ವಚನ ದಾಸೋಹ :ಅರಗು ತಿಂದು ಕರಗುವ ದೈವವನೆಂತು
ವಚನ ದಾಸೋಹ : ಅರಗು ತಿಂದು ಕರಗುವ ದೈವವನೆಂತು ವಚನ: #ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ. - ಗುರು ಬಸವಣ್ಣನವರು ಅರ್ಥ: ಅರಗು (ಮೇಣ) ತಿಂದು ಕರಗುವ ದೈವವನ್ನು , ಬೆಂಕಿ ತಗಲಿದರೆ ಆಕಾರವನ್ನು ಕಳೆದುಕೊಳ್ಳುವ ದೈವವನು ಹೇಗೆ ಸರಿ ಎನ್ನಲಿ ಅಯ್ಯಾ? ಲೋಹದ ತೊಗಟೆಯಿಂದ ಮಾಡಿ ಒಳಗೆ ಮೇಣ ತುಂಬಿದ ವಿಗ್ರಹಗಳು, ಬೆಂಕಿಗೆ ಮೇಣ ಕರಗಿದಂತೆ ತಮ್ಮ ಆಕಾರವನ್ನು ಕಳೆದುಕೊಳ್ಳುತ್ತವೆ. ಶಾಖಕ್ಕೆ ಒಡ್ಡಿಕೊಂಡಾಗ ಕರಗುವ ವಿಗ್ರಹಗಳನ್ನು ನಾನು ಹೇಗೆ ದೇವರೆಂದು ಸ್ವೀಕರಿಸಲಿ? ಹಣದ ಅಗತ್ಯ ಬಿದ್ದಾಗ ಮಾರುವ ವಿಗ್ರಹಗಳನ್ನು ನಾನು ದೇವರೆಂದು ಹೇಗೆ ಸ್ವೀಕರಿಸಲಿ? ಕಳ್ಳ ಕಾಕರ ದರೋಡೆಕೋಕರ ಭಯವಿದ್ದರೆ ನೆಲದಲ್ಲಿ ಹೂತಿಡಲ್ಪಡುವ ವಿಗ್ರಹಗಳನ್ನು ನಾನು ಹೇಗೆ ದೇವರೆಂದು ಒಪ್ಪಿಕೊಳ್ಳಲಿ? ಸಹಜ ಭಾವ ನಿಜೈಕ್ಯ ಅಂದರೆ ಸಹಜವಾಗಿ ನಮ್ಮೊಳಗೆಯೇ ನೆಲೆಸಿರುವ ಪರಮಾತ್ಮ ಕೂಡಲ ಸಂಗಮದೇವ ಒಬ್ಬನೇ ದೇವರು ಎನ್ನುತ್ತಾರೆ. ಶರಣರು ಏಕದೇವೋಪಾಸನೆಗೆ ಒತ್ತು ನೀಡಿದರು. ಬಹುದೇವೋಪಾಸನೆಯನ್ನು ಸಂಪೂರ್ಣ ನಿರಾಕರಿಸಿ ದೇವನೊಬ್ಬನೆ ಎಂದು ಸಾರಿದರು. ನೂರಾರು ದೇವತೆಗಳನ್ನು ಸೃಷ್ಟಿಸಿಕೊಂಡು ಹಲವಾರು ಹೆಸರಿಟ್ಟು ಪುರಾಣ ಕಲ್ಪಿತ ಕಥ...