ವಚನ ದಾಸೋಹ
#ವಚನ:
#ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ,
ಸದ್ಯೋಜಾತವಕ್ತ್ರ,
ಬ್ರಹ್ಮ ಪೂಜಾರಿ, ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ,
ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ
ಸುವರ್ಣಮಯಲಿಂಗ - ಅದು ಆಚಾರಲಿಂಗ, ಅದಕ್ಕೆ ಬೀಜಾಕ್ಷಾರ
ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ
ವ, ಶ, ಷ, ಸ ಎಂಬ ನಾಲ್ಕಕ್ಷರ.
ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ, ಆಧಾರಚಕ್ರ.
ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಲ್ಲಿಗೆ ಅಪ್ಪುವೆಂಬ
ಮಹಾಭೂತ, ವಾಮದೇವವಕ್ತ್ರ,
ವಿಷ್ಣು ಪೂಜಾರಿ, ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ,
ಅರೆಸಳಿನ ತಾವರೆಯ ಮಧ್ಯದಲ್ಲಿ
ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ - ಅದು ಗುರುಲಿಂಗ; ಅದಕ್ಕೆ ಬೀಜಾಕ್ಷರ
ಓಂ ಮಾಂ ಮಾಂ ಮಾಂ ಎಂಬ ನಾದಘೋಷ.
ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ
ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ, ಸ್ವಾದಿಷ್ಠಾನಚಕ್ರ.
ನಾಬಿಸ್ಥಾನದಲ್ಲಿ ಮಣಿಪೂರಕಚಕ್ರ,
ಅಲ್ಲಿಗೆ ಅಗ್ನಿಯೆಂಬ ಮಹಾಭೂತ, ಅಘೋರವಕ್ತ್ರ
ರುದ್ರ ಪೂಜಾರಿ, ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ,
ಹತ್ತೆಸಳಿನ ತಾವರೆಯ ಮಧ್ಯದಲ್ಲಿ
ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, ಅದಕ್ಕೆ ಬೀಜಾಕ್ಷರ
ಓಂ ಶಿಂ ಶಿಂ ಶಿಂ ಎಂಬ ನಾದಘೋಷ.
ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ.
ಅದು ದೇವರಿಗೂ ತಮಗೂ ದಕ್ಷಿಣಮುಖ - ಅಘೋರವಕ್ತ್ರ, ಮಣಿಪೂರಕಚಕ್ರ.
ಹೃದಯ ಸ್ಥಾನದಲ್ಲಿ ಅನಾಹತಚಕ್ರ,
ಅಲ್ಲಿಗೆ ವಾಯುವೆಂಬ ಮಹಾಭೂತ, ತತ್ಪುರುಷವಕ್ತ್ರ,
ಈಶ್ವರ ಪೂಜಾರಿ ಕಪೋತವರ್ಣದ ತೇಜ,
ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಹನ್ನೆರಡೆಸಳಿನ ತಾವರೆಯ
ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ-ಅದು ಜಂಗಮಲಿಂಗ, ಅದಕ್ಕೆ ಬೀಜಾಕ್ಷರ
ಓಂ ವಾಂ ವಾಂ ವಾಂ ಎಂಬ ನಾದಘೋಷ.
ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ
ಎಂಬ ದ್ವಾದಶಾಕ್ಷರ
ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ.
ಕಠಸ್ಥಾನದಲ್ಲಿ ವಿಶುದ್ಧಿಚಕ್ರ, ಅಲ್ಲಿಗೆ ಆಕಾಶವೆಂಬ ಮಹಾಭೂತ, ಈಶಾನವಕ್ತ್ರ,
ಸದಾಶಿವ ಪೂಜಾರಿ, ವಿದ್ಯುಲ್ಲತೆಯ ತೇಜ,
ಬಾಲಪಂಚಕೋಟಿ ಸೂರ್ಯಪ್ರಕಾಶ, ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ
ಅನಂತಕೋಟಿ ಮಿಂಚುಗಳ ವರ್ಣದ ಲಿಂಗ-
ಅದು ಪ್ರಸಾದಲಿಂಗ, [ಓಂ ಯಾಂ ಯಾಂ ಯಾಂ ಎಂಬ
ನಾದಘೋಷ]. ಎಸಳು ಹದಿನಾರರಲ್ಲಿ
ಅ ಆ ಇ ಈ ಉ ಊ ಋ ೂ ಏ ಐ ಓ ಔ ಅಂ ಅಃ ಎಂಬ
ಷೋಡಶಾಕ್ಷರ. ಅದು ದೇವರಿಗೂ ತಮಗೂ ಊಧ್ರ್ವಮುಖ-
ಈಶಾನವಕ್ತ್ರ, ವಿಶುದ್ಧಿಚಕ್ರ.
ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಅಲ್ಲಿಗೆ ಮನವೆಂಬ ಮಹಾಭೂತ, ಶ್ರೀಗುರುವೆ ವಕ್ತ್ರ
ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ.
ಬಾಲಷಟ್ಕೋಟಿ ಸೂರ್ಯಪ್ರಕಾಶ
ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ
ಎಡಗಡೆಯ ಪಾದ ಕೆಂಪು ವರ್ಣ,
ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ.
ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ.
ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ]
ಅದು ದೇವರಿಗೂ ತನಗೂ ಗಂಬಿರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ.
ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ
ಚಂದ್ರನೆಂಬ ಮಹಾಭೂತ, ಲಿಂಗವಕ್ತ್ರ
ಪರಮೇಶ್ವರ ಪೂಜಾರಿ, ಮಹಾಜ್ಯೋತಿರ್ವರ್ಣದ ತೇಜ,
ಬಾಲ ಅನಂತಕೋಟಿಸೂರ್ಯಪ್ರಕಾಶ
ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ
ಮಹಾಜ್ಯೋತಿರ್ವರ್ಣದ ಲಿಂಗ.
ಅದು ನಿರಾಮಯ ಲಿಂಗ, ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ,
ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ-
ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ.
ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ
ವಿಶ್ವತೋ ಬಾಹುರುತ ವಿಶ್ವತಃ ಪಾತ್
ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ
ದ್ರ್ಯಾವಾ ಭೂಮೀ ಜನಯನ್ ದೇವ ಏಕಃ
ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ
ಕೂಡಲಚೆನ್ನಸಂಗಮದೇವಾ / 598
- ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು
*ಅರ್ಥ:*
ಯೋಗಿಗಳು ದೇವರನಿಲಯವಾದ ಈ ದೇಹದಲ್ಲಿ ಏಳು ಶಕ್ತಿ ಕೇಂದ್ರಗಳನ್ನು ಗುರುತಿಸಿದ್ದಾರೆ. ಮೊದಲನೆಯದು ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ ಮತ್ತು ವಿಶುದ್ದಿ, ಆರನೆಯದು ಆಜ್ಞಾಚಕ್ರ. ಈ ಚಕ್ರಗಳ ಮಧ್ಯೆ ಪ್ರಾಣ ಮತ್ತು ಮನಸ್ಸುಗಳು ಸಂಚರಿಸುತ್ತಿರುತ್ತವೆ. ಮೇಲಿನಿಂದ ಕೆಳಗೆ ಹರಿವುದು ಅಧೋಚಲನೆ; ಕೆಳಗಿನಿಂದ ಮೇಲೆ ಹೋಗುವುದು ಊರ್ಧ್ವಚಲನೆ. ಸಾಮಾನ್ಯವಾಗಿ ಅಧೋಚಲನೆ ಹೆಚ್ಚು. ಅದು ಪ್ರವೃತ್ತಿ ಜೀವನ, ಅಧೋಮುಖಿಯಾದ ಮನಸ್ಸು ವಿಷಯಗಳತ್ತ ಹರಿಯುತ್ತದೆ. ವಿಷಯಸುಖದಲ್ಲಿ ರಮಿಸುತ್ತದೆ. ಅದು ಊರ್ಧ್ವಮುಖಗೊಂಡಾಗ ವಿಷಯಗಳಿಂದ ನಿವೃತ್ತವಾಗುತ್ತದೆ. ಮೊದಲನೆಯದು ಪ್ರವೃತ್ತಿ ಮಾರ್ಗ, ಎರಡನೆಯದು ನಿವೃತ್ತಿ ಮಾರ್ಗ, ಪ್ರವೃತ್ತಿ ಮಾರ್ಗದಲ್ಲಿ ನಡೆವವನೇ ಸಂಸಾರಿ, ನಿವೃತ್ತಿ ಮಾರ್ಗದಲ್ಲಿ ನಡೆವವನೇ ಯೋಗಿ.
ಶಿವಯೋಗಿಯು ಆಯಾ ಸ್ಥಾನಗಳಲ್ಲಿ ನಿಂತು, ಮನಸ್ಸನ್ನು ಅಲ್ಲಿ ಸ್ಥಿರಗೊಳಿಸಿ ಅಲ್ಲಿರುವ ದೈವೀ ಕಳೆಯೊಂದಿಗೆ ಸುಖಿಸಬೇಕು, ಇದು ಆಜ್ಞಾಚಕ್ರದವರೆಗೆ. ಆಜ್ಞಾಚಕ್ರವನ್ನು ಮೀರಿ ಮೇಲಿರುವ ಪ್ರದೇಶವೆ ಉನ್ಮನಿಜ್ಯೋತಿ. ಮನಸ್ಸು ಆ ಪ್ರದೇಶವನ್ನು ಪ್ರವೇಶಿಸಿದಾಗ ಉನ್ಮನಿಯೆನಿಸುತ್ತದೆ. ಆಗ ಅದು ವ್ಯಷ್ಟಿ ಸಮಷ್ಟಿ, ಪ್ರಪಂಚದ ಆಕರ್ಷಣೆಗಳಿಂದ ಪೂರ್ಣ ಮುಕ್ತವಾಗಿರುತ್ತದೆ. ನಿಶ್ಚಿಂತ ನಿರಾಮಯವಾದ ಉನ್ಮನಿಗೊಂಡ ಆ ಮನಸ್ಸು, ಉನ್ಮನಿ ಕ್ಷೇತ್ರವನ್ನು ಮೀರಿ ಬ್ರಹ್ಮರಂಧ್ರವನ್ನು ಪ್ರವೇಶಿಸಿ ಸಹಸ್ರಾರದಲ್ಲಿ ನಿಲ್ಲುತ್ತದೆ. ಅದುವೆ ನಿಃಕಲಲಿಂಗದ ಸ್ಥಲ, ನಿಶ್ಯಬ್ದ ಓಂಕಾರ ಪ್ರಣವ ಬ್ರಹ್ಮ. ಅಲ್ಲಿ ಮನಸ್ಸು, ಅಮನಸ್ಸು ಆಗಿರುತ್ತದೆ. ಆ ಮನೋಗತ ಜೀವನು ಅಲ್ಲಿರುವ ಲಿಂಗಪ್ರಭೆಯಲ್ಲಿ ನಿಮಗ್ಯ, ನಿರ್ವಿಷಯ, ನಿರ್ಮಾಯ ಸೌಖ್ಯವಾದ ಲಿಂಗಾನಂದದ ಅನುಭವ ಪಡೆಯುವನು. ಅದು ಅಮೃತಸ್ಥಿತಿ.
ಈ ವಚನದಲ್ಲಿ ಏಳು ಚಕ್ರಗಳ ವರ್ಣನೆಯಿದೆ. ಅಮೃತದಿಂದ ತುಂಬಿಹೋದ ಆ ಸಹಸ್ರಾರಚಕ್ರದಲ್ಲಿಯೇ ಓಂಕಾರ ಸ್ವರೂಪವಾದ ನಿಷ್ಕಲ ಲಿಂಗದ ನೆಲೆಯನ್ನು ಗುರುತಿಸಲಾಗಿದೆ. ವಿಷಯ ಸ್ಪಷ್ಟತೆಗಾಗಿ ಇಲ್ಲಿರುವ ವಿವರಗಳನ್ನೆಲ್ಲಾ ಸರಳವಾಗಿ ತಿಳಿಸಿದೆ. ಏಳು ಚಕ್ರಗಳು, ಅವುಗಳ ಸ್ಥಾನ, ದಳಗಳು, ಅಳವಡಿಸಿದ ಲಿಂಗ, ಅದರ ಬಣ್ಣ, ಪ್ರಕಾಶ, ತೇಜ, ಚಕ್ರದ ಪ್ರಣವ ಅಕ್ಷರ, ಮಹಾಭೂತ, ಮುಖ, ದಿಕ್ಕು, ಪೂಜಾರಿ, ಎಸಳುಗಳ ಮೇಲಿನ ಅಕ್ಷರಗಳು, ಬೀಜಾಕ್ಷರ ಗಳ ವಿವರಣೆ ಇಂತಿದೆ.
1
ಚಕ್ರ ಆಧಾರಚಕ್ರ
ಲಿಂಗ ಆಚಾರಲಿಂಗ
ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ ಸುವರ್ಣಮಯಲಿಂಗ
ನ ಕಾರ ಪ್ರಣವ
ಸ್ಥಾನ: ಗುದಸ್ಥಾನ
ಮಹಾಭೂತ: ಪೃಥ್ವಿ
ವಕ್ತ್ರ: ಸದ್ಯೋಜಾತ
ದಿಕ್ಕು: ಪಶ್ಚಿಮಮುಖ
ಪೂಜಾರಿ : ಬ್ರಹ್ಮ
ತೇಜ: ಸುವರ್ಣ
ಪ್ರಕಾಶ : ಬಾಲರವಿಕೋಟಿ
ಎಸಳು 4 ಅಕ್ಷರಗಳು : ವ, ಶ, ಷ, ಸ
ಬೀಜಾಕ್ಷಾರ: ಓಂ ನಾಂ ನಾಂ ನಾಂ
2
ಚಕ್ರ : ಸ್ವಾದಿಷ್ಠಾನಚಕ್ರ
ಲಿಂಗ : ಗುರುಲಿಂಗ
ಅರೆಸಳಿನ ತಾವರೆಯ ಮಧ್ಯದಲ್ಲಿ
ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ
ಮ ಕಾರ ಪ್ರಣವ
ಸ್ಥಾನ: ಲಿಂಗಸ್ಥಾನ
ಮಹಾಭೂತ: ಅಪ್ಪು
ವಕ್ತ್ರ: ವಾಮದೇವ
ದಿಕ್ಕು :ಉತ್ತರಮುಖ (ದೇವರಿಗೂ ತಮಗೂ)
ಪೂಜಾರಿ: ವಿಷ್ಣು
ತೇಜ: ನೀಲ
ಪ್ರಕಾಶ : ಬಾಲದ್ವಿಕೋಟಿ ಸೂರ್ಯಪ್ರಕಾಶ
ಎಸಳು : ಆರು,
ಅಕ್ಷರ : ಬ ಭ ಮ ಯ ರ ಲ
ಬೀಜಾಕ್ಷಾರ ನಾದ : ಓಂ ಮಾಂ ಮಾಂ ಮಾಂ
3
ಚಕ್ರ : ನಾಭಿ ಚಕ್ರ,(ಮಣಿಪೂರಕಚಕ್ರ)
ಲಿಂಗ : ಶಿವಲಿಂಗ ಹತ್ತೆಸಳಿನ ತಾವರೆಯ ಮಧ್ಯದಲ್ಲಿ ಮಾಣಿಕ್ಯವರ್ಣದ ಲಿಂಗ
ಶಿ ಕಾರ ಪ್ರಣವ
ಸ್ಥಾನ: ನಾಬಿಸ್ಥಾನ
ಮಹಾಭೂತ :ಅಗ್ನಿ ತತ್ವ
ವಕ್ತ್ರ:ಅಘೋರವಕ್ತ್ರ
ಪೂಜಾರಿ, ರುದ್ರ
ತೇಜ:ಮಾಣಿಕ್ಯ
ಪ್ರಕಾಶ,ಬಾಲತ್ರಿಕೋಟಿಸೂರ್ಯಪ್ರಕಾಶ
ಎಸಳು ಹತ್ತು ಅಕ್ಷರ: ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ.
ಬೀಜಾಕ್ಷಾರ: ಓಂ ಶಿಂ ಶಿಂ ಶಿಂ ನಾದಘೋಷ.
ದಿಕ್ಕು: ದಕ್ಷಿಣಮುಖ (ದೇವರಿಗೂ ತಮಗೂ)
4
ಚಕ್ರ : ಅನಾಹತಚಕ್ರ
ಲಿಂಗ : ಜಂಗಮಲಿಂಗ ಹನ್ನೆರಡೆಸಳಿನ ತಾವರೆಯ ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ
ವ ಕಾರ ಪ್ರಣವ
ಸ್ಥಾನ: ಹೃದಯ ಸ್ಥಾನ
ಮಹಾಭೂತ : ವಾಯು ತತ್ವ
ವಕ್ತ್ರ : ತತ್ಪುರುಷ
ಪೂಜಾರಿ : ಈಶ್ವರ
ತೇಜ : ಕಪೋತವರ್ಣ
ಪ್ರಕಾಶ: ಬಾಲಚತುಷ್ಕೋಟಿ ಸೂರ್ಯಪ್ರಕಾಶ
ಎಸಳು : ಹನ್ನೆರಡು- ಅಕ್ಷರ ಕ ಖ ಗ ಘ ಙ ಚ ಛ ಜ ಝ ಞ ಟಂಠ ಎಂಬ ದ್ವಾದಶಾಕ್ಷರ
ಬೀಜಾಕ್ಷಾರ ಓಂ ವಾಂ ವಾಂ ವಾಂ ಎಂಬ ನಾದಘೋಷ.
ದಿಕ್ಕು ಪೂರ್ವಮುಖ (ದೇವರಿಗೂ ತಮಗೂ)
5
ಚಕ್ರ : ವಿಶುದ್ಧಿಚಕ್ರ
ಲಿಂಗ : ಪ್ರಸಾದಲಿಂಗ
ಯ ಕಾರ ಪ್ರಣವ
ಸ್ಥಾನ : ಕಂಠಸ್ಥಾನ
ಮಹಾಭೂತ : ಆಕಾಶ ತತ್ವ
ವಕ್ತ್ರ: ಈಶಾನ
ಪೂಜಾರಿ: ಸದಾಶಿವ
ತೇಜ: ವಿದ್ಯುಲ್ಲತೆ
ಪ್ರಕಾಶ ಬಾಲಪಂಚಕೋಟಿ ಸೂರ್ಯಪ್ರಕಾಶ
ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ
ಅನಂತಕೋಟಿ ಮಿಂಚುಗಳ ವರ್ಣದ ಲಿಂಗ-
ಎಸಳು : ಹದಿನಾರು
ಅಕ್ಷರ : ಅ ಆ ಇ ಈ ಉ ಊ ಋ ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ.
ಬೀಜಾಕ್ಷಾರ: ಓಂ ಯಾಂ ಯಾಂ ಯಾಂ ಎಂಬ ನಾದಘೋಷ
ದಿಕ್ಕು: ಊಧ್ರ್ವಮುಖ (ದೇವರಿಗೂ ತಮಗೂ)
6
ಚಕ್ರ ಆಜ್ಞಾಚಕ್ರ
ಲಿಂಗ : ಮಹಾಲಿಂಗ
ಓಂ ಕಾರ ಪ್ರಣವ
ಸ್ಥಾನ: ಭ್ರೂಮಧ್ಯ
ಮಹಾಭೂತ: ಮನ
ವಕ್ತ್ರ: ಶ್ರೀಗುರು
ಪೂಜಾರಿ: ಮಾಹೇಶ್ವರ
ತೇಜ : ಜ್ಯೋತಿರ್ವರ್ಣ
ಪ್ರಕಾಶ ಬಾಲಪಂಚಕೋಟಿ ಸೂರ್ಯಪ್ರಕಾಶ
ಬಾಲಷಟ್ಕೋಟಿ ಸೂರ್ಯಪ್ರಕಾಶ
ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ
ಎಡಗಡೆಯ ಪಾದ ಕೆಂಪು ವರ್ಣ,
ಬಲಗಡೆಯ ಪಾದ ಶ್ವೇತವರ್ಣ.
ಎಸಳು : ಎರಡು
ಅಕ್ಷರ : ಅಕ್ಷರ ಹಂ ಸಂ ಎಂಬ ಎರಡಕ್ಷರ
ಬೀಜಾಕ್ಷಾರ : ಓಂಕಾರ ನಾದಘೋಷ
ದಿಕ್ಕು ಗಂಬಿರ ಮುಖ (ದೇವರಿಗೂ ತಮಗೂ)
7
ಚಕ್ರ ಬ್ರಹ್ಮಚಕ್ರ
ಲಿಂಗ : ನಿಷ್ಕಲ ಲಿಂಗ,ನಿಕಃಲ ಲಿಂಗ
ನಿಕಃಲ ಸ್ಥಲ
ಸ್ಥಾನ : ಬ್ರಹ್ಮರಂಧ್ರ, ನೆತ್ತಿ
ಮಹಾಭೂತ : ಚಂದ್ರ
ವಕ್ತ್ರ: ಲಿಂಗ
ಪೂಜಾರಿ : ಪರಮೇಶ್ವರ
ತೇಜ : ಮಹಾಜ್ಯೋತಿರ್ವರ್ಣ ಪ್ರಕಾಶ ಬಾಲಅನಂತಕೋಟಿ ಸೂರ್ಯಪ್ರಕಾಶ
ದಳ: ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ
ಮಹಾಜ್ಯೋತಿರ್ವರ್ಣದ ಲಿಂಗ.
ಬ ಕಾರ ಪ್ರಣಮ
ನಾದ: "ಅ" ಕಾರ ಪ್ರಣಮ, ಬಿಂದು "ಉ" ಕಾರ ಪ್ರಣಮ, ಕಲೆ "ಮ" ಕಾರ ಪ್ರಣಮ,
ಎಸಳು ಒಂದುನೂರಎಂಟುಸಾವಿರ108000
ಅಕ್ಷರ : ಒಂದನೂರ ಎಂಟು ಸಾವಿರ ಅಕ್ಷರ
ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ.
ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ
ವಿಶ್ವತೋ ಬಾಹುರುತ ವಿಶ್ವತಃ ಪಾತ್
ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ
ದ್ರ್ಯಾವಾ ಭೂಮೀ ಜನಯನ್ ದೇವ ಏಕಃ
ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ
ಕೂಡಲಚೆನ್ನಸಂಗಮದೇವಾ
ಬೀಜಾಕ್ಷಾರ ಪ್ರಣವ ನಾದ ಘೋಷ.
*ಭಾವ:*
ಪಿಂಡಬ್ರಹ್ಮಾಂಡಯೋರೈಕ್ಕಂ' ಎಂದು ಹೇಳುವರು. ಬ್ರಹ್ಮಾಂಡದಲ್ಲಿ ವ್ಯಕ್ತವಾಗಿರುವ ಘಟಕಗಳು ಪಿಂಡಾಂಡದಲ್ಲಿಯೂ ಇವೆ. ಅಂತರ್ಮುಖಿಗಳಾದ ಯೋಗಿಗಳು ಬ್ರಹ್ಮಾಂಡವನ್ನು ಅರಿತುಕೊಳ್ಳಲು ಹಂಬಲಿಸದೆ ಪಿಂಡದಲ್ಲಿ ಪ್ರವೇಶಮಾಡಿ ಅಲ್ಲಿ ಕಂಡ ಅದ್ಭುತ ಶಕ್ತಿ-ತತ್ವಗಳಿಂದ ಬ್ರಹ್ಮಾಂಡದ ನೆಲೆಯನ್ನು ಕಂಡುಕೊಂಡರು. ಶಿವಯೋಗಸಾಧನೆಗೆ ಪಿಂಡವನ್ನು ಬಿಟ್ಟರೆ ಇನ್ನಾವವಾದ ಉಪಕರಣವೂ ಇಲ್ಲ. 'ಶರೀರಮಾದ್ಯಂ ಖಲು ಧರ್ಮ ಸಾಧನಂ' ಎಂದು ಹೇಳುವ ಮಾತಿನಲ್ಲಿ ಪಿಂಡಾಂಡ ಹಸುಗೆಯಿಂದ ಪರಬ್ರಹ್ಮನ ನಿಲವನ್ನು ಕಾಣಬೇಕೆಂಬ ರಹಸ್ಯವಡಗಿದೆ.
ಕುಂಡಲಿನಿ ಶಕ್ತಿ ಮನುಷ್ಯನಲ್ಲಿ ಅಧೋಮುಖಿಯಾಗಿ ಸುಪ್ತಾವಸ್ಥೆಯಲ್ಲಿ ಆಧಾರ ಸ್ಥಾನದಲ್ಲಿ ಅವಿತುಕೊಂಡಿರುತ್ತದೆ. ಶರೀರ ಮತ್ತು ಪ್ರಾಣದ ಗತಿಗೆ ಆಧಾರ ವಾಗಿರುವುದು, ಈ ಶಕ್ತಿಯೇ. ಈ ಶಕ್ತಿಯನ್ನು ಜಾಗೃತಗೊಳಿಸಿ ಊರ್ಧ್ವಮುಖ ಮಾಡಿದಾಗ ಅದು ಆಧಾರದಿಂದ ಷಟ್ ಚಕ್ರಗಳನ್ನು ಭೇದಿಸಿ ಮೇಲೆ ಏರತೊಡಗುತ್ತದೆ.
ಕೊನೆಗೆ ಅದರ ಸಹಸ್ರಾರ ಚಕ್ರವನ್ನು ಸೇರಿ ಅಲ್ಲಿರುವ ಶಿವನೊಡನೆ ಬೆರೆತು ಶಿವಶಕ್ತಿ ಸಂಪುಟವನ್ನೂ ವ್ಯಕ್ತಗೊಳಿಸುತ್ತದೆ. ಶಿವನು ಲಿಂಗರೂಪವಾಗಿರುವದರಿಂದ ಶಿವಯೋಗಿಯ ಅರ್ಚನೆಗಾಗಿ ಶಿವಲಿಂಗವು ವಿಕಾಸ ಹೊಂದಿದ ಶಕ್ತಿಯ ಕೇಂದ್ರಗಳಾದ ಚಕ್ರಗಳಲ್ಲಿ ವಿವಿಧ ಲಿಂಗರೂಪವಾಗಿ ವ್ಯಕ್ತವಾಗುವದು. ಸಾಮಾನ್ಯವಾಗಿ ಷಟ್‌ಚಕ್ರಗಳನ್ನು ಗುರುತಿಸಿ ಅಲ್ಲಿ ಯೋಗಸಾಧಕರೂ ಕೇಂದ್ರಿಕೃತ ಶಕ್ತಿಯನ್ನು ಕಾಣುವರು. ಅಲ್ಲದೆ ಬ್ರಹ್ಮರಂಧ್ರ ವೆನಿಸುವ ಸಹಸ್ರಾರ ಚಕ್ರವೂ ಶಿವನಿಂದೊಡಗೂಡಿದ ಶಕ್ತಿಗೆ ಆವಾಸ ಸ್ಥಾನವಾಗಿ ಸಪ್ತಮ ಚಕ್ರವೆಂದು ಪರಿಗಣಿತವಾಗಿದೆ. ( ಶಿವಯೋಗಿಗಳು ಮುಂದೆ ಈ ಶಕ್ತಿ ಕೇಂದ್ರಗಳು ಒಂಬತ್ತು- ಹತ್ತು ಎಂದು ಕಂಡಿರುವರು.) ಇದರಿಂದ ಯೋಗಿಯು ತನ್ನ ದಿವ್ಯ ದೃಷ್ಟಿಯಿಂದ ವಿವಿಧ ಶಕ್ತಿಗಳ ಕೇಂದ್ರ ಸ್ಥಳಗಳನ್ನು ಸಾಧನೆಯ ಕ್ರಮದಲ್ಲಿ ಕಂಡು ಅಲ್ಲಿ ನೆಲೆನಿಂತು ಪರಮಾನಂದದಲ್ಲಿ ತಲ್ಲೀನನಾಗುವರು. ಶಿವಯೋಗದ ಲಕ್ಷಣವನ್ನು ತಿಳಿಸುತ್ತ, ಸರ್ಪಭೂಷಣ ಶಿವಯೋಗಿಗಳು ತೇಜೋಮಯವಾದ ಪರವಸ್ತುವು ಈ ಒಂಬತ್ತು ಚಕ್ರಗಳಲ್ಲಿ ಶಿವಲಿಂಗ ಸ್ವರೂಪದಿಂದ ಕಂಗೊಳಿಸುವುದು;
ಅಕ್ಷರ ವೆನಿಸಿದ ಲಿಂಗವನ್ನು ಲಿಂಗಜ್ಞಾನ ಅಕ್ಷರ ಮುಖಾಂತರವಾಗಿ ಕನ್ನಡದ ಅಕ್ಷರಮಾಲೆ ಗಳನ್ನು ಗುರುತಿಸಿ ಅಳವಡಿಸಿಕೊಂಡರು. ಶಿವಶರಣರ ಪರಿಭಾಷೆಯಲ್ಲಿ ಮಂತ್ರವೇ ಲಿಂಗವೆನಿಸಿದೆ. ಷಡಕ್ಷರಿ ಮಂತ್ರ, 'ಓಂ ನಮಃ ಶಿವಾಯ' ಎಂಬ ಅಕ್ಷರ ಗಳಿಂದ ಕೂಡಿದ ಈ ಮಂತ್ರ ಸಾಧನೆಯಿಂದ ಅಧ್ಯಾತ್ಮಿಕ ವಿಕಾಸವನ್ನು ವ್ಯಕ್ತಿಗೊಳಿಸುವ ಷಟ್‌ಸ್ಥಲಕ್ಕೆ ಹೃದಯದಂತಿದೆ. ಆರುಸ್ಥಲಗಳಲ್ಲಿ ಆಚಾರಲಿಂಗ-ಗುರುಲಿಂಗ-ಶಿವಲಿಂಗ-ಪ್ರಸಾದಲಿಂಗ-ಜಂಗಮಲಿಂಗ-ಮಹಾಲಿಂಗಗಳೆಂಬ ಆರು ಲಿಂಗಗಳ ಅನುಭವವನ್ನು ಪಡೆಯುತ್ತ ಸಾಧಕನು ಮುನ್ನೆಡೆಯುವವನು. ಶಿವಯೋಗಿಯು ಶಕ್ತಿಯ ಕೇಂದ್ರಗಳೆನಿಸಿದ ಅಂತರಂಗದ ಷಟ್‌ಚಕ್ರಗಳಲ್ಲಿ ಈ ಅನುಭವವನ್ನು ಕಂಡು ಸಹಸ್ರಾರದ ಅನುಭವಕ್ಕೆ ಸಾಗುವನು. ಸಹಸ್ರಾರದಲ್ಲಿ ಅಮೃತಲಿಂಗವಿಹುದು.
ಯೋಗಿಯು ಅದನ್ನು ಲಕ್ಷಿಸಿ ಅಮೃತ ರಸ ಪಾನ ಮಾಡಿ ಜನನ ಮರಣಗಳನ್ನು ನೀಗುವನು. ಹಾಗೆಯೇ ಸಹಸ್ರಾರದಾಚೆಗೆ ಶಿಖಾಚಕ್ರ, ಪಶ್ಚಿಮ ಚಕ್ರ, ಅಣುಚಕ್ರಗಳೆಂಬ ಶಕ್ತಿಯ ಕೇಂದ್ರ ಗಳನ್ನು ಕಂಡು ಅಲ್ಲಿ ನಿಶೂನ್ಯಲಿಂಗ, ನಿರಂಜನಲಿಂಗ, ಅಣುಲಿಂಗಗಳನ್ನು ಅನುಭಾವಿಸಿದ್ದಾರೆ ಶಿವಯೋಗಿಗಳು. ಇದರಿಂದ ಅಂತರಂಗದ ಅನುಸಂಧಾನದಲ್ಲಿ ಅವರಿಗೆ ಗೋಚರವಾಗುವ ಲಿಂಗಗಳು ಆತ್ಮಶಕ್ತಿಯ ಪ್ರತೀಕಗಳಾಗಿ ಅದ್ಭುತ ಸಾಮರ್ಥ್ಯ ಸಿದ್ಧಿಗಳ ನಿಕೇತನಗಳಾಗಿ ಅವರಿಗೆ ಆನಂದ-ಶಾಂತಿಗಳ ಅನುಭೂತಿಯನ್ನು ನೀಡಿದುವೆಂದು ಹೇಳಬಹುದು. ಆಗೊಮ್ಮೆ ಈಗೊಮ್ಮೆ ಕ್ಷಣರುಚಿಯಾಗಿ ಮಿಂಚಿ ಮಾಯವಾಗುವ ಜ್ಞಾನವು ಸತತಧಾರೆಯಾಗುವಂತೆ, ಓತ-ಪ್ರೊತವಾಗಿ ಸುರಿಯುವಂತೆ ಮಾಡಿಕೊಳ್ಳುವ ರಹಸ್ಯವು ಲಿಂಗ ಮುಖವಾಗಿ ಸಾಧಿಸುವ ಶಿವಯೋಗದಲ್ಲಿರುತ್ತದೆ.
- ✍️Dr Prema Pangi
#ಪ್ರೇಮಾ_ಪಾಂಗಿ,
#ಚಿನ್ಮಯಜ್ಞಾನಿ_ಚೆನ್ನಬಸವಣ್ಣನವರು
Comments
Post a Comment