ವಚನ ದಾಸೋಹ
#ವಚನ:
#ಅನಲ ಸಂಗದಿಂದ ಕಾಷ್ಠ ಅನಲವಾದಂತೆ,
ಶಿವಸಂಸ್ಕಾರ ಸಂಪನ್ನನಾದ ಶಿವಭಕ್ತನು,
ಶಿವನಹಲ್ಲದೆ ಮಾನವನಾಗಲರಿಯನಯ್ಯ.
ಅದು ಕಾರಣ,
ಶಿವಭಕ್ತಂಗೆ ಜಾತಿಯಿಲ್ಲ ಸೂತಕವಿಲ್ಲ.
ಶಿವನೆಂತಿಹನಂತೆ ಇಹನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜಭಕ್ತನು.
-- ಸ್ವತಂತ್ರ ಸಿದ್ಧಲಿಂಗೇಶ್ವರ ಯತಿಗಳು
*Translation*:
As firewood becomes fire by uniting with fire
a Shiva devotee with the wealth of Shiva culture
is Shiva himself and doesn't know how to become mere man.
That’s why Shiva devotee has no Caste, no Sutaka.
He exists as Shiva does,
he is the true devotee of Nijaguru Svatantrasiddhalingeshwara.
- Swatantra Siddha Lingeshwara
*ಅರ್ಥ*:
ಜಾತಿ ಪದ್ಧತಿ, ಸೂತಕದಂತಹ ಅಂಧ ಆಚರಣೆಗಳು ಶಿವಸಂಸ್ಕಾರ ಉಳ್ಳ ಶಿವಭಕ್ತರಿಗೆ ಅನ್ವಯಿಸುವುದಿಲ್ಲ ಎಂದು ಸ್ವತಂತ್ರ ಸಿದ್ಧಲಿಂಗೇಶ್ವರ ಯತಿಗಳು ತಿಳಿಸುತ್ತಾರೆ.
ಬೆಂಕಿಯ ಸಂಗದಿಂದ ಕಟ್ಟಿಗೆ ಉರಿದು ಬೆಂಕಿ ಯಾಗುವಾದೇ ಹೊರತು, ಮುಂಚಿನಂತೆ ಕಟ್ಟಿಗೆಯಾಗಿ ಉಳಿಯುವುದಿಲ್ಲ. ಅದೇ ರೀತಿ
ಶಿವಸಂಸ್ಕಾರದಿಂದ ಶಿವಭಕ್ತನು,
ಶಿವನೇ ಆಗುವದಲ್ಲದೆ ಬರೀ ಮಾನವನಾಗಿ ಉಳಿಯುವುದಿಲ್ಲ. ಶಿವ ಸಂಸ್ಕಾರ, ಶಿವಯೋಗ ಮಾನವನನ್ನು ಮಹಾದೇವನಾಗಿ ಮಾರ್ಪಡಿಸುತ್ತದೆ.
ಅದು ಕಾರಣ, ಶಿವನ ಹಾಗೆಯೇ
ಶಿವಭಕ್ತನಿಗೂ ಸಹ ಜಾತಿಯಿಲ್ಲ ಸೂತಕವಿಲ್ಲ. ಅವನು ಶಿವನಂತೆಹನೇ ನಿತ್ಯ ನಿರ್ಮಲನಾಗಿ ಜಾತಿ ಬೇಧವಿಲ್ಲದೆ ಇರುವನು. ಎಲ್ಲ ವರ್ಣ ಜಾತಿಗಳಲ್ಲಿ ಶಿವಭಕ್ತರು ಇರುವರು ಮತ್ತು ಶಿವ ತನ್ನ ಭಕ್ತರಲ್ಲಿ ಯಾವ ಬೇಧಭಾವ ಮಾಡುವದಿಲ್ಲ.
ಭಾವ:
12 ನೆಯ ಶತಮಾನದಲ್ಲಿ ಗುರು ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲಾ ಲಿಂಗ, ಜಾತಿ, ವರ್ಗ, ವರ್ಣದ ಕಾಯಕಜೀವಿಗಳನ್ನು ಒಗ್ಗೂಡಿಸಿ, ವೈಚಾರಿಕವಾದ ಆದರ್ಶವಾದ ಸಮ ಸಮಾಜ ಕಟ್ಟಲು ಯತ್ನಿಸಿದರು. ಎಲ್ಲರಿಗೂ ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸಲು ಒಂದು ವೇದಿಕೆ ಕಲ್ಪಿಸಿಕೊಟ್ಟರು. ಬಸವಣ್ಣನವರು ತಮ್ಮ ಜೀವನ ಪರ್ಯಂತ ಜನರನ್ನು ಜಾತಿಯ ಬಂಧನ, ಮೂಢನಂಬಿಕೆ, ಅಂಧ ಆಚರಣೆಗಳಿಂದ ಮುಕ್ತಗೊಳಿಸಲು ಪ್ರಯತ್ನಿಸಿದರು. ಇದರಿಂದ ಪುರೋಹಿತರ ಆದಾಯಕ್ಕೆ ಮತ್ತು ಹುಸಿಪ್ರತಿಷ್ಠೆಗೆ ಪೆಟ್ಟುಬಿದ್ದು ಗುರು ಬಸವಣ್ಣನವರು ಸಂಪ್ರದಾಯವಾದಿಗಳಿಂದ ದೊಡ್ಡ ಮಟ್ಟದಲ್ಲಿ ವಿರೋಧ ಎದುರಿಸಿದರು. ಹಲವು ಕಷ್ಟ ನಷ್ಟ ತೊಂದರೆಗಳನ್ನು ಅನುಭವಿಸಿದರೂ ಜೀವನದ ಕೊನೆಯಗಳಿಗೆಯವರೆಗೆ ತಮ್ಮ ನಂಬಿಕೆಗಳನ್ನು, ಪ್ರಯತ್ನಗಳನ್ನೂ ಬಿಡಲಿಲ್ಲ.
ಶಿವಭಕ್ತರಿಗೆ ಜಾತಿ ಇಲ್ಲ :
ಗುರು ಬಸವಣ್ಣನವರು ಜಾತಿಪದ್ಧತಿ ನಿರಾಕರಿಸಿ ಮನುಷ್ಯಜಾತಿ ಒಂದೇ ಎಂದು ತಾತ್ವಿಕವಾಗಿ ತಿಳಿಸಿದ ವಚನ.
#ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ,
ಜಲ-ಬಿಂದುವಿನ ವ್ಯವಹಾರವೊಂದೆ
ಆಶೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೇ,
ಏನನೋದಿ, ಏನಕೇಳಿ, ಏನುಫಲ ?
ಕುಲಜನೆಂಬುದಕ್ಕಾವುದು ದೃಷ್ಟ ?
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುಧ್ಬವಂ
ಆತ್ಮ ಜೀವ ಸಮಾಯಕ್ತಂ ವರ್ಣಾನಾಂ ಕಿಂ ಪ್ರಯೋಜನಂ ?
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೋಳಗೆ ?
ಇದು ಕಾರಣ ಕೂಡಲ ಸಂಗಮದೇವಾ ಲಿಂಗಸ್ಥಲವನರಿದವನೆ ಕುಲಜನು !
ಶಿವಭಕ್ತರಿಗೆ ಸೂತಕವಿಲ್ಲ :
ಜಾತಿಸೂತಕ, ಜನನಸೂತಕ, ಪ್ರೇತಸೂತಕ, ಉಚ್ಛಿಷ್ಟ ಸೂತಕ, ಮರಣಸೂತಕ - ಇವು ಐದನ್ನು ವೈದಿಕರು ಅಂಗೀಕರಿಸುತ್ತಾರೆ. ಜನನ, ಮರಣ ಮತ್ತು ಹೆಣ್ಣು ಋತುಮತಿಯಾದ ಸಂದರ್ಭಗಳಲ್ಲಿ ಸೂತಕವನ್ನು ಆಚರಿಸಲಾಗುತ್ತದೆ. ಒಂದು ಕುಟುಂಬದಲ್ಲಿ ಈ ಯಾವುದೇ ಒಂದು ಘಟನೆ ಜರುಗಿದರೆ ಸೂತಕ ಸುತ್ತಿಕೊಳ್ಳುವುದೆಂದು ನಂಬಲಾಗುತ್ತದೆ. ಮನೆಯಲ್ಲಿ ಮರಣ ಸಂಭವಿಸಿದರೆ ಪ್ರೇತವು ಭೂಮಿಯ ಮೇಲೆ ಇದ್ದಷ್ಟು ಕಾಲ ಅವನ ಮನೆ ಮಂದಿಗೆ ಸೂತಕವಿರುತ್ತದೆ. ಸೂತಕದ ಅವಧಿಯು ವರ್ಣವನ್ನು ಆಧರಿಸಿರುತ್ತದೆ;
ಬ್ರಾಹ್ಮಣ ಮರಣಿಸಿದಾಗ ೧೦ ದಿನಗಳ ಅವಧಿಯ ಸೂತಕ; ಕ್ಷತ್ರಿಯನಿಗೆ ೧೨ ದಿನಗಳ ಸೂತಕ; ವೈಶ್ಯನಿಗೆ ೧೫ ದಿನಗಳ ಸೂತಕ ಹಾಗೂ ಶೂದ್ರನಿಗೆ ಒಂದು ತಿಂಗಳ ಸೂತಕ. ಸಾವಿನ ಸೂತಕವನ್ನು , ಜನನ ಸಂದರ್ಭದ ಸೂತಕವನ್ನು, ಋತುಮತಿಯಾದ ಹೆಣ್ಣಿನಿಂದ ಬರುವ ಸೂತಕವನ್ನು ನಿವಾರಿಸಿಕೊಳ್ಳಲು ಬೇರೆ ಬೇರೆ ಆಚರಣೆಗಳು ಇವೆ. ಸೂತಕ ಕಳೆಯುವವರಿಗೂ ಮನೆಯಲ್ಲಿ ದೇವತಾಕಾರ್ಯಗಳನ್ನು, ಪೂಜೆ ಪುನಸ್ಕಾರಗಳನ್ನು ಮಾಡುವಂತಿಲ್ಲ. ಹಬ್ಬ ವ್ರತ, ಮಂಗಳ ಕಾರ್ಯಗಳನ್ನು ಮಾಡುವಂತಿಲ್ಲ. ಅವರು ಬೇರೆಯವರ ಮನೆಯ ಒಳಗೆ ಹೋಗುವಂತಿಲ್ಲ. ಬೇರೆಯವರು ಅವರ ಮನೆಗೆ ಬರುವಂತಿಲ್ಲ. ಒಂದು ವೇಳೆ ಬರಲೇಬೇಕಾದರೆ, ಮನೆಗೆ ಹೋಗಿ ಸ್ನಾನ ಮಾಡಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ “ಸಾಮಾಜಿಕ ಬಹಿಷ್ಕಾರ” ದಂತೆ ಕಂಡುಬರುತ್ತದೆ. ಸೂತಕ ತೆಗೆಸಿಕೊಳ್ಳುವ ದಿನ ಪುರೋಹಿತ, ಅಯ್ಯನವರು ಬಂದು ಮನೆದೇವರನ್ನು ಪೂಜಿಸಿ, ಮನೆಗೆ ಹಾಗೂ ಮನೆಮಂದಿಗೆ ತೀರ್ಥ ಪ್ರೋಕ್ಷಿಸಿ ಕಾಣಿಕೆ ಪಡೆದು ಹೋಗುತ್ತಾನೆ. ಬಸವಾದಿ ಶರಣರು ಇದು ಪುರೋಹಿತರು ಮಾಡಿದ ಮೂಢ ನಂಬಿಕೆ; ಶಿವಸಂಸ್ಕಾರ ಹೊಂದಿ ಶಿವಯೋಗ ಮಾರ್ಗದಲ್ಲಿ ನಡೆವ ಶಿವಭಕ್ತ ಶಿವನಂತೆ ನಿತ್ಯ ನಿರ್ಮಲನಾಗಿ ಮಾರ್ಪಾಡಾಗುವುದರಿಂದ ಇದು ಶಿವಭಕ್ತರಿಗೆ ಅನ್ವಯ ಆಗುವದಿಲ್ಲ ಎಂದು ಈ ಪದ್ಧತಿಯನ್ನು ತಿರಸ್ಕರಿಸಿದರು.
-✍️ Dr Prema Pangi
#ಪ್ರೇಮಾ_ಪಾಂಗಿ,
#ಸ್ವತಂತ್ರ_ಸಿದ್ಧಲಿಂಗೇಶ್ವರ_ಯತಿಗಳು
#ಅನಲ_ಸಂಗದಿಂದ_ಕಾಷ್ಠ_ಅನಲವಾದಂತೆ
Comments
Post a Comment