ವಚನ ದಾಸೋಹ

#ವಚನ
#ಹೊತ್ತಾರೆ ಪೂಜಿಸಲು ಬೇಡ ಕಂಡಾ.
ಬೈಗೆಯೂ ಪೂಜಿಸಲು ಬೇಡ ಕಂಡಾ.
ಇರುಳುವುನು ಹಗಲುವನು ಕಳೆದು,
ಪೂಜೆಯನು ಪೂಜಿಸಲು ಬೇಕು ಕಂಡಾ,
ಇಂತಪ್ಪ ಪೂಜೆಯನು ಪೂಜಿಸುವರ,
ಎನಗೆ ನೀ ತೋರಾ ಗುಹೇಶ್ವರಾ. / 1623
- ಅಲ್ಲಮ ಪ್ರಭುಗಳು

Translation:
Don’t worship in the morning, you see!
Don’t worship in the evening, you see!
You need to worship without considering time night or day, you see!
Please show me the ones who worship this way, Oh Guheshvara..!

ಅರ್ಥ:
ಈಗ ಬೆಳಗಾಗಿದೆ, ಇದು ಪೂಜೆಯ ಸಮಯ. ಈಗ ಸಾಯಂಕಾಲವಾಗಿದೆ, ಇದು ಪೂಜೆಯ ಸಮಯ ಎಂದು ಪೂಜಿಸಬಾರದು. ಪೂಜೆಯು ಸಮಯವ್ರತವಾಗಬಾರದು. ಇರುಳು ಹಗಲಿನ ಭಾವ ಬಿಟ್ಟು ಭಕ್ತಿ ತುಂಬಿ ಮೈಮರೆದು ಲಿಂಗವನ್ನು ಪೂಜಿಸಬೇಕು. ಅದು ಶ್ರೇಷ್ಠವಾದ ಪೂಜೆ. ಅಂತಹ ಪೂಜೆಯನ್ನು ಮಾಡುವವರು ಅಲ್ಲಮಪ್ರಭುಗಳಿಗೆ ಪ್ರಿಯರು.

*ಹೊತ್ತಾರೆ ಪೂಜಿಸಲು ಬೇಡ ಕಂಡಾ
ಬೈಗೆ ಪೂಜಿಸಲು ಬೇಡ ಕಂಡಾ*

ಹೊತ್ತಾರೆ ಅಂದರೆ ಪ್ರಾತಃಕಾಲ, ಬೈಗು ಅಂದರೆ ಸಾಯಂಕಾಲ. ಬೆಳಗ್ಗೆ ಪೂಜೆ ಮಾಡುವುದು ಬೇಡ ನೋಡು,
ಸಾಯಂಕಾಲ ಪೂಜಿಸುವುದು ಬೇಡ ನೋಡು. ಸಾಮಾನ್ಯವಾಗಿ ಜನ ಪೂಜಿಸುವುದು ಈ ಎರಡು ಕಾಲಗಳಲ್ಲಿ. ಅವರಿಗೆ ಪೂಜೆ ಕಾಲಕಟ್ಟಳೆಯಾಗಿ ಮಾರ್ಪಟ್ಟಿದೆ. ಅವರು ಪೂಜಿಸುವುದು ಹೃದಯದಲ್ಲಿ ಭಕ್ತಿ ತುಂಬಿ ಬಂದಿದೆ ಎಂದಲ್ಲ,  ಪೂಜಿಸುವ ಸಮಯವಾಗಿದೆ ಎಂದು. ಇಂತಹ ಪೂಜೆ ಬರಿ ಯಾಂತ್ರಿಕ ಕ್ರಿಯೆ. ಅಲ್ಲಮಪ್ರಭುಗಳು ಕಾಲದ ಕಟ್ಟಿಗಾಗಿ ಪೂಜಿಸಬೇಡ ಎಂದಿದ್ದಾರೆ.

*ಇರುಳುವುನು ಹಗಲುವನು ಕಳೆದು,
ಪೂಜೆಯನು ಪೂಜಿಸಲು ಬೇಕು ಕಂಡಾ,
ಇಂತಪ್ಪ ಪೂಜೆಯನು ಪೂಜಿಸುವರ,
ಎನಗೆ ನೀ ತೋರಾ ಗುಹೇಶ್ವರಾ.*

ರಾತ್ರಿ, ಹಗಲು ಎಂಬುದನ್ನು ಬಿಟ್ಟು ಪೂಜಿಸಬೇಕು ನೋಡಾ. ಇಷ್ಟಲಿಂಗದ ಪೂಜೆ  ಮತ್ತು ಪ್ರಾಣಲಿಂಗದ ಪೂಜೆಯಲ್ಲಿ ತನ್ಮಯತೆ ಮತ್ತು ಧಾವಂತವಿಲ್ಲದ ಶಾಂತ ಮನಸ್ಸು ತುಂಬಾ ಮುಖ್ಯ. ಇಷ್ಟಲಿಂಗದಲ್ಲಿ ದೃಷ್ಟಿಯೋಗವಾಗಬೇಕು. ಪ್ರಾಣಲಿಂಗದಲ್ಲಿ ಮನಸ್ಸು ಶೂನ್ಯವಾಗಬೇಕು. ಲಿಂಗ ಪೂಜೆ ಲಿಂಗಯೋಗವಾಗಿರಬೇಕು. ಆ ದೃಷ್ಟಿ ಮತ್ತು ಮನಸ್ಸುಗಳು ಲಿಂಗದಲ್ಲಿ ಒಂದುಗೂಡಿದಾಗ ಇರುಳು ಹಗಲು ಎಂಬ ಕಾಲದ ಪ್ರಜ್ಞೆ ಉಳಿಯದು. ಕಾಲವನ್ನು ಮರೆಸುವ ಆ ನಿಮಗ್ನತೆ ಬೇಕು. ಪೂಜೆಗೆ ಸಮಯದ ಕಟ್ಟಳೆ ಇಲ್ಲದೆ ಪೂಜಿಸಬೇಕು.
ಈ ರೀತಿಯಾಗಿ ಪೂಜೆಯ ಮಾಡುವವರನ್ನು ನನಗೆ ತೋರಿಸಯ್ಯ ಗುಹೇಶ್ವರಾ ಎನ್ನುತ್ತಾರೆ ಅಲ್ಲಮ ಪ್ರಭುಗಳು.
*ಭಾವ*:
 ಪೂಜೆಗೆ ಸಮಯ ಎಂಬುದಿಲ್ಲ. ಪೂಜೆ ಸಮಯದ ಕಟ್ಟಳೆಗೆ ಒಳಗಾಗಬಾರದು.  ಈಗ ಪೂಜೆ ಮಾಡುವ ವೇಳೆಯಾಯಿತು ಎಂದು ಮಾಡಿದರೆ ಅದು ಕಾಟಾಚಾರಕ್ಕೆ ಮಾಡುವ ಪೂಜೆ. ಈ ರೀತಿಯ ಪೂಜೆಗೆ ಯಾವ ಅರ್ಥವೂ ಇಲ್ಲ ಎನ್ನುತ್ತಾರೆ ಅಲ್ಲಮಪ್ರಭುಗಳು. ಸಮಯದ ಕಟ್ಟಳೆಗೆ ಸಿಕ್ಕಿಹಾಕಿಕೊಂಡು ಮಾಡುವ ಬಾಹ್ಯ ಪೂಜೆಯು ವ್ಯರ್ಥ. ಏಕೆಂದರೆ ಅಲ್ಲಿ ನಿಜವಾದ ಭಕ್ತಿ ಇಲ್ಲ. ಪೂಜೆಯಲ್ಲಿ ತನ್ಮಯತೆ ಇಲ್ಲ. ಪೂಜೆ ಯಾಂತ್ರಿಕವಾಗಬಾರದು. ಆದ್ದರಿಂದ ಅಲ್ಲಮ ಪ್ರಭುಗಳು, ಇರುಳು ಹಗಲುಗಳನ್ನು ಬಿಟ್ಟು ಅಂದರೆ ಕಾಲದ ಕಟ್ಟಳೆಯನ್ನು ಮೀರಿ ಪೂಜಿಸುವವರನ್ನು ನನಗೆ ತೋರಿಸು ಎಂದು ಹೇಳುತ್ತಾರೆ. ಈ ಮೂಲಕ ಅವರು ಬಾಹ್ಯ ಪೂಜೆಗೆ ಯಾವ ಬೆಲೆಯೂ ಇಲ್ಲ, ಮಾನಸಿಕವಾಗಿ ಸಂಪೂರ್ಣ ತಮ್ಮನ್ನೇ ಪ್ರಸಾದವಾಗಿಸಿ ಸಮರ್ಪಣೆಯಿಂದ ಲಿಂಗವನ್ನು ಪೂಜಿಸುವುದು ಮುಖ್ಯ ಎಂದು ಹೇಳುತ್ತಾರೆ. ಸದಾ ಆ ಲಿಂಗದ ಧ್ಯಾನದಲ್ಲಿರುವುದು ನಿಜವಾದ ಭಕ್ತಿ. ಅಂತಹ ಪೂಜೆ ಮಾಡುವವರನ್ನು ತೋರಿಸು ಎನ್ನುತ್ತಾರೆ ಅಲ್ಲಮರು.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭು
#ಹೊತ್ತಾರೆ_ಪೂಜಿಸಲು_ಬೇಡ_ಕಂಡಾ.
Picture post created by me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma