ವಚನ ದಾಸೋಹ : ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ
ವಚನ ದಾಸೋಹ : ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ ವಚನ : #ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ ತೆರಹಿಲ್ಲದ ಸಂಭಾಷಣೆ ಸುಖವು. ತೆರಹಿಲ್ಲದೆ ನಂಬಿದೆ, ಸ್ವಾನುಭಾವ ಸುಖವು, ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ ಕೂಡಲಸಂಗಮದೇವಾ, ನಿಮ್ಮ ಶರಣಂಗೆ ! / 710 -ಗುರು ಬಸವಣ್ಣನವರು. ಅರ್ಥ: ಇದು ಶರಣ ಸ್ಥಲ(ಶರಣನ ಐಕ್ಯಸ್ಥಲ)ದ ವಚನ. ತೆರಹು ಅಂದರೆ ಬೇಧಭಾವ, ಮುಚ್ಚುಮರೆ, ಒಳಗೊಂದು ಹೊರಗೊಂದು ಎನ್ನುವ ಬೇಧ, ಸದಾಕಾಲ. ಒಳಗೊಂದು ಹೊರಗೊಂದು ಎಂಬ ಬೇಧವಿಲ್ಲದ ಮುಚ್ಚುಮರೆ ಇಲ್ಲದ ಪಾರದರ್ಶಕವಾದ ಲಿಂಗದೇವ ಒಪ್ಪುವ ನಡೆ, ಲಿಂಗದೇವ ಒಪ್ಪುವ ನುಡಿ, ಲಿಂಗದೇವನಲ್ಲಿ ಸಂಭಾಷಣೆಯ ಸುಖ, ಸಂಪೂರ್ಣ ನಂಬಿಕೆಯ ನಿಷ್ಟೆ, ಭಿನ್ನ ಭಾವಕ್ಕೆಡೆಯಿಲ್ಲದಂತೆ ಆತನನ್ನು ನಂಬಿ ಸ್ವಾನುಭಾವದ ಸದಾಕಾಲದ ಸುಖದಲ್ಲಿ ತನ್ಮಯನಾದ ಶರಣನ ಚಿತ್ರಣ ಈ ವಚನದಲ್ಲಿ ಇದೆ. ಶರಣನ ಮಾತು, ಮಹಿಮೆ, ವಿಚಾರಗಳೆಲ್ಲಾ ಸದಾ ಲಿಂಗಪೂರ್ಣವಾಗಿವೆ. ಭಾವಲಿಂಗಭರಿತನಾಗಿ ಆನಂದ ಮತ್ತು ಸಮರಸ ಭಕ್ತಿಗಳಿಂದ ಅತ್ಯಂತ ತೃಪ್ತಿಯನ್ನು ಪಡೆಯುತ್ತಾನೆ ಶರಣ. ಆ ಲಿಂಗಾಂಗ ಸಮರಸದ ನಿಬ್ಬೆರಗಿನಲ್ಲಿ ನಿಸ್ಸಂಗಿಯಾಗಿ ಜ್ಞಾನಮುಖದಿಂದ ವರ್ತಿಸುತ್ತಾನೆ. ಆತ ಸಂಶಯ ರಹಿತ, ನಿರ್ಭಿತ, ಆತ್ಮವಿಶ್ವಾಸಿ. ಶರಣರು ಸ್ವಭಾವತಃ ಅಂರ್ತಮುಖಿಗಳು, ಅನುಭಾವಿಗಳು. ಅವರ ನಡೆ ನುಡಿ ಒಂದಾಗಿದ್ದವರು, ಸತ್ಯಸಂಧರು ಮತ್ತು ಪ್ರಾಮಾಣಿಕರು. ಶರಣರ ಸಂಭಾಷಣೆ, ನಂಬಿಗೆ, ಅನುಭಾವ...