ವಚನ ದಾಸೋಹ
#ವಚನ:
#ಘನಗಂಭೀರ ಮಹಾವಾರುಧಿಯಲ್ಲಿ
ನೊರೆ ತೆರೆ ಬುದ್ಬುದ ಫೇನ ತರಂಗಗಳು ತೋರಿತ್ತಲ್ಲಾ ಎಂದಡೆ
ಅವು ಬೇರೆಯಾಗಬಲ್ಲವೆ?
ಪರಶಿವನೆಂಬ ಅಂಬುಧಿಯಲ್ಲಿ
ಸಕಲ ಬ್ರಹ್ಮಾಂಡಗಳಾದವಲ್ಲದೆ ಬೇರಾಗಬಲ್ಲವೆ?
ಇದ ಬೇರೆಂಬ ಅರೆಮರುಳರ ನಾನೇನೆಂಬೆ?
ವಿಶ್ವವ ತಿಳಿದು ನೋಡಲು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ತಾನೆ!
- ಶರಣ ಚಂದಿಮರಸ
*ಅರ್ಥ*:
ಕಲಬುರ್ಗಿ ಜಿಲ್ಲೆಯ ಕೆಂಭಾವಿಯಲ್ಲಿ ಅರಸನಾಗಿದ್ದ ಇವರು ಬಸವಣ್ಣನವರ ಹಿರಿಯ ಸಮಕಾಲೀನ ಶರಣರು. ಇವರು ಮಹಾಮಹಿಮ ವೀರ ಶಿವಶರಣರು. ಇವರ ವಚನಗಳು ಅಧ್ಯಾತ್ಮಿಕ ಜ್ಞಾನದಲ್ಲಿ ತುಂಬಾ ಶ್ರೇಷ್ಠತರವಾದುವೆಂದೂ ಈತನ ವಚನಗಳನ್ನು ಉದಾಹರಿಸದ 'ಯಾವ ವಚನ ಸಂಗ್ರಹಕಾರನೂ ಇಲ್ಲ' ವೆಂಬುದು ಮಾನ್ಯರಾದ ಫ ಗು ಹಳಕಟ್ಟಿಯವರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ವಚನದಲ್ಲಿ ಶರಣಧರ್ಮದಲ್ಲಿ ಸೃಷ್ಟಿಕರ್ತನ ಕಲ್ಪನೆ, ಸೃಷ್ಟಿಕರ್ತನ ಸರ್ವಶಕ್ತಿತ್ವದ ಸ್ವರೂಪವನ್ನು, ಸೃಷ್ಟಿಕರ್ತನಿಗೂ, ಸೃಷ್ಟಿಯಲ್ಲಿರುವ ಜೀವರಿಗೂ ಇರುವ ಸಂಬಂಧವನ್ನು ವಿವೇಚಿಸಿದ್ದಾರೆ.
*ಘನಗಂಭೀರ ಮಹಾವಾರುಧಿಯಲ್ಲಿ
ನೊರೆ ತೆರೆ ಬುದ್ಬುದ ಫೇನ ತರಂಗಗಳು ತೋರಿತ್ತಲ್ಲಾ ಎಂದಡೆ
ಅವು ಬೇರೆಯಾಗಬಲ್ಲವೆ?*
ಘನಗಂಭೀರ ಮಹಾಸಾಗರದಲ್ಲಿ ಕಂಡು ಬರುವ ನೊರೆ, ತೆರೆ, ಗುಳ್ಳೆ, ತರಂಗಗಳನ್ನು ಸಾಗರದಿಂದ ಬೇರೆ ಎನ್ನಬಹುದೆ? ಅವು ಸಾಗರದ ಮೇಲ್ಭಾಗದಲ್ಲಿ ಮಾತ್ರ ಕಂಡು ಬಂದರೂ ಅವು ಸಾಗರದ ಭಾಗವೇ ಆಗಿರುತ್ತವೆ. ಅವು ಸಾಗರದಿಂದ ಬೇರೆಯಾಗಬಲ್ಲುವೆ? ಅದು ಸಾಧ್ಯವಿಲ್ಲ.
*ಪರಶಿವನೆಂಬ ಅಂಬುಧಿಯಲ್ಲಿ
ಸಕಲ ಬ್ರಹ್ಮಾಂಡಗಳಾದವಲ್ಲದೆ ಬೇರಾಗಬಲ್ಲವೆ?*
ಪರಶಿವನೆಂಬ ಸಾಗರದಲ್ಲಿ ಸಕಲ ಬ್ರಹ್ಮಾಂಡಗಳಾದವು. ನಾವು ಕಾಣುವ ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಆಕಾಶಗಂಗೆಗಳು, ಇವನ್ನು ಹೊಂದಿದ ಬ್ರಹ್ಮಾಂಡಗಳು, ನಮಗೆ ಕಾಣದೇ ಇರುವ ಬ್ರಹ್ಮಾಂಡ, ಇವೆಲ್ಲ ಪರಶಿವನಿಂದಲೇ ಜನ್ಮತಾಳಿವೆ. ಆತನಲ್ಲಿಯೇ ಇರುತ್ತವೆ ಮತ್ತು ಆತನಲ್ಲಿಯೇ ನಶಿಸುತ್ತವೆ. ಅಂದಮೇಲೆ ಅವು ಆತನಿಂದ ಹೇಗೆ ಬೇರೆಯಾಗಬಲ್ಲವು?
*ಇದ ಬೇರೆಂಬ ಅರೆಮರುಳರ ನಾನೇನೆಂಬೆ?
ವಿಶ್ವವ ತಿಳಿದು ನೋಡಲು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ತಾನೆ!*
ಇದನ್ನು ಅರ್ಥಮಾಡಿಕೊಳ್ಳದೆ ಅವುಗಳನ್ನು ಬೇರೆ ಎನ್ನುವ ಅರೆಮರುಳರನ್ನು ಏನೆನ್ನಬೇಕು ಎಂದು ಕೇಳುತ್ತಾರೆ ಹಿರಿಯ ಶರಣ ಚಂದಿಮರಸರು. ಮಹಾಸಾಗರದಲ್ಲಿ ಕಂಡುಬರುವ ನೊರೆ, ತೆರೆ, ಗುಳ್ಳೆ, ತರಂಗಗಳು ಮಹಾಸಾಗರದ ನೀರಿನಿಂದಲೇ ಆದಂತೆ; ವಿಶ್ವವನ್ನು ಅನುಭಾವದ ದೃಷ್ಠಿಯಿಂದ ತಿಳಿದು ನೋಡಲು, ಪ್ರಕೃತಿಯಲ್ಲಿಯ ಶಿವತತ್ವವೇ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ವಸ್ತುಗಳಲ್ಲಿ ಪ್ರಕಟವಾಗುತ್ತದೆ. ಸಂಪೂರ್ಣ ವಿಶ್ವವು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ತಾನೆ ಎಂದು ತಮ್ಮ ಇಷ್ಟದೇವನನ್ನು ನೆನೆಸಿ ಕೊಳ್ಳುತ್ತಾರೆ. ಸಂಪೂರ್ಣ ವಿಶ್ವವೇ ಶರಣರು ಪೂಜಿಸುವ ಮಹಾಲಿಂಗ.
ಪ್ರಕೃತಿಯಲ್ಲಿ ಬೇರೆ ಬೇರೆ ವಸ್ತುಗಳು ಬಹು ಭಿನ್ನ ಭಿನ್ನವಾಗಿ ಕಾಣುತ್ತವೆ. ಅಂದ ಮಾತ್ರಕ್ಕೆ ಅವನ್ನು ಬೇರೆ ಬೇರೆ ಎನ್ನಲಾಗುವುದಿಲ್ಲ. ಒಂದೇ ಶಿವತತ್ವ ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತದೆ. ಆ ವಿಭಿನ್ನವಾದ ರೂಪಗಳ ಹಿಂದೆಯೂ ಕೂಡ ಅದೇ ಶಿವತತ್ತ್ವ ಅಡಕವಾಗಿದೆ, ಆ ಎಲ್ಲವೂ ಕೂಡ ಶಿವಾಂಶ ಎಂದು ಕಂಡುಕೊಳ್ಳಲು ಸೂಕ್ಷ್ಮವಾದ ದೃಷ್ಟಿಯ ಅವಶ್ಯಕತೆ ಇದೆ. ಈ ಸೂಕ್ಷ್ಮ ದೃಷ್ಟಿ ಅಳವಡಿಸಕೊಳ್ಳಬೇಕಾದರೆ ಧ್ಯಾನ, ಶಿವಯೋಗ ಸಾಧನೆ, ಅನುಭಾವದ ದೃಷ್ಟಿಯ ಅವಶ್ಯಕತೆ ಇದೆ.
ಪರಶಿವನೆಂಬ ಅಂಬುಧಿಯಲ್ಲಿ ನೆನಹು ಮಾತ್ರದಿಂದ ಉಂಟಾದ ನೊರೆ ತೆರೆ ಬುದ್ಬುದ ಫೇನ ತರಂಗಗಳು ಈ ಸೃಷ್ಟಿ ಎಂಬ ಶರಣರ ಅಭಿಪ್ರಾಯ ಸೃಷ್ಟಿಕರ್ತನ ಸರ್ವ ಶಕ್ತಿತ್ವದ ಸ್ವರೂಪವನ್ನು ಸೂಚಿಸುತ್ತದೆ.
ಇದೇ ಅಭಿಪ್ರಾಯವನ್ನು ದಿವ್ಯಜ್ಞಾನಿ, ವೈರಾಗ್ಯಮೂರ್ತಿ, ಮಹಾಜಂಗಮ, ಅನುಭಾವಿ, ತತ್ತ್ವಜ್ಞಾನಿ, ದಾರ್ಶನಿಕ ವ್ಯೋಮಕಾಯ ಅಲ್ಲಮಪ್ರಭುಗಳು ಅರುಹಿದ್ದಾರೆ. ಲಿಂಗಾಯತ ಧರ್ಮದ ಅಧ್ಯಾತ್ಮಿಕ ವಿಚಾರಗಳಿಗೆ ಮುನ್ನುಡಿ ಬರೆದ ಅಲ್ಲಮಪ್ರಭುಗಳ ವಚನ ಇದನ್ನೇ ತಿಳಿಸುತ್ತದೆ.
#ಸಮುದ್ರದೊಳಗೆ ನೊರೆ ತೆರೆಗಳು ನೆಗಳ್ದವೆಂದಡೆ,
ತಾ ಸಮುದ್ರದಿಂದ ಅನ್ಯವಪ್ಪವೆ ?
ನಿರ್ವಿಕಾರ ನಿತ್ಯ ನಿರಂಜನ ನಿರ್ಗುಣ ಪರಿಪೂರ್ಣ ನಿರ್ವಿಕಲ್ಪ
ಪರಬ್ರಹ್ಮಶಿವನಿಂದ ಜಗತ್ತು ಉದಯಿಸಿತ್ತು ಎಂದಡೆ,
ಶಿವನಿಂದ ಅನ್ಯವೆನಬಹುದೆ ?
ಇಂತಪ್ಪ ಅರಿವು, ನೀವು ಕೊಟ್ಟ ಸಮ್ಯಕ್ ಜ್ಞಾನಕ್ಕೆ
ಅರಿದಪ್ಪುದಯ್ಯಾ ಗುಹೇಶ್ವರಾ / 1504
*ಭಾವ*:
ಶರಣರು ಸೃಷ್ಟಿ, ಸೃಷ್ಟಿಕರ್ತ, ಜೀವ, ಜಗತ್ತು ಇವುಗಳ ಸಂಬಂಧ ವಿವೇಚಿಸಿದ್ದಾರೆ. ಮಣ್ಣಿನಿಂದ ಹುಟ್ಟಿದ ಕೊಡ ಮೊದಲಾದವುಗಳು ಮಣ್ಣಿನಿಂದ ಹೇಗೆ ಭಿನ್ನಗಳಲ್ಲವೋ ಹಾಗೆಯೇ ಶಿವನಿಂದುತ್ಪನ್ನವಾದ ಈ ಚರಾಚರಾತ್ಮಕವಾದ ಜಗತ್ತು ಶಿವನಿಂದ ಭಿನ್ನವಲ್ಲ, ಸಮುದ್ರದಿಂದ ಹುಟ್ಟಿದ ನೊರೆ ತೆರೆ ಬುದ್ಬುದಾದಿಗಳು ಸಮುದ್ರದಿಂದ ಹೇಗೆ ಭಿನ್ನವಲ್ಲವೋ ಹಾಗೆಯೇ ಶಿವತತ್ತ್ವದಿಂದ ಉತ್ಪನ್ನವಾದ ಜಗತ್ತು ಶಿವನಿಂದ ಭಿನ್ನವಾದುದಲ್ಲ. ಈ ಭಾವದ ಹಂತದಲ್ಲಿ ನಿಂತು ನೋಡಿದ ಶರಣರಿಗೆ ಶಿವ ಸರ್ವಗತನಾಗಿ ತೋರಿದ್ದಾನೆ.
- ✍️Dr Prema Pangi
#ಪ್ರೇಮಾ_ಪಾಂಗಿ,#ಚಂದಿಮರಸ
#ಘನಗಂಭೀರ_ಮಹಾವಾರುಧಿಯಲ್ಲಿ
#ಸಮುದ್ರದೊಳಗೆ_ನೊರೆತೆರೆಗಳು_ನೆಗಳ್ದವೆಂದಡೆ,
Comments
Post a Comment