ವಚನ ದಾಸೋಹ :ಅರಗು ತಿಂದು ಕರಗುವ ದೈವವನೆಂತು


ವಚನ ದಾಸೋಹ :
ಅರಗು ತಿಂದು ಕರಗುವ ದೈವವನೆಂತು
ವಚನ:
#ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.
- ಗುರು ಬಸವಣ್ಣನವರು
ಅರ್ಥ:
ಅರಗು (ಮೇಣ) ತಿಂದು ಕರಗುವ ದೈವವನ್ನು , ಬೆಂಕಿ ತಗಲಿದರೆ ಆಕಾರವನ್ನು ಕಳೆದುಕೊಳ್ಳುವ ದೈವವನು ಹೇಗೆ ಸರಿ ಎನ್ನಲಿ ಅಯ್ಯಾ? ಲೋಹದ ತೊಗಟೆಯಿಂದ ಮಾಡಿ ಒಳಗೆ ಮೇಣ ತುಂಬಿದ ವಿಗ್ರಹಗಳು, ಬೆಂಕಿಗೆ ಮೇಣ ಕರಗಿದಂತೆ ತಮ್ಮ ಆಕಾರವನ್ನು ಕಳೆದುಕೊಳ್ಳುತ್ತವೆ. ಶಾಖಕ್ಕೆ ಒಡ್ಡಿಕೊಂಡಾಗ ಕರಗುವ ವಿಗ್ರಹಗಳನ್ನು ನಾನು ಹೇಗೆ ದೇವರೆಂದು ಸ್ವೀಕರಿಸಲಿ? 
ಹಣದ ಅಗತ್ಯ ಬಿದ್ದಾಗ ಮಾರುವ ವಿಗ್ರಹಗಳನ್ನು ನಾನು ದೇವರೆಂದು ಹೇಗೆ ಸ್ವೀಕರಿಸಲಿ? ಕಳ್ಳ ಕಾಕರ ದರೋಡೆಕೋಕರ ಭಯವಿದ್ದರೆ ನೆಲದಲ್ಲಿ ಹೂತಿಡಲ್ಪಡುವ ವಿಗ್ರಹಗಳನ್ನು ನಾನು ಹೇಗೆ ದೇವರೆಂದು ಒಪ್ಪಿಕೊಳ್ಳಲಿ? ಸಹಜ ಭಾವ ನಿಜೈಕ್ಯ ಅಂದರೆ ಸಹಜವಾಗಿ ನಮ್ಮೊಳಗೆಯೇ ನೆಲೆಸಿರುವ ಪರಮಾತ್ಮ ಕೂಡಲ ಸಂಗಮದೇವ ಒಬ್ಬನೇ ದೇವರು ಎನ್ನುತ್ತಾರೆ. 

ಶರಣರು ಏಕದೇವೋಪಾಸನೆಗೆ ಒತ್ತು ನೀಡಿದರು. ಬಹುದೇವೋಪಾಸನೆಯನ್ನು ಸಂಪೂರ್ಣ ನಿರಾಕರಿಸಿ ದೇವನೊಬ್ಬನೆ ಎಂದು ಸಾರಿದರು.
 ನೂರಾರು ದೇವತೆಗಳನ್ನು ಸೃಷ್ಟಿಸಿಕೊಂಡು ಹಲವಾರು ಹೆಸರಿಟ್ಟು ಪುರಾಣ ಕಲ್ಪಿತ ಕಥೆ ಗಳನ್ನು ಕಟ್ಟಿ ಅಂಧ-ಶ್ರದ್ಧೆಯಲ್ಲಿ ಮುಳುಗಿದ ಜನರನ್ನು ಕಂಡು  ದೇವರು ಒಬ್ಬನೇ ಎಂದು ಸಾರಿ ನಿಮ್ಮಲ್ಲಿಯೇ ಇರುವ ದೇವರನ್ನು 
ಅರಿಯದೆ ಕಲ್ಲುದೇವರು, ಮಣ್ಣುದೇವರು, ಮರದೇವರು ಎಂದು ಆರಾಧಿಸಿ ಜನ ಕೆಟ್ಟರಲ್ಲ ಎಂದು ಶರಣರು ವಿಷಾದಿಸುತ್ತಾರೆ. ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೇ ದೈವ ಎಂದು ಒಬ್ಬನೇ ದೇವನಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಶರಣರ ದೇವನ ಸ್ವರೂಪ: 
ನಿರ್ಗುಣ  ನಿರಾಕಾರ, ನಿರಂಜನ, ನಿರಯವ ಪರಬ್ರಹ್ಮ (ಪರಶಿವ)ನು ಇಂದ್ರಿಯಗಳಿಗೆ ನಿಲುಕದವನು, ಕೇವಲ ಅನುಭಾವಕ್ಕೆ ದೊರೆಯುವವ. ಇತನ ನಿಲುವು ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ,
ಬಯಲ ಮರೆಯಲಡಿಗಿದ ಮರೀಚಿಯಂತೆ
ಕಂಗಳ ಮರೆಯಲಡಗಿದ ಬೆಳಗಿನಂತೆ 
ಎನ್ನುತ್ತಾರೆ ಅಲ್ಲಮಪ್ರಭುಗಳು. 
ನೆಲದ ಮರೆಯಲ್ಲಿ ನಿಧಾನವಿದೆ. ಮುಗಿಲ ಮರೆಯಲ್ಲಿ ಮಿಂಚಿದೆ, ಬಯಲ ಮರೆಯಲ್ಲಿ ಮರೀಚಿಯಿದೆ ಕಂಗಳ ಮರೆಯಲ್ಲಿ ಬೆಳಗಿದೆ, ಆದರೆ ಅವು ಹೊರನೋಟಕ್ಕೆ ಕಾಣಿಸುವುದಿಲ್ಲ, ಒಳಗೆ ಹೋಗಿ ಹುಡುಕಬೇಕು. ನಮ್ಮೊಳಗೆ ಯೋಗಕ್ರಿಯೆ ನಡೆಯಬೇಕು. ಆಗ ಮಾತ್ರ ಅಂತಸ್ಸತ್ವ ಕಾಣಿಸುತ್ತದೆ. ಅದೇ ದೇವರ ಪ್ರತಿರೂಪವಾಗಿದೆ. 
ಇಂತಹ ದೇವರನ್ನು ವಿಗ್ರಹಗಳ ಮೂಲಕ ಆರಾಧಿಸುವುದು ಸರಿಯೇ? ಯಾರೋ ಕಲಾವಿದ ತನ್ನ ಸೀಮಿತವಾದ ದೃಷ್ಟಿಯಿಂದ ದೇವರಿಗೆ ಕೊಟ್ಟ ವಿಗ್ರಹರೂಪ, ಸುಂದರವಾದ ಮಾತ್ರಕ್ಕೆ ಬೆಲೆ ಬಾಳುವ ವಸ್ತುವಾದ ಮಾತ್ರಕ್ಕೆ ಅದು ಆ ಸತ್ಯ ನಿತ್ಯ ಅವಿನಾಶಿ ದೇವರು ಹೇಗಾದೀತು?
ಜಗದಗಲ ಮುಗಿಲಗಲ,  ಪಾತಾಳದಿಂದತ್ತತ್ತ ಪಾದ,ಬ್ರಹ್ಮಾಂಡದಿಂದತ್ತತ್ತ ಮುಕುಟ ಸಂಪೂರ್ಣ ವಿಶ್ವವ್ಯಾಪಿ. ಸಾವಿಲ್ಲದ, ಕೇಡಿಲ್ಲದ, ಭವವಿಲ್ಲದ, ಭಯವಿಲ್ಲದ, ತಂದೆ ತಾಯಿ ಇಲ್ಲದ, ಅಯೋನಿಜ. ಲಿಂಗಾಯತ ಧರ್ಮವು ಆತ್ಮನನ್ನೇ ಪರಮಾತ್ಮನ ಅಂಶವೆಂದು ಭಾವಿಸಿದೆ. ಉಳಿದ ಧರ್ಮಗಳ ದೇವರು ಮೂರ್ತರೂಪದಲ್ಲಿದ್ದರೆ, ಇವರ ದೇವರು ಅಮೂರ್ತನಾಗಿದ್ದಾನೆ. ತನ್ನೊಳಗಿರುವ ಆತ್ಮನೇ ದೇವ. ಆ ಪ್ರಾಣಲಿಂಗವನ್ನು ಕಾಣಲು ಇಷ್ಟಲಿಂಗವೆಂಬುದು ಒಂದು ಮಾಧ್ಯಮ ವಾಗಿದೆ. ತಮ್ಮ ದೇಹವನ್ನೇ
ದೇಗುಲವಾಗಿ ಭಾವಿಸಿ ಒಳಗಿರುವ ಆತ್ಮನನ್ನೆ ಪರಮಾತ್ಮನ ಅಂಶ ಎಂದು ಅರಿತು, ಆತ್ಮನ ಮೂಲಕ ಪರಮಾತ್ಮನನ್ನು ಕಂಡುಕೊಳ್ಳುವ ದೇವರ ಪರಿಕಲ್ಪನೆಯನ್ನು ಶರಣರು ಕಟ್ಟಿಕೊಟ್ಟಿದ್ದಾರೆ.

ಒಂದೇ ಮನ, ಒಂದೇ ಧ್ಯಾನ, ಒಂದೇ ನಿಲುವು ಇದ್ದಾಗ ಮಾತ್ರ ಸತ್ ಚಿತ್ ಆನಂದ  ಸಂಪೂರ್ಣ ಸತ್ಯದ ಸಾಕ್ಷಾತ್ಕಾರವಾಗುತ್ತದೆ.
ಶರಣರು ನಿರ್ಮಲ ಭಕ್ತಿ, ಅಚಲ ನಿಷ್ಠೆ ಏಕದೇವೋಪಾಸನೆಯ ಮೂಲಕ ತಮ್ಮ  ಶಿವಯೋಗಸಾಧನೆಯ ಮಾರ್ಗದಲ್ಲಿ  ಭಕ್ತಿಯ ಪರಿಶುದ್ಧತೆ, ಪರಿಕಾಷ್ಟೆಯನ್ನು ಮೆರೆದರು.
- ✍️Dr Prema Pangi 
ಶರಣು ಶರಣಾರ್ಥಿ 🙏

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma