ವಚನ ದಾಸೋಹ
#ವಚನ:
#ಅಂತರಂಗ ಬಹಿರಂಗ ಪರಮಾಕಾಶದ ಪರಬ್ರಹ್ಮಸ್ಥಾನ ಬ್ರಹ್ಮರಂಧ್ರದಲ್ಲಿ,
ಪರಬ್ರಹ್ಮ ಪರಮಾತ್ಮನು,
ನಿಷ್ಕಳ ನಿರವಯ ನಿರುಪಮ ಶ್ರೀಗುರುಮೂರ್ತಿ ಲಿಂಗಭರಿತವಾಗಿಪ್ಪನು,
`ಶಿವಂ ಪರಮಾಕಾಶಮಧ್ಯೇ ಧ್ರುವಂ ತತ್ವಾಧಿಕಂ' ಎಂದುದಾಗಿ,
ಇದುಕಾರಣ,
ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಮತವು, ಇದು ಶ್ರುತವು,
ಭ್ರೂಮಧ್ಯದಲ್ಲಿ ಅಂತರಾತ್ಮನು
ಸಕಲ ನಿಷ್ಕಲ ಪರಂಜ್ಯೋತಿರ್ಲಿಂಗಮೂರ್ತಿಭರಿತವಾಗಿಪ್ಪನು`ಪರಾತ್ಪರಂ ಪರಂಜ್ಯೋತಿಭ್ರ್ರೂಮಧ್ಯೇ ತು ವ್ಯವಸ್ಥಿತಂ' ಎಂದುದಾಗಿ
ಹೃದಯಕಮಲಮಧ್ಯದಲ್ಲಿ ಜೀವಾತ್ಮನು.
ಕೇವಲ ಸಕಲಜಂಗಮಮೂರ್ತಿ ಲಿಂಗಭರಿತವಾಗಿಪ್ಪನು,
`ಹೃದಯಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಎಂದುದಾಗಿ.
ಇಂತು ಪರಬ್ರಹ್ಮ, ಬ್ರಹ್ಮರಂಧ್ರ ಭ್ರೂಮಧ್ಯ ಹೃದಯಸ್ಥಾನದಲ್ಲಿ
ನಿಷ್ಕಲ, ಸಕಲನಿಷ್ಕಲ, ಸಕಲ
ಪರಮಾತ್ಮ ಅಂತರಾತ್ಮ ಜೀವಾತ್ಮನೆಂದೆನಿಸಿ
ಶ್ರುತ ದೃಷ್ಟ ಅನುಮಾನದಿಂ ಕಂಡು
ವಿನೋದ ಕಾರಣ ಮಾಯಾವಶವಾಗಿ, ಪಂಚಭೂತಂಗಳನ್ನು ಸೃಜಿಸಿ
ಸಕಲಪ್ರಪಂಚವನೂ ಬೆರಸಿ, ಮಾಯಾಧೀನವಾಗಿ ವಿನೋದಿಸಿ
ಆ ಮಾಯೆಯನೂ ಸಕಲಪ್ರಪಂಚವನೂ ತ್ಯಜಿಸಲಿಕೆ
ಬಹಿರಂಗದಲಿ ಶ್ರೀಗುರುರೂಪಾಗಿ ಬೋಧಿಸಿ
ಪರಮಾತ್ಮನು ಪರಬ್ರಹ್ಮವಾಗಿ ನಿಜಪದವನೈದಿ ಸುಖಿಯಾಗಿಪ್ಪನು.
ಇಂತಹ ಅರಿವೇ ಪರಬ್ರಹ್ಮ, ಮರವೆಯೇ ಮಾಯಾಸಂಬಂಧವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
- ಉರಿಲಿಂಗಪೆದ್ದಿ ಗುರು ಶರಣರು
*ಅರ್ಥ:*
ಪರಶಿವ ಪರಬ್ರಹ್ಮವು ಮೂರು ತೆರನಾಗಿ ಮೂರು ಚಕ್ರಗಳಲ್ಲಿ, ಪರಮಾತ್ಮ, ಅಂತರಾತ್ಮ, ಜೀವಾತ್ಮ ಎಂಬ ಮೂರು ಹೆಸರಿನಿಂದ ನೆಲೆಸಿರುವನೆಂದು ಉರಿಲಿಂಗಪೆದ್ದಿ ಗುರು ಶರಣರು ವಿವೇಚಿಸಿದ ವಚನ ಇದು.
