ವಚನ ದಾಸೋಹ
#ವಚನ :
#ಸ್ವರದ ಹುಳ್ಳಿಯ ಕೊಂಡು, ಗಿರಿಯ ತಟಾಕಕ್ಕೆ ಹೋಗಿ,
ಹಿರಿಯರು ಓಗರವ ಮಾಡುತ್ತಿಪ್ಪರು.
ಗಿರಿ ಬೇಯದಾಗಿ ಓಗರವಾಗದು.
ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ / 1547
- ಅಲ್ಲಮ ಪ್ರಭುಗಳು
*ಅರ್ಥ*:
ವಿಶ್ವದ ಬೆಳಕು ಬಸವಣ್ಣನವರಾದರೆ ವಿಶ್ವದ ಬೆರಗು ಅಲ್ಲಮ ಪ್ರಭುಗಳು. ಜ್ಞಾನದ ಮೇರು ಶಿಖರ ವ್ಯೋಮಕಾಯ ಅಲ್ಲಮಪ್ರಭುಗಳ ಮಹತ್ತು ನಿಸ್ಸಿಮವಾದದ್ದು. ಅವರ ಬೋಧನೆಯಲ್ಲಿ ನಮಗೆ ಲಭ್ಯವಾಗಿದ್ದು ತ್ರಣ ಮಾತ್ರ. ಜಂಗಮಮೂರ್ತಿ ಅಲ್ಲಮ ಪ್ರಭುಗಳು ದೇಶಸಂಚಾರ ಮಾಡುತ್ತಾ ಸಾಧಕರನ್ನು ಹುಡುಕಿಕೊಂಡು ಹೋಗಿ ಅವರ ಸಾಧನೆಯನ್ನು ಪರೀಕ್ಷಿಸಿ, ಉಂಟಾಗಿರುವ ಅಡತಡೆಗಳನ್ನು ನಿವಾರಿಸಿ ಮಾರ್ಗದರ್ಶನ ಮಾಡುತ್ತಿದ್ದರು.
ಇದೊಂದು ಶಿವಯೋಗ ಸಾಧನೆಯ ಉದ್ದೇಶ ಮತ್ತು ಅಂತಿಮಘಟ್ಟ ಸಾಧಿಸುವ ಬಗೆ ತಿಳಿಸುವ ವಚನ.
ಶಿವಯೋಗ ಸಾಧಕರ ಉದ್ದೇಶ ಸಿದ್ಧಿಗಳನ್ನು ಪಡೆಯುವದು ಮಾತ್ರವಲ್ಲ; ಅವರ ಪರಮ ಉದ್ದೇಶ ಅಂಗ ಲಿಂಗ ಸಮರಸ ಅಂದರೆ ಶಿವ ಜೀವರ ಐಕ್ಯದ ಪರಮಾನಂದವನ್ನು ಅನುಭವಿಸುವುದು .
*ಸ್ವರದ ಹುಳ್ಳಿಯ ಕೊಂಡು ಗಿರಿಯ ತಟಾಕಕ್ಕೆ ಹೋಗಿ ಹಿರಿಯರು ಓಗರವ ಮಾಡುತ್ತಿದ್ದರು.*
ಪದಗಳ ಅರ್ಥ:
ಸ್ವರ - ನಾದ.
ಹುಳ್ಳಿ - ಅಡಿಗೆಮಾಡಲು ಬೇಕಾದ ಬೆಂಕಿಗೆ ಉಪಯೋಗಿಸುವ ಒಣಕಟ್ಟಿಗೆಯ ತುಂಡು) (dry sticks and twigs to start a fire).
ಗಿರಿ - ಇಲ್ಲಿ ಆಜ್ಞಾಚಕ್ರದಲ್ಲಿಯ ತ್ರಿಕೂಟಗಿರಿ. ಇಲ್ಲಿ ಇಡಾ ಪಿಂಗಳ ಸುಷುಮ್ನಾ ಎಂಬ ಮೂರು ಮುಖ್ಯ ನಾಡಿಗಳು ಸಂಧಿಸುತ್ತವೆ.
ಹಿರಿಯರು - ಮುನ್ನಿನ ಯೋಗಿಗಳು, ಸಾಧಕರು
ಓಗರವ ಮಾಡು - ಅಡಿಗೆ ಮಾಡುವದು,
ತಟಾಕ - ಕೆರೆ, ಕೊಳ, ಪುಷ್ಕರಿಣಿ
ಒಂದು ಅತ್ಯಂತ ಸುಂದರ ಮತ್ತು ಅಷ್ಟೇ ವಿಶಿಷ್ಟವಾದ ರೂಪಕದ ಮುಖಾಂತರ ಯೋಗಸಾಧನೆಯನ್ನು ಅಲ್ಲಮಪ್ರಭುಗಳು ವರ್ಣಿಸಿದ್ದಾರೆ. ಕಟ್ಟಿಗೆಯ ಬೆಂಕಿಯಿಂದ ಅಡುಗೆ ಮಾಡುವ ಕ್ರಿಯೆಯನ್ನು ಯೋಗ ಸಾಧನೆಗಾಗಿ ರೂಪಕವಾಗಿ ಬಳಿಸಿದ್ದಾರೆ.. ಸುಷುಮ್ನ ನಾಳಕ್ಕೆ ಅಗ್ನಿನಾಳ ಎಂದೂ ಕರೆಯುತ್ತಾರೆ. ಸ್ವರದಹುಳ್ಳಿ ಅಂದರೆ ಪ್ರಾಣಾಯಾಮ ಮುಖಾಂತರ ಹಂ-ಸಃ ಎಂಬ ಸ್ವರಸಹಿತವಾಗಿ ಉರ್ಧಾಮುಖವಾಗಿ ಪ್ರಾಣವನ್ನು ಹರಿಸಿ ಸೂಕ್ಷ್ಮದೇಹದ ಬೆನ್ನುಹುರಿಯಲ್ಲಿರುವ ಅಗ್ನಿನಾಡಿಯನ್ನು ನೇರ ಸ್ಥಂಭವಾಗಿ ಮಾಡಿದ್ದು. ಇದನ್ನು ಅಡಿಗೆ ಮಾಡಲು ಬೇಕಾದ ಬೆಂಕಿಗೆ ಉಪಯೋಗಿಸುವ ಕಟ್ಟಿಗೆಯ ಹುಳ್ಳಿಯ ಹಾಗೆ ನೇರವಾಗಿಸಿ , ಪ್ರಾಣಶಕ್ತಿ ಎಂಬ ಅಗ್ನಿಯಿಂದ ತ್ರಿಕೂಟವೆಂಬ ಗಿರಿಗೆ ಏರಿ ಪಿನಿಯಲ್ ಗ್ರಂಥಿಯ ಅಮೃತದ ತಟಾಕಕ್ಕೆ ಹೋಗಿ ಹಿರಿಯ ಯೋಗಿಗಳು ಯೋಗಸಾಧನೆ ಎಂಬ ಓಗರವ ಮಾಡುತ್ತಿದ್ದರು.
ಆದರೇನು?
*ಗಿರಿ ಬೇಯದಾಗಿ ಓಗರವಾಗದು.
ಅರ್ಪಿತವಿಲ್ಲಾಗಿ ಪ್ರಸಾದವಿಲ್ಲ ಗುಹೇಶ್ವರಾ*
ಅವರು ಮಾಡಿದ ಅಡಿಗೆ ಬೇಯಲಿಲ್ಲ. ಅವರ ಸಾಧನೆ ಬೇಯ್ದು ಪಕ್ವ ವಾಗಲಿಲ್ಲ. ಮಹಾಲಿಂಗಕ್ಕೆ ಸಂಪೂರ್ಣ ಸಮರ್ಪಿತವಾಗದೆ ನೈವಿದ್ಯ ಎಂಬ ಸಾಧನೆ "ಪ್ರಸಾದ"ವಾಗಲಿಲ್ಲ. ಅವರಿಗೆ ಪ್ರಸಾದದ ಫಲ ಸಿಗಲಿಲ್ಲ. ಅವರ ಸಾಧನೆಯಿಂದ ಆ ತ್ರಿಕೂಟಸ್ಥಾನದೊಳಗಿರುವ ಅವರ ಊರ್ಧ್ವಮನಸ್ಸು ಶಕ್ತಿಸಂಪನ್ನವಾಯಿತೇ ಹೊರತು ಅಹಂಭಾವವನ್ನು ಕಳೆದುಕೊಂಡು ಪಕ್ವವಾಗಿ ಪ್ರಸಾದವಾಗಲಿಲ್ಲ.
ತ್ರಿಕೂಟದೊಳಗಿರುವ ಉರ್ಧ ಶಕ್ತಿ ಬರೀ ಸಾಧನೆಯಿಂದ ಪಕ್ವಗೊಳ್ಳದು. ಮಾಡಿದ ಸಾಧನೆ ಬೇಯಬೇಕೆಂದರೆ ಕಾಯಕ ಬೇಕು. "ಪ್ರಸಾದ"ವಾಗಬೇಕೆಂದರೆ ಸಂಪೂರ್ಣವಾಗಿ ಸಮರ್ಪಿತ ವಾಗಬೇಕು. ಮಾಡುವ ಯೋಗಸಾಧನೆ ಮತ್ತು ಕಾಯಕವು ನೈವಿದ್ಯೇಯಂತೆ ಸಮರ್ಪಿತವಾಗಬೇಕಾದರೆ ನಾನು ಎಂಬ ಅಹಂ ವೃತ್ತಿಯನ್ನು ಕಳೆದುಕೊಳ್ಳಬೇಕು. ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿ ಕಾಡಿತ್ತು ಶಿವನ ಡಂಗುರ ಎಂಬಂತೆ; ನಾನು ಮಾಡಿದೆ ಎಂಬ ಅಹಂ ಭಾವನೆ ಹೊಳೆದರೆ ಅದು ಸರ್ವಾಧಾರವಾದ ಮಹಾಲಿಂಗಕ್ಕೆ ಅರ್ಪಿತವಾಗುವದಿಲ್ಲ. ಪ್ರಸಾದವಾಗುವದಿಲ್ಲ. ಪ್ರಸಾದವಾಗದ್ದರಿಂದ ಲಿಂಗಾನುಭವವೂ ಇಲ್ಲ, ಲಿಂಗಾಂಗ ಸಮರಸಾನಂದವೂ ಇಲ್ಲ. ಮುನ್ನಿನವರು ಕಾಯಕವಿಲ್ಲದೆ ಬರೀ ಸಾಧನೆ ಮಾಡಿದವರು. ನಾನು ಎಂಬ ಅಹಂಭಾವ ಕಳೆದುಕೊಂಡು ಕಾಯವನ್ನು "ಪ್ರಸಾದಕಾಯ"ವಾಗಿ ಮಾಡಲಿಲ್ಲವಾದ್ದರಿಂದ ಬರೀ ಸಿದ್ಧಿ, ವರಗಳಿಗಾಗಿ ಸಾಧನೆ ಮಾಡಿದ್ದರಿಂದ ಅಂಗ ಲಿಂಗ ಸಮರಸ ಅನುಭವಿಸಲಿಲ್ಲ. ಅದುದರಿಂದ ಪ್ರಸಾದ ಸೇವನೆಯಿಂದ ಉಂಟಾಗುವ ಪರಮಾನಂದವು ದೊರೆಯಲಿಲ್ಲ. ಅದು ದೊರೆಯಬೇಕಾದರೆ ಊರ್ಧ್ವಗೊಂಡ ಮನಸ್ಸಿನೊಳಗಿರುವ ಅಹಂ ಮಹಾಲಿಂಗದಲ್ಲಿ ಸಮರ್ಪಣೆ ಗೊಳ್ಳಬೇಕು. ಹಾಗೆ ಮಾಡುವುದು ಪ್ರಾಣಲಿಂಗಾನುಸಂಧಾನಿಯಾದ ಶಿವಯೋಗಿಗೆ ಮಾತ್ರ ಸಾಧ್ಯ.
ಯೋಗಿಗಳು ನೈಸರ್ಗಿಕವಾಗಿ ಹರಿದಾಡುವ ವಾಯುವನ್ನು ನಾಡಿಶುದ್ಧಿ, ಬಂಧಗಳು ಮತ್ತು ಹಂ-ಸಃ ಎಂಬ ಸ್ವರಸಹಿತವಾಗಿ ಮಾಡುವ ಪ್ರಾಣಾಯಾಮದಿಂದ ಪ್ರಾಣವನ್ನು
ಊರ್ಧ್ವ ಮುಖವಾಗಿ ಹರಿಸುತ್ತಾರೆ. ಆಗ ಸುಷುಮ್ನ ನಾಡಿಯ ಕೆಳಗಿನ ರಂಧ್ರದ್ವಾರ ತೆರೆದುಕೊಳ್ಳುತ್ತದೆ. ಹಂ - ಸಂ ಎಂಬ ಸ್ವರದೊಂದಿಗೆ ಹರಿಯುವ ಪ್ರಾಣವಾಯುವನ್ನು ಸ್ಥಂಭ ಕ್ರಿಯೆಯಿಂದ ತಡೆದು ಸುಷುಮ್ನ ನಾಳದಲ್ಲಿ ಅದು ಪ್ರವೇಶಿಸುವಂತೆ ಮಾಡುತ್ತಾರೆ ಯೋಗಿಗಳು. ಪ್ರಾಣವನ್ನು ಸೂಕ್ಷ್ಮದೇಹದ ಬೆನ್ನುಹುರಿಯಲ್ಲಿ ನೇರ ಸ್ಥಂಭವಾಗಿಸಿ ತಡೆಯುತ್ತಾರೆ. ಆಗ ಪ್ರಾಣವಾಯು ಮೇಲೆ ಮೇಲೆ ಏರಿ ಹೋಗಿ, ಭ್ರೂಮಧ್ಯದ ಆಜ್ಞಾಚಕ್ರದ ತ್ರಿಕೂಟ ಸ್ಥಾನದಲ್ಲಿ ನಿಶ್ಚಲವಾಗುತ್ತದೆ. ಅದು ಸೂರ್ಯ(ಪಿಂಗಳ)ನಾಡಿ, ಚಂದ್ರ(ಇಡಾ)ನಾಡಿ ಮತ್ತು ಸುಷುಮ್ನೆ(ಅಗ್ನಿ)ನಾಡಿಗಳು ಕೂಡುವ ಪವಿತ್ರ ಗಿರಿ. ಅಲ್ಲಿ ಆ ಯೋಗಿಗಳು ಮಹಾಪ್ರಾಣಾವತರಣದ ಸಾಧನೆ ಮಾಡುತ್ತಾರೆ. ಅಲ್ಲಿಯೇ ಚಿದಾಕಾಶದಲ್ಲಿ ಪೀನಿಯಲ್ ಗ್ಲಾಂಡ್ ದಿಂದ ಒಸರುವ ಅಮೃತದ ಪುಷ್ಕರಣಿ ಇದೆ. ಅದರ ಪರಿಣಾಮವಾಗಿ ಅವರು ಹಲವು ಸಿದ್ಧಿ ಗಳನ್ನು ಸಾಧಿಸಿ ಶಕ್ತಿಸಂಪನ್ನರೂ ಮಹಾಮೇಧಾವಿಗಳೂ ಆಗಬಲ್ಲರು.
ಮುನ್ನಿನ ಯೋಗಿಗಳು ಉಗ್ರಸಾಧನೆಯನ್ನು ಮಾಡಿ ಅಲೌಕಿಕ ಶಕ್ತಿ ಸಾಮರ್ಥ್ಯಗಳನ್ನು ಪಡೆದ ಮಾತ್ರಕ್ಕೆ ಅವರ ಮನಸ್ಸು ಪ್ರಸಾದವೂ ಪ್ರಸನ್ನವೂ ಆಗದು. ಅವನ ಮನಸ್ಸಿನೊಳಗಿರುವ 'ಅಹಂ' ಸಮರ್ಪಿತವಾಗದೆ ಲಿಂಗಾಂಗ ಸಾಮರಸ್ಯದ ಅನುಭಾವದ ಪರಮಾನಂದ ಲಭ್ಯವಾಗುವುದಿಲ್ಲ. ಕಾರಣ ನಿಜವಾದ ಯೋಗಸಾಧಕನು ಮನಸ್ಸನ್ನು ಊರ್ಧ್ವಸ್ಥಿತಿಗೇರಿಸಿ ಮಹಾಲಿಂಗ ವೆಂಬ ಪರಶಿವನನ್ನು ಸುಜ್ಞಾನದ ಅರಿವಿನ ದೃಷ್ಟಿಯಿಂದ ಕಂಡು, ಪರಿಭಾವಿಸಿ, ತನ್ನ ಅಹಂವೃತ್ತಿಯನ್ನು ಸಮರ್ಪಿಸಿ ಅದರಲ್ಲಿ ಸಮಾಲೀನಗೊಳಿಸುತ್ತಾನೆ. ಆಗ ಆತನ ಭಾವವನ್ನು ಆ ಪರವಸ್ತು (ಪರಮಾತ್ಮ,ಪರಶಿವ, universal consciousness) ತುಂಬಿಕೊಳ್ಳುತ್ತದೆ. ಇದೇ ಭಾವಲಿಂಗದ ಪೂಜೆ. ಶಿವಯೋಗ ಸಾಧನಾಮಾರ್ಗದ ಕೊನೆಯ ಸ್ಥಿತಿ. ಪರಶಿವನೆಂಬ ಪರವಸ್ತುವನ್ನು ಮೊದಲು ಸಾಕಾರ ಇಷ್ಟಲಿಂಗ ರೂಪದಲ್ಲಿ ನಂತರ ನಿರಾಕಾರ ಪ್ರಾಣಲಿಂಗವಾಗಿಸಿ ನಂತರ ಭಾವದೃಷ್ಟಿಯಿಂದ ಕಂಡು ಭಾವಲಿಂಗ ವಾಗಿಸಿ ಅಭಿನ್ನಭಾವದಿಂದ ಬೆರೆಸಿ ಲಿಂಗಾಂಗ ಸಮರಸ ಅನುಭವಿಸಿದಾಗ ಬೆರೆತೆನೆಂಬ ಭಾವವೂ ಇಲ್ಲ, ಪರವಸ್ತುವೂ ಇಲ್ಲ. ಭಾವ ಬಯಲಾಗಿ ಅರುಹು ಶೂನ್ಯವಾಗಿ ಅಖಂಡ ನಿರಾಳವೆನಿಸುವ ಸ್ಥಿತಿ. ‘ನಿರ್ವಿಚಾರ ನಿರ್ಗುಣ' ಸ್ಥಿತಿ. ಸಾಧಕನ ಮನ ಭಾವಗಳು ಆ ಮಹಾವಸ್ತುವಿನಲ್ಲಿ ಅಡಗಿಹೋಗುತ್ತದೆ. ಅದುವೆ ಅನುಭಾವ. ಅದನ್ನು ಪಡೆದ ಯೋಗಿಯೇ ಶಿವಾನುಭವಿ. ಗುರು ಬಸವಣ್ಣನವರು ತಮ್ಮ ಅನುಭಾವದ ಈ ಸ್ಥಿತಿಯನ್ನು ಹೀಗೆ ಹೇಳಿದ್ದಾರೆ.
#ಅರಿವನ್ನಕ್ಕರ ಅರ್ಚಿಸಿದೆ, ಅರಿವನ್ನಕ್ಕರ ಪೂಜಿಸಿದೆ,
ಅರಿವನ್ನಕ್ಕರ ಹಾಡಿ ಹೊಗಳಿದೆ.
ಅರಿವುಗೆಟ್ಟು ಮರಹು ನಷ್ಟವಾಗಿ,
ಭಾವ ನಿರ್ಭಾವವಾಗಿ ನಿಜವೊಳಕೊಂಡಿತ್ತಾಗಿ,
ಕೂಡಲಸಂಗಯ್ಯನಲ್ಲಿ ಸರ್ವನಿವಾಸಿಯಾಗಿರ್ದೆನು. / 114
#ಅರಿಯಲಿಲ್ಲದ ಅರಿವು ಅವಗ್ರಹಿಸಿತ್ತಾಗಿ,
ಅರಿಯಲಿಲ್ಲದ ಮರೆಯಲಿಲ್ಲದ ನಿಜವು ನಿಂದಿತ್ತಾಗಿ,
ನಿರ್ನಾಮವಾಯಿತ್ತು, ನಿಃಪತಿಯಾಯಿತ್ತು,
ಅಗಮ್ಯದಲ್ಲಿ ಗಮನ ಕೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತ್ತು,
ಕೂಡಲಸಂಗಮದೇವರಲ್ಲಿ ಶಬ್ದಮುಗ್ಧವಾಯಿತ್ತು. / 113
ಶಿವಯೋಗಿಗಳ ಒಲವು ಅನುಭಾವದತ್ತ, ಬರಿ ಸಿದ್ಧಿ ಸಾಧನೆಗಳತ್ತ ಅಲ್ಲ.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು
Comments
Post a Comment