ವಚನ ದಾಸೋಹ
ವಚನ :
ಅರಿಯದೆ ಒಂದು ವೇಳೆ `ಓಂ ನಮಃಶಿವಾಯ' ಎಂದಡೆ
ಮರೆದು ಮಾಡಿದ ಹಿಂದೇಳುಜನ್ಮದ
ಕರ್ಮದಕಟ್ಟು ಹರಿದು ಹೋಯಿತ್ತು ನೋಡಾ !
ಅರಿದೊಂದು ವೇಳೆ `ಓಂ ನಮಃಶಿವಾಯ' ಎಂದಡೆ
ದುರಿತಸಂಕುಳವೆಲ್ಲ ದೂರಾಗಿಹವು ನೋಡಾ !
ಇದು ಕಾರಣ
`ಓಂ ನಮಃಶಿವಾಯ, ಓಂ ನಮಃಶಿವಾಯ'
ಎಂಬ ಶಿವಮಂತ್ರವನು ಜಪಿಸಿ,
ನಾನಾ ಭವದ ಬಳ್ಳಿಯ ಬೇರ ಕಿತ್ತೊಗೆದೆನಯ್ಯ
ಅಖಂಡೇಶ್ವರಾ./47
- ಷಣ್ಮುಖ ಶಿವಯೋಗಿಗಳು
*ಅರ್ಥ*:
ಷಣ್ಮುಖ ಶಿವಯೋಗಿಗಳು ಈ ವಚನದಲ್ಲಿ “ಓಂ ನಮಃ ಶಿವಾಯ” ವೆಂಬ ಅತ್ಯಂತ ಶ್ರೇಷ್ಠ ಶಕ್ತಿಯುತವಾದ ಮಂತ್ರದ ಮಹತ್ವ ತಿಳಿಸಿದ್ದಾರೆ.
*ಅರಿಯದೆ ಒಂದು ವೇಳೆ `ಓಂ ನಮಃಶಿವಾಯ' ಎಂದಡೆ
ಮರೆದು ಮಾಡಿದ ಹಿಂದೇಳುಜನ್ಮದ
ಕರ್ಮದಕಟ್ಟು ಹರಿದು ಹೋಯಿತ್ತು ನೋಡಾ !*
ಮಂತ್ರದ ಅರ್ಥ ತಿಳಿಯದಿದ್ದರೂ ಸಹಿತ `ಓಂ ನಮಃ ಶಿವಾಯ' ಎಂದ ಜಪಿಸಿದರೆ,
ತಿಳಿಯದೇ ಮಾಡಿದ ಹಿಂದಿನ ಏಳು ಜನ್ಮದ
ಕರ್ಮದಕಟ್ಟುಗಳು ಹರಿದು ಹೋಗುತ್ತವೆ. ನಮ್ಮನ್ನು ಸಂಸಾರ ಬಂಧನದಲ್ಲಿ ಸಿಕ್ಕಿಸುವ ಕರ್ಮದ ಕಟ್ಟುಗಳು ನಾಶವಾಹುತ್ತವೆ.
ಮಂತ್ರದ ಅರ್ಥ ತಿಳಿದಿಲ್ಲದಿದ್ದರೂ ನಮ್ಮ ನರಗಳಮೇಲೆ ಉಚ್ಛಾರದಿಂದ ಭಾಷೆಯ ಪರಿಣಾಮವು ಸಾಧ್ಯವಾಗುತ್ತದೆ.
*ಅರಿದೊಂದು ವೇಳೆ `ಓಂ ನಮಃಶಿವಾಯ' ಎಂದಡೆ
ದುರಿತಸಂಕುಳವೆಲ್ಲ ದೂರಾಗಿಹವು ನೋಡಾ!*
ಒಂದುವೇಳೆ ಮಂತ್ರದ ಅರ್ಥ ಅರಿತು "ಓಂ ನಮಃಶಿವಾಯ" ಎಂದು ಜಪಿಸಿದರೆ
ಅಪರಾಧ, ದುಷ್ಕರ್ಮಗಳೆಲ್ಲ ದೂರ ಸರಿಯುವವು.
*ಇದು ಕಾರಣ
`ಓಂ ನಮಃಶಿವಾಯ, ಓಂ ನಮಃಶಿವಾಯ'
ಎಂಬ ಶಿವಮಂತ್ರವನು ಜಪಿಸಿ,
ನಾನಾ ಭವದ ಬಳ್ಳಿಯ ಬೇರ ಕಿತ್ತೊಗೆದೆನಯ್ಯ ಅಖಂಡೇಶ್ವರಾ*
ಈ ಕಾರಣದಿಂದ ಮಂತ್ರದ ಮಹತ್ವ ಅರಿತು `ಓಂ ನಮಃಶಿವಾಯ, ಓಂ ನಮಃಶಿವಾಯ'
ಎಂಬ ಶಿವಮಂತ್ರವನು ಜಪಿಸಿ, ನಾನು
ನಾನಾ ಹುಟ್ಟು ಸಾವುವೆಂಬ ಭವದ ಬಳ್ಳಿಯ ಬೇರ ಸಮೇತ ಕಿತ್ತೊಗೆದೆನಯ್ಯ. ನಾನು ಭವಸಾಗರವನ್ನು ದಾಟಿದೆ ಅಖಂಡೇಶ್ವರಾ ಎಂದು ತಮ್ಮ ಇಷ್ಟದೇವರಾದ ಅಖಂಡೇಶ್ವರ ನನ್ನು ನೆನೆಯುತ್ತಾರೆ.
*ಪಂಚಾಕ್ಷರಿ ಮಂತ್ರ*:
“ ನಮಃ ಶಿವಾಯ” ಎನ್ನುವ ಮಂತ್ರದ ನಿಜವಾದ ಅರ್ಥ ಶಿವನಿಗೆ ಶರಣಾಗುವುದು ಎಂದಾಗುತ್ತದೆ. ಮನುಷ್ಯನಲ್ಲಿ ಆಂತರಿಕವಾಗಿ ಸ್ವಾಭಿಮಾನ ಮತ್ತು ಅಹಂಭಾವ ಎನ್ನುವುದು ಅಧಿಕವಾಗಿಯೇ ಇರುತ್ತದೆ. ಈ ಮಂತ್ರವನ್ನು ಜಪಿಸುವುದರಿಂದ ಅಹಂಭಾವ ನಾಶವಾಗಿ ಆಂತರಿಕ ಶುದ್ಧತೆಯನ್ನು ಹೊಂದಿ, ಮಾನಸಿಕ ತೊಂದರೆಗಳ ನಿವಾರಣೆಯಾಗುತ್ತದೆ.
“ಓಂ ನಮಃ ಶಿವಾಯ” ಇದು ಅತ್ಯಂತ ಶ್ರೇಷ್ಠ ಶಕ್ತಿಯುತವಾದ ಮಂತ್ರ. ಈ ಮಂತ್ರವನ್ನು ನಾವು ಮನಸ್ಸಿನಲ್ಲಿ ನಿರಂತರವಾಗಿ ಹೇಳುತ್ತಿದ್ದರೆ ಯಾವುದೇ ಧಾರ್ಮಿಕ ಆಚರಣೆಯನ್ನು ಮಾಡಬೇಕೆಂದಿಲ್ಲ. ಈ ಮಂತ್ರವನ್ನು ಹೇಳಲು ಯಾರಿಗೂ ಯಾವ ನಿರ್ಬಂಧವಿಲ್ಲ. ಈ ಮಂತ್ರವನ್ನು ನಿರಂತರವಾಗಿ ಹೇಳುವುದರಿಂದ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಯಾಗಿ ಆತ್ಮಶಾಂತಿ ಲಭಿಸುವುದರ ಜೊತೆಗೆ ಹೃದಯ ಹಾಗೂ ಮನಸ್ಸಿನಲ್ಲಿ ಸದಾ ಸಂತೋಷವು ನೆಲೆಸುವುದು. ಸರಿಯಾದ ಉಚ್ಛಾರದಿಂದ ಮಾಡುವ ಮಂತ್ರಯೋಗದ ಅನುಸಂಧಾನದಿಂದ ಆತ್ಯಂತಿಕ ಶಾಂತಿ ಆನಂದಗಳು ಲಭಿಸುವವು, ಸಾಮರಸ್ಯ ಒಡೆಮೂಡುವುದು. ದಿನದ ಆರಂಭವನ್ನು ಶಿವನ ಸ್ಮರಣೆಯಿಂದ ಅಥವಾ “ಓಂ ನಮಃ ಶಿವಾಯ” ಎನ್ನುವ ಮಂತ್ರದಿಂದ ಪ್ರಾರಂಭಿಸಿದರೆ ಉತ್ತಮ ಆರೋಗ್ಯ ಹಾಗೂ ಅದೃಷ್ಟದ ಜೀವನವನ್ನು ಕಾಣುವಿರಿ ಎಂದು ಹೇಳಿದ್ದಾರೆ.
ಈ ಮಂತ್ರವನ್ನು ಏರಿಳಿತದಿಂದ ಲಯಬದ್ಧವಾಗಿ ಪಠಿಸಿದರೆ, ಅವರ ದೇಹದಲ್ಲಿ vibration ಅಲೆಗಳು ಮಧುರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಈ ಪರಿಣಾಮವನ್ನು ನರಗಳಮೇಲೆ -ಭಾಷಾ ಶಾಸ್ತ್ರ ಪರಿಣಾಮ ಎಂದು ವ್ಯಾಖ್ಯಾನಿಸಬಹುದು. ಶಿವನ ಸ್ಮರಣೆ ಮಾಡಿದರೆ ಮನಸ್ಸಿಗೆ ವೈಜ್ಞಾನಿಕವಾಗಿಯೂ ಮಾನಸಿಕವಾಗಿಯೂ ನೆಮ್ಮದಿ, ಶುಭತ್ವ ಹಾಗೂ ಶಾಂತಿ ಉಂಟಾಗುವುದು ಎಂದು ಹೇಳಲಾಗುತ್ತದೆ.
ಮನಸ್ಸು ಬಹಳ ಚಂಚಲವಾದದ್ದು. ಮಂತ್ರ ಜಪದ ಮನಸ್ಸಿನ ಈ ಚಾಂಚಲ್ಯವನ್ನು ನಿವಾರಿಸಲಿಕ್ಕೆಂದು ಇರುತ್ತದೆ. ಮಂತ್ರ ಜಪದಿಂದ ಮನವು ಸ್ಥಿರವಾಗಿ ಸ್ಥಿಮಿತಕ್ಕೆ ಬಂದು ಅದರಲ್ಲಿ ಜನ್ಮಜನ್ಮಾಂತರ ಗಳಿಂದ ಮೂಡಿಕೊಳ್ಳುತ್ತ ಬಂದಿದ್ದ ಸಂಸ್ಕಾರಗಳು ಅಳಿದು ಹೋಗುತ್ತದೆ. ಮಂತ್ರ ಒಂದು ಶಕ್ತಿಯಾಗಿದೆ, ಸರಿಯಾಗಿ ಉಪಯೋಗ ಮಾಡಿಕೊಳ್ಳುವುದರಿಂದ ಮಂತ್ರವು ಆಧ್ಯಾತ್ಮಿಕ ವಿಕಾಸದಲ್ಲಿ ಅತ್ಯಧಿಕವಾದ ಸಹಾಯವನ್ನು ಮಾಡುತ್ತದೆ.
ಮಂತ್ರ ಸಾಧಕನ ಅರ್ಹತೆಗಳು :
ಸಕಲ ಪ್ರಾಣಿಗಳಲ್ಲಿ ದಯವಿರಬೇಕು.
ಗುರು-ಹಿರಿಯರಲ್ಲಿ ಪೂಜ್ಯಭಾವನೆ ಇರಬೇಕು. ಸಕಲ ಗುಣಗಳಲ್ಲಿ ಸಂಯಮನ ಇರಬೇಕು. ನುಡಿಗಡಣದಲ್ಲಿ ಸತ್ಯವಿರಬೇಕು.
*ಶರಣ ಪರಿಚಯ*:
ಷಣ್ಮುಖ ಶಿವಯೋಗಿ, ನಿರಾಲಂಬದೇವ
ಇವರನ್ನು ನಿರಾಲಂಬಶರಣ, ಷಣ್ಮುಖಸ್ವಾಮಿ ಎಂದೂ ಕರೆಯುತ್ತಾರೆ.
ಈತ ಬಸವೋತ್ತರ ಯುಗದ ವಚನಕಾರ.
ಕಾಲ: 1639-1711
ಅಂಕಿತ: ಅಖಂಡೇಶ್ವರ
ತಂದೆ: ಮಲ್ಲಶೆಟ್ಟೆಪ್ಪ
ತಾಯಿ: ದೊಡ್ಡಮಾಂಬೆ,
ಸ್ಥಳ : ಗುಲಬರ್ಗಾ ಜಿಲ್ಲೆಯ ಜೇವರಗಿ.
ಗುರು: ಅಖಂಡೇಶ್ವರ. ಗುರುವಿನ ಹೆಸರೇ ಇವರ ವಚನಗಳ ಅಂಕಿತವೂ ಆಗಿದೆ.
ಕಾಯಕ: ವಿರಕ್ತಮಠದ ಅಧಿಪತಿ
ಮೂಲತ: ಭಕ್ತನಾಗಿದ್ದರು. ಈತ ಗುರುಗಳ ತರುವಾಯ ಜೇವರಗಿ ವಿರಕ್ತಮಠದ ಅಧಿಪತಿಯಾದರು. ಲೋಕ ಸಂಚಾರ ಕೈಕೊಂಡು ಧರ್ಮತತ್ವ ಬೋಧೆ ಮಾಡಿದರು.
ಐಕ್ಯ ಸ್ಥಳ: ಜೇವರಗಿ
ಷಣ್ಮುಖಸ್ವಾಮಿಗಳು 717 ವಚನ, ಅಖಂಡೇಶ್ವರ ಜೋಗುಳ ಪದ(41 ಚೌಪದಿ), ಪಂಚ ಸಂಜ್ಞೆಗಳಪದ(7 ಪರಿವರ್ಧಿನಿಷಟ್ಪದಿ)
ನಿರಾಳ ಸದ್ಗುರು ಸ್ತೋತ್ರ (ಭಾಮಿನಿ ಷಟ್ಪದಿ)
- ಎಂಬ ಕೃತಿಗಳನ್ನು ರಚಿಸಿದ್ದಾರೆ. ವಚನ ವಾಗ್ಮಯದ ಮೂರನೆ ಘಟ್ಟದ ಪ್ರಮುಖರಿವರು. ವಚನ ಹಾಗೂ ಪದಗಳು ಅನುಭಾವಪೂರ್ಣವಾಗಿ, ಭಾವೋದ್ದೀಪಕವಾಗಿ ಅಂತರಾತ್ಮತೇಜೋಯುಕ್ತವಾಗಿವೆ. ಮುದನೂರಿನ ಜೇಡರ ದಾಸಿಮಯ್ಯನವರು ವಚನ ಸಾಹಿತ್ಯಕ್ಕೆ ನಾಂದಿ ಹಾಡಿದರೆ, ಜೇವರ್ಗಿಯ ಷಣ್ಮುಖ ಶಿವಯೋಗಿಗಳು ವಚನ ಪರಂಪರೆಗೆ ಮಂಗಲ ಕಿರಣ ಹಾಡಿದರು. ಸಂಸ್ಕೃತ-ಕನ್ನಡಗಳೆರಡರಲ್ಲೂ ಸಮಾನ ಪಾಂಡಿತ್ಯವಿದ್ದವರು, ನಿಶ್ಚಿತ ಶಾಸ್ತ್ರಜ್ಞಾನ, ಯೋಗಸಿದ್ಧಿ, ಅನುಭಾವದ ದಿವ್ಯ ತೇಜಸ್ಸನ್ನು ಹೊಂದಿದ್ದರು. ಇವರ ವಚನಗಳು ಮುಖ್ಯವಾಗಿ ಷಟ್ಸ್ಥಲ ತತ್ತ್ವವನ್ನು ನಿರೂಪಿಸುತ್ತದೆ. ವಚನಗಳನ್ನು ಸ್ಥಲಾನುಸಾರವಾಗಿ ಬರೆದಿರುವರು. ಒಟ್ಟು 14 ಸ್ಥಲಗಳಲ್ಲಿ ವಚನಗಳು ವಿಂಗಡಣೆ ಗೊಂಡಿವೆ. 'ತೂರ್ಯ ನಿರಾಲಂಬ ಶರಣನ ಅರುಹಿನ ಷಟ್ಸ್ಥಲ ವಚನ' ಎಂಬುದು ಈ ಕೃತಿಯ ಹೆಸರು. ಇದು ಮುಖ್ಯವಾಗಿ ಷಟ್-ಸ್ಥಲತತ್ವವನ್ನು ನಿರೂಪಿಸುವ ಗ್ರಂಥ. ಈಗಾಗಲೇ ರೂಢಿಗತವಾಗಿ ನಡೆದುಬಂದ ಈ ತತ್ವವನ್ನು ಪರಂಪರೆಯ ಜಾಡಿನಲ್ಲಿಯೇ ಹೆಚ್ಚು ವ್ಯವಸ್ಥಿತವಾಗಿ, ಅಷ್ಟೇ ಖಚಿತವಾಗಿ ಹೇಳಿದ್ದಾರೆ. ಅನುಭಾವ-ತತ್ವ ಸಾಹಿತ್ಯ ಈ ಮೂರು ಈ ವಚನಗಳಲ್ಲಿ ಮುಪ್ಪುರಿಗೊಂಡಿವೆ.
ಹದಿನೇಳನೆಯ ಶತಮಾನದ ಬಳಿಕ ಶಿವಶರಣರ ವಚನ ಸಾಹಿತ್ಯ ಪರಂಪರೆ ಸ್ಥಗಿತಗೊಂಡದ್ದನ್ನು ಗಮನಿಸಿ ಇವರನ್ನು ಕೊನೆಯ ಶ್ರೇಷ್ಠ ವಚನಕಾರರೆಂದು ಹೇಳುವ ವಾಡಿಕೆಯಿದೆ. ಜೇವರಗಿಯಲ್ಲಿ ಇವರು ಅಧಿಪತಿಯಾಗಿದ್ದ ಮಠವಿದೆ. ಇವರ ಹಾಗೂ ಇವರ ಗುರು ಅಖಂಡೇಶ್ವರರ ಗದ್ದುಗೆಗಳೆರಡೂ ಅಲ್ಲಿವೆ. ಇವರ ಹೆಸರಿನಲ್ಲಿ ರಥೋತ್ಸವ ಆ ಊರಿನಲ್ಲಿ ಇಂದಿಗೂ ನಡೆಯುತ್ತದೆ. ಜೇವರಗಿಗೆ ಸು. 10ಕಿಮೀ ದೂರದ ಕೊಳಕೂರ ಎಂಬ ಗ್ರಾಮದ ನಿಸರ್ಗ ಸುಂದರವಾದ ಕೊಳದಲ್ಲಿ ಶಿವಯೋಗಿಗಳು ತಮ್ಮ ಸಾರವತ್ತಾದ ಜೀವನದ ಸ್ವಲ್ಪ ಭಾಗವನ್ನು ಕಳೆದಿದ್ದರೆನ್ನಾಲಾಗಿದೆ. ಮುಂದೆ ಇವರು ಅಖಂಡೇಶ್ವರರ ಉತ್ತರಾಧಿಕಾರಿಯಾಗಿ, ಜೇವರಗಿ ವಿರಕ್ತ ಮಠಕ್ಕೆ ಸ್ವಾಮಿಯಾದರು.
ಇವರು ಆ ಕಾಲದ ಸಾಮಾಜಿಕ ಅಂತರದ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಶರಣಗುರುಗಳು. ದಲಿತರ ಉದ್ಧಾರಕ್ಕಾಗಿ ಇವರು ಶ್ರಮಿಸಿದ ಸಂಕೇತವಾಗಿ ಇಂದಿಗೂ ಜೇವರಗಿಯ ಹರಿಜನ ಕೇರಿಯಲ್ಲಿ ಶಿವಯೋಗಿಯ ಮಠವೊಂದಿದೆ. ಹರಿಜನರೊಡನೆ ಸಹಪಂಕ್ತಿಭೋಜನ ಮತ್ತು ಸಮಾನತೆಗಳನ್ನು ಕೇವಲ ಬೋಧಿಸದೆ ನಡೆದು ತೋರಿದ ಶಿವಯೋಗಿ ಇವರು. ಅನೇಕರಿಗೆ ಶಿವದೀಕ್ಷೆಯನ್ನೂ ಕೊಟ್ಟರೆನ್ನಲಾಗಿದೆ.
-✍️ Dr Prema Pangi
#ಪ್ರೇಮಾ_ಪಾಂಗಿ,
#ಷಣ್ಮುಖ_ಶಿವಯೋಗಿಗಳು
#ಅರಿಯದೆ_ಒಂದು_ವೇಳೆ_ಓಂ
Comments
Post a Comment