ವಚನ ದಾಸೋಹ
#ವಚನ:
#ಅಷ್ಟಾಂಗಯೋಗದಲ್ಲಿ
ಯಮ, ನಿಯಮಾಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾದಿ, ಎರಡು ಯೋಗ.
ಅಲ್ಲಿ ಅಳಿದು ಕೂಡುವುದೊಂದು ಯೋಗ,
ಅಳಿಯದೆ ಕೂಡುವುದೊಂದು ಯೋಗ.
ಈ ಎರಡು ಯೋಗದೊಳಗೆ,
ಅಳಿಯದೆ ಕೂಡುವ ಯೋಗವು
ಅರಿದು ಕಾಣಾ ಗುಹೇಶ್ವರಾ. / 240
- ಅಲ್ಲಮ ಪ್ರಭುಗಳು
*ಅರ್ಥ*:
ಅಷ್ಟಾಂಗಯೋಗವು, ಎಂಟು ಅಂಗಗಳಿಂದ ಕೂಡಿದೆ. ಯಮ, ನಿಯಮ, ಆಸನ ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಎಂಟು ಅಂಗದ ಮೇಲೆ ನಿಂತಿದೆ. ಅಲ್ಲಮ ಪ್ರಭುಗಳು ಶರಣರ ಶಿವಯೋಗವೂ ಅಷ್ಟಾಂಗಯೋಗ ಎಂದು ಹೇಳಿ ಪತಂಜಲಿ ಅಷ್ಟಾಂಗ ಯೋಗಕ್ಕೂ ಶಿವಯೋಗಕ್ಕೂ ಇರುವ ಅಂತರ ತಿಳಿಸಿ ಶಿವಯೋಗವು ಅತ್ಯಂತ ಶ್ರೇಷ್ಠವಾದದ್ದು, ಅದನ್ನು ಪಾಲಿಸಿರಿ ಎಂದು ತಿಳಿಹೇಳಿದ್ದಾರೆ.
ಯೋಗ' ಶಬ್ದ ಸಂಸ್ಕೃತ ಬಾಷೆಯ 'ಯುಜ್' ಎಂಬ ಪದದಿಂದ ಆಗಿದೆ. ಯೋಗವೆಂದರೆ 'ಜೋಡಿಸು' 'ಸೇರಿಸು. ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. ಪತಂಜಲಿ ಮುನಿಗಳ ಪ್ರಕಾರ
”ಯೋಗಶ್ಚಿತ್ತವೃತ್ತಿ ನಿರೋಧಃ ” – ಚಿತ್ತ ವೃತ್ತಿಗಳ ಚಂಚಲತೆಯ ನಿವಾರಣೆಯೇ ಯೋಗ. ಸುಮಾರು ಎರಡುವರೆ ಸಾವಿರ ವರ್ಷಕ್ಕೂ ಹಿಂದೆ ಪತಂಜಲಿ ಮಹಾಮುನಿಗಳು 195 ಸೂತ್ರಗಳ ಯೋಗಸೂತ್ರವನ್ನು ರಚಿಸಿರುವರು. ಪತಂಜಲಿಯ ಅಷ್ಟಾಂಗ ಯೋಗದ ಮುಖ್ಯ ಅಂಶ ಚಿತ್ತವೃತ್ತಿನಿರೋಧ ಮತ್ತು ಅದು "ಅಳಿದು ಕೂಡುವ" ಯೋಗ. ಶರಣರ ಶಿವಯೋಗದ ಮುಖ್ಯ ಅಂಶ ಲಿಂಗ ಅಂಗ ಸಮರಸ (ಲಿಂಗಾಂಗ ಸಾಮರಸ್ಯ) ಮತ್ತು ಅದು "ಅಳಿಯದೆ ಕೂಡುವ" ಯೋಗ. ಅದಕ್ಕೇ ಶರಣರ ಶಿವಯೋಗ ಅತ್ಯಂತ ವಿಶೇಷವಾದುದು. ಅದನ್ನು ಸಾಧಿಸಿದವರೇ ಶಿವಯೋಗಿಗಳು.
*ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಸಮಾದಿ, ಎರಡು ಯೋಗ*.
ಪತಂಜಲಿ ಅಷ್ಟಾಂಗ ಯೋಗವೆಂದರೆ ಚಿತ್ತವೃತ್ತಿನಿರೋಧವೆಂದು ವಿವರಿಸಿ ಯೋಗಸೂತ್ರಕ್ಕೆ ಸಾಧನರೂಪವಾಗಿ ಯಮ, ನಿಯಮ , ಆಸನ , ಪ್ರಾಣಾಯಾಮ , ಪ್ರತ್ಯಾಹಾರ , ಧ್ಯಾನ , ಧಾರಣ , ಸಮಾಧಿ ಎಂಬ ಎಂಟು ಅಂಗಗಳನ್ನು ಎರಡನೆಯ ಅಧ್ಯಾಯವಾದ ಸಾಧನಪಾದದಲ್ಲಿ ಹೇಳಿದೆ.
1.ಯಮ(ಆಚರಣೆಗಳು):
ಅಹಿಂಸಾ, ಸತ್ಯ, ಅಸ್ತೇಯ(ಕದಿಯದಿರುವದು), ಬ್ರಹ್ಮಚರ್ಯ, ಅಪರಿಗ್ರಹ(ದುರಾಸೆ ಇಲ್ಲದಿರುವುದು) ಇವುಗಳ ಆಚರಣೆ.
2.ನಿಯಮ:
a.ಶೌಚ(ಸ್ವಚ್ಛತೆ)ಎರಡು ಬಗೆ -ಬಾಹ್ಯಶೌಚ ಮತ್ತು ಆಭ್ಯಂತರ ಶೌಚ. ಸ್ನಾನಾದಿಗಳಿಂದ ಶುದ್ಧನಾಗುವುದು ಬಾಹ್ಯ ಶೌಚ. ಮೈತ್ರಿ, ಕರುಣೆ ಮುಂತಾದ ಭಾವನೆಗಳಿಂದ ಆಭ್ಯಂತರ ಶುದ್ಧಿಯಾಗುತ್ತದೆ.
b.ಸಂತೋಷ: ಸುಖದಲ್ಲಾಗಲೀ, ದುಃಖದಲ್ಲಾಗಲೀ ಸದಾ ಪ್ರಸನ್ನತೆಯನ್ನು ಉಳಿಸಿಕೊಳ್ಳುವುದೇ ಸಂತೋಷ.
c.ತಪಸ್ಸು,
d.ಸ್ವಾಧ್ಯಾಯ(ಸ್ವಯಂ ಓದು) ಈಶ್ವರನ ನಾಮಸ್ಮರಣೆ, ಜಪ, ಅಧ್ಯಯನ, ವ್ರತಗಳನ್ನು ಆಚರಿಸುವುದು. ಇಷ್ಟದೇವತೆಯ ಸಾಕ್ಷಾತ್ಕಾರವೇ ಸ್ವಾಧ್ಯಾಯದ ಫಲ. e.ಈಶ್ವರಪ್ರಣಿಧಾನ(ಈಶ್ವರನಲ್ಲಿ ಸಮರ್ಪಣೆ)
ಅಂತರ್ಬಹಿರಿಂದ್ರಿಯಗಳಿಂದ ಫಲಗಳನ್ನು ನಿರೀಕ್ಷಿಸದೇ ಭಗವಂತನಿಗೆ ಶರಣಾಗಿರುವುದೇ ಈಶ್ವರಪ್ರಣಿಧಾನ.
ಇವುಗಳ ಅನುಷ್ಠಾನವೇ ನಿಯಮ.
3.ಆಸನ:
ಧೀರ್ಘಕಾಲ ಧ್ಯಾನ ಅಭ್ಯಾಸಕ್ಕೆ ಅನುಕೂಲವಾದ ಸ್ಥಿರವೂ ಸುಖವೂ ಆದ ಭಂಗಿ. ಸಿದ್ಧಾಸನ, ಪದ್ಮಾಸನ ಮೊದಲಾದವು
4.ಪ್ರಾಣಾಯಾಮ:
"ಶ್ವಾಸಪ್ರಶ್ವಾಸಯೋರ್ಗತಿವಿಚ್ಛೇದಃ"
ಶ್ವಾಸ-ಪ್ರಶ್ವಾಸಗಳ ಗಮನಾಗಮನಗಳನ್ನು ತಡೆಯುವುದು. ಉಸಿರಾಟದ ಗತಿ ನಿಯಂತ್ರಿಸಿ ಪ್ರಾಣದ ಗತಿಗಳನ್ನು ನಿಯಂತ್ರಿಸುವುದು. ಪ್ರಾಣಾಯಾಮದಿಂದ ಶುದ್ಧವಾದ ಚಿತ್ತವನ್ನು ಒಂದೆಡೆ ನಿಲ್ಲಿಸುವುದು.
5.ಧಾರಣ :
ಹಾಗೆ ಅಂತರ್ಮುಖಗೊಂಡ ಮನಸ್ಸನ್ನು ಬೇರೆ ಬೇರೆ ಸ್ಥಳಗಳಲ್ಲಿ ಚಿತ್ತವನ್ನು ನಿಲ್ಲಿಸಿದರೆ ಅದನ್ನು ಧಾರಣಾ ಎನ್ನಲಾಗುತ್ತದೆ.
6.ಪ್ರತ್ಯಾಹಾರ:
ಧಾರಣದಲ್ಲಿರುವ ವಸ್ತುವನ್ನೂ ಚಿತ್ತದಲ್ಲಿಯೇ ನಿಲ್ಲುವಂತೆ ಮಾಡುವುದು. ಬಹಿರ್ಮುಖವಾದ ಕರಣಗಳನ್ನು ಅಂತರ್ಮುಖಿಗೊಳಿಸುವುದು.
7. ಯೋಗಾಂಗ ಧ್ಯಾನ:
ಅವಿಚ್ಛಿನ್ನವಾಗಿ ಒಂದೇ ಧ್ಯೇಯವಸ್ತುವಿನಲ್ಲಿ ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವುದೇ ಧ್ಯಾನ. ಆಗ ಧ್ಯಾನ ಧ್ಯಾನವಸ್ತುವಿನ ಸ್ವರೂಪವನ್ನೇ ಪಡೆದು ಚಿತ್ತದ ಸ್ವರೂಪವನ್ನು ಕಳೆದುಕೊಳ್ಳುವುದು
8.ಸಮಾಧಿ :
"ತದೇವಾರ್ಥ ಮಾತ್ರ ನಿರ್ಭಾಸಂ ಸ್ವರೂಪಶೂನ್ಯಮಿವ ಸಮಾಧಿಃ".
ತಾನು ಧ್ಯಾನಿಸುತ್ತಿದ್ದೇನೆ ಎನ್ನುವುದೂ ಸಮಾಧಿಯಲ್ಲಿ ಮರೆತುಹೋಗುತ್ತದೆ.
ಇದು ನಿರೋಧಯೋಗ,
ನಿರೋಧಯೋಗದಲ್ಲಿ ಕ್ಷಿಪ್ತ, ಮೂಢ, ವಿಕ್ಷಿಪ್ತ ಮುಂತಾದ ವೃತ್ತಿಗಳನ್ನೆಲ್ಲ ನಿರೋಧಿಸುವುದು ಮುಖ್ಯ.
ಶಿವಯೋಗಕ್ಕೆ ಸಂಬಂಧಪಟ್ಟ ಅಷ್ಟಾಂಗಗಳ ವಿವರಣೆ :
1. ಯಮ:
ಹಿಂಸೆ(ಕಳಬೇಡ,ಕೊಲಬೇಡ), ಅನೃತ(ಹುಸಿಯ ನುಡಿಯಲು ಬೇಡ) ತನ್ನಬಣ್ಣಿಸಬೇಡ, ಪರಧನ, ಪರಸತಿ, ಪರನಿಂದೆ(ಹಳಿಯಲು ಬೇಡ) ಇವು ಬಿಟ್ಟು ಇಷ್ಟಲಿಂಗ ಪೂಜೆ ಮಾಡಬೇಕು.
2. ನಿಯಮ:
ಶುಚಿತ್ವ, ಪುಣ್ಯಕರ್ಮ(ಕಾಯಕ), ಮಂತ್ರ(ಓಂ ನಮಃ ಶಿವಾಯ), ಜಪ(ಓಂ, ಶಿವೊಂ)ಗಳನ್ನು ಆಚರಿಸುತ್ತ ಲಿಂಗವನ್ನು ಅರ್ಚಿಸುವುದು.
3. ಆಸನ:
ಸಿದ್ಧಾಸನ, ಪದ್ಮಾಸನ ಮುಂತಾದ ಆಸನಗಳಲ್ಲಿ ಸುಖವಾಗಿಯೂ ಸ್ಥಿರವಾಗಿಯೂ ಬೆನ್ನುಹುರಿ ನೇರವಾಗಿಯೂ ಕುಳಿತು ಲಿಂಗಪೂಜೆಯನ್ನು ಮಾಡುವುದು.
4. ಪ್ರಾಣಾಯಾಮ :
ವಾಯುವನ್ನು ನಿಲ್ಲಿಸಿ ಆ ಮೂಲಕ ಮನಸ್ಸನ್ನು, ಪ್ರಾಣವನ್ನು ನಿಶ್ಚಲಗೊಳಿಸಿ ತದೇಕದೃಷ್ಟಿಯುಳ್ಳವನಾಗಿ ಓಂಕಾರವನ್ನು ಜಪಿಸುತ್ತ ಲಿಂಗವನ್ನು ಪೂಜಿಸುವುದು.
5. ಪ್ರತ್ಯಾಹಾರ:
ಮಿತಾಹಾರಿಯೂ ಮಿತವ್ಯವಹಾರಿಯೂ ಆಗಿ ಬಾಹ್ಯ ವಿಷಯಗಳಲ್ಲಿ ಹರಿದಾಡುವ ಇಂದ್ರಿಯಗಳನ್ನೂ ಮನಸ್ಸನ್ನೂ ಲಿಂಗ ಮುಖಗೊಳಿಸಿ ಲಿಂಗಾರ್ಚನೆಯ ಮಾಡುವುದು.
6. ಧ್ಯಾನ:
ಕರಸ್ಥಲದಲ್ಲಿ ಇಷ್ಟಲಿಂಗವಿರಿಸಿ ದೃಷ್ಟಿಯನ್ನು ಅದರಲ್ಲಿ ಕೀಲಿಸಿ, ನಿಶ್ಚಲ ಮನಸ್ಸಿನಿಂದ ಇರುವುದೇ ಬಾಹ್ಯಧ್ಯಾನ(ಇಷ್ಟಲಿಂಗ ಪೂಜೆ).
ದೇಹಾಂತರದ ಸೂಕ್ಷ್ಮದೇಹದಲ್ಲಿ
ನವಚಕ್ರಗಳಲ್ಲಿ ಆಚಾರಾದಿ ನವಲಿಂಗಗಳನ್ನು ಕ್ರಮವಾಗಿ ಸ್ಥಾಪಿಸಿ ಆ ಲಿಂಗದ ನೆನಹಿನಲ್ಲಿರುವುದೇ ಅಂತರ್ಧ್ಯಾನ (ಅಂತಃಪೂಜೆ). ಅಂತಃಪೂಜೆಯು ಕಠಿಣವಾದುದೇನೋ ನಿಜ. ಆದ್ದರಿಂದಲೇ ಪ್ರಾಣಲಿಂಗದ ಪೂಜೆಗಿಂತ ಮೊದಲು ಇಷ್ಟಲಿಂಗ ಪೂಜೆಯ ಅವಶ್ಯಕತೆಯನ್ನು ತಿಳಿಸಿಕೊಟ್ಟಿರುವರು.
7. ಧಾರಣ:
ಆ ಲಿಂಗವು ದೇಹ, ದೃಷ್ಟಿ ಹಾಗೂ ಮನಸ್ಸುಗಳನ್ನು ತುಂಬಿ ನಿಲ್ಲುವುದು.
8. ಸಮಾಧಿ:
ಆಚಾರಾದಿ ಷಡ್ಡಿಂಗಗಳನ್ನು ಇಷ್ಟ, ಪ್ರಾಣ, ಭಾವಲಿಂಗಗಳಲ್ಲಿ ಸಮಾವೇಶಗೊಳಿಸಬೇಕು. ಬಳಿಕ ಆ ಮೂರು ಲಿಂಗಗಳನ್ನು ಆದಿಲಿಂಗವಾದ ಮಹಾಲಿಂಗದಲ್ಲಿ ಅಡಗಿಸಬೇಕು. ಆಗ ತನು, ಕರಣಗಳ ಭಾವವಿಲ್ಲ. ಅಹಂ ಎಂಬ ಪ್ರಜ್ಞೆ ಇಲ್ಲ. ಸರ್ವವೂ ಲಿಂಗವಾದ ಆ ಅವಸ್ಥೆಯೆ ಸಮಾಧಿ.
*ಅಲ್ಲಿ ಅಳಿದು ಕೂಡುವುದೊಂದು ಯೋಗ, ಅಳಿಯದೆ ಕೂಡುವುದೊಂದು ಯೋಗ*
ಮೊದಲನೆಯ ಚಿತ್ತನಿರೋಧರೂಪವ ಯೋಗವನ್ನು ಸಾಧಿಸಿದವನು ಪ್ರಾರಬ್ದವಾದ ದೇಹವು ಅಳಿದು ಹೋದ ಬಳಿಕ ಶಿವನಲ್ಲಿ ಕೂಡುತ್ತಾನೆ. ಅವನದು ವಿದೇಹ ಕೈವಲ್ಯ ಸ್ಥಿತಿ. ಲಿಂಗಾಂಗ ಸಾಮರಸ್ಯರೂಪ ಶಿವಯೋಗವನ್ನು ಸಾಧಿಸಿದವನು ದೇಹವಿರುವಾಗಲೆ ಪರಮುಕ್ತನಾಗುತ್ತಾನೆ, ಸಾಮರಸ್ಯ ಸೌಖ್ಯವನ್ನು ಅನುಭವಿಸುತ್ತಾನೆ. ಇವನದು ಸದ್ಯೋನ್ಮುಕ್ತ ಸ್ಥಿತಿ.
*ಈ ಎರಡು ಯೋಗದೊಳಗೆ ಅಳಿಯದೆ ಕೂಡುವ ಯೋಗವರಿದು ಕಾಣಾ, ಗುಹೇಶ್ವರಾ *
ಈ ಎರಡು ಯೋಗಗಳಲ್ಲಿ ಅಳಿಯದೆ ಕೂಡುವ ಶಿವಯೋಗವು ವಿಶೇಷವಾದುದು. ಶ್ರೇಷ್ಟವಾದುದು.
ಅದನ್ನು ಅರಿತು ಈಶ್ವರನನ್ನು ಕಾಣು ಎಂದು ಹೇಳಿದ್ದಾರೆ ಅಲ್ಲಮ ಪ್ರಭುಗಳು.
ಭಾವ:
*ಶಿವಯೋಗ*:
ಪರಮಜಂಗಮಮೂರ್ತಿ ಅಲ್ಲಮಪ್ರಭುಗಳು ದೇಶ ಸಂಚಾರಿಯಾಗಿ ಎಲ್ಲ ಯೋಗ ಮಾರ್ಗಗಳ, ಎಲ್ಲ ಧ್ಯಾನಮಾರ್ಗಗಳ ಸಾಧನೆ ಮಾಡಿ, ಕಲ್ಯಾಣಕ್ಕೆ ಬಂದು ಶರಣರ ಸಂಗದಲ್ಲಿ ಶಿವಯೋಗ ಮಾರ್ಗ ಪ್ರತಿಷ್ಠಾಪಿಸಿದರು. ಶಿವಯೋಗವು ಕನ್ನಡನಾಡಿನಲ್ಲಿ ಸ್ಥಾಪನೆಯಾದ ಒಂದು ವಿಶಿಷ್ಟವಾದ ಯೋಗ ಮಾರ್ಗ. ಎಲ್ಲ ನವಚಕ್ರ ಗಳಲ್ಲಿ ಕನ್ನಡದ ಅಕ್ಷರಗಳೇ ಬೀಜಾಕ್ಷರಗಳು. ಸಂಪೂರ್ಣ ಕನ್ನಡ ಅಕ್ಷರಮಾಲೆಯ ಎಲ್ಲ ಅಕ್ಷರಗಳೇ ನವಕಮಲಗಳ ದಳದ ಅಕ್ಷರಗಳು. ಶಿಖಾಚಕ್ರದಲ್ಲಿ ಗುರು ಬಸವಣ್ಣನವರನ್ನು ನಿರಾವಲಂಬ ಶೂನ್ಯಮೂರ್ತಿಯಾಗಿ ತ್ರಿದಳ ಕಮಲದಲ್ಲಿ ಬಸವ ಅಕ್ಷರತ್ರಯಗಳನ್ನು ಸ್ಥಾಪಿಸಿದರು. ಶಿಖಾಚಕ್ರದ ಬೀಜಾಕ್ಷರಗಳು: ಬಂ ಸಂ ವಂ
ಇವು ಬಸವ ಅಕ್ಷರತ್ರಯಗಳು.
ಚಿನ್ನಾದ "ಬ" ಕಾರ, ಚಿದ್ಬಿಂದು "ಸ"ಕಾರ ಚಿತ್ಕಲೆ "ವ "ಕಾರ,
ಬಂ ಸಂ ವಂ ವೆಂದರೆ ನಾದ ಬಿಂದು ಕಳೆ
- ಚೆನ್ನಬಸವಣ್ಣನವರ ಕರಣಹಸಿಗೆ.
ಇದು ಗುರು ಬಸವಣ್ಣನವರಿಗೆ ಅಲ್ಲಮ ಪ್ರಭುಗಳು ಕೊಟ್ಟ ಪೂಜ್ಯ ಸ್ಥಾನ. ಅಲ್ಲಮ ಪ್ರಭುಗಳು ಶಿವಯೋಗ ಸಾಧನೆಯಿಂದ ಮಂತ್ರವ್ಯೋಮ ಕಾಯವನ್ನು ಸಂಪಾದಿಸಿ, ಪ್ರಚಲಿತಗೊಳಿಸಿ ಶಿವಯೋಗಿಗಳ ಒಂದು ಪರಂಪರೆಯನ್ನೇ ರೂಢಗೊಳಿಸಿದರು. ತಮ್ಮ ಸಂಪರ್ಕ ಸನ್ನಿವೇಶದಲ್ಲಿ ಬಂದ ಮಹಿಮರನ್ನು ಜ್ಯೋತಿ ಮುಟ್ಟಿದ ಜ್ಯೋತಿಯಂತೆ ಪ್ರಭಾಪುಂಜಿತಗೊಳಿಸಿದರು. ಶಿವಯೋಗದಿಂದ ಅವರು ಪಡೆದಿದ್ದ ಬಯಲು ಒಡಲಿನ ಗೂಢವು ಒಂದು ಅನುಪಮವಾದ ಬಯಲು ಸಂಸ್ಕೃತಿಯನ್ನು ತೆರೆದಿಟ್ಟಿರುತ್ತದೆ.
ಶಿವಯೋಗ ಪ್ರದೀಪಿಕೆಯಲ್ಲಿ ಪ್ರಾಣಲಿಂಗ ಪೂಜೆಯ ಅಷ್ಟವಿಧೋಪಚಾರಗಳನ್ನು ಯೋಗದ ಅಷ್ಟಾಂಗಗಳು ಹೋಲಿಸಿದ ಬಹಳ ವಿಸ್ತರಯವಾದ ವರ್ಣನೆಯನ್ನು ಕಾಣುತ್ತೇವೆ.
ಶಟ್ಸ್ಥಲದಲ್ಲಿ ಮೊದಲಿನ ಭಕ್ತ ಮಹೇಶ್ವರ ಪ್ರಸಾದಿ ಸ್ಥಲಗಳಲ್ಲಿ ಕ್ರಿಯಾಮಾರ್ಗದ ಬೋಧೆ ಇರುತ್ತದೆ. ಮುಂದೆ ಪ್ರಾಣಲಿಂಗ ಸ್ಥಲದಿಂದ ಜ್ಞಾನಮಾರ್ಗವೂ ಪ್ರಾರಂಭವಾಗುತ್ತದೆ. ಇಲ್ಲಿ ಆಂತರಿಕ ಚಿಲ್ಲಿಂಗ ಪೂಜೆ ಹಾಗೂ ಧ್ಯಾನದ ಮಾಹಿತಿಯನ್ನು ಕುರಿತು ತಿಳಿಯಪಡಿಸಲಾಗುತ್ತದೆ. ಪ್ರಾಣಲಿಂಗ ಪೂಜೆ ಮುಖಾಂತರವಾಗಿ ಕುಂಡಲಿನೀ ಶಕ್ತಿಯು ಜಾಗ್ರತವಾಗಿ ಕ್ರಮವಾಗಿ ಷಟ್‌ಚಕ್ರವನ್ನು ಭೇದಿಸಿ ಸಹಸ್ರಾರದಲ್ಲಿ ಶಿವನೊಡನೆ ಸಾಮರಸ್ಯವನ್ನು
ಪಡೆಯುತ್ತದೆ. ಸಹಸ್ರದಳದಿಂದ ಶೋಭಿತವಾದ ಬ್ರಹ್ಮಚಕ್ರದಲ್ಲಿ ಮೂವತ್ತೆಂಟು ಕಳೆಗಳಿಂದೊಡಗೂಡಿದ ಕುಂಡಲಿನೀ ಮಂಡಲದ ಮೇಲೆ ಲಿಂಗಾಂಗ ಸಾಮರಸ್ಯ ಲಕ್ಷಣವನ್ನು ವ್ಯಕ್ತಗೊಳಿಸುವ ಶಿವಯೋಗ ಸಂಪನ್ನನಾದ ಪ್ರಾಣಲಿಂಗಿಗೆ ಶಿವಾನಂದವು ಕರತಲಾಮಲಕ ವಾಗುವದು. ಶಿವಯೋಗದ ಲಕ್ಷಣವನ್ನು ತಿಳಿಸುತ್ತ, ಸರ್ಪಭೂಷಣ ಶಿವಯೋಗಿಗಳು ತೇಜೋಮಯವಾದ ಪರವಸ್ತುವು ಈ ಒಂಬತ್ತು ಚಕ್ರಗಳಲ್ಲಿ ಶಿವಲಿಂಗ ಸ್ವರೂಪದಿಂದ ಕಂಗೊಳಿಸುವುದು; ಆಯಾ ಸ್ಥಾನದಲ್ಲಿ ಅದರ ಅನುಸಂಧಾನದಿಂದ ಸಾಧಕನಿಗೆ ಒಂದೊಂದು ಬಗೆಯಾದ ಶಕ್ತಿಯು ಜಾಗ್ರತವಾಗಿ, ಕೊನೆಗೆ ಹಿಂಭಾಗದ ಪಶ್ಚಿಮ ಚಕ್ರದಲ್ಲಿ ಪರವಸ್ತುವಿನೊಡನೆ ಉರಿಕರ್ಪುರದಂತೆ ಬೆರೆಯುವನು-ಎಂದು ಹೇಳುತ್ತಾರೆ.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು
Comments
Post a Comment