ವಚನ ದಾಸೋಹ
ವಚನ:
ಶಿವಶಿವಾಯೆಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ.
ಹರ ಹರಾ ಎಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ.
ಶ್ರೀ ವಿಭೂತಿ ರುದ್ರಾಕ್ಷಿ ಭಕುತಿಯ ಮುಕುತಿಗೆ ಸಾಧನವೋ ಎನ್ನ ತಂದೆ,
ಎನಗಿದೆ ಗತಿಮತಿ ಚೈತನ್ಯ, ಕೂಡಲಸಂಗಮದೇವಯ್ಯಾ,
ನಿಮ್ಮ ನಾಮದ ರುಚಿ ತುಂಬಿತ್ತೊ ಎನ್ನ ತನುವ. / 1208
- ಗುರು ಬಸವಣ್ಣನವರು
ಅರ್ಥ:
ಗುರು ಬಸವಣ್ಣನವರು ಈ ವಚನದಲ್ಲಿ ಶಿವನಾಮ ಜಪದ ಮಹತ್ವ ತಿಳಿಸಿದ್ದಾರೆ.
ಗುರು ಬಸವಣ್ಣನವರು ಶಿವಶಿವಾ, ಹರಹರಾ ಎಂಬ ಶಿವ ನಾಮ ಜಪದಿಂದ ಅಮೃತದ ಆರೋಗಣೆಯೆ ಆಯಿತು. ಅಮೃತ ಸೇವಿಸಿದಂತೆ ಅನುಭವವಾಯಿತು.
ಶಿವನಾಮ ಜಪವು, ಶ್ರೀ ವಿಭೂತಿಗೆ, ರುದ್ರಾಕ್ಷಿಗೆ, ಭಕ್ತಿಗೆ, ಮುಕ್ತಿಗೆ ಸಾಧನವಾಯಿತು.
ನನಗೆ ಗತಿಮತಿಗೆ ಚೈತನ್ಯ ನೀಡಿತು.
ಶಿವ ನಾಮದ ರುಚಿ ನನ್ನ ತನು ಮನವೆಲ್ಲ ಆವರಿಸಿತು ಎಂದು ತಮ್ಮ ಭಕ್ತಿಯ ಶಕ್ತಿಯನ್ನು ಅನುಭವದಿಂದ ತಿಳಿಸುತ್ತಾರೆ.
ಭಾವ:
ನಾಮಜಪ, ಮಂತ್ರದ ಅರ್ಥದಲ್ಲಿರಿಸಿದ ವಿಶ್ವಾಸ ಮತ್ತು ಚಿತ್ರದ ಏಕಾಗ್ರತೆ ಇವುಗಳ ಮೂಲಕ ಯೋಗಿಯು ಭೌತಿಕ ಬಂಧನಗಳಿಂದ ಮುಕ್ತನಾಗಿ ಆತ್ಮತತ್ವ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತಾನೆ. ಶಿವಯೋಗ ಪ್ರದೀಪಿಕೆಯ ಅಭಿಪ್ರಾಯದಂತೆ ಮಂತ್ರಯೋಗಿಯು ಯಾವಾಗಲೂ ಒಂದು, ಎರಡು, ಆರು ಇಲ್ಲ, ಎಂಟು ಅಕ್ಷರಗಳಿಂದ ಯುಕ್ತವಾದ ಮಂತ್ರವನ್ನು ಜಪಿಸುತ್ತಿರಬೇಕು .
ಮನಸ್ಸು ಬಹಳ ಚಂಚಲವಾದದ್ದು. ಮಂತ್ರ ಮತ್ತು ನಾಮಜಪ ಮನಸ್ಸಿನ ಈ ಚಾಂಚಲ್ಯವನ್ನು ನಿವಾರಿಸಲಿಕ್ಕೆಂದು ಇರುತ್ತದೆ. ಮಂತ್ರ ಮತ್ತು ನಾಮಜಪದಿಂದ ಮನವು ಸ್ಥಿರವಾಗಿ ಸ್ಥಿಮಿತಕ್ಕೆ ಬರುತ್ತದೆ. ಮಂತ್ರ ಒಂದು ಶಕ್ತಿಯಾಗಿದೆ, ಸರಿಯಾಗಿ ಉಪಯೋಗ ಮಾಡಿಕೊಳ್ಳುವುದರಿಂದ ಮಂತ್ರವು ಆಧ್ಯಾತ್ಮಿಕ ವಿಕಾಸದಲ್ಲಿ ಅತ್ಯಧಿಕವಾದ ಸಹಾಯವನ್ನು ಮಾಡುತ್ತದೆ.
-✍️ Dr Prema Pangi
#ಪ್ರೇಮಾ_ಪಾಂಗಿ,#ಗುರುಬಸವಣ್ಣನವರು,
#ಶಿವಶಿವಾಯೆಂಬ_ಮಂತ್ರವೆನಗೆ
Comments
Post a Comment