____________________________________
*ಅಂತರಂಗ ಬಹಿರಂಗ ಪರಮಾಕಾಶದ ಪರಬ್ರಹ್ಮಸ್ಥಾನ ಬ್ರಹ್ಮರಂಧ್ರದಲ್ಲಿ,
ಪರಬ್ರಹ್ಮ ಪರಮಾತ್ಮನು,
ನಿಷ್ಕಳ ನಿರವಯ ನಿರುಪಮ ಶ್ರೀಗುರುಮೂರ್ತಿ ಲಿಂಗಭರಿತವಾಗಿಪ್ಪನು,
`ಶಿವಂ ಪರಮಾಕಾಶಮಧ್ಯೇ ಧ್ರುವಂ ತತ್ವಾಧಿಕಂ' ಎಂದುದಾಗಿ,
ಇದುಕಾರಣ,
ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಮತವು, ಇದು ಶ್ರುತವು,*
ಅರ್ಥ:
ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಶ್ರುತಿಗಳ ಪ್ರಕಾರ,
`ಶಿವಂ ಪರಮಾಕಾಶಮಧ್ಯೇ ಧ್ರುವಂ ತತ್ವಾಧಿಕಂ' ಅಂದರೆ
ಪರಮಾಕಾಶದ ಅಂದರೆ ಚಿದಾಕಾಶದ
ಬ್ರಹ್ಮರಂಧ್ರದಲ್ಲಿ ಪರಬ್ರಹ್ಮಪರಮಾತ್ಮನ ಸ್ಥಾನ. ಈ ಪರಬ್ರಹ್ಮನು ನಿಷ್ಕಳ ನಿರವಯ ನಿರುಪಮ ಶ್ರೀಗುರುಮೂರ್ತಿಲಿಂಗ.
____________________________________
*ಭ್ರೂಮಧ್ಯದಲ್ಲಿ ಅಂತರಾತ್ಮನು
ಸಕಲ ನಿಷ್ಕಲ ಪರಂಜ್ಯೋತಿರ್ಲಿಂಗಮೂರ್ತಿಭರಿತವಾಗಿಪ್ಪನು.
`ಪರಾತ್ಪರಂ ಪರಂಜ್ಯೋತಿಭ್ರ್ರೂಮಧ್ಯೇ ತು ವ್ಯವಸ್ಥಿತಂ' ಎಂದುದಾಗಿ*
ಅರ್ಥ:
ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಶ್ರುತಿಗಳ ಪ್ರಕಾರ,
`ಪರಾತ್ಪರಂ ಪರಂಜ್ಯೋತಿಭ್ರ್ರೂಮಧ್ಯೇ ತು ವ್ಯವಸ್ಥಿತಂ' ಅಂದರೆ
ಭ್ರೂಮಧ್ಯದಲ್ಲಿ ಅಂತರಾತ್ಮನ ಸ್ಥಾನ. ಈ ಅಂತರಾತ್ಮನು
ಸಕಲ ನಿಷ್ಕಲ ಪರಂಜ್ಯೋತಿರ್ಲಿಂಗಮೂರ್ತಿ.
____________________________________
*ಹೃದಯಕಮಲಮಧ್ಯದಲ್ಲಿ ಜೀವಾತ್ಮನು.
ಕೇವಲ ಸಕಲಜಂಗಮಮೂರ್ತಿ ಲಿಂಗಭರಿತವಾಗಿಪ್ಪನು,
`ಹೃದಯಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಎಂದುದಾಗಿ.*
ಅರ್ಥ:
ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಶ್ರುತಿಗಳ ಪ್ರಕಾರ,`ಹೃದಯಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಅಂದರೆ ಅಷ್ಟದಳ ದ ಹೃದಯಕಮಲಮಧ್ಯದಲ್ಲಿ ಜೀವಾತ್ಮನ ಸ್ಥಾನ.
ಈ ಜೀವಾತ್ಮನು ಸಕಲಜಂಗಮಮೂರ್ತಿ ಲಿಂಗ.
____________________________________
*ಇಂತು ಪರಬ್ರಹ್ಮ, ಬ್ರಹ್ಮರಂಧ್ರ ಭ್ರೂಮಧ್ಯ ಹೃದಯಸ್ಥಾನದಲ್ಲಿ
ನಿಷ್ಕಲ, ಸಕಲನಿಷ್ಕಲ, ಸಕಲ
ಪರಮಾತ್ಮ ಅಂತರಾತ್ಮ ಜೀವಾತ್ಮನೆಂದೆನಿಸಿ*
ಅರ್ಥ:
ಹೀಗೆ ಪರಬ್ರಹ್ಮನು ಬ್ರಹ್ಮರಂಧ್ರದಲ್ಲಿ ನಿಷ್ಕಲ ಪರಮಾತ್ಮನಾಗಿ ,
ಭ್ರೂಮಧ್ಯ ಹೃದಯಸ್ಥಾನದಲ್ಲಿ ಸಕಲನಿಷ್ಕಲ
ಅಂತರಾತ್ಮನಾಗಿ ,
ಹೃದಯಸ್ಥಾನದಲ್ಲಿ
ಸಕಲ ಜೀವಾತ್ಮನಾಗಿ ಹೀಗೆಶರಣನ ಕಾಯದಲ್ಲಿ ಮೂರುಸ್ಥಳದಲ್ಲಿ ಮೂರುವಿಧವಾಗಿ ನೆಲೆಸಿದ್ದಾನೆ.
____________________________________
*ಶ್ರುತ ದೃಷ್ಟ ಅನುಮಾನದಿಂ ಕಂಡು
ವಿನೋದ ಕಾರಣ ಮಾಯಾವಶವಾಗಿ, ಪಂಚಭೂತಂಗಳನ್ನು ಸೃಜಿಸಿ
ಸಕಲಪ್ರಪಂಚವನೂ ಬೆರಸಿ, ಮಾಯಾಧೀನವಾಗಿ ವಿನೋದಿಸಿ*
ಅರ್ಥ:
ಜೀವಾತ್ಮನು ಮಾಯಾವಶನಾಗಿ ಪಂಚ ಭೂತಗಳಿಂದ ಸೃಷ್ಟಿಯಾಗಿದ್ದಾನೆ. ಮಾಯಾಧಿನನಾಗಿ ಪಂಚಭೂತಗಳಿಂದ ಸೃಷ್ಟಿಯಾದ ಪ್ರಪಂಚದಲ್ಲಿ ಬೆರೆತು ವಿನೋದಿಸುತ್ತಿದ್ದಾನೆ ಎನ್ನುತ್ತಾರೆ
ಉರಿಲಿಂಗಪೆದ್ದಿ ಶರಣರು.
____________________________________
*ಆ ಮಾಯೆಯನೂ ಸಕಲಪ್ರಪಂಚವನೂ ತ್ಯಜಿಸಲಿಕೆ
ಬಹಿರಂಗದಲಿ ಶ್ರೀಗುರುರೂಪಾಗಿ ಬೋಧಿಸಿ
ಪರಮಾತ್ಮನು ಪರಬ್ರಹ್ಮವಾಗಿ ನಿಜಪದವನೈದಿ ಸುಖಿಯಾಗಿಪ್ಪನು.
ಇಂತಹ ಅರಿವೇ ಪರಬ್ರಹ್ಮ, ಮರವೆಯೇ ಮಾಯಾಸಂಬಂಧವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.*
ಅರ್ಥ:
ಪರಮಾತ್ಮನು ಬಹಿರಂಗದಲ್ಲಿ ಶ್ರೀಗುರುರೂಪವಾಗಿ ಬಂದು ಬೋಧಿಸಲು, ಆ ಮಾಯೆಯನ್ನು ಸಕಲಪ್ರಪಂಚವನ್ನು ತ್ಯಜಿಸಿ , ಸಾಕ್ಷಾತ್ ಪರಬ್ರಹ್ಮವೇ ಆಗಿ ನಿಜಪದವಿ ಯನ್ನು ಪಡೆದು ಸುಖಿಯಾಗುವನು. ಇಂತಹ ಅರಿವೇ ಪರಬ್ರಹ್ಮವಾಗುವುದು. ಇದರ ಮರೆವಿನಿಂದ ಮಾಯಾಸಂಬಂಧವಾಗುವುದು.
____________________________________
ಭಾವ:
ನಿಷ್ಕಲಲಿಂಗ ಪರಮಾತ್ಮ:
ಸ್ಥಾನ : ಪರಮಾಕಾಶದ ಅಂದರೆ ಚಿದಾಕಾಶದಲ್ಲಿರುವ ಸಹಸ್ರಾರ ಚಕ್ರದಲ್ಲಿ ಬ್ರಹ್ಮರಂಧ್ರ. ಬ್ರಹ್ಮರಂದ್ರವು ಬ್ರಹ್ಮನಾಡಿಯ ಅಗ್ರಸ್ಥಾನದಲ್ಲಿದೆ.
ಪರಬ್ರಹ್ಮಪರಮಾತ್ಮನು ಇಲ್ಲಿ ನಿಷ್ಕಳಲಿಂಗ ವಾಗಿ ನೆಲೆಸಿದ್ದಾನೆ.
ನಾಮ-ರೂಪ-ಕ್ರಿಯಾರಹಿತವಾಗಿ ಸರ್ವವನ್ನೂ ತನ್ನ ಗರ್ಭದಲ್ಲಿ ಧರಿಸಿಕೊಂಡಿರುವ ಮೂಲವಸ್ತುವೇ
ನಿಷ್ಕಲಲಿಂಗ. ಎಣ್ಣೆಗೆ ಎಳ್ಳು ಮೂಲ ಸ್ವರೂಪವಾದಂತೆ, ಚಿನ್ನಕ್ಕೆ ಶಿಲೆ ಮೂಲ ಸ್ವರೂಪವಾದಂತೆ, ಪಿಂಡ-ಬ್ರಹ್ಮಾಂಡಗಳಿಗೆ ನಿಷ್ಕಲಲಿಂಗವು ಮೂಲ ಸ್ವರೂಪವಾಗಿದೆ. ಸಚರಾಚರ ಪ್ರಪಂಚದ ಉತ್ಪತ್ತಿ-ಸ್ಥಿತಿ-ಲಯಕ್ಕೆ ಕಾರಣವಾದದ್ದೇ ನಿಷ್ಕಲ ಲಿಂಗ. ಯಾವುದರ ಆಧಾರದ ಮೇಲೆ ಈ ಸರ್ವನಾಮ ರೂಪಾತ್ಮಕ ಪ್ರಪಂಚ ತೋರಿದೆಯೋ ಆ ಆಶ್ರಯಸ್ಥಾನವೇ ನಿಷ್ಕಲ ಲಿಂಗ. ಆ ನಿಷ್ಕಲ ಲಿಂಗದಿಂದ ಅಭಿವ್ಯಕ್ತಗೊಂಡದ್ದು ಚೈತನ್ಯ.
ಅಂತರಾತ್ಮ (ಮಹಾಲಿಂಗ):
ಸ್ಥಾನ : ಭ್ರೂಮಧ್ಯದ ಆಜ್ಞಾಚಕ್ರ.
ವಿಶ್ವದ ಅಣುಅಣುವಿನಲ್ಲೂ ತುಂಬಿಕೊಂಡಿರುವ ವಿಶ್ವವ್ಯಾಪಕನಾದ ವಿಶ್ವಂಭರನಾದ, ವಿಶ್ವತೋಮುಖನಾದ, ವಿಶ್ವತೋಬಾಹುವಾದ ಆ ಚೈತನ್ಯಕ್ಕೆ, ಬ್ರಹ್ಮಾಂಡದ ಒಡೆಯನಿಗೆ “ಮಹಾಲಿಂಗ' ಎಂದು ಹೆಸರು.ಇದು ಸಕಲ ನಿಷ್ಕಲ ಲಿಂಗ.
ಜೀವಾತ್ಮ (ಚಿಲ್ಲಿಂಗ):
ಸ್ಥಾನ: ಅನಾಹತ ಚಕ್ರದ ಅಷ್ಟದಳ ಕಮಲ
ದೇಹದ ಗಾತ್ರದಲ್ಲಿ ದೇಹವನ್ನು ತುಂಬಿಕೊಂಡು ಚೈತನ್ಯವೇ ಜೀವ, ಈ ಜೀವನಿಗೆ ಚಿಲ್ಲಿಂಗವೆಂದು ಹೆಸರು. ಅಜ್ಞಾನರೂಪಿ ಉಪಾಧಿಯಿಂದಾಗಿ ಜೀವನು ಈ ದೇಹದಲ್ಲಿ ಬಂಧಿತನಾಗಿರುವನು. ಮೂಲಸ್ವರೂಪವನ್ನು ಉಪಾಧಿ ಮರೆಸಿದೆ. ಅನಾಹತ ಚಕ್ರದ ಹೃದಯ ಕಮಲವು ಹನ್ನೆರಡು ದಳಗಳುಳ್ಳದ್ದಾಗಿದೆ. ಈ ದಳಗಳಲ್ಲಿ ನಾಲ್ಕು ಮೇಲು ಮುಖವುಳ್ಳವುಗಳು, ಎಂಟು ಕೆಳಮುಖವುಳ್ಳವುಗಳೂ ಎಂದು ವರ್ಣಿತವಾಗಿರುತ್ತವೆ. ಪ್ರಾಕೃತ ಜೀವಿಯಾದ ಜೀವಾತ್ಮನು ಕೆಳಮುಖವಾದ ಎಂಟು ದಳಗಳಲ್ಲಿ ದಳದಿಂದ ದಳಕ್ಕೆ ಸಂಚರಿಸುತ್ತಿರುತ್ತಾನೆ. ಅಧೋಮುಖವಾದ ಅಷ್ಟದಳಗಳಲ್ಲಿ ಭ್ರಮಿಸುವ ಅವನಲ್ಲಿ ಅಧಃಪ್ರವೃತ್ತಿಗಾಗಿ ಜುಗುಪ್ಪೆಯುಂಟಾದಾಗ ಪರಿವರ್ತನೆಗೆ ಮೊದಲಾಗುವನು, ಅಂದರೆ ಹೃದಯಕಮಲ ಮೇಲು ಮುಖದ ನಾಲ್ಕು ದಳಗಳಲ್ಲಿ ಅವನು ವಿಹರಿಸಹತ್ತುವನು.
ಪರಮಾತ್ಮ(ನಿಷ್ಕಲ ಲಿಂಗ) , ಅಂತರಾತ್ಮ(ಸಕಲ ನಿಷ್ಕಲ) , ಜೀವಾತ್ಮ (ಚಿಲ್ಲಿಂಗ)(ಸಕಲ) ಇವು ಬೇರೆ ಬೇರೆ ಅಲ್ಲ. ಮೂಲಸ್ವರೂಪದಲ್ಲಿ ಒಂದೇ ಇವೆ.
ಬ್ರಹ್ಮಾಂಡ-ಪಿಂಡಾಂಡಗಳನ್ನು ಅನುಭವದಿಂದ ಅರಿದು ಅನುಭವಿಸಬೇಕು. ನಮ್ಮ ಮೂಲಸ್ವರೂಪವನ್ನು ತಿಳಿಯಬೇಕಾದರೆ, ಈಶ್ವರನ ಮಾಯೋಪಾಧಿಯನ್ನು, ಜೀವನ ಅವಿದ್ಯ ಉಪಾಧಿಯನ್ನು ಅಲ್ಲಗಳೆದು ನಿಜಸ್ವರೂಪದಲ್ಲಿ ನಿಂತಾಗ, ನಾವು ಆ ನಿಷ್ಕಲ ಲಿಂಗಕ್ಕಿಂತ (ಪರಬ್ರಹ್ಮ) ಬೇರೆ ಅಲ್ಲವೇ ಅಲ್ಲ ಎಂಬುದು ಅರಿವಾಗುತ್ತದೆ.
- ✍️Dr Prema Pangi
#ಪ್ರೇಮಾ_ಪಾಂಗಿ,#ಉರಿಲಿಂಗ_ಪೆದ್ದಿ ,
Comments
Post a Comment