ವಚನ ದಾಸೋಹ

#ವಚನ:
#ಬಯಲ ರೂಪ ಮಾಡಬಲ್ಲಾತನೆ ಶರಣನು,
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ / 909
- ಗುರು ಬಸವಣ್ಣನವರು
ಅರ್ಥ:
ಇದು ಐಕ್ಯ ಸ್ಥಲದ (ಐಕ್ಯಜ್ಞಾನಿ) ವಚನ. ಗುರು ಬಸವಣ್ಣನವರು ಬಯಲು ಸಾಕ್ಷಾತ್ಕಾರಗೊಳಿಸಿಕೊಂಡ ನಂತರ ತಿಳಿಸಿದ ವಚನ. ಅತ್ಯಂತ ಸರಳವಾಗಿ ಲಿಂಗಾನುಭವಿ ಅಂದರೆ ಯಾರು? ಶಿವಯೋಗಿ ಗಳೆಂದರೆ ಯಾರು ಎಂಬುದನ್ನು ಅರುಹಿದ್ದಾರೆ.

*ಬಯಲ ರೂಪ ಮಾಡಬಲ್ಲಾತನೆ ಶರಣನು,
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.*

ನಿರಾಕಾರವಾದ ಬಯಲನ್ನು ಇಷ್ಟಲಿಂಗರೂಪದಲ್ಲಿ ಕಾಣಬಲ್ಲವನು, ಆ ನಿರಾಕಾರ, ನಿರ್ಗುಣ, ನಿರ್ವಯ ಸೃಷ್ಟಿ ರಚನೆಯ ಮುನ್ನಿನ ಅನಾದಿ ಶಿವನನ್ನು "ಇಷ್ಟಲಿಂಗ"ವಾಗಿ ಕಂಡು ಕರಸ್ಥಲದಲ್ಲಿ ನಿರ್ನಿಮೇಷವಾಗಿ ಪೂಜಿಸುವವನು ಮತ್ತು ಲಿಂಗಾಂಗ ಯೋಗದಿಂದ  ಶಿವಯೋಗ ಸಾಧನೆ ಮಾಡುವವನು ಶರಣನು. 

 ಶರಣನು ಶಿವಯೋಗಸಾಧನೆಯಿಂದ  ಇಷ್ಟಲಿಂಗರೂಪವಾದ ಶಿವನನ್ನು ಅನಾಹತ ಚಕ್ರದಲ್ಲಿ "ಪ್ರಾಣಲಿಂಗ" ವಾಗಿ, ಆಜ್ಞಾಚಕ್ರ ದಲ್ಲಿ "ಭಾವಲಿಂಗ"ವಾಗಿ, ಪಶ್ಚಿಮ ಚಕ್ರದಲ್ಲಿ  "ಬಯಲು" ಆಗಿ ಕಂಡು ಲಿಂಗಾನುಭವಿ ಯಾಗುತ್ತಾನೆ. ಇಷ್ಟಲಿಂಗದಲ್ಲಿ "ಆಯತ" ಪ್ರಕ್ರಿಯೆಯಾದರೆ, ಪ್ರಾಣಲಿಂಗದಲ್ಲಿ "ಸ್ವಾಯತ" ಪ್ರಕ್ರಿಯೆ , ಭಾವಲಿಂಗದಲ್ಲಿ "ಸನ್ನಿಹಿತ" ಪ್ರಕ್ರಿಯೆ ಯಾಗುವುದು. ನಂತರ ಸಾಧನೆ ಮುಂದುವರೆದಾಗ ಪಶ್ಚಿಮಚಕ್ರದಲ್ಲಿ ಅನಾದಿ ಶಿವನ ನಿರಾವಲಂಬ ಬಯಲು ಸ್ವರೂಪ ದರ್ಶನ ವಾಗುವುದು.

*ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ*

 ಬಯಲನ್ನು ರೂಪವಾಗಿಸಿ ಇಷ್ಟಲಿಂಗ
ರೂಪದಲ್ಲಿ  ನೋಡಲು ಅರಿಯದಿದ್ದಡೆ  ಅವನು ಶರಣನಲ್ಲ.
 ರೂಪವಾದ  ಇಷ್ಟಲಿಂಗವನ್ನು  ಬಯಲು ಮಾಡಲು ಅರಿಯದಿದ್ದಡೆ ಅವನು  ಲಿಂಗಾನುಭಾವಿ, ಶಿವಯೋಗಿ ಅಲ್ಲ.

*ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ*

ಈ ಉಭಯ ಅಂದರೆ ರೂಪು ಮತ್ತು ಬಯಲು ನಿರೂಪ - ಇವು ಒಂದರಲ್ಲಿ ಒಂದು ಅಡಗಬೇಕು. ಅದು ಲಿಂಗ-ಅಂಗ ಒಂದಾಗಿ ನಿಂತ ಸ್ಥಿತಿ, ಲಿಂಗಾಂಗ ಸಾಮರಸ್ಯ ವೆಂದರೆ ಎರಡನ್ನೂ ಮೀರಿದ ನಿಲವು,
ಭಾವ:
ಸಾಕಾರ ನಿರಾಕಾರ : ಶರಣ ಸಿದ್ದಾಂತದಲ್ಲಿ ಪರವಸ್ತುವಿನ ಈ ಅವ್ಯಕ್ತ ರೂಪಕ್ಕೆ ಶಿವನೆಂದೂ, ವ್ಯಕ್ತ ಸ್ವರೂಪಕ್ಕೆ ಲಿಂಗವೆಂದೂ ಮತ್ತು ಈ ವ್ಯಕಾವ್ಯಕ್ತ ಸ್ವರೂಪಕ್ಕೆ ಶಿವಲಿಂಗವೆಂದೂ ಕರೆಯಲಾಗಿದೆ. ಇದರಿಂದ ಪರವಸ್ತುವು ಖಂಡಿತ ಮತ್ತು ಅಖಂಡಿತ ಈ ಎರಡೂ ರೂಪಗಳಲ್ಲಿ ಗೋಚರ ವಾಗುವದೆಂದು ವಿದಿತವಾಗುತ್ತದೆ. ಹಣ್ಣಿನ ರಸ ಮತ್ತು ರಸದ ಮಾಧುರ್ಯ ಇವನ್ನು ವಿಂಗಡಿಸಲಿಕ್ಕೆ ಬಾರದಂತೆ ಈ ರೂಪಗಳನ್ನು ಸಹ ವಿಂಗಡಿಸಲು ಬರುವದಿಲ್ಲ. ಅನಾದ್ಯನಂತವಾದ ಪರವಸ್ತುವಿನ ಅಥವಾ ಶಿವನ ಅವಿಷ್ಕಾರಕ್ಕೆ, ಲಿಂಗವು ಒಂದು ವಾಹಕವಾಗಿದೆ.  ನಾಮ-ರೂಪ, ಗತಿ-ಚೈತನ್ಯ ಇತ್ಯಾದಿ ಪರಶಿವನ ಖಂಡಿತ ಸ್ವರೂಪವನ್ನು ವ್ಯಕ್ತಗೊಳಿಸಲು ಆ ಲಿಂಗವು ಒಂದು ಸಹಾಯಕ ಅಥವಾ ಕುರುಹು ಎನ್ನಬಹುದು. ಇದರಿಂದ ಇಷ್ಟಲಿಂಗವು ಪರವಸ್ತುವಿನ ಸುಗುಣ ನಿಲುವನ್ನೂ , ಶಿವನು ಅದರ ನಿರ್ಗುಣ ನಿಲವನ್ನೂ ಪ್ರತಿನಿಧಿಸುತ್ತದೆ ಎನ್ನಬಹುದು. 
ನಿರಾವಲಂಬ ಬಯಲು ರೂಪವನ್ನೇ  ಲಿಂಗವೆಂದು ತಿಳಿದು, ಸತ್ಕ್ರಿಯೆ ಗಳನ್ನು ಮಾಡುತ್ತ, ಅಂಗ ಲಿಂಗ ಅನುಸಂಧಾನದಿಂದ ಸಾಧಕ- ಶರಣನು ಅಂತಃಪೂಜೆಗೆ ಅಥವಾ ಪ್ರಾಣಲಿಂಗದ ಪೂಜೆಗೆ ಅರ್ಹತೆಯನ್ನು ಪಡೆಯುತ್ತಾನೆ. ಅಂತಃಪೂಜೆ ಮಾಡಿ ಪ್ರಾಣಲಿಂಗ ಪೂಜೆಯಲ್ಲಿ ತೊಡಗಿ ಜಂಗಮ ಲಿಂಗ, ಮಹಾಲಿಂಗ, ನಂತರ ನಿರಾಕಾರ ನಿರ್ಗುಣ ನಿಷ್ಕಳ ಲಿಂಗ, ನಿಶೂನ್ಯಲಿಂಗ ನಂತರ ಪಶ್ಚಿಮಚಕ್ರ ದಲ್ಲಿ ಬಯಲುರೂಪ ವಾಗಿ ನಿರಂಜನಲಿಂಗ ಪೂಜಿಸಲು ಬಯಲು ಸಾಕ್ಷಾತ್ಕಾರವಾಗುತ್ತದೆ. ಅನುಭಾವಿಯು ಪರವಸ್ತುವಿನ ಎಲ್ಲ ಆಕಾರ- ನಿರಾಕಾರ ಗಳನ್ನು ತನ್ನಲ್ಲಿ ಕಂಡು ಅವನ್ನು ಅಳವಡಿಸಿಕೊಳ್ಳುವನು. ಅವನು ಒಂದನ್ನು ಕಾಣುವಲ್ಲಿ ಇನ್ನೊಂದನ್ನು ಕಡೆಗಣಿಸನು. ಅವನ ಅಂತಃಪೂಜೆಯ ಸಾಧನೆಯು
ಕಠಿಣವಾದುದೇನೋ ನಿಜ. ಅಸಾಧ್ಯವಲ್ಲ. ಆದ್ದರಿಂದಲೇ ಶರಣರು ಈ ಪ್ರಾಣಲಿಂಗದ ಪೂಜೆಗಿಂತ ಮೊದಲು ಇಷ್ಟಲಿಂಗ ಪೂಜೆಯ ಅವಶ್ಯಕತೆಯನ್ನು ತಿಳಿಸಿಕೊಟ್ಟಿರುವರು. ಸರ್ಪಭೂಷಣ ಶಿವಯೋಗಿಗಳ ಪ್ರಾಣಲಿಂಗ ಪೂಜೆಯನ್ನು ತಿಳಿಸುವ "ಲಿಂಗಪೂಜೆಯ ಮಾಡಿರೋ ನಿಮ್ಮೊಳು ಪ್ರಾಣಲಿಂಗ ಪೂಜೆಯ ಮಾಡಿರೊ" ಎಂಬ ಪದ್ಯವು ಅಷ್ಟೇ ಮನೋಹರವೂ ಮಾರ್ಮಿಕವಾಗಿ ಆಗಿದೆ.
ಸಾಧಕನು, ಇಷ್ಟಲಿಂಗ ಪ್ರಾಣಲಿಂಗಗಳಲ್ಲಿ ಲೀನನಾದ ಲಿಂಗಾನುಭಾವಿ, ತನ್ನ ಭಾವದಲ್ಲಿ ಭಗವಂತನನ್ನು ಅಭಿವ್ಯಕ್ತಗೊಳಿಸುವುದು ಮತ್ತು ಆ ಭಾವವನ್ನೇ ಬಯಲು ಮಾಡುವುದು. ಇವು ಎರಡೂ ಶರಣನ ಸಾಧನೆಯ ಸ್ಪಂದನಗಳು. ಭಾವವೇ ನನ್ನ ರೂಪು, ಆ ಭಾವದಲ್ಲಿ ಆತನನ್ನು ಗ್ರಹಿಸುವುದು ಒಂದು ಹಂತ ; ಆ ಭಾವವನ್ನೂ ಮೀರಿದರೆ ಮುಂದಿನ  ಬಯಲು ಹಂತ. ಈ ಉಭಯ ಅಂದರೆ ರೂಪು ಮತ್ತು ಬಯಲು-ಇವು ಒಂದರಲ್ಲಿ ಒಂದು ಅಡಗಬೇಕು. ಅದು ಲಿಂಗ-ಅಂಗ ಒಂದಾಗಿ ನಿಂತ ಸ್ಥಿತಿ, ಎರಡನ್ನೂ ಮೀರಿದ ನಿಲವು, ಅವುಗಳಲ್ಲಿ ಭಿನ್ನ ಭಾವನೆ ಇಲ್ಲ. ಯಾವುದೇ ತೆರಹಿಲ್ಲ, ಇಲ್ಲಿ ಒಳಹೊರಗು ಒಂದಾಗಿ ಶಿವನಲ್ಲಿ ಅವಿರಳ ಸಂಬಂಧವನ್ನು ಪಡೆದ ಶರಣ ಲಿಂಗಾನುಭವಿ, ಶಿವಯೋಗಿ ಆಗುತ್ತಾನೆ ಎನ್ನುತ್ತಾರೆ ಗುರು ಬಸವಣ್ಣನವರು.
-✍️ Dr Prema Pangi
#ಪ್ರೇಮಾ_ಪಾಂಗಿ, #ಗುರು_ಬಸವಣ್ಣನವರು
#ಬಯಲ_ರೂಪ_ಮಾಡಬಲ್ಲಾತನೆ_ಶರಣನು
Picture post created by me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma