ವಚನ ದಾಸೋಹ
#ವಚನ:
#ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ. / 868
ಅರ್ಥ:
ಆಂತರಿಕ ಆಧ್ಯಾತ್ಮಿಕ ಸಾಧನೆ ಹೇಗೆ ಮಾಡ ಬೇಕೆಂಬುದನ್ನು ಅಲ್ಲಮ ಪ್ರಭುಗಳು ಸುಂದರ ಉಪಮೆಗಳ ಮೂಲಕ ಗೊಗ್ಗಯ್ಯ ನಿಗೆ ತಿಳಿಸಿದ ಸುಂದರ ವಚನವಿದು.
ಗೊಗ್ಗಯ್ಯ ಒಬ್ಬ ಸಾಮಾನ್ಯವಾದ ತೋಟಿಗ. ಗೊಗ್ಗಯ್ಯನ ತೋಟದಲ್ಲಿದ್ದ ನಿಸರ್ಗ ನಿರ್ಮಿತವಾದ ಚಿಕ್ಕ ಗುಹೆಯೊಂದರಲ್ಲಿ ಅನಿಮಿಷ ಯೋಗಿ ಶಿವಯೋಗದಲ್ಲಿ ತಲ್ಲೀನರಾಗಿದ್ದರು. ಗೊಗ್ಗಯ್ಯನವರು ಅವರ ಸೇವೆ ಮಾಡುತ್ತಿದ್ದರು. ಪಟ್ಟದಕಲ್ಲಿನಲ್ಲಿ ತ್ರೈಲೋಕ್ಯ ಚೂಡಾಮಣಿ ಹಾಗೂ ಪತ್ನಿ ಮಹರ್ಲೋಕಿ ಎಂಬ ಶಿವಭಕ್ತ ರಾಜ ದಂಪತಿಗಳಿಗೆ ಹುಟ್ಟಿದ ಮಗ ವಸುಧೀಶ ರಾಜ್ಯ ತ್ಯಾಗಮಾಡಿ ಅನಿಮಿಷ ದೃಷ್ಟಿಯನ್ನಿಟ್ಟು ಮನ ಪ್ರಾಣ ಸಮರಸವಾಗಿ ಶಿವಯೋಗದಲ್ಲಿ ತಲ್ಲೀನರಾದ ಕಾರಣ ವಸುಧೀಶರಿಗೆ ಅನಿಮಿಷಯ್ಯನೆಂದು ಹೆಸರು ಬಂದಿತ್ತು. ಶಿರಾಳಕೊಪ್ಪದ ಬಳಿ ಬಂದು ಎರಡೂವರೆ ಕಿ.ಮೀ. ಅಂತರದಲ್ಲಿ ಈ ಗುಹೆ ಇದೆ. ಲಿಂಗವೇ ಪ್ರಾಣವಾದ ಕಾರಣ ಲಿಂಗವನ್ನು ಅಲ್ಲಮರು ತಮ್ಮ ಕರಸ್ಥಲಕ್ಕೆ ಆಯತವ ಮಾಡಿಕೊಂಡಾಕ್ಷಣ ಅನಿಮಿಷರ ಅಂಗವು ಕೆಳಕ್ಕೆ ಉರುಳಿತು. ಅಲ್ಲಮರಿಗೆ ಕರಕ್ಕೆ ಲಿಂಗ ಬಂದ ಕ್ಷಣ ಆತ್ಮ ಸಾಕ್ಷಾತ್ಕಾರವಾಯಿತು. ಅಲ್ಲಮಪ್ರಭುದೇವರು ಗೊಗ್ಗಯ್ಯನಿಗೆ ಅವನ ಕಾಯಕವನ್ನೇ ಉದಾಹರಣೆ ಮಾಡಿ ಈ ವಚನದಲ್ಲಿ ಅವನಿಗೆ ಆತ್ಮ ಸಾಕ್ಷಾತ್ಕಾರ ವಾಗುವ ಬಗೆ, ಅನುಭಾವವನ್ನು ತಿಳಿಸಿದ್ದಾರೆ. ಹೀಗೆ ಅಲ್ಲಮರು ಪ್ರಥಮವಾಗಿ ಗೊಗ್ಗಯ್ಯ ನಿಗೆ ಮಾರ್ಗದರ್ಶನ ಮಾಡಿದರು.
ಸಾಧಕರ ಸದ್ಭಕ್ತರ ಯೋಗ್ಯತೆಯ ಅನುಸಾರವಾಗಿ ಅವರ ನೆಲೆಗಳನ್ನರಿತು ಅವರ ಹಿತಾರ್ಥವಾಗಿ ಉಪದೇಶಿಸುವುದು ಜಂಗಮಮೂರ್ತಿ ಅಲ್ಲಮಪ್ರಭುಗಳ ಕಾಯಕವಾಗಿತ್ತು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಗೊಗ್ಗಯ್ಯನ ಸಮ್ಮುಖದಲ್ಲಿ ಬಹಿರಂಗದ ಜೀವನದಲ್ಲಿಯೇ ಮಗ್ನರಾಗಿ ಅಂತರಂಗದ ಮನೆಯನ್ನು
ಹಾಳುಗೆಡುವಬಾರದು. ಬಹಿರಂಗದ ಕ್ರಿಯೆ ಯೊಡನೆ ಅಂತರಂಗದ ಸಾಧನೆಯೂ ಅವಶ್ಯ ವೆಂದು ಗೊಗ್ಗಯ್ಯನಿಗೆ ತಿಳಿಹೇಳಿ ಅವನನ್ನು ಸಾಧಕನನ್ನಾಗಿ ಮಾಡಿದ ವಚನವಿದು. ಹೊರಗಿನ ತೋಟಗಾರಿಕೆಯಂತೆ ಒಳಗಿನ ತೋಟಗಾರಿಕೆಯನ್ನೂ ಮಾಡಬೇಕು. ಆ ತೋಟಗಾರಿಕೆ ಹೇಗೆ ಮಾಡಬೇಕು ಎಂದು ಸುಂದರ ಅದ್ಭುತ ರೂಪಕ ಗಳೊಂದಿಗೆ ಅರುಹಿದ್ದಾರೆ.
ಬಹಿರಂಗದ ವ್ಯವಸಾಯ ಹೀಗೆ ಇರುತ್ತದೆ -
ವ್ಯವಸಾಯಗಾರ (ಒಕ್ಕಲಿಗ,ತೋಟಗಾರ) ಹೊಲವನ್ನು ಗುದ್ದಲಿಯಿಂದ ಅಗೆದು, ಹಳೆಬೇರುಗಳನ್ನು ಗುದ್ದಲಿಯಿಂದ ಅಗೆದು ತೆಗೆದು, ಮಣ್ಣಿನ ಹೆಂಟೆಗಳನ್ನು ಒಡೆದು, ಹಸನಮಾಡಿ ಬೀಜ ಬಿತ್ತಿ, ನೀರು ಹರಿಸಿ, ಬೇಲಿ ಹಾಕಿ ಕಾವಲ ಮಾಡಿ ಫಸಲ ಪಡೆಯುವುದು ಬಹಿರಂಗದ ವ್ಯಯಸಾಯ.
ಆಧ್ಯಾತ್ಮಿಕ ವ್ಯವಸಾಯಗಾರರು ಕೃಷಿ ಮಾಡಿ ಫಸಲನ್ನು ಪಡೆಯುವುದು ಅಸಾಮಾನ್ಯವಾದುದು. ಇಂಥ ಕೃಷಿಯನ್ನು ಮಾಡುವವರು ಅನುಭಾವಿಗಳು. ಅಲ್ಲಮಪ್ರಭುಗಳು ಪಾರಮಾರ್ಥಿಕ ವ್ಯವಸಾಯವನ್ನು ಹೇಗೆ ಮಾಡಬೇಕು ಎಂಬುದನ್ನು ಅದ್ಭುತವಾಗಿ ತನ್ನ ವಚನದಲ್ಲಿ ಸುಂದರ ರೂಪಕಗಳಿಂದ ವ್ಯಕ್ತಪಡಿಸಿದ್ದಾರೆ.
*ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.*
ತನುವ (ಕಾಯ,ದೇಹ) ನ್ನೇ ತೋಟವನ್ನಾಗಿ ಮಾಡಿ, ಹರಿದಾಡುವ ಮನಸ್ಸನ್ನು ಹತೋಟಿಗೆ ತಂದು, ಆ ಮನಸ್ಸನ್ನು ಗುದ್ದಲಿಯನ್ನಾಗಿಸಿ, ಅಹಂಭಾವ ಎಂಬ ಭ್ರಾಂತಿಯ ಬೇರನ್ನು ಮನಸ್ಸೆಂಬ ಗುದ್ದಲಿಯಿಂದ ಅಗೆದು ತೆಗೆಯಬೇಕು. ಸಂಸಾರ ದ್ವಂದ್ವ ಗಳೆಂಬ ಮಣ್ಣಿನ ಹೆಂಟೆಯನ್ನು ಒಡೆದು ಆ ಮಣ್ಣಿನಲ್ಲಿ ಎಂಥ ಬೀಜ ಬಿತ್ತಬೇಕು ಎಂದರೆ, ಸುಜ್ಞಾನ ವೆಂಬ ಬ್ರಹ್ಮಬೀಜವನ್ನು ಬಿತ್ತಬೇಕು.
*ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.*
ಅಖಂಡ ಮಂಡಲವೆಂಬ ಬಾವಿಯನ್ನು ತೆಗೆಯಬೇಕು. ಪವನವನ್ನೇ (ಉಸಿರಾಟ ಕ್ರಿಯೆ, ಪ್ರಾಣಾಯಾಮ) ರಾಟಾಳ (ಗಾಲಿ) ವನ್ನಾಗಿ ಮಾಡಿ, ಸುಷುಮ್ನ (ಸೂಕ್ಷ್ಮ ಶರೀರದ ಬೆನ್ನು ಮಧ್ಯದ ನಾಡಿ ) ನಾಳವೆಂಬ ಹಗ್ಗದಿಂದ ನೀರನ್ನು ಹಾಯಿಸಿ, ಇಂದ್ರಿಯಗಳ ವಿಷಯಾದಿ ಸುಖಗಳ ಬಿಡಿಸಿ, ಮನಸ್ಸನ್ನು ಕೇಂದ್ರೀಕರಿಸಿ, ಸಮತೆ ಸೈರಣೆಯಿಂದ ಚಿತ್ತ ಎಲ್ಲಿಯೂ ಹರಿಯದಂತೆ ಸಮತೆ ಸೈರಣೆ ಎಂಬ ಭದ್ರ ಬೇಲಿಯನಿಕ್ಕಿ, ಕಾಯವೆಂಬ ತೋಟವನ್ನು ಸದಾ ಜಾಗೃತರಾಗಿದ್ದು, ಜ್ಞಾನವೆಂಬ ಪರಮ ಸತ್ಯದ ಸಸಿಯನ್ನು ಸಲುಹಬೇಕು ಎಂದು ಹೇಳಿದ್ದಾರೆ. ಇಂತಹ ಆಧ್ಯಾತ್ಮಿಕ ಕೃಷಿಯನ್ನು ಮಾಡಬೇಕು ಎಂದು ಅಲ್ಲಮ ಪ್ರಭುಗಳು ಗೋಗ್ಗಯ್ಯನಿಗೆ ಅವನದೇ ಭಾಷೆಯಲ್ಲಿ ತಿಳಿಸಿ ಹೇಳುತ್ತಾರೆ.
ಶಿವಯೋಗದ ಸಾಧಕನು ಈ ಸಾಧನೆಯನ್ನು ಮಾಡಿ ಶಿವಸಾಕ್ಷಾತ್ಕಾರಕ್ಕೆ ಹದಗೊಳ್ಳಬೇಕು ಎನ್ನುವುದು ಅಲ್ಲಮ ಪ್ರಭುಗಳ ಅಭಿಮತ, ಇಂಥ ಸಾಧನೆಯ ಸಾಮರ್ಥ್ಯ ಸಾಧಕ ಪಡೆದುಕೊಳ್ಳಬೇಕು. ಇದೇ ಆಧ್ಯಾತ್ಮಕ ಕೃಷಿ ಅಥವಾ ಪಾರಮಾರ್ಥಿಕ ಕೃಷಿ. ಶಿವಯೋಗ ಸಾಧನೆಗೆ ನಿರಂತರ ಪ್ರಯತ್ನ, ಭ್ರಾಂತಿಗಳ ನಿವಾರಣೆ, ಪ್ರಾಣಾಯಾಮ, ಪಂಚೇಂದ್ರಿಯಗಳ ನಿಗ್ರಹ, ಸದಾ ಜಾಗ್ರತೆ ಸ್ಥಿತಿ ಅವಶ್ಯವೆಂದು ಸುಂದರ ಉಪಮೆಗಳ ಮುಖಾಂತರ
ತಿಳಿಸಿದ್ದಾರೆ.
ಭಾವ:
ಈ ದೇಹವು ಒಂದು ತೋಟದಂತಿದೆ. ತೋಟದಲ್ಲಿ ಕಸಕಡ್ಡಿ ಬೆಳೆಯುವಂತೆ ಈ ದೇಹದಲ್ಲಿ ತಾಪತ್ರಯಗಳು, ಪಂಚಕೇಶಗಳು, ಷಡೂರ್ಮಿಗಳು, ಸಪ್ತವ್ಯಸನಗಳು, ಅಷ್ಟಮ ದಗಳು ಹೀಗೆ ಅನೇಕ ತೆರನಾದ ದೋಷಗಳು ಕಸವಾಗಿ ಏಳುತಿರುತ್ತವೆ. ಬೆಳೆಯುತ್ತಿರುತ್ತವೆ.
ತಾಪತ್ರಯಗಳು 3
ಆದಿಭೌತಿಕ, ಅಧಿದೈವಿಕ, ಆಧ್ಯಾತ್ಮಿಕ
ಪಂಚಕೇಶಗಳು 5
ಅವಿದ್ಯಾ, ಅಸ್ಮಿತೆ, ರಾಗ, ದ್ವೇಷ, ಅಭಿನಿವೇಶ
ಷಡೂರ್ಮಿಗಳು 6
ಜರಾ, ಮರಣ, ಕ್ಷುತ್ಪಿ,ಪಾಸೆ, ಶೋಕ, ಮೋಹ
ಸಪ್ತವ್ಯಸನಗಳು 7
ಹಾದರ ಜೂಜು ಬೇಟೆ ಕುಡಿ ಬಿರುನುಡಿ ದಂಡನೆ, ಕಳ್ಳತನ
ಅಷ್ಟಮದಗಳು 8
ಧನ, ಕುಲ, ವಿದ್ಯೆ, ರೂಪ, ಯೌವ್ವನ, ಬಲ, ಪರಿವಾರ ಹಾಗೂ ಆಧಿಕಾರ
ಇವೆಲ್ಲ ದೇಹದಲ್ಲಿ ಬೆಳೆಯುವ ಕಸ ಕಡ್ಡಿಗಳು.
ಭ್ರಾಂತಿಯೆಂಬ ಬೇರು ಬಹು ಆಳವಾಗಿ ಇಳಿದು ಅನಂತ ಮುಖವಾಗಿ ಕವಲೊಡೆದು ಮೂಢನಂಬಿಕೆ, ಮೂಢ ಆಚರಣೆಗಳಾಗಿ ಪಸರಿಸಿರುವುದು. ಭ್ರಾಂತಿಯಿಂದಲೇ ಭಯ, ಭಯದಿಂದಲೇ ಮೃತಿ.
ನಿಜ ಸ್ವರೂಪದರ್ಶನವಿಲ್ಲದೆ ಮಿಥ್ಯ ಜ್ಞಾನದಿಂದ ವ್ಯವಹರಿಸುತ್ತಿರುವುದೆಲ್ಲ ಭ್ರಾಂತಿಯೇ ಆಗಿದೆ. ಈ ಭ್ರಾಂತಿಯನ್ನು ಕಳೆದು, ನಿಭ್ರಾಂತ ಸ್ಥಿತಿಯು ಅಳವಟ್ಟರೆ, ಭಯವು ನೀಗಿ ನಿರ್ಭಯವು ನೆಲೆಗೊಳ್ಳುವುದು. ಆಗ ಮೃತಿಯು ಅಳಿದು ಅಮೃತತ್ವವು ಬೆಳಗುವುದು, ಈ ಭ್ರಾಂತಿಯ ಬೇರನ್ನು ಅಗೆಯಲಿಕ್ಕೆ ಮನವೇ ಗುದ್ದಲಿಯಾಗಿದೆ. ತನು ಬೇರೆ, ಮನ ಬೇರೆ, ಆತ್ಮ ಬೇರೆ, ಆತ್ಮವೇ ನಾನೆಂಬ ತಿಳಿವಳಿಕೆ , ವಿವೇಕ. ಸುವಿಚಾರವನ್ನು ಬೆಳಿಸಿಕೊಂಡು ಭ್ರಾಂತಿಯೆಂಬ ಬೇರನ್ನು ಕಿತ್ತಿ ಎಸಯಬೇಕು.
ಮನವೆಂಬ ಗುದ್ದಲಿಯಿಂದ ಭ್ರಾಂತಿಯ ಬೇರನ್ನು ಅಗೆಯುವಾಗ ಸಂಸಾರದ ಹೆಂಟೆಗಳು ಏಳುವವು. ಎಂದರೆ ಸಂಸಾರ ರೂಪವಾದ ತಾಪತ್ರಯಗಳು ಏಳುವವು. ಆಗ ಆ ಹೆಂಟೆಗಳನ್ನೊಡೆದು ಮಣ್ಣು ಮಾಡಬೇಕು. ಇದು ನಿಷ್ಠೆಯ ಸದಾಚಾರದ ಕಾರ್ಯ. ಹೀಗೆ ಶರಣನು ಭಕ್ತಿ ಜ್ಞಾನ ಸದಾಚಾರ (ಕ್ರಿಯೆ) ಅಳವಡಿಸಿಕೊಂಡು ಶಟ್ಸ್ಥಲದ ಪಥದಲ್ಲಿ ನಡೆದು ಅನುಭಾವಿ ಯಾಗಬೇಕು.
-✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು,
Comments
Post a Comment