ವಚನ ದಾಸೋಹ

#ವಚನ:
#ಪರಮಜ್ಞಾನವೆಂಬ ಸಸಿಗೆ,
ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ
ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ
ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ.
ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆ
ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ. / 1089*
- ವ್ಯೋಮಕಾಯ ಅಲ್ಲಮಪ್ರಭುಗಳು
*ಅರ್ಥ*:
ಶೂನ್ಯ ಸಿಂಹಾಸನದ ಪ್ರಥಮ ಅಧ್ಯಕ್ಷ ಅಲ್ಲಮ ಪ್ರಭುಗಳು ಸುಂದರವಾದ ಉಪಮೆಗಳ ಮುಖಾಂತರ ತಾವು ಮುಕ್ತಿ ಪಡೆದ ಬಗೆಯನ್ನು ಗುರು ಸಂಗನಬಸವಣ್ಣರಿಗೆ ತಿಳಿಸಿದ್ದಾರೆ. ಮುಕ್ತಿಯಮಾರ್ಗದಲ್ಲಿ ನಡೆಯಲು ಗುರುಭಕ್ತಿ, ಲಿಂಗಭಕ್ತಿ, ಜಂಗಮಭಕ್ತಿ ಹೇಗೆ ಮಾರ್ಗದರ್ಶನ ನೀಡಿದವು ಎಂದು ವಿವರಿಸಿದ್ದಾರೆ.

*ಪರಮಜ್ಞಾನವೆಂಬ ಸಸಿಗೆ,
ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ
ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ
ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ.*

 ನಾವು ನೆಟ್ಟ ಸಸಿ ಬೆಳೆದು ಫಲಭರಿತ ವಾಗಬೇಕಾದರೆ ಭೂಮಿಯ ಮಣ್ಣು ತಂದು ಸಸಿಗೆ ಪಾತಿ ಕಟ್ಟಿ , ಗೊಬ್ಬರ ಹಾಕಿ, ನೀರು ಉಣಿಸಬೇಕಾಗುತ್ತದೆ. 
ಅದೇ ರೀತಿಯಲ್ಲಿ "ಪರಮಜ್ಞಾನ ಎಂಬ ಸಸಿ" ಯನ್ನು ನೆಟ್ಟಿದಾಗ ಅದು ಹುಲುಸಾಗಿ ಬೆಳೆದು "ಭಕ್ತಿ ಎಂಬ ಫಲ" ಭರಿತ ವಾಗಬೇಕಾದರೆ ; ಅದಕ್ಕೆ ನಾವು "ಗುರುಭಕ್ತಿ ಎಂಬ ಭೂಮಿಯ ಮಣ್ಣು", "ಲಿಂಗಭಕ್ತಿ ಎಂಬ ಗೊಬ್ಬರ", "ಜಂಗಮ ಭಕ್ತಿ ಎಂಬ ಪರಮಾನಂದದ ಜಲ" ನೀಡಬೇಕು. 

*ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆ
ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ*.

ಹೀಗೆ ಗುರುಭಕ್ತಿ , ಲಿಂಗಭಕ್ತಿ , ಜಂಗಮಭಕ್ತಿ ಯಿಂದ ನಾನು ನೆಟ್ಟ ಪರಮಜ್ಞಾನದ ಸಸಿ ಭಕ್ತಿಯಿಂದ ಫಲಭರಿತವಾಯಿತು. ಪರಮ ಜ್ಞಾನ ಮತ್ತು ಭಕ್ತಿಯಿಂದ ಪಕ್ವವಾಗಿ ನಾನು ಮುಕ್ತನಾದೆ ಎನ್ನುತ್ತಾರೆ ಅಲ್ಲಮ ಪ್ರಭುಗಳು.

*ಭಾವ*:
"ಅಷ್ಟ" ಅಂದರೆ ಎಂಟು. "ಆವರಣ" ಎಂದರೆ  ಹೊದಿಕೆಗಳು, ರಕ್ಷಾಕವಚಗಳು.
ಅಷ್ಟಾವರಣಗಳು ಎರಡು ಬಗೆ
ಬಹಿರಂಗದ ಅಷ್ಟಾವರಣ ಹಾಗೂ ಅಂತರಂಗದ ಅಷ್ಟಾವರಣ.
ಬಹಿರಂಗದ ಅಷ್ಟಾವರಣಗಳು: ಇವು ಸ್ಥೂಲತನುವಿಗೆ ಸಂಬಂದಿಸಿದವು.
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ.  
ಅಷ್ಟಾವರಣದಲ್ಲಿ ಮೊದಲ ಮೂರು
ಗುರು, ಲಿಂಗ, ಜಂಗಮ ಇವು ಪೂಜ್ಯವಾದವು (ಪೂಜ್ಯನೀಯಗಳು)
ನಂತರದ ವಿಭೂತಿ, ರುದ್ರಾಕ್ಷಿ, ಮಂತ್ರ ಇವು ಪೂಜಾ ಸಾಧನಗಳು (ಪೂಜಕಗಳು) .
ಕೊನೆಯ ೨ ಪಾದೋದಕ ಪ್ರಸಾದ ಇವು ಪೂಜಾ ಫಲಗಳು.
ಗುರು , ಲಿಂಗ , ಜಂಗಮ:
*ಗುರು*:
ಅಷ್ಟಾವರಣದಲ್ಲಿ ಮೊದಲ ಆವರಣವೇ ಗುರು. ಅನುಸಂಧಾನದಿಂದ "ಅರಿವೇ ಗುರು":

ಗುರು ಇಲ್ಲದೆ ದೀಕ್ಷೆಯಿಲ್ಲ, ದೀಕ್ಷೆಯಿಲ್ಲದೆ ಸಾಧನೆಯಿಲ್ಲ.  ಶಿಷ್ಯನ ಅಜ್ಞಾನವನ್ನು ತೊಲಗಿಸಿ ಪರಮಾತ್ಮನ ಜ್ಞಾನವನ್ನು ಮೂಡಿಸುವವನೇ ಗುರು.
"ಶಿವಪಥವರಿವೆಡೆ ಗುರುಪಥವೆ ಮೊದಲು"  ಶಿವನ ನೆಲೆಯನ್ನು ಕಂಡುಕೊಳ್ಳಲು ಗುರುವಿನ ಮಾರ್ಗದರ್ಶನ ಬೇಕು ಎಂಬ ಭಾವವನ್ನು ಗುರು ಬಸವಣ್ಣನವರು ತಿಳಿಸಿದ್ದಾರೆ. ಗುರುವಿನ ಮಾರ್ಗದರ್ಶನ ಯಾಕೆ ಬೇಕು ಎಂದರೆ

#ಅರಿದಿಹೆನೆಂದರೆ ಅರಿವಿಂಗಸಾಧ್ಯ, ನೆನೆದಿಹೆನೆಂದರೆ ನೆನಹಿಂಗಸಾಧ್ಯ
ಭಾವಿಸಿಹೆನೆಂದರೆ ಭಾವಕ್ಕಸಾಧ್ಯ, ವಾಙ್ಮನನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ ಗುರು ತೋರದನ್ನಕ್ಕರ ?
ಗುರುಶಿಷ್ಯರ ಮಥನದಲ್ಲಿ ಸ್ವಯಂಜ್ಯೋತಿರ್ಲಿಂಗವು
ಉದಯವಪ್ಪುದು ಎಂಬ ಶ್ರುತಿ ಹುಸಿಯೇ? ಕೂಡಲಸಂಗಮದೇವಾ.

ಅಂತರಂಗದಲ್ಲಿ ಆಗುವ ಅರಿವು(ಪ್ರಜ್ಞೆ) ಅದು  ಕೊಂಡುಕೊಳ್ಳುವ ವಸ್ತುವಲ್ಲ. ಅದು ಅರಿವಿಗೆ, ನೆನಹಿಗೆ, ಭಾವಕ್ಕೆ ಸಿಗದ ಅಗೋಚರವಾದ ತನ್ನಷ್ಟಕ್ಕೆ ತಾನೇ ಆಗುವ ಸ್ಫುರಣ. ಅದಕ್ಕಾಗಿ ಸಾಧನೆ ಬೇಕು. ಆ ಸಾಧನೆಗಾಗಿ ಮಾರ್ಗ ತೋರುವ ಗುರು ಬೇಕು. ಕಲಿಯುವ ಹಂಬಲ, ಸಾಧಿಸುವ ಅದಮ್ಯ ಬಯಕೆ, ಶ್ರದ್ಧೆ, ಮಾರ್ಗ ತೋರುವ ಗುರು ಇದ್ದರೆ "ಅರಿವಿನ ಹಾದಿ" ಗೋಚರಿಸುವುದು.
*ಲಿಂಗ*:
ಎರಡನೆಯ ಅಷ್ಟಾವರಣವೇ ಇಷ್ಟಲಿಂಗ. ಅನುಸಂಧಾನದಿಂದ "ಆಚಾರವೇ (ಆಚರಣೆಯೇ) ಲಿಂಗ".

 ಭಕ್ತನ ದೃಷ್ಟಿಗಾಗಿ, ನೆನಹು ನಿರೀಕ್ಷಣೆಗೆ ಸಾಧನೆಯ ಉಪಾಸ್ಯವಸ್ತುವಾಗಿ ಕರಸ್ಥಳಕ್ಕೆ ಬಂದ ಶಿವಕಳೆಯ ಸಾಕಾರ ರೂಪುವೇ ಇಷ್ಟಲಿಂಗ. ಶಿವಯೋಗ ಆಚರಣೆಯಿಂದ  ಭಕ್ತನ ಧ್ಯಾನಯೋಗಕ್ಕಾಗಿ ಮನಸ್ಥಳದಲ್ಲಿ ಕಾಣಬಂದದ್ದೇ ಪ್ರಾಣಲಿಂಗ.
 ಭಕ್ತನ ಜ್ಞಾನಯೋಗಕ್ಕಾಗಿ ಭಾವಸ್ಥಳದಲ್ಲಿ ಅಚ್ಚೊತ್ತಿ , ಭ್ರಮೆಗಳು ನಾಶವಾಗಿ ಕಾರಣತನುವಿನಲ್ಲಿ ವ್ಯಕ್ತವಾಗುವುದು ಭಾವಲಿಂಗ. 
ಇಷ್ಟಲಿಂಗವನ್ನಿಡಿದೇ ಪ್ರಾಣಲಿಂಗವನ್ನು ಭಾವಲಿಂಗವನ್ನು‌ ದರ್ಶಿಸಬೇಕು. ಹಾಗಾಗಿ  ಇಷ್ಟಲಿಂಗದ ಮೇಲೆ ನಿಷ್ಟೆ, ಶಿವಯೋಗದ ಆಚರಣೆ ಅತ್ಯಂತ ಮುಖ್ಯವಾದವುಗಳು. 

#ಅಂಗದ ಮೇಲೆ ಆಯತವಾದುದೆ ಇಷ್ಟಲಿಂಗ,
ಆ ಇಷ್ಟಲಿಂಗವಿಡಿದಿಹುದೆ ಪ್ರಾಣಲಿಂಗ ಸ್ವಾಯತ,
ಇಷ್ಟಲಿಂಗ ಉದಯಿಸಿದಲ್ಲದೆ 
ಪ್ರಾಣಲಿಂಗವ ಕಾಣಬಾರದು
ಈ ಭೇದವ ಭೇದಿಸಬಲ್ಲರೆ 
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.
- ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು
*ಜಂಗಮ*:
ಅಷ್ಟಾವರಣದಲ್ಲಿ ಮೂರನೆಯದೇ ಜಂಗಮ. ಅನುಸಂಧಾನದಿಂದ "ಜಂಗಮವೇ ಅನುಭಾವ".

ಲಿಂಗಾಯತ ತತ್ವಗಳನ್ನು ಅರಿತು ಅನುಭಾವಿಸಿ ಸಮಾಜದಲ್ಲಿ ಪ್ರಸಾರ  ಮಾಡುತ್ತ ಲಿಂಗಾಯತ ತತ್ವಗಳನ್ನು ಅನುಷ್ಠಾನಕ್ಕೆ ತರಲು ಸತತ ಪ್ರಯತ್ನಿಸುವ ವ್ಯಕ್ತಿ ಜಂಗಮ. ನಿರಾಭಾರವಾಗಿ ಚರಿಸುವ ಶಿವಾನುಭವಿ. ಸಾಧಕ ಪಕ್ವವಾದಾಗ ಸಾಧಕರಲ್ಲಿ ಅನುಭಾವ ಅನುಗ್ರಹಿಸುವ ಮಾರ್ಗದರ್ಶನ ಮಾಡುವ ಚಲನಶೀಲ ಕ್ರಿಯಾಶೀಲ ಚೇತನವೇ ಜಂಗಮ. 
ಹೀಗೆ
ಅರಿವು, ಆಚಾರ, ಅನುಭಾವ ಇವು  ಗುರು, ಲಿಂಗ, ಜಂಗಮ ಗಳ ಜೊತೆ ಅನುಸಂಧಾನ ಮಾಡುವ ಅಂತರಂಗದ ಅಷ್ಟಾವರಣಗಳು. ಬಹಿರಂಗದಿಂದ ಅಂತರಂಗದ ಸಾಧನೆ ಮಾಡುವಾಗ  "ಅರಿವೇ ಗುರು, ಅಚಾರವೇ ಲಿಂಗ, ಅನುಭಾವವೇ ಜಂಗಮ" ಎಂದು ಅರಿತುಕೊಳ್ಳಬೇಕು.

ಬಹಿರಂಗದ ಅಷ್ಟಾವರಣಗಳಾದ ಗುರು , ಲಿಂಗ, ಜಂಗಮಗಳ ಮೂಲಕ ಅಂತರಂಗದ ಅಷ್ಟಾವರಣಗಳಾದ ಅರಿವು ,ಆಚಾರ, ಅನುಭಾವಗಳನ್ನು ಅನುಸಂಧಾನಿಸಿಕೊಂಡು ಶಟ್ಸ್ತಲದ  ಮಾರ್ಗದಲ್ಲಿ ಸಾಧಕ ನಡೆಯಬೇಕು. ಆವಾಗಲೇ ಭವಿ ಭಕ್ತನಾಗಿ  ಶಟ್ಸ್ತಲ ಪಥದಲ್ಲಿ ನಡೆದು ಮುಕ್ತನಾಗುತ್ತಾನೆ. ಭವಿಯಿಂದ ಭಕ್ತನಾಗಿ ಅದನಂತರ ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ನಿಜೈಕ್ಯನಾಗಿ  ಮುಕ್ತಿಯ ಪಡೆಯಬೇಕು ಎನ್ನುತ್ತಾರೆ ಅಲ್ಲಮ ಪ್ರಭುಗಳು.
- ✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು,
#ಪರಮಜ್ಞಾನವೆಂಬ_ಸಸಿಗೆ,
#ಅರಿದಿಹೆನೆಂದರೆ_ಅರಿವಿಂಗಸಾಧ್ಯ,
#ಅಂಗದ_ಮೇಲೆ_ಆಯತವಾದುದೆ_ಇಷ್ಟಲಿಂಗ,
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma