ವಚನ ದಾಸೋಹ - ಅಜ್ಞಾನವೆಂಬ ತೊಟ್ಟಿಲೊಳಗೆ

ವಚನ:
#ಅಜ್ಞಾನವೆಂಬ ತೊಟ್ಟಿಲೊಳಗೆ, 
ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು.
- ಅಲ್ಲಮ ಪ್ರಭುಗಳು
ಸಮಗ್ರ ವಚನ ಸಂಪುಟ: 2   ವಚನದ ಸಂಖ್ಯೆ: 460 
*ಅರ್ಥ*: 
ಅಲ್ಲಮಪ್ರಭುಗಳು ಶರಣರಿಗೆ ಅರಿವು ಆಚಾರ ಅನುಷ್ಠಾನಕ್ಕೆ ಮಹಾಮಾರ್ಗ ತೋರಿದ ನಿರಂಜನ ಜಂಗಮಮೂರ್ತಿ.  ಶರಣರನ್ನು ಒರಿಗೆ ಹಚ್ಚಿ ತಿಕ್ಕಿ ನೋಡಿ ಜಗತ್ತಿಗೆ ಅವರ ಧಿವ್ಯತೆಯನ್ನು ಪರಿಚಯಿಸಿದ ಚರಜಂಗಮ ಗುರುಗಳು. ಅಲ್ಲಮ‌ಪ್ರಭುಗಳು ವಚನ ಸಾಹಿತ್ಯದ ಸರ್ವಕಾಲಿಕ ಎಚ್ಚರದ ಪ್ರತೀಕ. ಶರಣರ ಕಾಲ ಸಂಕೀರ್ಣವಾದ ರಾಜಕೀಯ, ಸಾಮಾಜಿಕ ಮತ್ತು ಸಂಘಟ್ಟಗಳ ಸಮಯ. ಪುರಾತನ  ತಾತ್ವಿಕತೆಗಳ ಎದುರು ವಚನಗಳ ಮೂಲಕ ಪ್ರತ್ತ್ಯುತ್ತರ ಕೊಟ್ಟ ಕಾಲ ಶರಣರದಾಗಿತ್ತು. ಬಹು ಜನರಿಗೆ ಓದಲು ಲಭ್ಯವಿಲ್ಲದ ಅನುಮತಿವಿಲ್ಲದ ಹಿರಿಯ ದರ್ಶನಗಳನ್ನು ದಾಟಿ ಬಂದ ಕಾಲ ಅದಾಗಿತ್ತು. ಹಲವು ಸ್ವತಂತ್ರ ಸಿದ್ದಾಂತಗಳನ್ನು ಅಳವಡಿಸಿಕೊಂಡ ಕಾಲ ಅವರದಾಗಿತ್ತು.

ಪ್ರಸ್ತುತ ವಚನ ಅಲ್ಲಮಪ್ರಭುಗಳ ಬಹು ತಾತ್ವಿಕ ಮೌಲ್ಯವಿತವಾದ ವಚನ. ಈ ಜಗತ್ತಿನಲ್ಲಿ ನಡೆಯುತ್ತಿರುವ ಭ್ರಾಂತಿಯನ್ನು ಸಮರ್ಪಕ ಸಾದೃಶ್ಯದಿಂದ ವರ್ಣಿಸಿ  ಆ ಭ್ರಾಂತಿಯಿಂದ ಹೊರ ಬರುವ ಉಪಾಯವನ್ನು ಅಷ್ಟೇ ಕಳಕಳಿಯಿಂದ ತಿಳಿಸಿದ್ದಾರೆ.

 *ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೊಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!*

ಜ್ಞಾನವೆಂಬ ಶಿಶುವನ್ನು ಅಜ್ಞಾನವೆಂಬ ತೊಟ್ಟಿಲಲ್ಲಿ ಮಲಗಿಸಿಲಾಗಿದೆ. ಆ ತೊಟ್ಟಿಲನ್ನು ಸಕಲ ವೇದಶಾಸ್ತ್ರಗಳೆಂಬ ಹಗ್ಗದಿಂದ ಕಟ್ಟಲಾಗಿದೆ. ಭ್ರಾಂತಿ ಎಂಬ ತಾಯಿಯ ಜೋಗುಳ ಕೇಳುತ್ತಿರುವ ಶಿಶು ತನ್ನ ಒಳಗೇ ಇರುವ ಜ್ಞಾನವನ್ನು ಮರೆತು ನಿದ್ರೆಗೆ ಒಳಗಾಗಿದೆ. ಪುರಾತನವಾದ ಸಕಲ ವೇದ ಶಾಸ್ತ್ರಗಳೇ ಶ್ರೇಷ್ಟ ಅದಕ್ಕಿಂತ ಹೆಚ್ಚಿನದು ಎನೂ ಇರಲು ಸಾಧ್ಯವಿಲ್ಲ ಎಂಬ ಭ್ರಾಂತಿಗೆ ಒಳಗಾಗಿ, ಜ್ಞಾನವೆಂಬ ಶಿಶುವನ್ನು ಸಂಪೂರ್ಣವಾಗಿ  ಮಲಗಿಸಿ ಬಿಟ್ಟಿದ್ದರಿಂದ  ಅವೇ ನೇಣುಗಳಾಗಿವೆ. 
ಶಿಶು ಅಜ್ಞಾನದ ತೊಟ್ಟಿಲಲ್ಲಿ ಭ್ರಾಂತಿಯ ಜೋಗುಳಕ್ಕೆ ಒಳಗಾಗಿ ಮಲಗಿದೆ. ಆ ನಿದ್ರೆಯನ್ನೇ ಸುಖವೆಂದುಕೊಂಡಿದೆ. ನಾನಾ ಪ್ರಾಪಂಚಿಕ ಸುಖಗಳು ಜೋಗುಳ ಹಾಡಿ  ಅಜ್ಞಾನದ ನಿದ್ರೆಗೆ ತಳ್ಳುತ್ತಿವೆ. ಆ ಭ್ರಾಂತಿಯನ್ನೇ ತೊಟ್ಟಿಲಕ್ಕೇ ಕಟ್ಟಿದ್ದರಿಂದ ಜ್ಞಾನವೆಂಬ ಶಿಶು ಎಚ್ಚರವಾಗದಂತೆ ಅವು ತಡೆದಿವೆ.

*ತೊಟ್ಟಿಲ ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು*

ಆ ಜ್ಞಾನವೆಂಬ ಶಿಶು ಎಚ್ಚರಗೊಳ್ಳಬೇಕಾದರೆ ತೊಟ್ಟಿಲು ಮುರಿಯಬೇಕು; ನೇಣು ಹರಿಯಬೇಕು. ಹಾಗಾಗದೇ ಇದ್ದಲ್ಲಿ ಗುಹೇಶ್ವರ ಲಿಂಗವು ಕಾಣುವುದಿಲ್ಲ ಎಂದು ಹೇಳುತ್ತಾರೆ ಅಲ್ಲಮ ಪ್ರಭುಗಳು.

ವೇದ ಶಾಸ್ತ್ರಗಳ ಪಠಿಕರಲ್ಲಿಯ  ಜ್ಞಾನದ ಪರಿಕಲ್ಪನೆ, ದೇವರ ಪರಿಕಲ್ಪನೆ, ಪರಮ ಸತ್ಯದ ಪರಿಕಲ್ಪನೆ ಇವೆಲ್ಲವೂ ಪುರಾತನರಿಂದ ಬಂದದ್ದು. ವೇದ ಶಾಸ್ತ್ರಗಳ ಗ್ರಂಥಗಳ ಜ್ಞಾನವು ಎಷ್ಟೇ ಶ್ರೇಷ್ಟವಾದರೂ ಬರಿ ಜ್ಞಾನ ನಮಗೆ ಮುಕ್ತಿಯನ್ನು ಕೊಡುವದಿಲ್ಲ. ಈ ಅಜ್ಞಾನವು ಹೋಗಿ ನಿದ್ರೆಯಿಂದ ಎಚ್ಚರಗೊಳ್ಳಬೇಕಾದರೆ ಅಜ್ಞಾನದ ತೊಟ್ಟಿಲು ಮುರಿಯಬೇಕು. ಸಕಲ ವೇದ ಶಾಸ್ತ್ರಗಳ ನೇಣು ಹರಿಯಬೇಕು.ಇಲ್ಲಿ ಸಕಲ ವೇದ ಶಾಸ್ತ್ರವೆಂದರೆ ಪುರಾತನ ಪವಿತ್ರ ಗ್ರಂಥಗಳು, ತಾನು ತೋರಿಸುವ ದಾರಿಯೇ ಪರಮ ಶ್ರೇಷ್ಠವೆಂದು ಹೇಳುವ ಬೇರೆ ಬೇರೆ  ಧರ್ಮ ಜಾತಿ ಮತ ಗುರುಗಳ, ಗ್ರಂಥಗಳ ವಿವಿಧ ದರ್ಶನಗಳ ವಿಚಾರ ಎನ್ನಬಹುದು.  ಈ ಸಕಲ ಭ್ರಾಂತಿಗಳನ್ನು ನಿರಸನಗೊಳಿಸಬೇಕು. ನಮ್ಮ ಅರಿವು ಸ್ವಯಂ ಆಗಿರಬೇಕು. ನಮ್ಮಲ್ಲಿಯೇ ಸುಪ್ತವಾಗಿರುವ ಜ್ಞಾನ ಪ್ರಕಾಶಗೊಳ್ಳಬೇಕು ಎನ್ನುತ್ತಾರೆ ಶರಣರು. ಪುರಾತನ ಋಷಿಗಳು ದಾರ್ಶನಿಕರು ಜ್ಞಾನಿಗಳು ತಮ್ಮ ಮಾರ್ಗ ಸ್ವಯಂ ಕಂಡು ಕೊಂಡರು. ಅದೇ ರೀತಿಯಲ್ಲಿ ಅರಿವು ಸ್ವಯಂ ಆದರೆ ಮಾತ್ರ  ಗುಹೇಶ್ವರ ಲಿಂಗವು ಅನುಭಾವ ವೇದ್ಯವಾಗುವುದು ಎನ್ನುತ್ತಾರೆ ಅಲ್ಲಮ ಪ್ರಭುಗಳು.

ಆ ಜ್ಞಾನವೆಂಬ ಮಲಗಿದ ಶಿಶುವನ್ನು ಎಚ್ಚರಗೊಳಿಸಬೇಕು. ಆ ಸಕಲ ವೇದ ಶಾಸ್ತ್ರಗಳು ಸಹಸ್ರ ವರ್ಷಗಳಿಂದ  ಹರಿದು ಬಂದು ಯಾಂತ್ರಿಕವಾಗಿ ಪಠಣಗೊಳ್ಳುತ್ತಿವೆ. ಜೋಗುಳದ ನಿದ್ದೆಗೆ ಒಳಗಾದ ಶಿಶು ನಿದ್ದೆಯಿಂದ ಎಚ್ಚೆತ್ತು ಸ್ವಯಂ ಅರಿವಿನಿಂದ ಅವುಗಳನ್ನು ತಮ್ಮದೇ ಆದ ಜ್ಞಾನ ಅನುಭವಗಳ ಓರೆಗೆ ಹಚ್ಚಿ ಸ್ವೀಕರಿಸಿ ಮತ್ತೇ ತನ್ನದೇ ಅರಿವಿನಿಂದ ಮುಂದುವರೆಯಬೇಕು. ಅದು ಜ್ಞಾನ ವಿಸ್ತಾರವಾಗಿಸುವ, ಸ್ವಂತಸಿಕೊಳ್ಳುವ ರೀತಿ ಎನ್ನುತ್ತಾರೆ ಅಲ್ಲಮ ಪ್ರಭುಗಳು. ಅದೇ ಪುರಾತನ ಋಷಿ ಮುನಿಗಳು ದಾರ್ಶನಿಕರು ಅನುಸರಿಸಿದ ಮಾರ್ಗ.

*ವಚನ ಚಿಂತನೆ*:
 ಜ್ಞಾನದ ಶಿಶು ಅಜ್ಞಾನದ ತೊಟ್ಟಿಲಲ್ಲಿ ಭ್ರಾಂತಿಯ ಜೋಗುಳಕ್ಕೆ ಒಳಗಾಗಿ ಮಲಗಿ ಆ ನಿದ್ರೆಯನ್ನೇ ಸುಖವೆಂದುಕೊಂಡಿದೆ.  ನಾನಾ ಪ್ರಾಪಂಚಿಕ ಸುಖಗಳು ಜೋಗುಳ ಹಾಡಿ  ಅಜ್ಞಾನದ ನಿದ್ರೆಗೆ ತಳ್ಳುತ್ತವೆ. ತೊಟ್ಟಿಲ ಎಂಬ ನಮ್ಮ ಜೀವನ ಅಜ್ಞಾನಕ್ಕೆ ಒಳಗಾಗಿದೆ. ಆ ಭ್ರಮೆ ಭ್ರಾಂತಿಯನ್ನೇ ತೊಟ್ಟಿಲಕ್ಕೇ ಕಟ್ಟಿದ್ದರಿಂದ ಜ್ಞಾನವೆಂಬ ಶಿಶು ಎಚ್ಚರವಾಗದಂತೆ ಅವು ತಡೆದಿವೆ. ಅಜ್ಞಾನದ ತೊಟ್ಟಿಲದಲ್ಲಿ ಮಲಗಿದ್ದೇವೆ ಅಂದರೆ ನಮ್ಮೊಳಗೆ ಜ್ಞಾನವಿದ್ದರೂ ಸಹ ಇಲ್ಲದಂತೆ ಬದುಕುತ್ತಿದ್ದೇವೆ. ಪುರಾತನಕಾಲದ ಋಷಿಗಳು ತಮ್ಮ ಕಲಿಕೆ ಅನುಭವದ ಮೇರೆಗೆ ರಚಿಸಿದ  ಆ ಸಕಲ ವೇದ ಶಾಸ್ತ್ರಗಳಿಗಿಂತ ಹೆಚ್ಚಿನ ಜ್ಞಾನ ಇಲ್ಲವೇ ಇಲ್ಲ ಎಂಬುದೇ ಭ್ರಾಂತಿ. ಜ್ಞಾನವು ನಿತ್ಯ ಹರಿಯುತ್ತಿರುವ ನದಿಯಾಗಬೇಕಲ್ಲದೆ ನಿಂತ ಮಡು ವಾಗಬಾರದು ಎಂಬುದು ಅಲ್ಲಮ ಪ್ರಭುಗಳ ಕಳಕಳಿಯ ದಿಟ್ಟ ದಾರ್ಶನಿಕ ನಿಲುವು.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು
#ಅಜ್ಞಾನವೆಂಬ_ತೊಟ್ಟಿಲೊಳಗೆ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma