ವಚನ ದಾಸೋಹ
*ವಚನ*:
#ಅಗ್ನಿ ಮುಟ್ಟಿದುದುವೊ, ಆಕಾಶದಲದೆವೊ
ಉದಕ ಮುಟ್ಟಿದುದುವೊ, ನಿರಾಳದಲದೆವೊ
ಬ್ರಹ್ಮರಂಧ್ರದಲದೆವೊ-ಭ್ರಮಿಸದೆ ನೋಡಾ !
ಆವಂಗೆಯೂ ಅಸದಳ, ಆವಂಗೆಯೂ ಅರಿಯಬಾರದು!
ಇದೇನು ಮಾಯೆ ಹೇಳಾ ಗುಹೇಶ್ವರಾ ? / 76
- *ಅಲ್ಲಮ ಪ್ರಭುಗಳು*
*ಅರ್ಥ*:
ಅನನ್ಯವಾದ ಆಧ್ಯಾತ್ಮಿಕ ಜ್ಞಾನ ಹೊಂದಿದ ಪರಮಜ್ಞಾನಿ ಅಲ್ಲಮಪ್ರಭುಗಳು ನಿಜ ಅರ್ಥದಲ್ಲಿ ಜಂಗಮಮೂರ್ತಿಗಳು. ಸಾಧಕರಿಗೆ ಸೂಕ್ತವಾಗಿ ತಿಳಿಸಿ ಮಾರ್ಗದರ್ಶನ ಮಾಡಿಕೊಡಬಲ್ಲ ಅನುಭಾವಿಗಳು. ವಿವರಿಸಲು ಅಸಾಧ್ಯ ಎಂದೇ ತಿಳಿಯುವ ಅನುಭಾವದ ಅನೂಹ್ಯವಾದ ನೆಲೆ, ಮಾರ್ಗವನ್ನು ಬೆಡಗಿನ ಭಾಷೆಯಲ್ಲಿ ಸಮರ್ಥವಾಗಿ ವಿವರಿಸಿದ್ದಾರೆ. ಇಂತಹ ಅಲ್ಲಮಪ್ರಭುಗಳು ರಚಿಸಿದ ಈ ವಚನವು ಕಾಣಲು ಚಿಕ್ಕದಾದರೂ ಅದನ್ನ ಅರ್ಥೈಸಿ ಅದರ ಆಳಕ್ಕಿಳಿದಾಗ, ಗ್ರಹಿಕೆಗೆ ಪ್ರಾಪ್ತವಾದಾಗ ದಿವ್ಯಜ್ಞಾನದ ದೀಪ್ತಿಯು ಹೃನ್ಮನಗಳಲ್ಲಿ ಬೆಳಗಿ ಸಾಧಕನಿಗೆ ಮುಂದಿನ ಮಾರ್ಗ ತೆರೆದುಕೊಳ್ಳುತ್ತದೆ. ಅಲ್ಲಮಪ್ರಭುದೇವರು ಈ ವಚನದಲ್ಲಿ ಶಿವಯೋಗ ಸಾಧನೆಯಲ್ಲಿ ಪರಮಸತ್ಯದ ಅನುಭಾವದ ಸ್ಥಿತಿಗೆ ಬೇಕಾದ ಕೊನೆಯ ಹಂತದ ಸ್ಥಿತಿಯ ಲಕ್ಷಣ ಅರುಹಿ ಚಿದಾಕಾಶದಲ್ಲಿ ಗುರಿ ಮುಟ್ಟುವ ಮಾರ್ಗ ತಿಳಿಯದೇ ಅಲೆಯುತ್ತಿರುವ ಸಾಧಕನಿಗೆ ಲಿಂಗಾಂಗ ಸಾಮರಸ್ಯಕ್ಕೆ ಬೇಕಾದ ಅಂತಿಮ ಮೆಟ್ಟಲನ್ನು ಭೋಧಿಸಿದ್ದಾರೆ.
*ಅಗ್ನಿ ಮುಟ್ಟಿದುದುವೊ, ಆಕಾಶದಲದೆವೊ*
ಇಲ್ಲಿ ಅಗ್ನಿ ಮುಟ್ಟಿದೇವು ಅಂದರೆ ಆಧಾರ ಚಕ್ರದಲ್ಲಿ ಮೂರೂ ಅರ್ಧ ಸುರಳಿಯಾಗಿ ಸುತ್ತಿಕೊಂಡ ಸುಪ್ತ ಕುಂಡಲಿನಿ ಶಕ್ತಿಯನ್ನು. ಧ್ಯಾನದ ತಪಸ್ಸಿನ ಅಗ್ನಿಯಿಂದ ಮುಟ್ಟುವುದು. ಇದರಿಂದ ಸೂಕ್ಷ್ಮಶರೀರದ ಸೂಪ್ತಶಕ್ತಿ ಜಾಗೃತವಾಗಿ ಕುಂಡಲಾಗ್ನಿಯಾಗಿ ಮಧ್ಯದ ಅಗ್ನಿನಾಡಿ (ಸುಶುಮ್ನ ನಾಡಿ) ಪ್ರವೇಶಿಸಿ ಏಳು ಚಕ್ರ ದಾಟಿ ಆಕಾಶದತ್ತ ಚಾಚುತ್ತದೆ. ಆಕಾಶವೆಂದರೆ ಚಿದಾಕಾಶ. ಅದು ಶಿವಸ್ಥಾನ, ಶಿವಮಂಡಲ. ಅಲ್ಲಿಯೇ ಕುಂಡಲಿನಿ ಎಂದು ಕರೆಯಿಸಿಕೊಳ್ಳುವ ನಮ್ಮ ಪ್ರಾಣಶಕ್ತಿಯು ಚಿದಾಕಾಶದ ಶಿವನೊಡನೆ ಸಮ್ಮಿಲನವಾಗುತ್ತದೆ.
*ಉದಕ ಮುಟ್ಟಿದುದುವೊ, ನಿರಾಳದಲದೆವೊ
ಬ್ರಹ್ಮರಂಧ್ರದಲದೆವೊ-ಭ್ರಮಿಸದೆ ನೋಡಾ!*
ಇಲ್ಲಿ ಉದಕ ಅಂದರೆ ಪಿನಿಯಲ್
ಗ್ಲ್ಯಾಂಡದಿಂದ ಒಸರುವ ಅಮೃತ. ಅದರ ನೆಲೆ ಆಜ್ಞಾಚಕ್ರದ ಚಿದಾಕಾಶ. ಅಲ್ಲಿ ಪ್ರಾಣಲಿಂಗದ ಅಭಿವ್ಯಕ್ತಿ. ಅದರ ಮುಂದಿನ ಚಕ್ರ ಸಹಸ್ರಾರ ಚಕ್ರ (ಬ್ರಹ್ಮರಂಧ್ರ). ನಂತರ ಶಿಖಾಚಕ್ರ ಮತ್ತು ಪಶ್ಚಿಮಚಕ್ರ. ಪಶ್ಚಿಮಚಕ್ರ ವೆಂದರೆ ನಿರಾಳಸ್ಥಲ. ಶಿವಯೋಗಿ ಸಾಧಕ ತಾನು ಸಾಧನೆಯ ಯಾವ ಸ್ಥಲದಲ್ಲಿ ಇರುವೆ? ಅಗ್ನಿನಾಳ ತಲುಪಿದೇನೋ? ಅಜ್ಞಾಚಕ್ರದ ಚಿದಾಕಾಶದಲ್ಲಿದ್ದೇನೋ? ಉದಕ ಮುಟ್ಟಿದ್ದೆನೋ? ನಿರಾಳದಲ್ಲಿ ಇದ್ದೇನೋ? ಬ್ರಹ್ಮರಂಧ್ರದಲ್ಲಿದ್ದೆನೋ? ಎಂದು ಭ್ರಮಿಸದೆ ನೋಡು ಎಂದು ಅಲ್ಲಮಪ್ರಭುಗಳು ಮಾರ್ಗದರ್ಶನ ಮಾಡಿದ್ದಾರೆ. ಯಾವ ಹಂತ ಯಾವ ಚಕ್ರ ಎಂದು ಸಾಧಕ ಭ್ರಮಿಸದೆ ನೋಡಬೇಕು. ಸಾಧಕ ತಾನು ಯಾವ ಚಕ್ರದಲ್ಲಿ ಇದ್ದೇನೆ ಎಂಬುದು ಮುಖ್ಯವಲ್ಲ. ಅದನ್ನು ಯೋಚಿಸುತ್ತಾ ಕುಳಿತರೆ ನಿರ್ವಿಚಾರ ಸ್ಥಿತಿ ಸಾಧ್ಯವಾಗುವುದಿಲ್ಲ. ನಿರ್ವಿಚಾರವಾಗಿ ಧ್ಯಾನದ ಆಳದಲ್ಲಿ ಇಳಿಯಬೇಕು. ನಿರ್ವಿಚಾರ ಸಮಾಧಿಯನ್ನು ಅನುಭವಿಸಬೇಕು.
* ಆವಂಗೆಯೂ ಅಸದಳ, ಆವಂಗೆಯೂ ಅರಿಯಬಾರದು!
ಇದೇನು ಮಾಯೆ ಹೇಳಾ ಗುಹೇಶ್ವರಾ ? *
ಆವಂಗೆಯು ಅಂದರೆ ಯಾರೇಗೆ ಆದರೂ ಇದು ಅಸದಳ (ಮಹಾ ಅಸಾಧ್ಯ). ಯಾರೇ ಆದರೂ ಇದನ್ನು ಅರಿಯಬಾರದು. ಯಾರೂ ಇದನ್ನು ತಿಳಿದುಕೊಳ್ಳಬಾರದು. ಎಂತೆಂತಹವರಿಗೂ ಇದು ಅಸಾಧ್ಯ. ನಿರ್ವಿಚಾರ ಧ್ಯಾನದಲ್ಲಿ ಮನೋಲಯ ವಾಗಿದ್ದರಿಂದ ಯೋಚಿಸಲು ಮನ ವಿಲ್ಲದುದರಿಂದ ಇದು ಅಸಾಧ್ಯವೆಂದು ಅಲ್ಲಮ ಪ್ರಭುಗಳ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
*ಭಾವ*:
ಆಳವಾದ ಧ್ಯಾನದಲ್ಲಿ ಯಾವುದನ್ನೂ ಗಮನಿಸಬೇಡ. ಗಮನಿಸುವುದು ಒಂದು ಪ್ರಯತ್ನ. ಗಮನಿಸಲ್ಪಡುವವನು ಇರುವವರೆಗೂ ಗಮನಿಸಲ್ಪಡುವುದು ಇರುವುದು. ಗಮನಿಸುವವ ಮತ್ತು ಗಮನಿಸಲ್ಪಡುವದು ಎಲ್ಲಿಯವರೆಗೆ ಈ ಎರಡು ಇರುತ್ತದೋˌ ಅಲ್ಲಿಯವರೆಗೆ ವಿಚಾರ ಮಾಡುವ ಬುಧ್ಧಿ, ಮನ, ಅಹಂ, ಚಿತ್ತ ವಿರುತ್ತದೆ. ಗಮನಿಸುವವನೇ ಇಲ್ಲವಾದ್ರೆ ಗಮನಿಸಲ್ಪಡಲು ಏನಿದೆ?
ಮನಸ್ಸು ಎಲ್ಲಿಯವರೆಗೆ ಕಾರ್ಯನಿರತವಾಗಿರುತ್ತದೆಯೋ, ಅಲ್ಲಿಯವರೆಗೆ ಮನೋಲಯವಾಗುವುದಿಲ್ಲ. ಮನಸ್ಸು ನಿರ್ವಿಚಾರವಾಗಲು ನಾಮಜಪ, ಮಂತ್ರವನ್ನು ಅಖಂಡವಾಗಿ ಮಾಡಿದರೂ, ಮನಸ್ಸಿನಲ್ಲಿ ಸದಾಕಾಲ ದೇವರ ಸ್ಮರಣೆ, ಭಾವ ಇದ್ದರೂ ಸಹ ಮನಸ್ಸು ಸಂಪೂರ್ಣ ನಿರ್ವಿಚಾರ ವಾಗದೆ ಕಾರ್ಯನಿರತವಾಗಿರುತ್ತದೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಸಮರ್ಪಿತ ಮಾಡಿದ ನಂತರ ಆಜ್ಞಾಚಕ್ರ ಸಾಧನೆಯಲ್ಲಿ ವಿಷಯ ಕರಣಗಳಾದ ಮನ, ಬುದ್ಧಿ, ಚಿತ್ತ, ಅಹಂ "ಸಮರ್ಪಿತ"ವಾಗಬೇಕು. ಅದರ ನಂತರವೇ ನಿರ್ವಿಚಾರ ನಿರ್ಗುಣ ಸ್ಥಿತಿ ಸಾಧಕನಿಗೆ ಸಂಪನ್ನವಾಗುವುದು. ಮೊದಲು ಮನೋಲಯ, ನಂತರ ಬುದ್ಧಿಲಯ, ಅನಂತರ ಚಿತ್ತಲಯ ಮತ್ತು ಕೊನೆಗೆ ಅಹಂಲಯವಾಗುತ್ತದೆ.
ಇವುಗಳ ನಡುವೆ ಅತ್ಯಂತ ಸೂಕ್ಷ್ಮವಾದ ಭೇದಭಾವವಿದೆ. ಅತ್ಯಂತ ಕೊನೆಯ ಹಂತದಲ್ಲಿ ಅಹಂ ಸಂಪೂರ್ಣ ನಿವಾರಣೆಯಾಗಿ ಅವಿಚ್ಛಿನ್ನ ಸಮರಸದ ನಿರ್ವಿಚಾರ ನಿರಾಳ ಸ್ಥಿತಿ ಸಿದ್ಧಿಯಾಗುತ್ತದೆ. ಹಾಗಾಗಿ ಈ ಅಪ್ರತಿಮ ಅನುಭವವನ್ನು ಕೇವಲ ಅಹಂ ಎಂಬ ಮಾಯೆಯನ್ನು ಮೀರಿದ ಶರಣನು ಮಾತ್ರ ಅನುಭವಿಸಬಲ್ಲನು.
- ✍️Dr Prema Pangi
#ಪ್ರೇಮಾ_ಪಾಂಗಿ, #ಅಲ್ಲಮ_ಪ್ರಭುಗಳು
Comments
Post a Comment