ವಚನ ದಾಸೋಹ
#ವಚನ:
#'ನ' ಎಂಬುದೆ ನಂದಿಯಾಗಿ, 'ಮ' ಎಂಬುದೆ ಮಹತ್ತಾಗಿ,
'ಶಿ' ಎನಬುದೆ ರುದ್ರನಾಗಿ, 'ವಾ' ಎಂಬುದೆ ಹಂಸೆಯಾಗಿ,
'ಯ' ಎಂಬುದೆ ಅರಿವಾಗಿ, 'ಓಂ' ಕಾರವೆ ಗುರುವಾಗಿ,
ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ,
ಎರಡೂ ಒಂದಾಗೆ ಗುಹೇಶ್ವರಲಿಂಗಸಂಬಂಧಿ !
- ವ್ಯೋಮಮೂರ್ತಿ ಅಲ್ಲಮ ಪ್ರಭುಗಳು
ಅರ್ಥ-
ಓಂ’ಕಾರ ಅಥವಾ ಪ್ರಣವವನ್ನು ಪಂಚಾಕ್ಷರಿಗೆ ಸೇರಿಸಿದಾಗ ಉಂಟಾಗುವ ’ಓಂ ನಮಃ ಶಿವಾಯ’ ಎಂಬ ಆರು ಅಕ್ಷರಗಳ ಮಂತ್ರವನ್ನೇ ಷಡಕ್ಷರಿ ಎನ್ನುವರು.
*'ನ' ಎಂಬುದೆ ನಂದಿಯಾಗಿ, 'ಮ' ಎಂಬುದೆ ಮಹತ್ತಾಗಿ,
'ಶಿ' ಎನಬುದೆ ರುದ್ರನಾಗಿ, 'ವಾ' ಎಂಬುದೆ ಹಂಸೆಯಾಗಿ,
'ಯ' ಎಂಬುದೆ ಅರಿವಾಗಿ, 'ಓಂ' ಕಾರವೆ ಗುರುವಾಗಿ,*
ಪ್ರಣವಾಕ್ಷರಗಳು ಆರು; ಓಂ,ನ,ಮ,ಶಿ,ವಾ,ಯ.
ವಿಶ್ವವು ವಿಶಾಲವಾಗಿ ಕಾಣುವುದಾದರೂ ಇದು ಪ್ರಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ ಎಂಬ ಪಂಚಭೂತಗಳಿಂದ ಕೂಡಿದೆ. ಒಂದೊಂದು ಭೂತವನ್ನು ಒಂದೊಂದು ಹೆಸರಿನಿಂದ ಕರೆಯಬೇಕಲ್ಲವೆ? ಪೃಥಿಗೆ ನ ಕಾರವೆಂದರೆ ಅದು ಯೋಗ ದೃಷ್ಟಿಯಿಂದ "ನ" ಆಕಾರವನ್ನು ತಾಳುವದು. ಹೀಗೆಯೇ ಅಪ್ಪುವಿಗೆ ಮ ಕಾರವೆಂದರೆ ಅದು ಯೋಗ ದೃಷ್ಟಿಯಿಂದ "ಮ" ಆಕಾರ ತಾಳುವುದು. ಅಗ್ನಿಗೆ ಶಿ ಕಾರ ವೆಂದರೆ ಅದು ಯೋಗ ದೃಷ್ಟಿಯಿಂದ "ಶಿ" ಆಕಾರವನ್ನು ತಾಳುವದು, ವಾಯುವಿಗೆ ಮ ಕಾರ ವೆಂದರೆ ಅದು ಯೋಗ ದೃಷ್ಟಿಯಿಂದ "ಮ" ಆಕಾರವನ್ನು ತಾಳುವದು, ಆಕಾಶಕ್ಕೆ ಯ ಕಾರವೆಂದರೆ ಅದು ಯೋಗ ದೃಷ್ಟಿಯಿಂದ "ಯ" ಆಕಾರವನ್ನು ತಾಳುವದು ಎಂದು ಹೇಳಿದಾಗ ಪಂಚಭೂತಗಳು ಆಯಾ ಆಕಾರವನ್ನು ತಾಳುವವುವೆಂಬರ್ಥ. ಇನ್ನು ಓಂ ಶಬ್ಧವು ಸರ್ವೋಚ್ಚ ಶಕ್ತಿಯ ನಿರ್ಗುಣ ರೂಪವನ್ನು ಪ್ರತಿನಿಧಿಸುತ್ತದೆ.
ಭಕ್ತಿ ಮತ್ತು ಪೂಜೆಗೆ ಪಂಚಾಕ್ಷರಿ ಮಂತ್ರ “ನಮಃ ಶಿವಾಯ" ಅಂದರೆ ಶಿವನಿಗೆ ನಮಸ್ಕಾರ' ಎಂದು ಅರ್ಥದ ಮಂತ್ರ. ಶಿವಯೋಗಕ್ಕೆ ಈ ಆರು ಪ್ರಣವಗಳ ಶಿವಷಡಕ್ಷರ ಮಹಾಮಂತ್ರ ಓಂ,ನ,ಮ,ಶಿ,ವಾ,ಯ.
ಷಡಕ್ಷರ ಮಹಾಮಂತ್ರದ ಸಂಕೇತಾರ್ಥ -
ಪರಶಿವನಿಂದಲೇ ಈ ವಿಶ್ವ ಹೊರಹೊಮ್ಮಿದೆ ಹಾಗೂ ಪರಶಿವನಲ್ಲಿಯೇ ಬಾಳುತ್ತದೆ. ಆರು ಬಗೆಯ ಆ ತತ್ತ್ವಗಳ ಸುಸಂಬದ್ಧ ಸಮುದಾಯವೇ ಮಹಾವಿಶ್ವ.
'ನ'ಕಾರವನ್ನು ನಂದಿ ಅಂದರೆ ಭಕ್ತನಾಗಿ, 'ಮ' ಎಂಬುದೆ ಮಹತ್ತಾದ ವಿಶ್ವವಾಗಿ, 'ಶಿ'ಕಾರ ವನ್ನು ರುದ್ರ ಶಿವನಾಗಿ, 'ವಾ' ಕಾರವನ್ನು ಅಷ್ಟದಳ ಹೃದಯಕಮಲದ ಹಂಸೆಯಾಗಿ,
'ಯ'ಕಾರವನ್ನು ಅರಿವಾಗಿ, 'ಓಂ' ಕಾರವನ್ನು ಗುರುವಾಗಿ ನೋಡಿದರೆ ಶಿವಾದ್ವೈತ ದೃಷ್ಠಿ ಅಳವಡುವುದು ಎನ್ನುವರು ಅಲ್ಲಮ ಪ್ರಭುಗಳು. ಇವು ಒಂದೊಂದು ಚಕ್ರಗಳ ಅಕ್ಷರತ್ರಯಗಳು. ಈ ಮಂತ್ರ ಪಠಿಸುವುದರಿಂದ ಮಂತ್ರಾನುಸಂಧಾನವಾಗಿ ಚಕ್ರಸಾಧನೆ ಯಾಗುತ್ತದೆ.
ಶರಣನು ಪರಶಿವನ ಮಂತ್ರ ಅನುಸಂಧಾನದ ಮೂಲಕ ಶಿವಾದ್ವೈತ ದೃಷ್ಟಿಯನ್ನು ಪಡೆದು ಈ ವಿಶ್ವವನ್ನು ಪರಶಿವನ ಅಭಿವ್ಯಕ್ತರೂಪು ಎಂದೇ ಕಾಣುತ್ತಾನೆ.
ಅಲ್ಲಮಪ್ರಭುದೇವರು ತಿಳಿಸಿರುವ ಮಾತುಗಳಲ್ಲಿ ಮಂತ್ರ ಮಹಿಮೆ ಸೂಚ್ಯವಾಗಿ ವ್ಯಕ್ತವಾಗುತ್ತದೆ. ದೀಕ್ಷೆ ಸಮಯದಲ್ಲಿ ಗುರು ಕೈಯಲ್ಲಿ ಲಿಂಗವ ಕೊಟ್ಟ ಕಿವಿಯಲ್ಲಿ ಮಂತ್ರವನ್ನು ಹೇಳಿ, ಮಂತ್ರವೇ ಲಿಂಗ, ಲಿಂಗವೇ ಮಂತ್ರ ಎಂದು ಅರುಹುವನು. ಲಿಂಗವೆಂದರೆ ಷಡಕ್ಷರಿ ಮಂತ್ರ.
ಓಂ ನಮಃ ಶಿವಾಯ , ನಿರ್ದಿಷ್ಟ ಅಕ್ಷರಗಳನ್ನು ಜೋಡಿಸಿದಾಗ ಅದು ಸಾಧಕನ ಆಂತರಿಕ ಕೋಶಗಳನ್ನು ಉದ್ದೀಪನ ಮಾಡುತ್ತದೆ.
*ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ,
ಎರಡೂ ಒಂದಾಗೆ ಗುಹೇಶ್ವರಲಿಂಗಸಂಬಂಧಿ !*
ವಿಶ್ವಕ್ಕೂ ಪರಶಿವನಿಗೂ ಸಂಬಂಧ ಹೇಗೆ?
ವಿಶ್ವಕ್ಕೂ ಪರಶಿವವಿಗೂ ಅತ್ಯಂತ ನಿಕಟವಾದ ಅವಿನಾಭಾವ ಸಂಬಂಧ. ಏಕೆಂದರೆ ಪರಶಿವನಿಂದಲೇ ಈ ವಿಶ್ವ ಹೊರಹೊಮ್ಮಿದೆ ಹಾಗೂ ಪರಶಿವನಲ್ಲಿಯೇ ಬಾಳುತ್ತದೆ. ಮತ್ತು ಪರಶಿವನಲ್ಲಿಯೆ ಲಯ ವಾಗುತ್ತದೆ. ಅದಕ್ಕೆ ಸ್ವತಂತ್ರವಾದ ಇರುವಿಕೆಯೇ ಇಲ್ಲ.ಇದು ಅದ್ವೈತ ದೃಷ್ಠಿ.
ವಿಶ್ವಕ್ಕೂ ಪರಶಿವನಿಗೂ ಅಸಂಬಂಧ ಹೇಗೆ?
ಪರಶಿವವು ಚೈತನ್ಯಘನ, ಈ ವಿಶ್ವವು ಜಡ ;
ಪರಶಿವನು ನಿತ್ಯ, ಈ ವಿಶ್ವವು ಅನಿತ್ಯ ; ಪರಶಿವನು ಅಪರಿಮಿತ, ಈ ವಿಶ್ವವು ಪರಿಮಿತ.
ಹೀಗೆ ಅವು ನೋಡಲು ಅಸಂಬಂಧ ಭಿನ್ನವಾಗಿ ಕಾಣಿಸುವವು.ಇದು ದ್ವೈತ ದೃಷ್ಠಿ.
ಶರಣನು ಪರಶಿವನ ಅನುಸಂಧಾನದ, ಲಿಂಗಾಂಗ ಸಾಮರಸ್ಯದ ಮೂಲಕ "ಶಿವಾದ್ವೈತ" ದೃಷ್ಟಿಯನ್ನು ಪಡೆಯುತ್ತಾನೆ. ಆದುದರಿಂದ ಅವನು ಪರಶಿವನಿಗೆ ತೋರಿಕೆಗೆ ಅಸಂಬಂಧಿತವೆಂದು ಕಾಣುವ ಈ ವಿಶ್ವವನ್ನು ಮತ್ತು ತನ್ನನ್ನು ಪರಶಿವನ ಅಭಿವ್ಯಕ್ತರೂಪು ಎಂದೇ ಕಾಣುತ್ತಾನೆ. ಆತನ ದೃಷ್ಟಿಯಲ್ಲಿ ಎಲ್ಲವೂ ದೇವನೇ. ದೇವನಿಂದ ಭಿನ್ನವಾಗಿ ಯಾವುದೂ ಇಲ್ಲ. ಇರುವುದೆಲ್ಲ ಬರೀ ದೇವ. ಇಂಥ ಶರಣನನ್ನು ಅಲ್ಲಮಪ್ರಭುಗಳು ಗುಹೇಶ್ವರ "ಲಿಂಗಸಂಬಂಧಿ" ಎಂದು ಕರೆದಿದ್ದಾರೆ. ಇದು ಶಿವಾದ್ವೈತ. ಶಿವಯೋಗ ಸಾಧನೆಯಿಂದ ಇದು ಸಾಧ್ಯವಾಗುವುದು.
ಭಾವ:
ಅಸಂಬಂಧವಾದ ಸಂಪೂರ್ಣ ಭಿನ್ನವಾಗಿ ಕಾಣಿಸುವ ದ್ವೈತವಾದ ಪರಶಿವ ಮತ್ತು ವಿಶ್ವ , (ಅಂಗ ಮತ್ತು ಲಿಂಗ), (ಆತ್ಮ ಮತ್ತು ಪರಮಾತ್ಮ) ಶಿವಯೋಗದ ಶಿವಾದ್ವೈತ ದೃಷ್ಠಿಯಿಂದ ನೋಡಿದಾಗ ಅಭಿನ್ನ ಅದ್ವೈತ ವಾಗಿರುವುದು ಅರಿವಾಗುತ್ತದೆ.
" ನಮಮ ಶಿವಸ್ಯ ಸರ್ವಂ "ಇದು ನನ್ನದಲ್ಲ ಎಲ್ಲವೂ ಶಿವನದು ಎಂದು ಈ ದೃಷ್ಟಿಯಿಂದ ಹೇಳಿದುದು.
#ಷಡಕ್ಷರ ಮಂತ್ರ: .
ಓಂ ಎಂಬುದು ಒಂದು ಪವಿತ್ರ ಪ್ರಣವ ಬೀಜಾಕ್ಷರ ಮಂತ್ರ. ಹಿಂದೂ, ಸಿಕ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ.
ಓಂ ಶಬ್ಧವು ಸರ್ವೋಚ್ಚ ಶಕ್ತಿಯ ನಿರ್ಗುಣ ರೂಪವನ್ನು ಪ್ರತಿನಿಧಿಸುತ್ತದೆ. ಓಂ ನಿಂದಲೇ ಸೃಷ್ಟಿರಚನೆ ಪ್ರಾರಂಭವಾಯಿತು
ಓಂ ಎನ್ನುವುದು ಸರ್ವೋತ್ತಮ ಪ್ರಜ್ಞೆ.
AUM (ಓಂ) ಸಮಯದ, ಮನಸ್ಸಿನ ಎಲ್ಲ ಸ್ಥಿತಿ ಗಳನ್ನು ಪ್ರತಿನಿಧಿಸುತ್ತದೆ. ಓಂ (AUM) ನಲ್ಲಿ ಅಕಾರ ('A'ಎಂಬ ಪದವು) ಮನಸ್ಸಿನ ಎಚ್ಚರ ಸ್ಥಿತಿಯನ್ನು ಸೂಚಿಸುತ್ತದೆ. ಉ ಕಾರ ('U' )ಕನಸಿನ ಸ್ಥಿತಿಯನ್ನು ಮತ್ತು ' ಮ ಕಾರ (M' )ಮನ ಸ್ಸಿನ ಆಳವಾದ ನಿದ್ರೆಯ ಸ್ಥಿತಿಯನ್ನು ಸೂಚಿಸುವುದು. ಓಂ.... ಅನ್ನುವಾಗ ಕೊನೆಯಲ್ಲಿ ಉಚ್ಚರಿಸಲಾಗುವ ವಿರಾಮದೊಂದಿಗೆ 'ತುರಿಯಾ' ಅಥವಾ ಅನಂತ ಪ್ರಜ್ಞೆಯ ಸ್ಥಿತಿ ಎಂದು ಸೂಚಿಸುವುದು.
ಓಂ...ನಮಃ ಶಿವಾಯ' ಎನ್ನುವುದರಿಂದ
ಪಿಂಡ - ಬ್ರಹ್ಮಾಂಡಗಳಲ್ಲಿ, ಆತ್ಮ- ಪರಮಾತ್ಮನಲ್ಲಿ ಅಥವಾ ಅಂಗ - ಲಿಂಗದಲ್ಲಿ ಸಮರಸ, ಐಕ್ಯ, ಸಾಮರಸ್ಯ ಅಳವಲ್ಪಡುವದು. ಈ ಷಡಕ್ಷರ ಮಂತ್ರ ದಲ್ಲಿ ಪಿಂಡ ಬ್ರಹ್ಮಾಂಡ ಯೊರೈಕಂ, ಇದು ಆತ್ಮ ಪರಮಾತ್ಮರ ಸಾಮರಸ್ಯವಾಗಿದೆ.
ಷಡಕ್ಷರ ಮಂತ್ರವು ಶಿವಾಯೋಗದ ಮಂತ್ರ.
ಇಲ್ಲಿ ಪೂಜಾಸಾಮಗ್ರಿಗಳಿಲ್ಲ. ಅಷ್ಟವಿಧಾರ್ಚನೆ ಮತ್ತು ಷೋಡಷೋಪಚಾರಗಳಿಲ್ಲ. ಸದಾ ಏಕಗ್ರತೆಯಿಂದ ಮಾನಸಿಕವಾಗಿ ಮಂತ್ರ ಪಠಣೆ ಯಿಂದ ಧ್ಯಾನದಲ್ಲಿ ಮುಳುಗಿ ದೈವ ದಾರಣೆಯಾಗಿ ಸಮಾದಿ ಸ್ಥಿತಿಯನ್ನು ತಲುಪಿ ಪಂಚಭೂತಗಳನ್ನು ಗೆದ್ದು ತಾನೆ ಈಶ್ವರನಾಗುವ ಮಂತ್ರ.
- ✍️ Dr Prema Pangi
#'ನ_ಎಂಬುದೆ_ನಂದಿಯಾಗಿ_ಮ_ಎಂಬುದೆ
Picture post designed and created by me. Hope you all will like it. A small service to popularise Vachana Sahitya.
Comments
Post a Comment