ವಚನ ದಾಸೋಹ : ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ
#ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ
ತೆರಹಿಲ್ಲದ ಸಂಭಾಷಣೆ ಸುಖವು.
ತೆರಹಿಲ್ಲದೆ ನಂಬಿದೆ, ಸ್ವಾನುಭಾವ ಸುಖವು,
ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ
ಕೂಡಲಸಂಗಮದೇವಾ, ನಿಮ್ಮ ಶರಣಂಗೆ ! / 710
-ಗುರು ಬಸವಣ್ಣನವರು.
ಅರ್ಥ:
ಇದು ಶರಣ ಸ್ಥಲ(ಶರಣನ ಐಕ್ಯಸ್ಥಲ)ದ ವಚನ. ತೆರಹು ಅಂದರೆ ಬೇಧಭಾವ, ಮುಚ್ಚುಮರೆ, ಒಳಗೊಂದು ಹೊರಗೊಂದು ಎನ್ನುವ ಬೇಧ, ಸದಾಕಾಲ.
ಒಳಗೊಂದು ಹೊರಗೊಂದು ಎಂಬ ಬೇಧವಿಲ್ಲದ ಮುಚ್ಚುಮರೆ ಇಲ್ಲದ ಪಾರದರ್ಶಕವಾದ ಲಿಂಗದೇವ ಒಪ್ಪುವ ನಡೆ, ಲಿಂಗದೇವ ಒಪ್ಪುವ ನುಡಿ, ಲಿಂಗದೇವನಲ್ಲಿ ಸಂಭಾಷಣೆಯ ಸುಖ, ಸಂಪೂರ್ಣ ನಂಬಿಕೆಯ ನಿಷ್ಟೆ, ಭಿನ್ನ ಭಾವಕ್ಕೆಡೆಯಿಲ್ಲದಂತೆ ಆತನನ್ನು ನಂಬಿ ಸ್ವಾನುಭಾವದ ಸದಾಕಾಲದ ಸುಖದಲ್ಲಿ ತನ್ಮಯನಾದ ಶರಣನ ಚಿತ್ರಣ ಈ ವಚನದಲ್ಲಿ ಇದೆ. ಶರಣನ ಮಾತು, ಮಹಿಮೆ, ವಿಚಾರಗಳೆಲ್ಲಾ ಸದಾ ಲಿಂಗಪೂರ್ಣವಾಗಿವೆ. ಭಾವಲಿಂಗಭರಿತನಾಗಿ ಆನಂದ ಮತ್ತು ಸಮರಸ ಭಕ್ತಿಗಳಿಂದ ಅತ್ಯಂತ ತೃಪ್ತಿಯನ್ನು ಪಡೆಯುತ್ತಾನೆ ಶರಣ. ಆ ಲಿಂಗಾಂಗ ಸಮರಸದ ನಿಬ್ಬೆರಗಿನಲ್ಲಿ ನಿಸ್ಸಂಗಿಯಾಗಿ ಜ್ಞಾನಮುಖದಿಂದ ವರ್ತಿಸುತ್ತಾನೆ. ಆತ ಸಂಶಯ ರಹಿತ, ನಿರ್ಭಿತ, ಆತ್ಮವಿಶ್ವಾಸಿ.
ಶರಣರು ಸ್ವಭಾವತಃ ಅಂರ್ತಮುಖಿಗಳು, ಅನುಭಾವಿಗಳು. ಅವರ ನಡೆ ನುಡಿ ಒಂದಾಗಿದ್ದವರು, ಸತ್ಯಸಂಧರು ಮತ್ತು ಪ್ರಾಮಾಣಿಕರು. ಶರಣರ ಸಂಭಾಷಣೆ, ನಂಬಿಗೆ, ಅನುಭಾವ, ಮಹಿಮೆ, ವಿಚಾರಗಳಲ್ಲಿ ಯಾವುದೇ ಮುಚ್ಚುಮರೆ ಯಾಗಲಿ, ವ್ಯತ್ಯಾಸವಾಗಲಿ ಇರಲಿಲ್ಲ. ಹೀಗೆ ಸಂಪೂರ್ಣವಾಗಿ ಲಿಂಗರೂಪವಾಗಿರುವ ಲಿಂಗಾನುಭವದ ಸುಖ ಅನುಭವಿಸಿದ ಆತ್ಯಂತಿಕ ಎತ್ತರ ಶರಣರದು ಎಂದು ಗುರು ಬಸವಣ್ಣನವರು ಶರಣರ ವ್ಯಕ್ತಿತ್ವವನ್ನು ಅರುಹಿದ್ದಾರೆ.
Sharana meaning "to surrender". Shivasharana denotes egoless surrender and refuge in Shiva.
ವಚನ ಚಿಂತನೆ:
ಶರಣಸ್ಥಲ :
“ಶರಣ' ಎಂದರೆ ಶಿವನಿಗೆ ಶರಣು ಹೊಕ್ಕವನು'. ಶಟ್ಸ್ಥಲದ ಸಾಧನೆಯಲ್ಲಿ ನಿರ್ಮಲ ಭಕ್ತಿಯಿಂದ ಭಕ್ತಸ್ಥಲ, ಅಚಲ ನಿಷ್ಠೆಯಿಂದ ಮಾಹೇಶ್ವರಸ್ಥಲ, ತನ್ನನ್ನೇ ಶಿವನಿಗೆ ಮತ್ತು ಸಮಾಜಕ್ಕೆ ಸಮರ್ಪಿಸಿಕೊಂಡ ಪ್ರಸಾದಿಸ್ಥಲ, ಲಿಂಗಾನುಭವದಿಂದ ಪ್ರಾಣಲಿಂಗಿಸ್ಥಲ, ಈ ಮೊದಲ ನಾಲ್ಕು ಹಂತಗಳನ್ನು ದಾಟಿ ಶರಣ ಸ್ಥಲದಲ್ಲಿ ನಿಂತ, ಶಿವಯೋಗದ ತುತ್ತ ತುದಿಯಲ್ಲಿ ನಿಂತ ಅನುಭಾವಿಯೇ ಶರಣ. ಶರಣನಲ್ಲಿ ಮುನ್ನಿನ ನಾಲ್ಕು ಸ್ಥಲಗಳ ಅವಸ್ಥೆಯೂ ಅಂತರ್ಗತಗೊಂಡು ವಿಸ್ತರಿಸಿ ಬೆಳೆದಿರುತ್ತವೆ. ಅರಿತರೆ ಶರಣ, ಮರೆತರೆ ಮಾನವ ಎನ್ನುತ್ತದೆ ಶರಣ ಸ್ಥಲ. ಶರಣನು ಆಧ್ಯಾತ್ಮಿಕದ ಸಿದ್ದಿ ಶಿಖರದಲ್ಲಿ ನಿಂತವನು.
“ಇಹ ಪರನಲ್ಲ, ಪರಾಪರನಲ್ಲ, ಕಾಮಿಸಿ ಕಾಮಿಯಲ್ಲ, ಭಾವಿಸಿ ಭಾವಿ ಅಲ್ಲ, ಅನಾಮಯ ನಿರಂಜನ" ಇದು ಶರಣನ ವ್ಯಕ್ತಿತ್ವ. “ಜಲದೊಳಗಣ ಮತ್ಸ್ಯ ಜಲವ ತನ್ನ ನಾಸಿಕದತ್ತ ಹೊದ್ದಲೀಯದಂತೆ” ಈ ಸಂಸಾರದಲ್ಲಿದ್ದೂ ತನ್ನನ್ನು ಹೊದ್ದಲೀಯನು.
ಶರಣ ಕರ್ತವ್ಯವನ್ನು ನಿರ್ವಹಿಸುವ ನಿರಾಭಾರಿ.
ವ್ಯಕ್ತಿ ಎಷ್ಟೇ ದೊಡ್ಡವನಾಗಲಿ, ಕಾಯಕವಿಲ್ಲದೆ ಬದುಕುವ ಹಕ್ಕಿಲ್ಲ ಎಂಬುದನ್ನು ತಾನು ಆಚರಣೆಯಲ್ಲಿ ತೋರಿಸುತ್ತಾನೆ. ಆಧ್ಯಾತ್ಮಿಕವಾಗಿ ಆತ ಸಿದ್ಧಿಯ ಶಿಖರದಲ್ಲಿ ನಿಂತವನು. ಶ್ರದ್ಧಾ ಭಕ್ತಿ, ನಿಷ್ಟಾ ಭಕ್ತಿ, ಅವಧಾನ ಭಕ್ತಿ, ಅನುಭಾವ ಭಕ್ತಿ ಗಳನ್ನು ದಾಟಿ ಆನಂದಭಕ್ತಿಯಲ್ಲಿ ನಿಬ್ಬೆರಗಾದವನು.
"ಶರಣ ಸತಿ, ಲಿಂಗ ಪತಿ" ಎಂಬ ಭಾವನೆಯಿಂದ ಆ ಅಲೌಕಿಕ ಪತಿಯ ಸಮರಸದ ಕೂಟವನ್ನು ಪಡೆದು ಆನಂದ ನಿಬ್ಬೆರಗಿನಲ್ಲಿ ನಿಲ್ಲುವನು. ಅಂಗಲಿಂಗಸಂಗಿಯಾದ ಶರಣನ ಅಂಗವೆಲ್ಲ ಲಿಂಗವೇ. ಆತನ ಮನವೆಲ್ಲ ಅವಿರಳ ಜ್ಞಾನವೇ. “ಸ್ಪಟಿಕದ ಘಟದೊಳಗೆ ಎತ್ತಿದ ಜ್ಯೋತಿ ಒಳ ಹೊರಗೊಂದು ಸ್ವಯವಾಗಿ ಪ್ರಜ್ವಲಿಸುವಂತೆ” ಲಿಂಗವಂತ ಶರಣನ ಅಪೂರ್ವ ಕಾಂತಿಯು ಒಳಹೊರಗೆ ಒಂದಾಗಿ ಪ್ರಜ್ವಲಿಸುತ್ತದೆ. ಶರಣನ ಭಾವ ಅಡಗಿ ನಿರ್ಭಾವವಾಗಿ ಸಮತೆಯಲ್ಲಿ ನಿಂದು, ಇದು ನಿಜಶಾಂತಿಯಲ್ಲಿ ಪರಿಣಮಿಸುತ್ತದೆ.
- ✍️Dr Prema Pangi
Comments
Post a Comment