ವಚನ ದಾಸೋಹ

#ವಚನ:
#ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು
ಏರಿ ನೀರುಂಬಡೆ ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ.
- ಗುರು ಬಸವಣ್ಣನವರು
*ಅರ್ಥ*:
ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಅವು ಒಂದು ಪರಿಮಿತಿಯಲ್ಲಿದ್ದರೆ ಸಾಧಕ ಅವುಗಳನ್ನು ಎದುರಿಸಬಲ್ಲ. ತನ್ನನ್ನು ಕಾಯುವ ಶಕ್ತಿಯ ಆಶ್ರಯವನ್ನು ಪಡೆದು ಅವುಗಳನ್ನು ಗೆಲ್ಲಬಲ್ಲ. ಆದರೆ ಆ ಕಾಯುವ ಶಕ್ತಿಯೇ ಮುನಿದು ಮಾರಕವಾಗುವುದಾದರೆ ಇನ್ನು ರಕ್ಷಣೆಗಾಗಿ ಯಾರ ಮೊರೆ ಹೋಗಬೇಕು? ಅದನ್ನು ಸ್ಪಷ್ಟಪಡಿಸುವುದಕ್ಕೆ ಗುರು ಬಸವಣ್ಣನವರು ಲೌಕಿಕಾನುಭವದ  ಕೆಲವು ಸಾದೃಶ್ಯಗಳನ್ನು ಕೊಡುತ್ತಾರೆ. ಯಾವ ವ್ಯಕ್ತಿಯು ತಾನು ಕಾಪಾಡ ಬೇಕಾಗಿರುವುದನ್ನು ತಾನೇ ನಾಶಪಡಿಸಲು ತೊಡಗಿದಾಗ, ಅದನ್ನು ತಡೆಗಟ್ಟಲು ಯಾರಿಂದಲೂ ಆಗುವುದಿಲ್ಲವೆಂಬ ಸತ್ಯವನ್ನು ರೂಪಕಗಳ ಮೂಲಕ ಈ ವಚನದಲ್ಲಿ ಹೇಳಲಾಗಿದೆ.

*ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು*

ಅಡುಗೆಯನ್ನು ಮಾಡಲು ಉಪಯೋಗಿಸುವ ಒಲೆಗೆ  ಬೆಂಕಿಯು ಹೊತ್ತಿಕೊಂಡು ಉರಿಯತೊಡಗಿದರೆ ಅದು ನಿಂತುಕೊಳ್ಳಬಹುದು
ಆದರೆ  ಇಡೀ ಭೂಮಂಡಲವೇ  ಹೊತ್ತಿಕೊಂಡು ಉರಿಯತೊಡಗಿದರೆ ಅದು ನಿಂತುಕೊಳ್ಳುಲು ಬರುವದಿಲ್ಲ.
ಆ ಬೆಂಕಿಯಿಂದ  ಪಾರಾಗುವುದು ಸಾಧ್ಯವಿಲ್ಲ.

*ಏರಿ ನೀರುಂಬಡೆ ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವ*

ಬೇಸಾಯಕ್ಕೆ ಬಳಸಲು ಮತ್ತು ಕುಡಿಯುವ ನೀರಿನ  ಹರಿಯಲು ಕಟ್ಟಿದ ಏರಿಯೇ ನೀರನ್ನು ಹೀರಿಕೊಂಡರೆ;

ಬೆಳೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಜಮೀನಿನ ಸುತ್ತಲೂ ಹಾಕಿರುವ ಮುಳ್ಳಿನಬೇಲಿಯೇ ತೋಟದಲ್ಲಿರುವ ಬೆಳೆಯನ್ನು ಮೇಯತೊಡಗಿದರೆ;

ಗೃಹಿಣಿ ತನ್ನ ಮನೆಯಲ್ಲಿಯ ವಸ್ತುಗಳನ್ನು ತಾನೇ ಕಳವು ಮಾಡಲು ತೊಡಗಿದರೆ; 

ಹೆತ್ತತಾಯಿಯ ಎದೆ ಹಾಲು ಮಗುವಿನ ಪಾಲಿಗೆ ನಂಜಾಗಿ, ಮಗುವಿನ ಸಾವಿಗೆ ಕಾರಣವಾದರೆ;

ಇನ್ನು ಯಾರಿಗೆ ದೂರು ಕೊಡುವುದು;
ಕೂಡಲಸಂಗಮದೇವಾ ?
ಶರಣು ಹೋಗುವುದಕ್ಕೆ ಇನ್ನಾವ ಆಶ್ರಯವಿದೆ? ನಿನ್ನ ಬಿಟ್ಟು ಇನ್ನಾವ ಆಶ್ರಯವಿದೆ? 
 *ಭಾವ* :
ಇದು ಸಂಸಾರಹೇಯ ಸ್ಥಲದ ವಚನ. ಇದು ಭವಿ ಹೋಗಿ ಸಾಧಕನಾಗಲು ವಿವಶಗೊಳಿಸುವ ಸ್ಥಲ. ಲೌಕಿಕ ವಿಷಯಗಳಿಂದಲೇ ಪೂರ್ಣ ತೃಪ್ತನಾಗದೆ ಇದನ್ನು ಮೀರಿ ಮುನ್ನಡೆಯಬೇಕೆಂಬ ನಿರ್ಲಿಪ್ತ ಮನೋಧರ್ಮ, ಆಂತರಿಕ ಅತೃಪ್ತಿಯು ಸಾಧಕರಲ್ಲಿ ಮೂಡುತ್ತದೆ. ಅಹಂಕಾರವನ್ನು ತ್ಯಜಿಸಿ ದೈವಶಕ್ತಿಗೆ ಸಂಪೂರ್ಣ ಶರಣಾಗತನಾಗಲು ಪ್ರೇರೇಪಿಸುತ್ತದೆ. 
12 ನೆಯ ಶತಮಾನದಲ್ಲಿ ವಿದ್ಯೆಯಿಂದ ವಂಚಿತರಾದ ದೀನದಲಿತರು ಮತ್ತು ಮಹಿಳೆಯರು ಅನುಭವಿಸುತ್ತಿದ್ದ ಅನ್ಯಾಯ, ಅಸ್ಪರುಷತೆಯಿಂದ ನೊಂದ ಮಾನವತಾವಾದಿ ಬಸವಣ್ಣನವರು, ಸಮಾಜವನ್ನು ಕಾಯಬೇಕಾದ ಧರ್ಮವೇ ಜನರಿಗೆ ಮಾರಕವಾಗಿದ್ದನ್ನು ಪ್ರಶ್ನಿಸುತ್ತಾರೆ. ಬಸವಣ್ಣನವರು ಜೀವಧಾರಕ ಧರ್ಮಶಕ್ತಿಯೇ ಮಾರಕವಾದರೆ ಅವುಗಳಿಂದ ಪಾರಾಗಿ ಬದುಕುಳಿಯಲು ಸಾಧ್ಯವೇ? ಎಂದು ಸಾದೃಶ್ಯಗಳನ್ನು ಹಂತಹಂತವಾಗಿ ಬೆಳೆಸಿಕೊಂಡು ಬಂದು ಪರಿಣಾಮಕಾರಿಯಾಗಿ ಮನಮುಟ್ಟುವಂತೆ ಜನರ ಅಸಹಾಯಕ ಸ್ಥಿತಿಯನ್ನು ನಿರೂಪಿಸಿದ್ದಾರೆ. ಇಡೀ ಜಗತ್ತಿಗೆ ಬೆಂಕಿಯು ಹರಡಿಕೊಂಡು ಉರಿಯತೊಡಗಿದರೆ; ಏರಿಯೇ ಕೆರೆಯ ನೀರೆಲ್ಲವನ್ನೂ ಹೀರಿಕೊಂಡರೆ; ಬೇಲಿಯೇ ಬೆಳೆಯೆಲ್ಲವನ್ನೂ ಮೇಯ್ದರೆ; ಮನೆಯೊಡತಿಯೇ ತನ್ನ ಮನೆಯ ಒಡವೆ ವಸ್ತುಗಳನ್ನು ಕದ್ದರೆ; ತಾಯಿಯ ಎದೆಹಾಲೇ ನಂಜಾಗಿ ಮಗುವಿನ ಸಾವಿಗೆ ಕಾರಣವಾದರೆ  ಈ ಐದು ರೂಪಕಗಳ ಮೂಲಕ  ಸಾಮಾಜಿಕ ವ್ಯವಸ್ಥೆಯಲ್ಲಿ ಸಿಲುಕಿ ಬಳಲುತ್ತಿರುವ ವ್ಯಕ್ತಿಯ ಹತಾಶೆಯ ಸ್ಥಿತಿ ವ್ಯಕ್ತಗೊಳಿಸುತ್ತಾರೆ. ಅರ್ಥಕ್ಕೆ ಮಿಗಿಲಾದ ಆದ್ರ್ರತೆಯಿಂದ ವಚನ ಮನವನ್ನು ಅಂತರ್ಮುಖಗೊಳಿಸುತ್ತದೆ.  
ಜಗತ್ತಿನ ಸಂಬಂಧಗಳೆಲ್ಲಾ ಕೈಬಿಟ್ಟಾಗ ನಮ್ಮ ಕೈಹಿಡಿದು ಉದ್ಧರಿಸುವವನು ಪರಶಿವ. ಜೀವ- ಶಿವರ ಸಂಬಂಧ ಎಂದೆಂದೂ ಬಿಡಲಾಗದ ಸಂಬಂಧ. ಇಡೀ ಜಗತ್ತನ್ನೇ ಉದ್ಧರಿಸುವ ಜಗತ್ಪಾಲಕ ಆತ. ಗುರು ಬಸವಣ್ಣನವರು ಸರ್ವತಾರಕಶಕ್ತಿಯಾದ ದೇವರ ಕಾರುಣ್ಯಕ್ಕಾಗಿ ಅನನ್ಯ ಶರಣಾಗತಿಯಿಂದ ಇಲ್ಲಿ ಹಂಬಲಿಸುತ್ತಾರೆ, ಪ್ರಾರ್ಥಿಸುತ್ತಾರೆ.
-✍️ Dr Prema Pangi
#ಪ್ರೇಮಾ_ಪಾಂಗಿ,#ಗುರು_ಬಸವಣ್ಣನವರು,
#ಒಲೆ_ಹತ್ತಿ_ಉರಿದಡೆ_ನಿಲಬಹುದಲ್ಲದೆ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma