ವಚನ ದಾಸೋಹ
#ವಚನ:
#ಶಿವ, ಗುರುವೆಂದು ಬಲ್ಲಾತನೆ ಗುರು.
ಶಿವ, ಲಿಂಗವೆಂದು ಬಲ್ಲಾತನೆ ಗುರು.
ಶಿವ, ಜಂಗಮವೆಂದು ಬಲ್ಲಾತನೆ ಗುರು.
ಶಿವ, ಪ್ರಸಾದವೆಂದು ಬಲ್ಲಾತನೆ ಗುರು.
ಶಿವ, ಆಚಾರವೆಂದು ಬಲ್ಲಾತನೆ ಗುರು.-
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾ ಮಹಿಮ ಸಂಗನಬಸವಣ್ಣನು,
ಎನಗೆಯೂ ಗುರು, ನಿನಗೆಯೂ ಗುರು,
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.
- ಅಲ್ಲಮ ಪ್ರಭುಗಳು
ಅರ್ಥ:
ಶೂನ್ಯ ಸಿಂಹಾಸನದ ಪ್ರಥಮ ಅಧ್ಯಕ್ಷ ವ್ಯೋಮಕಾಯ ಅಲ್ಲಮ ಪ್ರಭುಗಳು ಗುರು ಬಸವಣ್ಣನವರನ್ನು ನನ್ನ ಮತ್ತು ಎಲ್ಲರ "ವಿಶ್ವಗುರು" ಎಂದು ಸ್ತುತಿಸಿದ ಸುಂದರ ವಚನವಿದು.
*ಶಿವ, ಗುರುವೆಂದು ಬಲ್ಲಾತನೆ ಗುರು.
ಶಿವ, ಲಿಂಗವೆಂದು ಬಲ್ಲಾತನೆ ಗುರು.
ಶಿವ, ಜಂಗಮವೆಂದು ಬಲ್ಲಾತನೆ ಗುರು.
ಶಿವ, ಪ್ರಸಾದವೆಂದು ಬಲ್ಲಾತನೆ ಗುರು.
ಶಿವ, ಆಚಾರವೆಂದು ಬಲ್ಲಾತನೆ ಗುರು.*
ಶಿವನೇ ಗುರು, ಶಿವನೇ ಲಿಂಗ, ಶಿವನೇ ಜಂಗಮ, ಶಿವನೇ ಪ್ರಸಾದ, ಶಿವನೇ ಆಚಾರ.
ಇದನ್ನು ತಿಳಿದುಕೊಂಡವರು ನಿಜವಾದ ಗುರು.
*ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾ ಮಹಿಮ ಸಂಗನಬಸವಣ್ಣನು,
ಎನಗೆಯೂ ಗುರು, ನಿನಗೆಯೂ ಗುರು,
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ*
"ಪಂಚಬ್ರಹ್ಮ" ವೆಂದರೆ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಮತ್ತು ಈಶಾನ್ಯ ವೆಂಬ ಸದಾಶಿವನ ಸಾದಾಖ್ಯ ವ್ಯಕ್ತ್ರ ಸ್ವರೂಪಗಳು. ಗುರು, ಲಿಂಗ, ಜಂಗಮ, ಸದಾಚಾರ ಮತ್ತು ಪ್ರಸಾದ ಇವೇ ಶಿವನೇ ಐದು ವ್ಯಕ್ತ್ರ ಸ್ವರೂಪಗಳು ಎಂದು ಬಲ್ಲಿದವರು ನಿಜವಾದ ಗುರುಗಳು ವಿಶ್ವಗುರು ಬಸವಣ್ಣನವರು. ಇಂಥ ಪಂಚವಿಧಗಳೇ ಪಂಚಬ್ರಹ್ಮವೆಂದು ಅರಿದ
ಮಹಾ ಮಹಿಮ ಸಂಗನಬಸವಣ್ಣನು, ನನಗೂ ನಿಮಗೂ ಈ ವಿಶ್ವಕ್ಕೂ ಗುರು ಎಂದು ಅಲ್ಲಮ ಪ್ರಭುಗಳು ಬಸವಣ್ಣವರನ್ನು ಸ್ತುತಿಸಿದ್ದಾರೆ.
ಶಿವನೇ ಸರ್ವಸ್ವ. ಅವನು ಸರ್ವಶಕ್ತ. ಅವನಲ್ಲಿ ಅಡಗಿರುವ ಚಾಲನ ಸೃಷ್ಟಿಯ ಚೈತನ್ಯವೇ ಶಕ್ತಿ. ಶಿವನ ಚಿತ್ ಶಕ್ತಿ. ಜಗದ ಸೃಷ್ಟಿ ಸ್ಥಿತಿ ಲಯಗಳಿಗೆ ಹಾಗೂ ಎಲ್ಲ ಆಗುಹೋಗುಗಳಿಗೆ ಆಧಾರ. ಗುರು, ಲಿಂಗ, ಜಂಗಮ, ಸದಾಚಾರ ಮತ್ತು ಪ್ರಸಾದಗಳು ಲಿಂಗವಂತರಿಗೆ ಅಷ್ಟೇ ಪವಿತ್ರವೆಂದು ಗುರು ಬಸವಣ್ಣನವರು ತಿಳಿದು ಕೊಂಡಿದ್ದರು.
- ✍️Dr Prema Pangi
#ಪ್ರೇಮಾ_ಪಾಂಗಿ, #ಅಲ್ಲಮಪ್ರಭು,
#ಶಿವ_ಗುರುವೆಂದು_ಬಲ್ಲಾತನೆ_ಗುರು.
Comments
Post a Comment