ವಚನ ದಾಸೋಹ

#ವಚನ:
#ಅನೇಕ ವೇದಾಗಮಶಾಸ್ತ್ರಪುರಾಣವನೋದಿ ಕೇಳಿದಡೇನು ?
ಮನದ ಕತ್ತಲೆ ಹರಿಯದು ನೋಡಾ.
ಓಂಕಾರವೆಂಬ ಕಂಬದ ಮೇಲೆ ಮನ ಬುದ್ದಿ ಚಿತ್ತ ಅಹಂಕಾರವೆಂಬ ಪಣಿತೆಯನಿಡಿಸಿ, ಅಷ್ಟಮದವೆಂಬ ಬತ್ತಿಯ ತೀವಿ,
ಜ್ಞಾನೇಂದ್ರಿಯ ಕರ್ಮೆಂದ್ರಿಯವೆಂಬ ತೈಲವನೆರೆದು,
ಜ್ಞಾನಾಗ್ನಿಯ ಮುಟ್ಟಿಸಿ, ಸ್ವಯಂಪ್ರಕಾಶವ ಬೆಳಗುವದು ನೋಡಾ.
ಅನಂತಕೋಟಿ ಸೂರ್ಯ-ಚಂದ್ರಾಗ್ನಿಮಯವಾಗಿ
ಮಹಾಜ್ಯೋತಿ ಬೆಳಗುತ್ತಿಹುದು.
ಆ ಮಹಾಜ್ಯೋತಿಪ್ರಕಾಶದಲ್ಲಿ ಆಣವ ಮಾಯಾ ಕಾರ್ಮಿಕವೆಂಬ
ಹುಳುಗಳು ಬಿದ್ದು ಸತ್ತವು.
ಹೃದಯದ ಕತ್ತಲೆ ಹರಿಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ:
ಬಾಲಸಂಗಯ್ಯ ಅಪ್ರಮಾಣ ದೇವ ಶರಣರು ಈ ವಚನದಲ್ಲಿ ಅಜ್ಞಾನದ ಕತ್ತಲೆ ಯನ್ನು ಕಳೆದು ಅರಿವನ್ನು ಪಡೆಯುವ ಬಗೆ ಯನ್ನು ಸುಂದರರೂಪಕಗಳ ಸಹಾಯದಿಂದ ವಿವೇಚಿಸಿದ್ದಾರೆ.

*ಅನೇಕ ವೇದಾಗಮಶಾಸ್ತ್ರಪುರಾಣವನೋದಿ ಕೇಳಿದಡೇನು ?
ಮನದ ಕತ್ತಲೆ ಹರಿಯದು ನೋಡಾ.*

ಅನೇಕ ವೇದಗಳು ಆಗಮಗಳು ಶಾಸ್ತ್ರಗಳು, ಪುರಾಣಗಳನ್ನು ಬರಿ ಓದಿದರೆ ಕೇಳಿದರೆ ಉಪಯೋಗವಿಲ್ಲ. ಅನುಭಾವವಿಲ್ಲದ ಓದು, ಕ್ರಿಯೆ ಇಲ್ಲದ ಓದು ವ್ಯರ್ಥ. ಅದು ಮನದ ಕತ್ತಲೆಯನ್ನು ಹರಿಯದು.

*ಓಂಕಾರವೆಂಬ ಕಂಬದ ಮೇಲೆ ಮನ ಬುದ್ದಿ ಚಿತ್ತ ಅಹಂಕಾರವೆಂಬ ಪಣಿತೆಯನಿಡಿಸಿ, ಅಷ್ಟಮದವೆಂಬ ಬತ್ತಿಯ ತೀವಿ, ಜ್ಞಾನೇಂದ್ರಿಯ ಕರ್ಮೆಂದ್ರಿಯವೆಂಬ ತೈಲವನೆರೆದು,
ಜ್ಞಾನಾಗ್ನಿಯ ಮುಟ್ಟಿಸಿ, ಸ್ವಯಂಪ್ರಕಾಶವ ಬೆಳಗುವದು ನೋಡಾ.*

ಈ ಓಂಕಾರ ಎನ್ನುವುದು ಬ್ರಹ್ಮಾಂಡದ ಸರ್ವ ಶಕ್ತಿ ಮತ್ತು ಸರ್ವವ್ಯಾಪಿ ಧ್ವನಿ ಮತ್ತು ಪರಬ್ರಹ್ಮ ಪರಶಿವನನ್ನು ನಿರ್ದೇಶಿಸುತ್ತದೆ. 'ಓಂ' ಎನ್ನುವುದು ಪ್ರಣವ ಸ್ವರೂಪಿಯಾಗಿದೆ‌.  'ಓಂ' ಎಂಬುವುದು ಕೇವಲ ಒಂದು ಅಕ್ಷರವಲ್ಲ ಬದಲಾಗಿ ಇದೊಂದು 'ಅ, ಉ, ಮ' ಎಂಬ ಮೂರು ಅಕ್ಷರಗಳ ಅದ್ಭುತ ಸಂಗಮ. ಅದು ನಿರ್ಗುಣ ಅಂಶಗಳನ್ನು ಹೊಂದಿದ ಓಂಕಾರದ ಶಕ್ತಿಯು ನಮ್ಮ‌ ಪ್ರಾಣದ ಮೂಲಕ ಸಂಚರಿಸಿ ನಮ್ಮ ಶರೀರವನ್ನು ನಿಯಂತ್ರಣದಲ್ಲಿಡುತ್ತದೆ. ಈ ಮೂರು ಅಕ್ಷರಗಳ ನಿತ್ಯ ಪಠಣದಿಂದಾಗಿ   ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ವಿಚಾರದಲ್ಲಿ ಧನಾತ್ಮಕವಾಗಿ, ಅದ್ಭುತವಾದ ಓಂಕಾರವು ಮನುಷ್ಯನನ್ನು ಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುವದು.
 'ಮನ ಬುದ್ದಿ ಚಿತ್ತ ಅಹಂಕಾರವೆಂಬವು ಕರಣ ತತ್ವಗಳು. ಇವುಗಳಿಗೆ ಅಂತಃಕರಣ ಚತುಷ್ಟಯ ಎಂದೂ ಕರೆವರು.
ಕುಲ, ಶೀಲ, ರೂಪ, ಯೌವನ, ಧನ, ವಿದ್ಯೆ, ರಾಜ್ಯ, ಭಾಗ್ಯ ಇವು ಅಷ್ಟಮದಗಳು. ಮನುಷ್ಯನ ಸ್ವಬಾವದಲ್ಲೇ ಅಷ್ಟಮದಗಳು ಅಂತರ್ಗತವಾಗಿರುತ್ತವೆ.  ಇವೆಲ್ಲ ಸಂಪತ್ತು ಗಳು ಒಬ್ಬ ವ್ಯಕ್ತಿಯಲ್ಲಿದ್ದಾಗಲೂ ಆತ ತುಂಬಿದ ಕೊಡದಂತೆ ಪ್ರಶಾಂತವಾಗಿರಬೇಕು. ಆದರೆ ಇವುಗಳಿಂದ ಅಹಂಕಾರ ಬಂದಾಗ ಮನುಷ್ಯನ ಬುದ್ಧಿ ಹಾಳಾಗುತ್ತದೆ.
ಜ್ಞಾನೇಂದ್ರಿಯಗಳು ಐದು ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ. 
ಕರ್ಮೆಂದ್ರಿಯಗಳು ಐದು  ವಾಕ್ಕು, ಪಾದ, ಪಾಣಿ, ಗುಹ್ಯ, ಪಾಯು.

ಓಂಕಾರವೆಂಬ ಪರಬ್ರಹ್ಮ ಪರಶಿವನ ಮೇಲೆ ಮನ ಬುದ್ದಿ ಚಿತ್ತ ಅಹಂಕಾರವೆಂಬ ಕರಣ ತತ್ವಗಳ  ಪಣಿತೆಯನ್ನು ಇಟ್ಟು  ಅಷ್ಟಮದಗಳನ್ನು  ಬತ್ತಿಯ ಹಾಗೆ ಅರೆದು ತೀವಿ, ಜ್ಞಾನೇಂದ್ರಿಯಗಳಿಂದ ಲಭಿಸಿದ ಸುಜ್ಞಾನವನ್ನೂ, ಕರ್ಮೆಂದ್ರಿಯಗಳಿಂದ ಮಾಡಿದ ಕಾಯಕವನ್ನೂ  ತೈಲರೂಪವಾಗಿ ಆ ಪರಶಿವನೆಂಬ ಪಣಿತೆಯಲ್ಲಿ ಎರೆದು ,
ಜ್ಞಾನಾಗ್ನಿಯ ಮುಟ್ಟಿಸಿದಾಗ , ಬತ್ತಿ ಸುಟ್ಟಂತೆ ಅಹಂಕಾರ ನಾಶವಾಗಿ ಕಾಮ ಕ್ರೋಧ ಮದ ಮತ್ಸರ ಮೋಹ ಲೋಭ ಅಳಿದು, ಅರಿವೆಂಬ ಸ್ವಯಂಪ್ರಕಾಶವು ಬೆಳಗುವದು ನೋಡಾ ಎನ್ನುತ್ತಾರೆ ಶರಣ ಬಾಲಸಂಗಯ್ಯ ಅಪ್ರಮಾಣ ದೇವರು.

* ಅನಂತಕೋಟಿ ಸೂರ್ಯ-ಚಂದ್ರಾಗ್ನಿಮಯವಾಗಿ
ಮಹಾಜ್ಯೋತಿ ಬೆಳಗುತ್ತಿಹುದು.
ಆ ಮಹಾಜ್ಯೋತಿಪ್ರಕಾಶದಲ್ಲಿ ಆಣವ ಮಾಯಾ ಕಾರ್ಮಿಕವೆಂಬ
ಹುಳುಗಳು ಬಿದ್ದು ಸತ್ತವು.
ಹೃದಯದ ಕತ್ತಲೆ ಹರಿಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.*

ಅನಂತ ಕೋಟಿ ಸೂರ್ಯ-ಚಂದ್ರ ಅಗ್ನಿಮಯದಂತೆ ಇರುವ ಮಹಾಜ್ಯೋತಿಪ್ರಕಾಶದಲ್ಲಿ ಆಣವ ಮಾಯಾ ಕಾರ್ಮಿಕ ಅಳಿಯುತ್ತವೆ. ಜೀವನು ಬೆಂಕಿಯ ಕಿಡಿಯಂತೆ ಶಿವನಿಂದ ಬೇರ್ಪಟ್ಟಾಗ , ತಾನು ಅಪೂರ್ಣ ಎಂಬ ಭಾವಮೂಡುವುದೇ  ಆಣವಮಲ . ಸರ್ವಜ್ಞನಾದವನು ತಾನು ಕಿಂಚಿಜ್ಞ ನೆಂದು ತಿಳಿಯುವುದು ಮಾಯಾ ಮಲ . ಸರ್ವಶಕ್ತಿತ್ವ ಹೋಗಿ ತಾನು ಕಿಂಚತ್ಕತೃ ಎಂದು ತಿಳಿಯುವುದು ಕಾರ್ಮಮಲ. ಇವೂ ಮೂರು ನಾಶವಾಗಿ  ಹೃದಯದ ಕತ್ತಲೆ ಹರಿಯುವುದು.  ಜ್ಞಾನದ ಪ್ರಕಾಶದಲ್ಲಿ  ಅರಿವು ಮೂಡಿ ಶರಣ ತನ್ನನ್ನು ತಾನು, ತಾನು ಪರಬ್ರಹ್ಮದ ಅಂಶವೆಂದು ತನ್ನ ನಿಜ ಸ್ವರೂಪವನ್ನು  ಅರಿಯುವನು.

#ಶರಣ ಬಾಲಸಂಗಯ್ಯ ಅಪ್ರಮಾಣದೇವ ಪರಿಚಯ:
ಈತ ಬಸವೋತ್ತರಯುಗದ ಮಹತ್ವದ ವಚನಕಾರ. 
ಈತನ ನಿಜನಾಮ 'ಅಪ್ರಮಾಣದೇವ'
ಅಪ್ರಮಾಣ ಅಂದರೆ ಅಳತೆಗೆ ನಿಲುಕದಷ್ಟು ವಿಶಾಲ ವೆಂದು ಅರ್ಥ.
ಅಂಕಿತ: ಅಪ್ರಮಾಣ ಕೂಡಲಸಂಗಮದೇವ
ಕಾಯಕ: ಶ್ರೇಷ್ಠ ಪಂಡಿತ, ಅನುಪಮ ಶಾಸ್ತ್ರಾನುಭಾವಿ, ಉದ್ದಾಮ ಪಂಡಿತ, ಶ್ರೇಷ್ಠ ಅನುಭಾವಿ.
ಕಾಲ: ಈತನ ಬದುಕಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ದೊರೆತಿಲ್ಲ.
ವಚನಕಾರರಲ್ಲಿ ಮೂರು ಜನರು 'ಬಾಲಸಂಗಯ್ಯ' ಹೆಸರಿನವರು ಕಂಡುಬರುವರು.
ಮೊದಲನೆಯದಾಗಿ ವಿಶ್ವಗುರು ಬಸವಣ್ಣ ನವರಿಗೆ 'ಬಾಲಸಂಗಯ್ಯ' ಎಂಬ ಏಕಮಾತ್ರ ಪುತ್ರನಿದ್ದು ,ಆತನು ತನ್ನ ಎಳೆಯ ವಯಸ್ಸಿನಲ್ಲಿಯೇ ಲಿಂಗೈಕ್ಯನಾದರಿಂದ ಯಾವುದೇ ವಚನ ರಚಿಸಿಲ್ಲ.
ಎರಡನೆಯದಾಗಿ, 'ಬಾಲಸಂಗಣ್ಣ' ಎಂಬ ವಚನಕಾರನಿದ್ದು, ಆತನ ವಚನಗಳ ಅಂಕಿತ "ಕಮಠೇಶ್ವರಲಿಂಗ" ಎಂದಿರುತ್ತದೆ.
 ಮೂರನೆಯವರು ಶರಣ 'ಬಾಲಸಂಗಯ್ಯ'ನವರು.  
ಹದಿನೈದನೆಯ ಶತಮಾನದಲ್ಲಿ ಏಳುನೂರಾವೊಂದು ವಿರಕ್ತರೊಡಗೂಡಿ ದೇಶ ಸಂಚರಿಸಿ, ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪಟ್ಟದ ಶಿಷ್ಯ 
ಶ್ರೀ ಗುರು ಬೋಳಬಸವೇಶ್ವರರ ಶಿಷ್ಯರು. ಈತನೇ "ಅಪ್ರಮಾಣದೇವ. ಕಾಲ ಸುಮಾರು 15-16ನೆಯ ಶತಮಾನ ಇರಬಹುದು.ಇವರು ಗುರು ಬೋಳಬಸವೇಶ್ವರರಿಂದ ಲಿಂಗದೀಕ್ಷೆ , ಜಂಗಮದೀಕ್ಷೆ ಸ್ವೀಕರಿಸಿದರು.
ಬಾಲಸಂಗಯ್ಯ ಅದ್ವಿತೀಯ ಪಂಡಿತನಾಗಿದ್ದು, ಸರ್ವ ಧರ್ಮಶಾಸ್ತ್ರ, ಪುರಾಣ, ವೇದ, ಉಪನಿಷತ್ತು, ಆಗಮಗಳನ್ನು ಬಲ್ಲವನಾಗಿದ್ದ. ವೀರಶೈವ ತತ್ವಗಳನ್ನು ಕ್ರಮಬದ್ಧವಾಗಿ  ತನ್ನ 'ವಚನ ಗ್ರಂಥ'ದಲ್ಲಿ ನಿರೂಪಿಸಿದ್ದಾರೆ. 'ಬಾಲಸಂಗಯ್ಯ'ನ ವಚನಗಳು ಶಾಸ್ತ್ರ ಸಮ್ಮತ, ನೀತಿ ಪ್ರಧಾನ, ತತ್ವ ಪ್ರಬೋಧಕವಾಗಿವೆ. ಷಟಸ್ಥಲ ಅರಿತುಕೊಳ್ಳುವ ಜಿಜ್ಞಾಸುಗಳಿಗೆ ಬಾಲಸಂಗಯ್ಯರ 'ವಚನ ಗ್ರಂಥ' ದಾರಿದೀಪವಾಗಿ ನಿಲ್ಲಬಲ್ಲ ಶಕ್ತಿಯನ್ನು ಹೊಂದಿದೆ. 'ಗುರು ಕಾರುಣ್ಯವಿಲ್ಲದೇ, ಲಿಂಗದೀಕ್ಷೆಯಾಗದೇ 'ಶಿವಪಥ' ದೊರೆಯಲಾರದೆಂಬುದು'  ಬಾಲಸಂಗಯ್ಯನವರ  ಅಭಿಮತ.
ಕೃತಿಗಳು :
'ಸಕಲಾಗಮ ಶಿಖಾಮಣಿ' ಅಪ್ರಮಾಣದೇವನ ಕೃತಿಯ ಹೆಸರು, ಇದರಲ್ಲಿ 'ಅಪ್ರಮಾಣ ಕೂಡಲ ಸಂಗಮದೇವ' ಅಂಕಿತದ ಒಟ್ಟು ೯೨೦ ವಚನಗಳು ಸಂಕಲನಗೊಂಡಿವೆ. ಇದು ಒಂದು ಶುದ್ಧ ತಾತ್ವಿಕ ಶಾಸ್ತ್ರ ಕೃತಿ. ಚೆನ್ನಬಸವಾದಿಗಳು ಹೇಳಿದ ಲಿಂಗಾಯತ ಧರ್ಮತತ್ವಗಳನ್ನು ವ್ಯವಸ್ಥಿತವಾಗಿ ಪ್ರತಿಪಾದಿಸುವುದೇ ಇದರ ಪರಮ ಉದ್ದೇಶ. ಸೃಷ್ಟಿಯ ಉತ್ಪತ್ತಿಯಿಂದ ಹಿಡಿದು ಲಿಂಗಾಂಗ ಸಾಮರಸ್ಯ ವರೆಗಿನ ವಿಷಯಗಳು ಇಲ್ಲಿ ಅನೇಕ ಉಪಶೀರ್ಷೆಕೆಗಳ ಅಡಿಯಲ್ಲಿ ವಿವರಗೊಂಡಿವೆ. ಅಪ್ರಮಾಣದೇವ  ಶ್ರೇಷ್ಠ ಅನುಭಾವಿ ಎಂಬುದನ್ನು ಈ ವಚನಗಳು ಸಾಕ್ಷೀಕರಿಸುತ್ತವೆ. ಶುದ್ಧ ತಾತ್ತ್ವಿಕ ಶಾಸ್ತ್ರಕೃತಿ. ಲಿಂಗಾಯತ ತತ್ತ್ವವಿವೇಚನೆಯೇ ಇದರ ಪರಮ ಗುರಿ. ತಾನು ಹೇಳುವ ಪ್ರತಿಯೊಂದು ವಿಷಯಕ್ಕೂ ಸಂಸ್ಕೃತ ಪ್ರಮಾಣ ವಾಕ್ಯಗಳನ್ನು ಈತ ನೀಡಿರುವನು. ಹೀಗಾಗಿ ವೇದ, ಆಗಮ, ಉಪನಿಷತ್ತು, ಪ್ರಮಾಣ ಸಂಹಿತೆ, ಶ್ರುತಿ, ಸ್ಮರ್ತಿ, ಸೂಕ್ತ ಮೊದಲಾದವುಗಳಿಂದ ಧಾರಾಳವಾಗಿ ತನ್ನ ವಿಚಾರ ಸಮರ್ಥನೆಗೆ ಉಕ್ತಿಗಳನ್ನು ಎತ್ತಿಕೊಟ್ಟಿರುವನು. ಅನುಭಾವ ಮತ್ತು ಬೆಡಗನ್ನು ಕುರಿತು ಅನೇಕ ವಚನಗಳಿವೆ.
-✍️ Dr Prema Pangi
#ಪ್ರೇಮಾ_ಪಾಂಗಿ,  #ಶರಣ_ಬಾಲಸಂಗಯ್ಯ_ಅಪ್ರಮಾಣದೇವ
#ಅನೇಕ_ವೇದಾಗಮಶಾಸ್ತ್ರಪುರಾಣವನೋದಿ
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma