ವಚನ ದಾಸೋಹ

#ವಚನ:
#ಓಂ ನಮಃ ಶಿವಾಯ' ಎಂಬ ದೇವನಿರಲು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ.
ಶರೀರ, ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ
ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ.
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸೆ-
ನೇಮದೊಳಗಿದು ಸಲ್ಲದು,
ಗುಹೇಶ್ವರಾ, ನಿಮ್ಮ ಶರಣರ ಸಂಬಂಧ
ತೋರದು ತೋರದು ಬಹುಮುಖಿಗಳಿಗೆ ! 
/ 539
- ವ್ಯೋಮಕಾಯ ಅಲ್ಲಮ ಪ್ರಭುಗಳು
ಅರ್ಥ: 
ಈ ವಚನದಲ್ಲಿ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುಗಳು "ಓಂ ನಮಃ ಶಿವಾಯ" ಈ ಮಂತ್ರವೇ ಶಿವ ಎಂದು ಹೇಳಿ, ಐಕ್ಯಸಾಧನೆಗೆ ಮಂತ್ರಯೋಗದ ಮಹತ್ವವನ್ನು ತಿಳಿಸುತ್ತಾರೆ. ಮತ್ತು ಈಶ್ವರ - ಶರಣರ ಸಂಬಂಧವಾದ ಲಿಂಗಾಂಗ ಸಾಮರಸ್ಯ ಬಹುಮುಖಿಗಳಿಗೆ ಅಂದರೆ ಬಹುದೇವೋಪಾಸನೆಯನ್ನು ಮಾಡುವವರಿಗೆ ತಿಳಿಯಲು ಆಗುವದಿಲ್ಲ ಎಂದು ತಿಳಿಸುತ್ತಾರೆ.

*ಓಂ ನಮಃ ಶಿವಾಯ' ಎಂಬ ದೇವನಿರಲು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ.
ಶರೀರ, ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ
ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ.*

ಓಂ ನಮಃ ಶಿವಾಯ' ಎಂಬ ಮಂತ್ರವೇ ಶಿವ.
ಓಂ ನಮಃ ಶಿವಾಯ' ಎನ್ನುವುದರಿಂದ ಪಿಂಡ - ಬ್ರಹ್ಮಾಂಡಗಳಲ್ಲಿ, ಆತ್ಮ-ಪರಮಾತ್ಮರಲ್ಲಿ ಐಕ್ಯ ಅಥವಾ ಸಾಮರಸ್ಯ ಸೂಚಿಸಲ್ಪಡುವದು. ಈ ಷಡಕ್ಷರ ಮಂತ್ರದಲ್ಲಿ ಪಿಂಡ ಬ್ರಹ್ಮಾಂಡ ಯೊರೈಕಂ, ಆತ್ಮ ಪರಮರ ಸಾಮರಸ್ಯ ನಿರ್ದೇಶಿತವಾಗಿದೆ. ಮಾಯದ ಬಲೆಯಲ್ಲಿ ಸಿಲುಕಿದ ಭಕ್ತರು ಆ ಮಹಾಘನವನ್ನು ಅರಿಯದೆ ಹೋಗಿದ್ದಿರಿ ಎನ್ನುವರು ಅಲ್ಲಮ ಪ್ರಭುಗಳು.

*ಹುಸಿಯನೆ ಕೊಯ್ದು ಹುಸಿಯನೆ ಪೂಜಿಸೆ-
ನೇಮದೊಳಗಿದು ಸಲ್ಲದು,
ಗುಹೇಶ್ವರಾ, ನಿಮ್ಮ ಶರಣರ ಸಂಬಂಧ
ತೋರದು ತೋರದು ಬಹುಮುಖಿಗಳಿಗೆ ! *

ಹುಸಿಯನ್ನೇ ಕೊಯ್ದು ಹುಸಿಯನ್ನೇ ಪೂಜಿಸಿದರೆ ಅದು ನೇಮ, ಆಚರಣೆ ಯಾಗುವದಿಲ್ಲ. ಬಹುದೇವೋಪಾಸನೆಯ ತತ್ವವೂ ಹುಸಿ. ಪೂಜೆಯೂ ಹುಸಿ. ದೇವರಿಗೆ ಅವರ ಭಕ್ತಿ ಮುಟ್ಟುವುದಿಲ್ಲ. ವಿಶ್ವವು  ಬೇರೆ ಬೇರೆ ದೇವರಿಂದ ಆಗಿಲ್ಲ. ಅದರಂತೆ ಬೇರೆ ಬೇರೆ ಜನರಿಗೇ  ಬೇರೆ ಬೇರೆ ದೇವರು ಇರಲು ಸಾಧ್ಯವಿಲ್ಲ. ವಿಶ್ವ ಇರುವದು ಒಂದೇ.
ಅದರಂತೆಯೇ ವಿಶ್ವಾತ್ಮನೂ ಒಂದೇ.
ಶರಣರ ಮತ್ತು ಲಿಂಗನ ಆತ್ಮೀಯ ಸಂಬಂಧವು ಬಹುದೇವೋಪಾಸನೆಯನ್ನು ಮಾಡುವ ಬಹುಮುಖಿಗಳಿಗೆ ತೋರುವದಿಲ್ಲ ಎನ್ನುತ್ತಾರೆ ಅಲ್ಲಮ ಪ್ರಭುಗಳು.
 ಭಾವ:
ನಾದ, ಮಂತ್ರ:
#ಪ್ರಥಮದಲ್ಲಿ ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಮಹಾಘನ ಶೂನ್ಯಬ್ರಹ್ಮವು.
ಆ ಶೂನ್ಯಬ್ರಹ್ಮದಿಂದ ಶುದ್ಧ ಪ್ರಣವ ಆ ಶುದ್ಧ ಪ್ರಣವದಿಂದ ಚಿತ್ತು ಭಾವದಕ್ಷರ, ಆ ಚಿತ್ತು ಭಾವದಕ್ಷರದಿಂದ ಪರಶಕ್ತಿ. ಆ ಪರಾಶಕ್ತಿಯಿಂದ ಅಕ್ಷರತ್ರಯಂಗಳು,
ಆ ಅಕ್ಷರತ್ರಯಂಗಳಿಂದ ಓಂಕಾರ. 
ಎಂದು ವಿಶ್ವ ರಚನೆಯಲ್ಲಿ  ನಾದ ಮತ್ತು ಮಂತ್ರದ ಮಹತ್ವ ವಿವರಿಸಿದ್ದಾರೆ ಶರಣರು.

#ನಾ ಎಂಬುದೇ ನಂದಿಯಾಗಿ, ಮಾಂ ಎಂಬುದೇ ಮಹತ್ತಾಗಿ, ಶೀಂ ಎಂಬುದೇ ರುದ್ರನಾಗಿ, ವಾಂ ಎಂಬುದೇ ಹಂಸಿ  ಯಾಗಿ, ಯಾಂ ಎಂಬುದೇ ಅರಿವಾಗಿ ಓಂ ಕಾರವೇ ಗುರುವಾಗಿ, ಸಂಬಂಧವೇ ಅಸಂಬಂಧವಾಗಿ, ಎರಡೂ ಒಂದೆಯಾಗಿ ಗುಹೇಶ್ವರನಲ್ಲಿ ಸಂಬಂಧಿ. 
- ಎಂದು ಪ್ರಭುದೇವರು ತಿಳಿಸಿರುವ ಮಾತುಗಳಲ್ಲಿ ಮಂತ್ರ ಮಹಿಮೆ ಸೂಚ್ಯವಾಗಿ ವ್ಯಕ್ತವಾಗುತ್ತದೆ. ಶರಣರಲ್ಲಿ ಗುರುವು ಕೈಯಲ್ಲಿ ಲಿಂಗವ ಕೊಟ್ಟ ಕಿವಿಯಲ್ಲಿ ಮಂತ್ರವನ್ನು ಹೇಳುವಾಗ, ಮಂತ್ರವೇ ಲಿಂಗ, ಲಿಂಗವೇ ಮಂತ್ರ ಎಂಬ ಸಕೀಲವನ್ನು ಅರುಹುವೆನು. ಇದರಿಂದ ಲಿಂಗವೆಂದರೆ ಷಡಕ್ಷರಿ ಮಂತ್ರ. ಪಿಂಡ-ಬ್ರಹ್ಮಾಂಡಗಳ, ಹೊಂದಾಣಿಕೆಯನ್ನು ಕಾಣಿಸಿಕೊಡುವ ತಂತ್ರ ಎಂಬುದು ಸ್ಪಷ್ಟವಾಗಿದೆ. ಸರ್ಪಭೂಷಣ ಶಿವಯೋಗಿಗಳು ಈ ಮಂತ್ರ ಮಹಿಮೆಯನ್ನು ತಿಳಿಸುವ ಮಂತ್ರಯೋಗವನ್ನು ಕುರಿತು, #ಗುರುಬೋಧೆಯಿಂದತಿಶಯವಾದುದೊಂದುಂಟೆ ?
ಪರತತ್ವವನು ಬೋಧಿಸುವುದಾಗಿ || ಪಲ್ಲವಿ | 
ಮಂತ್ರಾದಿ ದೇವತೆಯಹ ಮೂರ್ತಿಯೊಳು ಬಾಹ್ಯ ಭಾಂತಿಯಳಿದು ಮನವರಗಿಸಿ | ಅಂತರಂಗದೊಳು ಭಜಿಸೆ ಮುಕ್ತಿಯಹುದೆಂದು ಮಂತ್ರಯೋಗವ ಸೂಚಿಸಿದರಿಂದೆ || 
ಎಂದು ಹೇಳುವರು. 
ಇದರಿಂದ `ಬಾಹ್ಯಮೂರ್ತಿಯೊಂದನ್ನು ಕುರಿತು ಭ್ರಾಂತಿಗೀಡಾಗಿ ಮಂತ್ರಜಾಪಿಯಾಗದೆ ತನ್ನ ಅಂತರಂಗದಲ್ಲಿ ಗುರುದತ್ತವಾದ ಮಂತ್ರವನ್ನು ಜಪಿಸಿ ಮುಕ್ತನಾಗಬೇಕು ಎನ್ನುವರು.
#ಏಕದೇವೋಪಾಸನೆ:
ವೀರಶೈವ ಲಿಂಗಾಯತ ಧರ್ಮ ಏಕದೇವೋಪಾಸನೆಯನ್ನು ಬಲವಾಗಿ ಪ್ರತಿ ಪಾದಿಸುತ್ತದೆ. ಏಕದೇವೋಪಾಸನೆ ಅಂದರೆ ಒಂದೇ (ಏಕ) ದೇವರು ಇದ್ದಾನೆ ಎಂಬ ನಂಬಿಕೆ. ಏಕೋದೇವನು ಸರ್ವೋಚ್ಚ ಮತ್ತು ಸರ್ವಶಕ್ತ ದೇವ.  ಸಕಲ ಚರಾಚರ ಎಲ್ಲಾ ಜೀವಿಗಳ, ಪೂರ್ಣ ಬ್ರಹ್ಮಾಂಡದ ಸೃಷ್ಟಿಕರ್ತ, ಪಾಲಕ, ಲಯಕರ್ತ ಎಲ್ಲಾ ಒಬ್ಬನೇ (ಏಕತ್ವ). ಬ್ರಹ್ಮ ಸೃಷ್ಟಿಕರ್ತ, ವಿಷ್ಣು ಪಾಲಕ, ಮಹೇಶ್ವರ ಲಯಕರ್ತ ಎಂಬ ಸನಾತನಸಿದ್ಧಾಂತವನ್ನು ಶರಣರು ಒಪ್ಪುವುದಿಲ್ಲ. ಶಿವನು ಅಗಮ್ಯ, ಅಗೋಚರ, ಅಪ್ರತಿಮ, ನಿರಾಕಾರ ಮತ್ತು ಅಪ್ರಮಾಣ ಎಂದು ಬಸವಣ್ಣನವರು ತಿಳಿಸಿದ್ದಾರೆ. ಆತನ ಉದ್ದಗಲಗಳನ್ನು ಅಳೆಯಲಿಕ್ಕಾಗದು ಯಾಕೆಂದರೆ ಅವನು ವಿಶ್ವವ್ಯಾಪಿ. 

#ಜಗದಗಲ ಮುಗಿಲಗಲ ಮಿಗೆಯಗಲ  ನಿಮ್ಮಗಲ 
ಪಾತಾಳದಿಂದತ್ತತ್ತ  ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ 
ಕೂಡಲ ಸಂಗಮದೇವಯ್ಯ
ಎನ್ನ ಕರ ಸ್ಥಳಕ್ಕೆ ಬಂದು ಚುಳುಕಾದಿರಯ್ಯ
                                  
ಎಂದು ಬಸವಣ್ಣನವರು "ಶಿವನು ಇಡೀ ವಿಶ್ವವನ್ನೇ ಆವರಿಸಿದ್ದಾನೆ. ಅವನಿಗೆ ಆದಿ ಅಂತ್ಯವಿಲ್ಲ. ಆತ  ವಿಶ್ವರೂಪಿ. ಇಡೀ ಭೂ ಮಂಡಲವನ್ನೇ ಆವರಿಸಿದ್ದಾನೆ. ಶಿವನ ಪಾದಗಳು ಪಾತಾಳದಿಂದ ಆಚೆಗೆ ಇವೆ. ಆತನ ಶಿರಸ್ಸು, ಮುಕುಟ ಬ್ರಹ್ಮಾಂಡದ ಆಚೆಗೆ ಇದೆ. ಇಂಥ ನಿರಾಕಾರ ಶಿವನನ್ನು ಶರಣ ಶರಣೆಯರು ಆರಾಧಿಸಿದರು. ತಮ್ಮ ಅಂತಃಸಾಕ್ಷಿಯಲ್ಲೇ ದೇವರನ್ನು ಕಂಡರು. ಶರಣರು ಏಕದೇವೋಪಾಸನೆಯನ್ನು ಪ್ರಬಲವಾಗಿ ಸಮರ್ಥಿಸಿದ್ದಾರೆ.ಬಹುದೇವೋಪಾಸನೆಯನ್ನು  ಧರ್ಮದ್ರೋಹಿ ಆಚರಣೆ ಎಂದು ಪರಿಗಣಿಸುತ್ತಾರೆ. 
ಶಿವನೆಂದರೆ ಪರಬ್ರಹ್ಮ.  ತ್ರಿಮೂರ್ತಿಗಳಲ್ಲಿ ಒಬ್ಬನಲ್ಲ. ಅದು ಪರವಸ್ತು "ಒಡಲಿಲ್ಲದ ಬಯಲು". ಪರವಸ್ತುವೆಂದರೆ ಸ್ವತಂತ್ರ , ಸ್ವಯಂಪ್ರಕಾಶ, ನಿತ್ಯ ನಿರಂಜನ, ನಿರಾಕಾರ ನಿಶ್ಚಲ, ಸತ್ ಚಿತ್ ಆನಂದ. ಅದಕ್ಕೆ ನಾಮ ರೂಪ ಕ್ರಿಯಾದಿಗಳಿಲ್ಲ. ಇದು ಉಪನಿಷತ್ತಿನ ಪರಬ್ರಹ್ಮದ ಮತ್ತು ಅದಕ್ಕೂ ಮುಂಚಿನ ಆದಿಶಿವನ ವರ್ಣನೆಯಂತಿದೆ. ಪುರಾಣಗಳನ್ನು ಪುಂಡರ ಗೋಷ್ಠಿ ಎಂದು  ಕರೆದು ಪುರಾಣಗಳ ಕಾಲ್ಪನಿಕ  ಪುರಾಣಕಥೆಗಳನ್ನು  ತಿರಸ್ಕರಿಸುತ್ತಾರೆ. ಅರ್ಚನೆಗೆ ವಿಹಿತವಾದುದು ಲಿಂಗರೂಪ ಮಾತ್ರ. ಬೇರೆ ಮೂರ್ತಿಪೂಜೆ ನಿಷಿದ್ಧ. ಲಿಂಗವೆಂದರೆ ಶಿವನೂ ಹೌದು, ಪ್ರತೀಕವೂ ಹೌದು. ಅಂಗವೆಂದರೆ ಕಾಯ ಮತ್ತು ಆತ್ಮ. ಮನಸ್ಸು ಶೂನ್ಯವಾದಾಗ ಲಿಂಗ, ಅಂಗ ಸಂಯೋಗ. ಅದೇ ಮೋಕ್ಷ. ಲಿಂಗಾಂಗ ಅನುಸಂಧಾನಕ್ಕಾಗಿ ಇಷ್ಟಲಿಂಗ ಕೊಟ್ಟರು. 'ದೇವನೊಬ್ಬ ನಾಮ ಹಲವು' ಎಂದು ಸಾರಿದರು. " ಒಬ್ಬನೇ ದೇವರು, ಒಂದೇ ಜಗತ್ತು ಮತ್ತು ಒಂದೇ ಮಾನವ ಕುಲ ಎಲ್ಲರೂ ನಮ್ಮವರು " ಎಂಬ ವಿಶ್ವ ಧರ್ಮದ  ಅರಿವು ಕಲ್ಪನೆ ಮೂಡಿಸಿದರು.
ಧರ್ಮ ಗುರು ಬಸವಣ್ಣನವರು ಇಬ್ಬರು ಮೂವರು ದೇವರು ಇಲ್ಲ. ಒಬ್ಬನೇ ದೇವರು.  ವೇದಗಳು ಸಹ ಇದನ್ನು ಒಪ್ಪಿವೆ ಎನ್ನುತ್ತಾರೆ.

#ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತಾನಾಡಬೇಡ 
ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದೇ ಇಲ್ಲವೆಂದಿತ್ತು ವೇದ. 
ಎನ್ನುತ್ತಾರೆ ಗುರು ಬಸವಣ್ಣನವರು.

ಬಸವಾದಿ ಶರಣರು ದೃಢನಂಬಿಕೆಯಿಂದ ಅಚಲ ನಿಷ್ಠೆಯಿಂದ ನಿರಾಕಾರ ನಿರ್ಗುಣ ನಿರಾಳ ನಿರ್ಮಾಯ ಶಿವನನ್ನು  ಇಷ್ಟಲಿಂಗ ವೆಂಬ ಸಾಕಾರ ರೂಪದಲ್ಲಿ ಆರಾಧಿಸಿದರು. ಅದುವೇ ಶರಣರ ಏಕದೇವೋಪಾಸನೆಯು. ಪಂಚಾಚಾರದಲ್ಲಿಯ  ಲಿಂಗಾಚಾರವೆಂದರೆ ಏಕದೇವೋಪಾಸನೆಯನ್ನು ಕಡ್ಡಾಯವಾಗಿ ಆಚರಿಸುವ ಲಿಂಗನಿಷ್ಠೆ.

ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯರಾದ ವಿರಕ್ತಗುರು ಸ್ವತಂತ್ರಸಿದ್ಧಲಿಂಗೇಶ್ವರರು ಶಿವನೊಬ್ಬನೇ ದೇವ ಎಂದಿದ್ದಾರೆ.

#ಇಬ್ಬರು ಮೂವರು ದೇವರೆಂದು ತಬ್ಬಿಬ್ಬುಗೊಂಡು ನುಡಿಯಬೇಡ.
ಒಬ್ಬನೇ ದೇವ ಕಾಣಿರಣ್ಣ.
"ಸರ್ವಸ್ಮಾದಧಿಕೋರುದ್ರಃ ಪರಮಾತ್ಮಾ ಸದಾಶಿವಃ
ಇತಿ ಯತ್ಮ ನಿಶ್ಚಿತಾ ಧೀಃ ಸ ವೈ ಮಾಹೇಶ್ವರಃ ಸ್ಮೃತಃ"ಎಂದವಾಗಮಂಗಳು.
`ಶಿವನೇಕೋ ದೇವ'ನೆಂದು ಸಾರುತ್ತಿವೆ ಶ್ರುತಿ ಪುರಾಣಂಗಳು. ಇದು ಕಾರಣ,
ಶಿವನಲ್ಲದೆ ದೈವವಿಲ್ಲೆಂದರಿದ ಮಾಹೇಶ್ವರನ ಹೃದಯ ನಿವಾಸವಾಗಿಪ್ಪ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
 ಲಿಂಗವಂತರಿಗೆ ಶಿವನೊಬ್ಬನೇ ದೇವ. ಎರಡು ಮೂರು ಎಂದು ಮೂರ್ಖನಂತೆ ಮಾತಾಡಬೇಡ. `ಶಿವ ಏಕೋ ದೇವ' ನೆಂದು  ಶ್ರುತಿ ಪುರಾಣಗಳು ಸಾರುತ್ತವೆ. ಈ ಕಾರಣ,
ಶಿವನಲ್ಲದೆ ಬೇರೆ ದೈವ ಇಲ್ಲ ಎಂದು ಅರಿತ  ಮಾಹೇಶ್ವರನ ಹೃದಯದಲ್ಲಿ ಶಿವನು
ನಿವಾಸವಾಗಿದ್ದಾನೆ ಎನ್ನುತ್ತಾರೆ ಸ್ವತಂತ್ರಸಿದ್ಧಲಿಂಗೇಶ್ವರರು.
- ✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು
#ಓಂ ನಮಃ ಶಿವಾಯ' ಎಂಬ ದೇವನಿರಲು
Picture post designed and created by me. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma