ವಚನ ದಾಸೋಹ

ವಚನ:
#ಕಂಗಳ ಬೆಳಗ ಕಲ್ಪಿಸಬಾರದು, 
ಕರ್ಣದ ನಾದವ ವರ್ಣಿಸಬಾರದು.
ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದಿತ್ತು.
ಮತಿಗೆ ಮಹಾಘನವಪ್ಪ ಸುಷುಮ್ನನಾಳದ ಸುಯಿಧಾನವ, ಪ್ರಮಾಣಿಸಬಾರದು,
ಅಣು ರೇಣು ತೃಣ ಕಾಷ್ಠದೊಳಗೆ ಭರಿತ ಮನೋಹರ,ನಿಂದ ನಿರಾಳ- ಗುಹೇಶ್ವರಾ. / 549
- ಅಲ್ಲಮ ಪ್ರಭುಗಳು
ಅರ್ಥ:
ಅಲ್ಲಮ ಪ್ರಭುಗಳ ಬೋಧನೆ, ಸಾಧನೆಗಳನ್ನು ಗುರು ಬಸವಣ್ಣನವರು ಮೆಚ್ಚಿಕೊಂಡು ಅನುಭವ ಮಂಟಪದ ಶೂನ್ಯಪೀಠದ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಗುರು ಬಸವಣ್ಣನವರ ಲೋಕ ಕಲ್ಯಾಣದ ಕಾರ್ಯಗಳಿಗೆ ಇವರು ಪ್ರೇರಕರಾಗಿದ್ದು, ದಿವ್ಯಜ್ಞಾನಿ, ವೈರಾಗ್ಯಮೂರ್ತಿ, ಮಹಾಜಂಗಮ, ಲೋಕಗುರು, ಪರಿಪೂರ್ಣವ್ಯಕ್ತಿತ್ವ, ಅನುಭಾವಿ, ತತ್ತ್ವಜ್ಞಾನಿ, ದಾರ್ಶನಿಕರಾಗಿ ವ್ಯೋಮಕಾಯರಾಗಿ ಸಾಧನೆಗೈದು ವಿಶ್ವಕ್ಕೆ, ವಚನ ಸಾಹಿತ್ಯ, ಲಿಂಗಾಯತ ಧರ್ಮದ ಅಧ್ಯಾತ್ಮಿಕ ವಿಚಾರಗಳನ್ನು  ಶಿವಯೋಗ ಸಾಧನೆಯ ಮಾರ್ಗವನ್ನು, ಜಂಗಮ  ಸಂದೇಶವನ್ನು ನೀಡಿದ್ದಾರೆ. ಅವರ ಅದ್ಭುತ ವಚನಗಳಲ್ಲಿ ಅಲ್ಲಮಪ್ರಭುಗಳ ವ್ಯಕ್ತಿತ್ವ ಸಾಧನೆ ದರ್ಶನವಾಗುತ್ತದೆ. 
ಶಿವಯೋಗದಲ್ಲಿ ನಿರತನಾದ ಸಾಧಕ ಸಹಸ್ರಾರದ ಬ್ರಹ್ಮರಂಧ್ರದಲ್ಲಿ  ಪಡೆಯುವ ಮಹಾಘನದ ಅನುಭೂತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಅನುಭಾವವನ್ನು  ಬಣ್ಣಿಸಲುಬಾರದು. ನಾದ ಬಿಂದು ಕಳೆಗಳ ಅನುಭೂತಿ ಪಡೆದ ಸಾಧಕ ದಿವ್ಯನಾದವನ್ನು ಕೇಳುತ್ತಾನೆ, ದಿವ್ಯಬೆಳಗನ್ನು ಕಾಣುತ್ತಾನೆ,  ದಿವ್ಯರುಚಿಯನ್ನು ಆಸ್ವಾದಿಸುತ್ತಾನೆ. ಆ ಬೆಳಕು, ಆ ನಾದ ಮತ್ತು ಆ ರುಚಿಗಳನ್ನು ಶಬ್ದಗಳಲ್ಲಿಟ್ಟು ವರ್ಣಿಸಲು ಸಾಧ್ಯವಿಲ್ಲ. ಬ್ರಹ್ಮರಂದ್ರದ  ಅನುಭೂತಿಯಲ್ಲಿ ನಿಂತ ನಿಜವಸ್ತುವು ಸರ್ವಾಂತರ್ಯಾಮಿ ಮತ್ತು ನಿಜನಿರಾಳ.

*ಕಂಗಳ ಬೆಳಗ ಕಲ್ಪಿಸಬಾರದು, 
ಕರ್ಣದ ನಾದವ ವರ್ಣಿಸಬಾರದು.
ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದಿತ್ತು.
ಮತಿಗೆ ಮಹಾಘನವಪ್ಪ ಸುಷುಮ್ನನಾಳದ ಸುಯಿಧಾನವ, ಪ್ರಮಾಣಿಸಬಾರದು*

ಸುಷುಮ್ನಾ ನಾಳದ (ನಾಡಿಯ) ಅಗ್ರಭಾಗವೇ ಬ್ರಹ್ಮರಂಧ್ರ.  ಇದಕ್ಕೆ ಜೀವಬಿಂದು, ಪ್ರಜ್ಞಾಬಿಂದು ಎಂದೂ ಕರೆವರು. ಶಿವಯೋಗದಲ್ಲಿ ನಿರತನಾದ ಸಾಧಕ ಬ್ರಹ್ಮರಂದ್ರದಲ್ಲಿ ತ್ರಿಕೂಟ ಸ್ಥಾನದಲ್ಲಿ ನಿಲ್ಲುತ್ತಾನೆ. ಗಂಧ, ಸ್ಪರ್ಶ, ನೋಟ ಹೀಗೆ ಎಲ್ಲ ಬಾಹ್ಯಇಂದ್ರಿಯಗಳ ವ್ಯವಹಾರ ಅಲ್ಲಿ ಇಲ್ಲ. ಪ್ರಾಣಗತಿ ಉಸಿರಾಟ ಕೂಡ ಶಾಂತ ಸಹಜ ಲಯಬದ್ಧ. ಅಜ್ಞಾಚಕ್ರದಲ್ಲಿ ಮನಸ್ಸನ್ನೂ ಮತ್ತು ಯೋಚಿಸುವ ಶಕ್ತಿಯನ್ನು ಮಹಾಲಿಂಗಕ್ಕೆ ಸಮರ್ಪಿಸಿಕೊಂಡ ಮೇಲೆ ಅವನಲ್ಲಿ ಈಗ ಇರುವುದು ಉನ್ಮನಿಗೊಂಡ ಸುಮನಸ್ಸೊಂದೆ. ಈ ಸುಮನಸ್ಸಿನಿಂದಲೇ ಸಾಧಕ ಊರ್ಧ್ವಮಂಡಲಸ್ಥ ಮಹಾಲಿಂಗದ ದಿವ್ಯಬೆಳಕನ್ನು ಕಾಣುತ್ತಾನೆ. 
ಆ ಸುಮನಸ್ಸೇ ಸಾಧಕನಿಗೆ  ಆ ದಿವ್ಯ ಬೆಳಗನ್ನು ನೋಡಲು ನೇತ್ರವಾಗಿ ಪರಿಣಮಿಸುತ್ತದೆ. ಆತನು ಕಂಡ ಬೆಳಕನ್ನು ಕಲ್ಪಿಸಲೂ ಆಗದು. ಅಷ್ಟು ಜಾಜ್ವಲ್ಯಮಾನ; ಅಷ್ಟೇ ಪ್ರಶಾಂತಮಯ.

ಸುಮನ ಕರ್ಣದಿಂದ ಅನಾಹತವಾದ ದಿವ್ಯ ನಾದ ಕೇಳುತ್ತಾನೆ. ಮೊರೆಯುವ ದಶನಾದಗಳನ್ನು ಕೇಳಬಹುದು. ಭ್ರಮರ, ಶಂಖ, ಮೃದಂಗ, ತಾಳ, ಘಂಟಾ, ವೀಣಾ, ಭೇರಿ, ದುಂದುಭಿ, ಸಮುದ್ರ ಘರ್ಜನೆ, ಮೇಘ ಘರ್ಜನೆ ಇವುಗಳಿಂದ ಹೊರ ಹೊಮ್ಮುವ ನಾದಗಳಿಗೆ ಹೋಲುವ ನಾದವನ್ನು ಅಂತರಂಗದಲ್ಲಿಯೇ  ಶಿವಯೋಗಿ ಆಲಿಸುವನು. ಆ ನಾದವು ಎಷ್ಟು ಮಧುರ ನಾದಮಯವಾಗಿದೆ ಎಂದರೆ ಅದನ್ನು ಶಬ್ದಗಳಿಂದ ವರ್ಣಿಸಲು ಆಗದು.

 ಸುಮನ ಜಿಹ್ವೆಯಿಂದ ಅಮೃತಪಾನ ಮಾಡುತ್ತಾನೆ. ಆ ಜಿಹ್ವೆಯ ರುಚಿಗೆ ಪ್ರತಿಸಾಠಿ ಯಾವುದೂ ಇಲ್ಲ. ಆ ಲಿಂಗಾನುಸಂಧಾನದಿಂದ ಹೊರಹೊಮ್ಮುವ ದಿವ್ಯರುಚಿಯನ್ನು ಆಸ್ವಾದಿಸುತ್ತಾನೆ. ಆ ರುಚಿಗೆ ಪ್ರತಿಯಿಲ್ಲ. ಅದು ಅಪ್ರತಿಮ.

*ಮತಿಗೆ ಮಹಾಘನವಪ್ಪ ಸುಷುಮ್ಮನಾಳದ ಸುಯಿಧಾನವ ಪ್ರಮಾಣಿಸಬಾರದು* 

 ಸುಷುಮ್ನನಾಳದ ಕೊನೆಯಲ್ಲಿ ಇರುವ ಬ್ರಹ್ಮರಂಧ್ರದ ತ್ರಿಕೂಟದಲ್ಲಿ ಒಸರುವ ಸುಯಿಧಾನ ಅಮೃತದ ಅನುಭೂತಿ  ಪ್ರಮಾಣಿಸಬಾರದು : ಪ್ರಮಾಣಗಳಿಂದ ಅಳೆಯಲಾಗದು. ಬ್ರಹ್ಮನಾಳದಲ್ಲಿ ಶಿವಯೋಗಿ ಸಾಧಕ  ಪಡೆಯುವ ಲಿಂಗಾನುಭವವೆಂಬ ಸುಪ್ರಸನ್ನ ಪ್ರಸಾದವನ್ನು ಬಾಹ್ಯಪ್ರಮಾಣಗಳಿಂದ ಅಳೆಯಲು ಆಗದು. ಇದು ಶ್ರೇಷ್ಠವಾದ ಸುಮನ ನೀಡುವ ಪ್ರಜ್ಞೆಯ ಮಹಾಘನ. ಮೊರೆವ ನಾದ, ಉರಿವ ಜ್ಯೋತಿ, ಸುರಿವ ಅಮೃತ ಕಳೆ ಇವು ಮೂರು ಸಾಧನೆಯ ಅಮೃತ ಫಲಗಳು. 

*ಅಣು ರೇಣು ತೃಣ ಕಾಷ್ಠದೊಳಗೆ ಭರಿತ ಮನೋಹರ, ನಿಂದ ನಿರಾಳ- ಗುಹೇಶ್ವರಾ.* 

 ಈ ಜಗತ್ತು ಸೂಕ್ಷ್ಮಾತಿ ಸೂಕ್ಸ್ಮ ಅಣು ರೇಣು (atoms and subatomic particles) ಗಳಿಂದ ರಚಿತವಾಗಿದೆ. ತೃಣ ಕಾಷ್ಠ ಅಂದರೆ  ಹುಲ್ಲು, ಗಿಡ ಮರಗಳು. ಹೀಗೆ  ಈ ಜಗತ್ತಿನ ಸೂಕ್ಷ್ಮಾತಿ ಸೂಕ್ಸ್ಮ ಅಣು ರೇಣುಗಳಲ್ಲಿ  ಹುಲ್ಲು, ಗಿಡ ಮರಗಳಲ್ಲಿ  ಭರಿತವಾದ ನಿರಾಕಾರ, ನಿರಾಳ ನಿಃಖಲ ಲಿಂಗವು  ಮನೋಹರ. ಅದರ  ನಿಲವು ಮಾತು, ಸಾಧಾರಣ ಮತಿಗಳನ್ನು ಮೀರಿದುದು.
ಭಾವ:
ಸಹಸ್ರಾರದ ಆತ್ಮಾನುಭಾವಿಗೆ ನಿರ್ಮಲವೂ ಸೂಕ್ಷ್ಮವೂ ನಿಶ್ಚಲವೂ ಶಾಂತವೂ ಆದ ಸುಮನಸ್ಸೇ  ಕಣ್ಣು, ಕಿವಿ, ನಾಲಗೆಯಾಗಿ ನಾದ ಬಿಂದು ಕಳೆ  ದಿವ್ಯಾನುಭೂತಿ ಮಾಡಿಸುತ್ತದೆ. ಅನಾಹತ ಪ್ರಣವಮಂತ್ರದ ಶ್ರವಣ ಹಾಗೂ ಲಿಂಗಾನಂದದ ಆಸ್ವಾದನ, ಚಿನ್ನಾದ, ಚಿದ್ಬಿಂದು, ಚಿತ್ಕಳೆ ಅವುಗಳನ್ನು ಶಬ್ದಗಳಿಂದಾಗಲಿ ಉಪಮೆಗಳಿಂದಾಗಲಿ ವರ್ಣಿಸಲು ಅಸಾಧ್ಯ. ಹೊರಮುಖವಾದ ಐಂದ್ರಿಯಿಕ ಪ್ರಮಾಣಗಳು ಶರಣನ ಆ ಅನುಭವವನ್ನು ಗ್ರಹಿಸಲು ಅಸಮರ್ಥವಾಗಿವೆ.

ನೀರಿನಲ್ಲಿ ನೀರನ್ನು ಬೆರೆಸಿದಂತೆ, ಬೆಂಕಿಯಲ್ಲಿ ಬೆಂಕಿಯನ್ನು ಬೆರೆಸಿದಂತೆ ಪರಬ್ರಹ್ಮಸ್ವರೂಪ ಲಿಂಗದಲ್ಲಿ ಆತ್ಮನನ್ನು ಲಯಗೊಳಿಸಿದಮೇಲೆ ಅದಕ್ಕಿಂತ ಭಿನ್ನವಾಗಿ ಏನೂ ತೋರುವುದಿಲ್ಲ.
ಅಂಗನೂ ಕೊನೆಯಲ್ಲಿ ಲಿಂಗ ಸ್ವರೂಪನಾಗಿ ಲಿಂಗದಲ್ಲಿ ಸಮರಸವಾಗಿ ಪರಿಣಮಿಸುವನು.

ಹರಿಯುವ ನದಿಗಳು ಸಮುದ್ರದಲ್ಲಿ ಅಡಗಿ ತಮ್ಮ ನಾಮರೂಪಗಳನ್ನು ತ್ಯಜಿಸುವಂತೆ, ಶಿವಯೋಗಿಯು  ಪರಾತ್ಪರ ದಿವ್ಯ ಪುರುಷನಲ್ಲಿ ಪ್ರವೇಶಿಸಿ ನಾಮ ರೂಪಗಳಿಂದ ಮುಕ್ತ ನಾಗುವನು. ಸುನಾದ, ಬಿಂದು, ಪ್ರಣವ  ಈ ಮೂರನ್ನೂ ಇದು ಒಳಗೊಂಡಿರುತ್ತದೆ. ನಾದಾನುಸಂಧಾನ, ಬಿಂದಾನುಸಂಧಾನ, ಮಂತ್ರಾನುಸಂಧಾನ -ಈ ಮೂರರ ಅನುಸಂಧಾನಗಳ ಕಡೆಯಲ್ಲಿ ಶಿವಯೋಗ ಅಳವಡುತ್ತದೆ. ಇದು ಮೊದಲು ನಾದರೂಪದ ಅನುಸಂಧಾನದಲ್ಲಿ, ಅನಂತರ ಬಿಂದಾನುಸಂಧಾನದ ಜ್ಯೋತಿರೂಪದಲ್ಲಿ, ನಂತರ  ಪ್ರಣವಮಂತ್ರರೂಪದಲ್ಲಿ ಬೆಳೆಯುತ್ತದೆ. ಅಗಮ್ಯ ನಿರ್ಮಾಯ ನಿರಾಳ ನಿರಂಜನ ನಿಶೂನ್ಯ ಸ್ವರೂಪನಾದ ಶಿವನೇ ತಾನೆಂಬ ತನ್ಮಯತೆಯಲ್ಲಿ ತನ್ನನ್ನು ತಾನೇ ಮರೆಯುತ್ತಾನೆ. ಮಾತು ಮನಗಳಿಗೆ ಅಪ್ರಾಪ್ತವಾದ ಆನಂದರೂಪವಾದ ಆ ಬ್ರಹ್ಮತತ್ತ್ವವನ್ನು ತಿಳಿದ ಶಿವಯೋಗಿಯು ಅಂಗಲಿಂಗಸಮರಸವೆಂಬ ಶಿವಾದ್ವೈತದಲ್ಲಿ  ಅಮೃತನಾಗುತ್ತಾನೆ.
ಅಂತರ್ಮುಖಿಯಾದ ಸಾಧಕನು 
ಸರ್ವವ್ಯಾಪಕನಾದ ಭಗವಂತನು ವಿಶ್ವದಲ್ಲಿ ಎಲ್ಲಾ ಕಡೆಗೆ ಇರುವಂತೆ ತನ್ನಲ್ಲಿಯೂ ಇರುವುದನ್ನು ಅರಿತು ಆನಂದಿಸುತ್ತಾನೆ.
 ' ತಾನೂ ಪರಮಾತ್ಮನ ಒಂದಂಶ ' ; ಅದೇ ರೀತಿಯಾಗಿ ಸಕಲ ಜೀವರಾಶಿಗಳಲ್ಲಿ ದೇವನಿರುವನು ಎಂದು ಅರಿಯುತ್ತಾನೆ. 'ದೇಹದಲ್ಲಿದ್ದ ಜೀವ ಚೇತನ ವಿಶ್ವದ ಮಹಾಚೇತನ' ಎಂದು ಅರಿಯುತ್ತಾನೆ.

ಮಣ್ಣಿನ ಪಣತಿಯೆ ಇರಲಿ ಹೊನ್ನಿನ ಪಣತಿಯೇ ಇರಲಿ, ಆದರೆ ಎರಡರಲ್ಲಿಯೂ ಬೆಳಗುವ ಜ್ಯೋತಿ ಮಾತ್ರ ಒಂದೇ!  ಹಾಗೆ ಎಲ್ಲರಲ್ಲಿಯೂ ಹೊಳೆಯುವ ಪ್ರಾಣಜ್ಯೋತಿ ಪರಮಾತ್ಮನು ಒಬ್ಬನೇ.  ಹೀಗೆ ತನ್ನೊಳಗೆ ದೇವರನ್ನು, ದೇವನಲ್ಲಿ ತನ್ನನ್ನು ಕಂಡು ಪ್ರಪಂಚವೆಲ್ಲವೂ ಪರಮಾತ್ಮನಿಂದ ತುಂಬಿಹೋಗಿದೆ ಎಂದರಿತು ಶಿವಯೋಗಿ ಆನಂದಿಸುವನು. 
-✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು,
##ಕಂಗಳ_ಬೆಳಗ_ಕಲ್ಪಿಸಬಾರದು
Picture post created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma