ವಚನ ದಾಸೋಹ
#ವಚನ:
#ವರ್ಣವಿಲ್ಲದ ಲಿಂಗಕ್ಕೆ ರೂಪು ಪ್ರತಿಷ್ಠೆಯ ಮಾಡುವ ಪರಿಯಿನ್ನೆಂತೊ?
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವ ಪರಿಯಿನ್ನೆಂತೊ?
ನೆನೆಯಬಾರದ ಲಿಂಗಕ್ಕೆ ಅನುಗ್ರಹವ
ಮಾಡುವ ಪರಿಯಿನ್ನೆಂತೊ?
ನುಡಿಯಬಾರದ ಲಿಂಗಕ್ಕೆ ಜಪಪೂಜೆಯದೆಂತೊ?
ಇಲ್ಲದ ಲಿಂಗವ
ಧರಿಸುವ ಪರಿಯಿನ್ನೆಂತೊ?
ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನಾ ಇದರಂತುವ ನೀವೆ ಬಲ್ಲಿರಿ.
- ಶರಣ ಅಮರಗುಂಡದ ಮಲ್ಲಿಕಾರ್ಜುನತಂದೆ
*ಅರ್ಥ*:
ಅನುಭವ ಮಂಟಪದ ಪ್ರಜಾಸತ್ತಾತ್ಮಕ ಧೋರಣೆಯ ನೆಲೆಯಲ್ಲಿ; ವಚನಕಾರ ಅಮರಗುಂಡದ ಮಲ್ಲಿಕಾರ್ಜುನತಂದೆ ಇಲ್ಲಿ ' ಶೂನ್ಯಲಿಂಗ'ದ ಪರಿಕಲ್ಪನೆ ಯನ್ನು ಮತ್ತು ಅದನ್ನು ಆಕಾರಕ್ಕೆ ತಂದು ಕೊಡಮಾಡಿದ ಇಷ್ಟಲಿಂಗದ ಆಚರಣೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಅವರ ಈ ವಚನದಲ್ಲಿ ಶೂನ್ಯಲಿಂಗದ ಮಹಿಮೆಯನ್ನು ಹೇಳಲಾಗಿದೆ.
*ವರ್ಣವಿಲ್ಲದ ಲಿಂಗಕ್ಕೆ ರೂಪು ಪ್ರತಿಷ್ಠೆಯ ಮಾಡುವ ಪರಿಯಿನ್ನೆಂತೊ?*
ಶರಣರ 'ಇಷ್ಟಲಿಂಗ' ಅಗಮ್ಯವಾದ ಅಗೋಚರವಾದ ವಿಶ್ವವ್ಯಾಪಿಯಾದ ಶೂನ್ಯಲಿಂಗದ ಕುರುಹು. ಆ ಶೂನ್ಯಲಿಂಗಕ್ಕೆ ಬಣ್ಣವಿಲ್ಲ. ರೂಪವಿಲ್ಲ. ಅದಕ್ಕೆ ಬಣ್ಣ ರೂಪವೇ ಇಲ್ಲದಾಗ ಅದನ್ನು ಸ್ವರೂಪವಾಗಿ ಮಾಡಿ ಪ್ರತಿಷ್ಠೆಯ ಮಾಡುವ ಈ (ಪರಿ ಎನೆಂತೋ?) ವಿಧಾನಕ್ಕೆ ಏನು ಎನ್ನಬೇಕು? ಎಂದು ಹರ್ಷ, ವಿಸ್ಮಯ ವ್ಯಕ್ತ ಪಡಿಸಿದ್ದಾರೆ.
*ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವ ಪರಿಯಿನ್ನೆಂತೊ?*
ಶೂನ್ಯಲಿಂಗವು ಪ್ರಳಯವಿಲ್ಲದ ಅಂದರೆ ನಾಶವಿಲ್ಲದ ಲಿಂಗ. ' ಶೂನ್ಯಲಿಂಗ' ದಲ್ಲಿಯೇ ಎಲ್ಲ ಪ್ರಾಣಗಳು ಉದಯಿಸಿದಾಗ ಅಂಥದ್ದಕ್ಕೆ ಪ್ರಾಣಪ್ರತಿಷ್ಟೆ ಮಾಡುವ ಈ (ಪರಿ ಎನೆಂತೋ?) ವಿಧಾನಕ್ಕೆ ಏನು ಎನ್ನಬೇಕು? ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
*ನೆನೆಯಬಾರದ ಲಿಂಗಕ್ಕೆ ಅನುಗ್ರಹವ
ಮಾಡುವ ಪರಿಯಿನ್ನೆಂತೊ?*
ಊಹೆಗೂ ಮೀರಿದಂತೆ ವಿಶ್ವವನ್ನೇ ವ್ಯಾಪಿಸಿದ, ಊಹಿಸಲು, ನೆನೆಯಲು ಬಾರದಂಥ ವಿಶಾಲವಾದ ಮಹಾಲಿಂಗವನ್ನು ಅನುಗ್ರಹ ಮಾಡುವ ಈ (ಪರಿ ಎನೆಂತೋ?) ವಿಧಾನಕ್ಕೆ ಏನು ಎನ್ನಬೇಕು? ಎಂದು ವಿಸ್ಮಯ ವ್ಯಕ್ತ ಪಡಿಸಿದ್ದಾರೆ.
*ನುಡಿಯಬಾರದ ಲಿಂಗಕ್ಕೆ ಜಪಪೂಜೆಯದೆಂತೊ?*
ನುಡಿಯಬಾರದ ಅಂದರೆ ವರ್ಣಿಸಲು ಬಾರದ ಶೂನ್ಯಲಿಂಗಕ್ಕೆ, ಜಪಪೂಜೆ ಮಾಡುವ ಈ (ಪರಿ ಎನೆಂತೋ?) ವಿಧಾನಕ್ಕೆ ಏನು ಎನ್ನಬೇಕು?ಎಂದು ಆಶ್ಚರ್ಯಚಕಿತರಾಗಿದ್ದಾರೆ.
*ಇಲ್ಲದ ಲಿಂಗವ
ಧರಿಸುವ ಪರಿಯಿನ್ನೆಂತೊ?*
ಶೂನ್ಯಲಿಂಗವೆಂದರೆ ಇಲ್ಲದ ಲಿಂಗ. ಇದನ್ನು
ಧರಿಸುವ ಈ (ಪರಿಯಿನ್ನೆಂತೊ?) ವಿಧಾನಕ್ಕೆ ಏನು ಎನ್ನಬೇಕು? ಎಂದು ವಿಸ್ಮಯ ಚಕಿತ ರಾಗಿದ್ದಾರೆ.
*ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನಾ ಇದರಂತುವ ನೀವೆ ಬಲ್ಲಿರಿ.*
ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನಾ ಇದರಂತುವ ನೀವೆ ಬಲ್ಲಿರಿ ಎಂದು ಕರಸ್ಥಲದಲ್ಲಿಯ ಇಷ್ಟಲಿಂಗಕ್ಕೆ ಅರಿಕೆ ಮಾಡುತ್ತಾರೆ.
ಈ ಶೂನ್ಯ ಲಿಂಗವನ್ನು ಇಷ್ಟಲಿಂಗವನ್ನಾಗಿ ಮಾಡಿ, ರೂಪು ಪ್ರತಿಷ್ಠೆಯ ಮಾಡುವ , ಪ್ರಾಣಪ್ರತಿಷ್ಟೆ ಮಾಡುವ, ಅನುಗ್ರಹ ಮಾಡುವ, ಜಪಪೂಜೆ ಮಾಡುವ, ಧರಿಸುವ ಈ ಪರಿ, ಈ ಅಂತಾರ್ಥವ (ಅಂತರಂಗದ ಅರ್ಥ) ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನಾ ನೀವೇ ಬಲ್ಲಿರಿ ಎಂದು ತಮ್ಮ ಇಷ್ಟದೇವರಾದ ಮಾಗುಡದ ಮಲ್ಲಿಕಾರ್ಜುನನ್ನು ನೆನೆಯುತ್ತಾರೆ.
ಭಾವ: *ಲಿಂಗ*:
"ಲಿಂಗ"ವೆಂದರೆ ಈ ಪ್ರಪಂಚವನ್ನೆಲ್ಲಾ ತನ್ನಲ್ಲಿ ಗರ್ಭೀಕರಿಸಿಟ್ಟುಕೊಂಡ ಪರವಸ್ತುವು. ಸೃಷ್ಟಿಯ ಸಕಲ ಚರಾಚರವನ್ನು ತನ್ನೊಳಗೆ ಇಟ್ಟುಕೊಂಡಿರುವುದು. ಕಡೆಗೆ ಎಲ್ಲವನ್ನು ತನ್ನೊಳಗೆ ಲೀನವಾಗಿಸಿಕೊಳ್ಳುವುದು. ಮೂಲತಃ ಸೃಷ್ಟಿಯಲ್ಲಿ ಯಾವುದೇ ವಸ್ತುವಿಗೂ ಸ್ವಭಾವತಃ ನಾಶವೆಂಬುದಿಲ್ಲ . ಅದು ಸ್ಥೂಲದಿಂದ ಸೂಕ್ಷಕ್ಕೆ , ಸೂಕ್ಷ್ಮದಿಂದ ಸ್ಥೂಲಕ್ಕೆ ಬದಲಾವಣೆಯಷ್ಟೆ.
ಇಂತಹ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಅಣುರೇಣುವಿಗೂ ಅಸ್ತಿತ್ವವನ್ನು ಕೊಟ್ಟು ಆಧಾರವಾಗಿರುವುದೇ ಲಿಂಗವು.
#'ಲಿ' ಕಾರವೆ ಶೂನ್ಯ,
ಬಿಂದುವೆ ಲೀಲೆ,
'ಗ' ಕಾರವೆ ಚಿತ್ತು.
ಈ ತ್ರಿವಿಧದೊಳಗಿದೆ ಲಿಂಗವೆಂಬ ಸಕೀಲ.
ಇದರ ಸಂಚವನಾವಾತ ಬಲ್ಲ ಆತನೆ ಲಿಂಗಸಂಗಿ.
ಇದು ಕಾರಣ ಲಿಂಗಾನುಭವಿಗಳ ಶ್ರೀಚರಣಕ್ಕೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ/ ಎನ್ನುತ್ತಾರೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು
"ಲಿ"ಕಾರವು ಸರ್ವವನ್ನು ಲೀನವಾಗಿಸಿಕೊಳ್ಳುವ ಶೂನ್ಯದ ಸೂಚಕ. "0"ಬಿಂದುವು ಸೃಷ್ಟಿಯ ಲೀಲೆಯ ಸೂಚಕವಾದರೆ ,
"ಗ"ಕಾರವು ಸೃಷ್ಟಿಯ ಉತ್ಪತ್ತಿಗೆ ಮೂಲವಾದ ಚಿತ್ ಶಕ್ತಿಯ ಸೂಚಕವಾಗಿದೆ.
ಯಾವುದರಲ್ಲಿ ಸರ್ವ ಜಗತ್ತು ಲೀನವಾಗುವುದೋ, ಯಾವುದರಿಂದ ಜಗತ್ತು ಉತ್ಪತ್ತಿಯಾಗುವುದೋ ಆ ಪರವಸ್ತುವೇ ಲಿಂಗವು.
"ಲಿ"ಕಾರವು ವಿಲೀನವಾಗುವುದರ ಸೂಚಕ, "ಗ"ಕಾರವು ಗಮನ - ಉತ್ಪತ್ತಿಯ ಸೂಚಕ, ಸಕಲ ಸೃಷ್ಟಿಯ ಉತ್ಪತ್ತಿ ಹಾಗು ವಿಲೀನದ ಬೀಜಮೂಲವೇ ಲಿಂಗವು.
ಶರಣರು ಪೂಜಿಸಿದ ಪರಶಿವ ಈ 'ಶೂನ್ಯಲಿಂಗ' ವಾಗಿದೆ. ಅದನ್ನು ಧರಿಸಿಕೊಳ್ಳಲೂ ಸಾಧ್ಯವಿಲ್ಲ. ಹೀಗಿರುವಾಗ ಅಮರಗುಂಡದ ಮಲ್ಲಿಕಾರ್ಜುನತಂದೆ ಶರಣರು ಶೂನ್ಯಲಿಂಗದ ಕುರುಹಾದ ಇಷ್ಟಲಿಂಗದಲ್ಲಿ ಅರಿಕೆ ಮಾಡುತ್ತಾ, "ಇದರಂತುವ ಅಂತಾರ್ಥವ ಮತ್ತು ಲಿಂಗದ ಕೊನೆ ಮೊದಲನ್ನು ನೀವೇ ಬಲ್ಲಿರಿ" ಎನ್ನುತ್ತಾರೆ. ಮಲ್ಲಿಕಾರ್ಜುನತಂದೆ ಶರಣರು ಬಸವಾದಿ ಶರಣರ ಶಿವಯೋಗದ ಪರಿಕಲ್ಪನೆಯಾದ ಸಾಕಾರವಿಡಿದು ನಿರಾಕಾರದೆಡೆಗೆ ಸಾಗುವುದನ್ನು , ಇಷ್ಟಲಿಂಗದಿಂದ ಸಾಧಕ ಶೂನ್ಯಲಿಂಗ - ನಿರಾವಾಲಂಬ ಬಯಲು ಸ್ಥಿತಿಗೆ ಸಾಗುವುದನ್ನು ಮನಗಂಡು ವಿಸ್ಮಯದಿಂದ ಅನುಮೋದಿಸಿದ್ದೇ ಪ್ರಸ್ತುತ ವಚನದ ಮುಖ್ಯ ಅರ್ಥವಾಗಿದೆ.
*ಶರಣ ಪರಿಚಯ*
ಅಮರಗುಂಡದ ಮಲ್ಲಿಕಾರ್ಜುನ ತಂದೆ
ಅಂಕಿತ: ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನಾ (ಈಶ್ವರೀಯ ವರದ ಮಹಾಲಿಂಗ)
ಹೆಸರಿನ ಹಿಂದಿರುವ ವಿಶೇಷಣ 'ಅಮರಗುಂಡ' ಅಂದರೆ ಇಂದಿನ ತುಮಕೂರು ಜಿಲ್ಲೆಯ ಗುಬ್ಬಿ ಈತನ ಸ್ಥಳ ವಾಗಿರಬೇಕು.
ಕಾಲ-1160.
ಅಂಕಿತನಾಮ: 'ಮಾಗುಡದ ಮಲ್ಲಿಕಾಜು೯ನ' ಎರಡು ವಚನಗಳು ದೊರೆತಿವೆ.
ವಚನಗಳಲ್ಲಿ ಉತ್ತುಂಗದ ಅನುಭಾವ, ಅಧ್ಯಾತ್ಮದ ದರ್ಶನವಿದೆ.
ಈ ಶರಣರ ಹೆಸರಿನ ಹಿಂದಿರುವ ವಿಶೇಷಣವು 'ಅಮರಗುಂಡ' ಅಂದರೆ, ಇಂದಿನ ತುಮಕೂರು ಜಿಲ್ಲೆಯ ಗುಬ್ಬಿ ಇವರ ಸ್ಥಳವಾಗಿರಬೇಕೆನ್ನಲಾಗಿದೆ. 12ನೇ ಶತಮಾನದ ಅನುಭವ ಮಂಟಪದ 770 'ಅಮರ ಗಣಂಗಳ'ಲ್ಲೊಬ್ಬ ವಚನಕಾರ ಶರಣರಿವರು. "ಮಹಾಮಹಿಮ ಮಾಗುಡದ ಮಲ್ಲಿಕಾಜು೯ನಾ" / "ಈಶ್ವರೀಯ ವರದಮಹಾಲಿಂಗ" ಈ ಅಂಕಿತದ ಇವರ ಎರಡು ವಚನಗಳು ದೊರೆತಿವೆ. ಇವೆರಡರಲ್ಲಿ ಅನುಭಾವ ಮತ್ತು ಅಧ್ಯಾತ್ಮ ಕೆನೆಗಟ್ಟಿದೆ.
-✍️ Dr Prema Pangi
#ಪ್ರೇಮಾ_ಪಾಂಗಿ,
#ಅಮರಗುಂಡದ_ಮಲ್ಲಿಕಾರ್ಜುನ_ತಂದೆ
#ವರ್ಣವಿಲ್ಲದ_ಲಿಂಗಕ್ಕೆ_ರೂಪು_ಪ್ರತಿಷ್ಠೆಯ
Comments
Post a Comment