ವಚನ ದಾಸೋಹ - ಅಜ್ಞಾನವೆಂಬ ತೊಟ್ಟಿಲೊಳಗೆ
ವಚನ: #ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು. - ಅಲ್ಲಮ ಪ್ರಭುಗಳು ಸಮಗ್ರ ವಚನ ಸಂಪುಟ: 2 ವಚನದ ಸಂಖ್ಯೆ: 460 *ಅರ್ಥ*: ಅಲ್ಲಮಪ್ರಭುಗಳು ಶರಣರಿಗೆ ಅರಿವು ಆಚಾರ ಅನುಷ್ಠಾನಕ್ಕೆ ಮಹಾಮಾರ್ಗ ತೋರಿದ ನಿರಂಜನ ಜಂಗಮಮೂರ್ತಿ. ಶರಣರನ್ನು ಒರಿಗೆ ಹಚ್ಚಿ ತಿಕ್ಕಿ ನೋಡಿ ಜಗತ್ತಿಗೆ ಅವರ ಧಿವ್ಯತೆಯನ್ನು ಪರಿಚಯಿಸಿದ ಚರಜಂಗಮ ಗುರುಗಳು. ಅಲ್ಲಮಪ್ರಭುಗಳು ವಚನ ಸಾಹಿತ್ಯದ ಸರ್ವಕಾಲಿಕ ಎಚ್ಚರದ ಪ್ರತೀಕ. ಶರಣರ ಕಾಲ ಸಂಕೀರ್ಣವಾದ ರಾಜಕೀಯ, ಸಾಮಾಜಿಕ ಮತ್ತು ಸಂಘಟ್ಟಗಳ ಸಮಯ. ಪುರಾತನ ತಾತ್ವಿಕತೆಗಳ ಎದುರು ವಚನಗಳ ಮೂಲಕ ಪ್ರತ್ತ್ಯುತ್ತರ ಕೊಟ್ಟ ಕಾಲ ಶರಣರದಾಗಿತ್ತು. ಬಹು ಜನರಿಗೆ ಓದಲು ಲಭ್ಯವಿಲ್ಲದ ಅನುಮತಿವಿಲ್ಲದ ಹಿರಿಯ ದರ್ಶನಗಳನ್ನು ದಾಟಿ ಬಂದ ಕಾಲ ಅದಾಗಿತ್ತು. ಹಲವು ಸ್ವತಂತ್ರ ಸಿದ್ದಾಂತಗಳನ್ನು ಅಳವಡಿಸಿಕೊಂಡ ಕಾಲ ಅವರದಾಗಿತ್ತು. ಪ್ರಸ್ತುತ ವಚನ ಅಲ್ಲಮಪ್ರಭುಗಳ ಬಹು ತಾತ್ವಿಕ ಮೌಲ್ಯವಿತವಾದ ವಚನ. ಈ ಜಗತ್ತಿನಲ್ಲಿ ನಡೆಯುತ್ತಿರುವ ಭ್ರಾಂತಿಯನ್ನು ಸಮರ್ಪಕ ಸಾದೃಶ್ಯದಿಂದ ವರ್ಣಿಸಿ ಆ ಭ್ರಾಂತಿಯಿಂದ ಹೊರ ಬರುವ ಉಪಾಯವನ್ನು ಅಷ್ಟೇ ಕಳಕಳಿಯಿಂದ ತಿಳಿಸಿದ್ದಾರೆ...