾಯ
ತನ್ನ ನೋಡಿ ತವರ ಮರೆಯೆಂದ।।
೧೩೪)
ಹಚ್ಚಡದ ಪದರಾಗ ಅಚ್ಚಮಲ್ಲಿಗಿ ಹೂವ
ಬಿಚ್ಚಿ ನನ ಮೇಲೆ ಬಗೆವಂಥ।
ಬಿಚ್ಚಿ ನನ ಮೇಲೆ ಬಗೆವಂಥ ರಾಯರನ
ಬಿಟ್ಹಾಂಗ ಬರಲೇ ಹಡೆದವ್ವ।।
೧೩೫)
ಆಕಾಶದಂಥ ಅತ್ತೆ ಗೋಕುಲದಂಥ ಮಾವ
ಶ್ರೀ ಕೃಷ್ಣನಂಥ ಪತಿರಾಯ|
ಶ್ರೀ ಕೃಷ್ಣನಂಥ ಪತಿರಾಯ ಇದ್ದರ
ಸಾಕೀದ ತವರು ಮರತೇನ।।
೧೩೬)
ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ
ಅಡಗೀ ಬಾಯಿಗಿ ರುಚಿಯಿಲ್ಲ|
ಅಡಗೀ ಬಾಯಿಗಿ ರುಚಿಯಿಲ್ಲ ಹಡೆದವ್ವ
ಮಡದಿ ತವರಿಗಿ ಹೋಗ್ಯಾಳು।।
ಗಂಜೀಯ ಕುಡಿದರೂ ಗಂಡನ ಮನೆ ಲೇಸು
ಅಂದಣದ ಮೇಲೆ ಚವರವೆ।
ಅಂದಣದ ಮೇಲೆ ಚವರವೆ ಸಾರಿದರೂ
ಹಂಗಿನ ತವರ ಮನಿಸಾಕ।।
೧೩೮)
ಸೊಸೆಯು ಬರುತಾಳಂತ ಖುಷಿ ಭಾಳ ಮನದಾಗ
ಸೊಸಿಬಂದು ಮಗನ ಕಸಗೊಂಡು|
ಸೊಸಿಬಂದು ಮಗನ ಕಸಗೊಂಡು ಬಾಳ್ವಾಗ
ಮುಗಿಲೀಲಿ ಬಾಯಿ ತೆರದಾಳ।।
೧೩೯)
ಹಡೆದವ್ವ ಇರುತನಕ ನಡುಮನಿ ನಂದೆನ್ನೆ
ಕಡಗದ ಕೈ ಸೊಸಿ ಬಂದು|
ಕಡಗದ ಕೈ ಸೊಸಿ ಬಂದು ನಡಿವಾಗ
ತುದಿಗಟ್ಟೆ ನನಗ ಎರವಾದೆ।।
೧೪೦)
ತಾಯಿಯಿಲ್ಲದ ತವರಿಗೆ ಹೋಗಬ್ಯಾಡ ಮಗಳೆ
ನೀರಿಲ್ದ ಕೆರಿಗೆ ಕರುಬಂದ|
ನೀರಿಲ್ದ ಕೆರಿಗೆ ಕರುಬಂದ ತಿರುಗುವಾಗ
ಆಗ ನೋಡಿದರೆ ದುಃಖವ।।
೧೪೧)
ಸೊಲ್ಲಾಪುರದಣ್ಣಗ ನಿಲ್ಲದಲೆ ಬರಹೇಳು
ಸೀರೊಲ್ಲೆ ಅವನ ಕುಬಸೊಲ್ಲೆ|
ಸೀರೊಲ್ಲೆ ಅವನ ಕುಬಸೊಲ್ಲೆ ಅಣ್ಣನ
ಮಾರಿ ನೋಡಂಥ ಮನವಾಗಿ।।
೧೪೨)
ಕುದರಿಯ ಕುಣಿಸೂತ| ಆನಿಯ ನಡೆಸೂತ
ಅರಗಿಣಿಗೆ ಮಾತ ಕಲಿಸೂತ|
ಅರಗಿಣಿಗೆ ಮಾತ ಕಲಿಸೂತ ಬರತಾನೆ
ಬರಿಗೊಡದಮ್ಮ ದಾರಿಬಿಡ।।
೧೪೩)
ತಂಗೀಗಿ ಕಳುಹ್ಯಾನ ತವರೇರಿ ನಿಂತಾನ
ಅಂಗೀಲಿ ನೀರ ವರಸ್ಯಾನ।
ಅಂಗೀಲಿ ನೀರ ವರಸ್ಯಾನ ನನ್ನಣ್ಣ
ಇಂದಿಗಿ ತಂಗಿ ಎರವಾಗಿ।।
೧೪೪)
ಮುತ್ತೈದೆತನ ಬೇಡಿ ಮೂರುತಾಸು ನಿಂತೆ
ಮುತ್ತಿನ ತುರಾಯಿ ಅರಸರ|
ಮುತ್ತಿನ ತುರಾಯಿ ಅರಸರ ಸಂಗ ಬೇಡಿ
ಸುತ್ತೇನ ಶಿವನ ಶಿಖರವ||
ಗಂಡನಿಲ್ಲದ ಬಾಳು ದಂಡನಾಳಿದರೇನು
ಪುಂಡಿಯ ಹೂವ ಹೊಲ ತುಂಬ|
ಪುಂಡಿಯ ಹೂವ ಹೊಲ ತುಂಬ ಅರಳಿದರೆ
ಗಂಡನಿಲ್ಲದ ಬಾಳು ಬೀಳಲ್ಲವೇ।।
೧೪೬)
ಎರಡು ಮಕ್ಕಳ ಕೊಟ್ಟು ಸಾಕು ಮಾಡು ಶಿವನೇ
ಎರಡರ ಮ್ಯಾಲೆ ಆರುತಿ।
ಎರಡರ ಮ್ಯಾಲೆ ಆರುತಿ ಹಿಡಿಲಾಕ
ನಾರಿಯ ಕೊಟ್ಟು ಕಡೆಮಾಡೋ।।
೧೪೭)
ಹತ್ತು ಹಡೆಯುವುದಕ್ಕಿಂತ ಮುತ್ತೊಂದು ಹಡೇದಿನಿ
ಎತ್ತಿಕೋ ತಮ್ಮ ಬಗಲಾಗ।
ಎತ್ತಿಕೋ ತಮ್ಮ ಬಗಲಾಗ ನನ್ನ ತಮ್ಮ
ಮುತ್ತಿನ ಶಲ್ಯವ ಮರೆಮಾಡೋ।।
೧೪೮)
ಮಕ್ಕಳರ್ಥಿ ಉಳ್ಳವರಿಗೆ ಮಕ್ಕಳ ಕೊಡುದೇವ
ಮಕ್ಕಳು ಸಾಕೆಂದು ತಿರುದುಂಬ।
ಮಕ್ಕಳು ಸಾಕೆಂದು ತಿರುದುಂಬ ಬಡವರಿಗೆ
ಮಕ್ಕಳ ಕೊಡಬ್ಯಾಡ ಮನಿತುಂಬ।।
೧೪೯)
ನಾನು ತಿಮ್ಮಯ್ಯನ ಏನು ಬೇಡೋಳಲ್ಲ
ಹೂಡೋವೆರಡೆತ್ತು ಕರಿಎಮ್ಮೆ-ಹೂಡೋವೆರಡೆತ್ತು।
ಹೂಡೋವೆರಡೆತ್ತು ಮುತ್ತಿನ ಚೆಂಡು
ಆಡುಂಬೊನೊಬ್ಬ ಮಗ ಸಾಕು।।
೧೫೦)
ಮಂದಿ ಮಂದಿ ಎಂದು ಮಂದಿ ನಂಬಲಿ
ಹೋದ ಮಂದಿ ಬಿಟ್ಟಾರ ನಡುನೀರ|
ಮಂದಿ ಬಿಟ್ಟಾರ ನಡುನೀರ ಮಲ್ಲಯ್ಯ
ತಂದಿ ನನ ಕೈಯ ಬಿಡಬ್ಯಾಡ।।
೧೫೧)
ಮಾದೇವ ನಿನ ಹೊರತು ನಾನ್ಯಾರ ನಂಬಿಲ್ಲ
ನಾ ಮಾಡಿದೆನೆಂಬ ಅಳವಿಲ್ಲ|
ನಾ ಮಾಡಿದೆನೆಂಬ ಅಳವಿಲ್ಲ ಮಹಾದೇವ
ನೀ ನಡೆಸು ನನ್ನ ಬದುಕೆಲ್ಲ।।
ಹೆಣ್ಣಾಗಿ ಹುಟ್ಟೋದಕ್ಕಿಂತ ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮೇಲೊಂದು ಮರವಾಗಿ|
ಮಣ್ಣಿನ ಮೇಲೊಂದು ಮರವಾಗಿ ಹುಟ್ಟಿದರೆ
ಪುಣ್ಯವಂತರಿಗೆ ನೆರಳಾದೆ।।
೧೫೩)
ಎದ್ದೋನೆ ನಿಮಗ್ಯಾನ ಏಳುತಲಿ ನಿಮಗ್ಯಾನ
ಸಿದ್ಧಾರ ಗ್ಯಾನ ಶಿವ ಗ್ಯಾನ।
ಸಿದ್ಧಾರ ಗ್ಯಾನ ಶಿವ ಗ್ಯಾನ ಮಾ ಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ।।
೧೫೪)
ಆರೇಲಿ ಮಾವಿನ ಬೇರಾಗಿ ಇರುವೋಳೆ
ಓಲ್ಗಾದ ಸದ್ದಿಗೆ ಒದಗೋಳೆ।
ಓಲ್ಗಾದ ಸದ್ದೀಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡಿರ ಬಿಡಿಸವ್ವಾ।।
೧೫೫)
ಎಂಟೆಲಿ ಮಾವಿನ ದಂಟಾಗಿ ಇರುವೋಳೆ
ಗಂಟೆ ಸದ್ದೀಗೆ ಒದಗೋಳೆ।
ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ
ನಮ್ ಗಂಟಾಲ ತೊಡರ ಬಿಡಿಸವ್ವಾ।।
ರಾಗಿ ಬೀಸೋಕಲ್ಲೆ ರಾಜಾನ ಒಡಿಗಲ್ಲೆ
ರಾಯ ಅಣ್ಣಯ್ನ ಅರಮನೆ।
ರಾಯ ಅಣ್ಣಯ್ನ ಅರಮನೆಯ ಈ ಕಲ್ಲೆ
ನೀ ರಾಜಾ ಬೀದೀಲಿ ದನಿದೋರೆ।।
೧೫೭)
ಕಲ್ಲವ್ವಾ ಮಾತಾಯಿ ಮಲ್ಲವ್ವಾ ರಾಗೀಯ
ಜಲ್ಲಾ ಜಲ್ಲಾನೆ ಉದುರವ್ವಾ।
ಜಲ್ಲಾ ಜಲ್ಲಾನೆ ಉದುರವ್ವ ನಾ ನಿನಗೆ
ಬೆಲ್ಲಾದಾರತಿಯ ಬೆಳಗೇನು।।
೧೫೮)
ಬೆಳ್ಳಾನ ಬಿಳಿ ಎತ್ತ ಬೆಳ್ಳಿಯ ಬಾರಕೋಲ
ಹಳ್ಳದ ಹೊಲ ಹರಗ್ಯಾವೊ।
ಹಳ್ಳದಹೊಲ ಹರಗ್ಯಾವೊ ನನ್ನೆತ್ತ
ಬೆಳ್ಳಕ್ಕಿ ಕಂಡ ಬೆದರ್ಯಾವೊ।।
ಸಂಗ್ರಹ - Dr Prema Pangi
Comments
Post a Comment