ವಚನ ದಾಸೋಹ
#ವಚನ:
#ಮತ್ರ್ಯಲೋಕದ ಮಾನವರು;
ದೇಗುಲದೊಳಗೊಂದು ದೇವರ ಮಾಡಿದಡೆ,
ಆನು ಬೆರಗಾದೆನು.
ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ,
ಭೋಗವ ಮಾಡುವರ ಕಂಡು ನಾನು ಬೆರಗಾದೆನು.
ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು. / 1275
- ಅಲ್ಲಮ ಪ್ರಭುಗಳು
ಅರ್ಥ:
ಗುರು ಬಸವಣ್ಣನವರ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿ, ಕೊಂಡಾಡಿ, ಲೋಕೋದ್ಧಾರಕ್ಕಾಗಿ, ಬಯಲು ಸಹಜಸ್ಥಲದಿಂದ ಕೆಳಗಿಳಿದು ಜಂಗಮಮೂರ್ತಿಯಾಗಿ ಶರಣರಿಗೆ ಮಾರ್ಗದರ್ಶನ ಮಾಡಿದ ಯುಗಪುರುಷರು ಅಲ್ಲಮಪ್ರಭುಗಳು. ಬಸವಣ್ಣನವರ ತತ್ವದ ಅರಿವು ಆಚಾರ ಅನುಷ್ಠಾನಕ್ಕೆ ಮಹಾಮಾರ್ಗ ತೋರಿದ ನಿರಂಜನ ಜಂಗಮ ಮೂರ್ತಿಗಳು ಅವರು. ಅಲ್ಲಮಪ್ರಭುಗಳು ಡಾಂಭಿಕತೆ, ಅಂಧಶ್ರದ್ಧೆ, ಮೂಢ ನಂಬಿಕೆಗಳನ್ನು ಜನರ ಅಜ್ಞಾನವನ್ನು ನಿಷ್ಠುರವಾಗಿ ಖಂಡಿಸುತ್ತಾರೆ. ಅವರ ಅನೇಕ ವಚನಗಳಲ್ಲಿ ಅಲ್ಲಮಪ್ರಭುಗಳ ದಿವ್ಯವಾದ ಜ್ಞಾನ ಮತ್ತು ಅವರ ಜೀವಪರ-ಜನಪರ ಚಿಂತನೆ ವ್ಯಕ್ತ ವಾಗುತ್ತದೆ.
*ಮತ್ರ್ಯಲೋಕದ ಮಾನವರು;
ದೇಗುಲದೊಳಗೊಂದು ದೇವರ ಮಾಡಿದಡೆ,
ಆನು ಬೆರಗಾದೆನು*.
ಮರ್ತ್ಯಲೋಕವೆಂದರೆ ನಾವು ಮಾನವರು ವಾಸಿಸುತ್ತಿರುವ ಈ ಭೂಲೋಕ. ಈ ಭೂಲೋಕದ ಮಾನವರು ದೇಗುಲಗಳನ್ನು ಕಟ್ಟಿ ತಾವು ನೋಡದ, ಬರೀ ಕಲ್ಪನೆಯ ದೇವರನ್ನು ಶಿಲೆ ಅಥವಾ ಲೋಹದಲ್ಲಿ ಸ್ಥಾಪಿಸುತ್ತಾರೆ. ಅದನ್ನು ನೋಡಿ ಅಲ್ಲಮ ಪ್ರಭುಗಳು ಆಶ್ಚರ್ಯ ಚಕಿತರಾಗಿದ್ದಾರೆ.
*ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ,
ಭೋಗವ ಮಾಡುವರ ಕಂಡು ನಾನು ಬೆರಗಾದೆನು*
ಹೀಗೆ ದೇಗುಲಗಳಲ್ಲಿ ಸ್ಥಾಪಿಸಿದ ದೇವತಾ ವಿಗ್ರಹಗಳಿಗೆ
ನಿತ್ಯ ನಿತ್ಯ ಅರ್ಚನೆ - ಪೂಜೆಗಳನ್ನು ಮಾಡಿಸಿ ನೈವೇದ್ಯವನ್ನರ್ಪಿಸುತ್ತಾರೆ. ದಿನದಿನವೂ ಆ ದೇವತಾ ವಿಗ್ರಹಗಳಿಗೆ ಮಜ್ಜನ ಅಭಿಷೇಕ ಅರ್ಚನೆ ಪೂಜೆಗಳನ್ನು ನಡೆಸುತ್ತಾರೆ. ತಿನ್ನದ ದೇವರುಗಳಿಗೆ ಬಗೆಬಗೆಯ ನೈವೇದ್ಯಗಳನ್ನರ್ಪಿಸುತ್ತಾರೆ. ನಂತರ ನೇವಿದ್ಯೆಗಳನ್ನೂ ತಾವೇ ಭೋಗಮಾಡುವುದು. ಆ ದೇವತೆಗಳಿಗೆ ಅರ್ಪಿತವಾದ ಭೋಗವನ್ನು ತಾವು ಸವಿದರೆಂದು ಹೆಮ್ಮೆಪಡುತ್ತಾರೆ. ಅವರ ಈ ವರ್ತನೆಯನ್ನು ಕಂಡು ಅಲ್ಲಮರಿಗೆ ಎಲ್ಲಿಲ್ಲದ ಆಶ್ಚರ್ಯ.
*ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು*.
ನಿಮ್ಮ ಶರಣರು ಹಾಗಲ್ಲ. ಬರೀ ಇಷ್ಟಲಿಂಗಪೂಜೆ ಅರ್ಚನೆ, ಭೋಗ ಎನ್ನುತ್ತಾ ಬರೀ ಅದರಲ್ಲೇ ಕಾಲ ಕಳೆಯದೆ ಅವರು ಲಿಂಗದ ನಿಜವಾದ ಜ್ಞಾನವನ್ನು, ಲಿಂಗಾಂಗಯೋಗದ, ಲಿಂಗಾನುಭವದ ಸಾಧನೆಯ ಮಾರ್ಗವನ್ನು ಲೋಕದ ಜನರಿಗೆ ಕೊಟ್ಟುಹೋಗಿದ್ದಾರೆ. ಇದನ್ನೇ ಅಲ್ಲಮ ಪ್ರಭುಗಳು ಶರಣರು ಹಿಂದೆ ಲಿಂಗವನಿರಿಸಿ ಹೋದರು ಎಂದಿದ್ದಾರೆ.
ಅವರು ಅರ್ಚಿಸಿದ ಲಿಂಗ ಸರ್ವಾಂತಯಾಮಿ; ಸಕಲ ಜೀವಜಂತುಗಳಲ್ಲಿ ನೆಲೆಸಿದ ಪ್ರಾಣಲಿಂಗ; ಸಕಲಚರಾಚರಗಳಲ್ಲಿ ವ್ಯಾಪಿಸಿದ ಸೃಷ್ಟಿಸ್ವರೂಪಿಯಾದ ಮಹಾಲಿಂಗ; ನಿರುಪಾಧಿಕ ನಿರಾಲಂಬ ನಿಃಕಳ ನಿರಂಜನ ಲಿಂಗ.
ಆ ಲಿಂಗದ ಆಂತರಿಕ ಅನುಸಂಧಾನವೇ ಪೂಜೆ - ಅರ್ಚನೆ. ಆತ್ಮಸಂತೋಷವೇ ಆ ಲಿಂಗಕ್ಕೆ ಅರ್ಪಿತವಾಗುವ ಭೋಗ. ಅದೇ ಪ್ರಸಾದ. ಮರ್ತ್ಯನ ಭವ ಅಳಿದು ಅಮೃತತ್ವ ಸಿದ್ಧಿಸಬೇಕಾದರೆ ಶರಣರು ಇರಿಸಿ ಹೋದ ಈ ಶಿವಯೋಗ ಪಥದಲ್ಲಿ ನಡೆಯಬೇಕು.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು,
#ಮತ್ರ್ಯಲೋಕದ_ಮಾನವರು
Comments
Post a Comment