ವಚನ ದಾಸೋಹ

#ವಚನ:
#ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ ?
ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ ?
ಸೈದಾನವನರ್ಪಿಸಿ ಫಲವ ಬೇಡುವರಯ್ಯಾ
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ ! 1264
ಅರ್ಥ:
ದೇವರಿಗೆ ಪೂಜೆಯಲ್ಲಿ ಉಪಯೋಗಿಸುವ ಪರಿಕರಗಳನ್ನು ನಾವೇ ಅರ್ಪಿಸುತ್ತೇವೆ ಎಂದು ತಿಳಿದು, ಫಲ ನಿರೀಕ್ಷಿಸುತ್ತೇವೆ.  ಅವೆಲ್ಲ ಅವನೇ ದಯಪಾಲಿಸಿದ್ದು ಎಂದು ಮರೆಯುತ್ತೇವೆ. ಇದು ಅನ್ಯಾಯ ಎನ್ನುತ್ತಾರೆ ವ್ಯೋಮಾಕಾಯ ಅಲ್ಲಮ ಪ್ರಭುಗಳು. ಅರ್ಪಣೆಯಂದರೆ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳುವುದು ಎಂದು ಅರ್ಪಣೆಯ ನಿಜ ಅರ್ಥ ತಿಳಿಸಿದ್ದಾರೆ.

*ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ ?*

ಸಿತಾಳ ವೆಂದರೆ ಪವಿತ್ರ ಜಲ, ಮಜ್ಜನಕ್ಕೆರೆಯಲು ಬಳಸುವ ಶುದ್ಧೋದಕ.
ಮಜ್ಜನದ ಪುಣ್ಯಫಲ ತನ್ನನ್ನೇ ಅರ್ಪಿಸಿಕೊಂಡ ಆ ಪವಿತ್ರ ಜಲಕ್ಕೆ ಬರುತ್ತದೆ. 

*ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ?*

ಪತ್ರೆ ಪುಷ್ಪಗಳಿಂದ ದೇವರನ್ನು  ಪೂಜಿಸಿದರೆ  ಆ ಪುಣ್ಯಫಲವು ಪತ್ರೆ ಪುಷ್ಪಗಳನ್ನು ಅರ್ಪಿಸಿದ ಗಿಡ ಮರಗಳಿಗೆ ಬರುತ್ತದೆ.

*ಸೈದಾನವನರ್ಪಿಸಿ ಫಲವ ಬೇಡುವರಯ್ಯಾ
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?*

 ಸೈದಾನವೆಂದರೆ ಹಲವು ಧಾನ್ಯಗಳಿಂದ, ಸದ್ಭಾವದಿಂದ ಮಾಡಿದ  ಪಾಕ. ದೇವರಿಗೆ, ಜಂಗಮನಿಗೆ ಅರ್ಪಿಸುವ ಅಡುಗೆ ಅಥವಾ ನೈವೇದ್ಯ. ನೈವಿದ್ಯೆಯ ಪುಣ್ಯದ ಫಲ ಅಡಿಗೆಗೆ ಉಪಯೋಗಿಸದ ತಮ್ಮನ್ನೇ ಅರ್ಪಿಸಿಕೊಂಡ ಹದಿನೆಂಟು ಧಾನ್ಯಗಳಿಗೆ ಬರುತ್ತದೆ.

*ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ ! *

ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು ಅಂದರೆ ಪೂಜೆಯಲ್ಲಿ ಬಳಸಲಾಗುವ ಎಲ್ಲ ಪದಾರ್ಥಗಳು ಲಿಂಗದ ಒಡವೆಗಳು. ಮಹಾಲಿಂಗದಿಂದಲೇ ರಚಿತವಾದ ಪ್ರಕೃತಿ ಯನ್ನು ಇವು ಸಿಂಗರಿಸುವದರಿಂದ ಇವು ಲಿಂಗದ ಒಡವೆಗಳು ಎನ್ನುತ್ತಾರೆ ಅಲ್ಲಮ ಪ್ರಭುಗಳು. ಭಕ್ತಿ ವಿರಹಿತರಾದ ಜನ ತಮ್ಮದಲ್ಲದ ವಸ್ತುಗಳನ್ನು ಲಿಂಗದೇವನಿಗೆ ಸೇರಿದ ಅವನದೇ ಆದ ವಸ್ತುಗಳನ್ನು ಇತ್ತು ತಮಗಾಗಿ ಫಲ ಬೇಡುತ್ತಾರೆ. 
ಪೂಜೆಯಲ್ಲಿ ಉಪಯೋಗಿಸಿದ ಪರಿಕರಗಳೆಲ್ಲವೂ ಆತನ ಕೊಡುಗೆ ಎಂಬ ಪ್ರಜ್ಞೆ ಇಲ್ಲದವರನ್ನು  ಪ್ರಭುದೇವರು 'ಸರ್ವಅನ್ಯಾಯಿಗಳು' ಎಂದು ಕರೆದು ಅಂಥವರಿಗೆ ಎನು ಹೇಳುವದು ಎನ್ನುತ್ತಾರೆ. 
ಭಾವ:
 ದೇವರ ವಸ್ತುವನ್ನು ಭಕ್ತಿಭಾವದಿಂದ ಅರ್ಪಿಸಿ  ಪ್ರತಿಯಾಗಿ ಏನನ್ನೂ ಅಪೇಕ್ಷಿಸದಿರುವುದು "ನಿಷ್ಕಾಮ ಭಕ್ತಿ". ಎಲ್ಲವೂ ದೇವನದೆಂದು ಪರಿಭಾವಿಸಿ  ಭಕ್ತಿಯಿಂದ ಅರ್ಪಿಸಿ ಸಂತೋಷಿಸುವುದು "ನೈಷ್ಠಿಕ ಭಕ್ತಿ". ಭಕ್ತಿಮಾರ್ಗ ಬಹಳ ಸುಲಭ. ಆಡುತ್ತಾ ಹಾಡುತ್ತಲೂ ಅಥವಾ ಮೌನವಾಗಿಯೂ ಪೂಜೆ ಮಾಡಬಹುದು. ಹೂ ಹಣ್ಣು ಧೂಪ ದೀಪ ನೈವಿದ್ಯೆ ಯಾವುದೇ ಪರಿಕರ ಇಲ್ಲದಿದ್ದರೂ ಪೂಜೆ ಮಾಡಬಹುದು. ಬೇಕಾಗಿರುವುದು ನಿರ್ಮಲ ಭಕ್ತಿ ಮತ್ತು ನೈತಿಕ ನಿಷ್ಟೆ ಅಷ್ಟೇ. "ನಿಜವಾದ ದೇವರು ಪೂಜೆಗೆ ಒಳಗಾಗನು, ನಿಜವಾದ ಭಕ್ತ ಪೂಜಿಸಲಾರ" ಎಂದು ಎನ್ನುತ್ತಾರೆ ಅಲ್ಲಮ ಪ್ರಭುಗಳು. 
ಗುರು ಬಸವಣ್ಣನವರೂ ಸಹ ಅಂತರಂಗ ಶುದ್ಧಿಯಿಲ್ಲದೆ ಮಾಡುವ ಪೂಜೆ ವ್ಯರ್ಥ ವೆನ್ನುತ್ತಾರೆ. ಮನದಲ್ಲಿ ಶಿವ, ಜೀವ ಎರಡೂ ಎಂಬುದು ಹೋಗಿ ಒಂದೇ ಆಗಬೇಕು. ಏಕಾತ್ಮವಾಗಬೇಕು.ಅದು ಒಲಿಯುವ ಓಲೈಸುವ ಪೂಜೆ ಎನ್ನುತ್ತಾರೆ.

#ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ. ಮನದ ತಾಮಸ ಬಿಡದು, ಮನದ ಕಪಟ ಬಿಡದು, ಶಿವಶರಣೆಂಬುದು ಅಳವಡದಯ್ಯಾ. ಎನ್ನ ಮನದಲ್ಲಿ ಎರಡುಳ್ಳನ್ನಕ್ಕ ಕೂಡಲ ಸಂಗಮದೇವನೆಂತೊಲಿವಪೂಜೆಯು ಏನು?

  'ಪೂಜೆ' ಎಂದರೆ ದೇವನಲ್ಲಿ ಅನನ್ಯಪ್ರೇಮ ದಿಂದ ಸಮರ್ಪಣಭಾವದಿಂದ  ಮಾಡಬೇಕೆ ಹೊರತು  ಬರಿ ಆಡಂಬರದ ಪೂಜೆ ಮಾಡಿ ಫಲ ಆಪೆಕ್ಷಿಸಿದರೆ ಫಲ ಸಿಗದು. ಅಂಥ ಪೂಜೆ ನಿರರ್ಥಕ. ನಿಜ ನಿರ್ಮಲ ನಿಷ್ಕಾಮ ಭಕ್ತಿ ಅರಿಯದ ಭವಿಗಳು, ದೇವನಿಗೆ ಸಿತಾಳದಿಂದ ಮಜ್ಜನಗೈಯುತ್ತಾರೆ. ಪತ್ರಿ ಪುಷ್ಪಗಳಿಂದ ಅರ್ಚಿಸುತ್ತಾರೆ. ಹಲವು ಬಗೆಯ ನೈವೇದ್ಯವನ್ನು ಅರ್ಪಿಸುತ್ತಾರೆ. ಕೊನೆಯಲ್ಲಿ ಫಲವ ಬೇಡುತ್ತಾರೆ. ಆ ಫಲವು ದೊರೆಯುವುದೇ ಆದರೆ ತಮ್ಮನ್ನೇ ದೇವರಿಗೆ ಸಮರ್ಪಿಸಿಕೊಂಡ ಸಿತಾಳಕ್ಕೆ, ತರುಲತೆಗಳಿಗೆ ಹಾಗೂ ಹದಿನೆಂಟು ಧಾನ್ಯಗಳಿಗೆ ದೊರೆತೀತು. ಯಾಕೆಂದರೆ ಅರ್ಪಣೆ ಅವು ಮಾಡಿವೆ ಪೂಜಕನಲ್ಲ. ಆ ಒಂದೂ ಪೂಜಕನ ಒಡವೆಗಳಲ್ಲ. ಜಗತ್ತಿನಲ್ಲಿ ಇರುವುವೆಲ್ಲ ಲಿಂಗದ ಒಡವೆ. ತಮ್ಮದಲ್ಲದ ಒಡವೆಗಳನ್ನು ಲಿಂಗಕ್ಕೆ ಕೊಟ್ಟು
ಫಲವ ಬೇಡುವ  ಜನ ನಿಜವಾಗಿಯೂ ಅನ್ಯಾಯಿಗಳು. ಭಕ್ತನಾದವನು ಮಾಹೇಶ್ವರಸ್ಥಲಕ್ಕೇರಿದ ಬಳಿಕ ಭೋಗ ಕಾಮನೆಗಳನ್ನು ಕಳೆದುಕೊಂಡಿರಬೇಕು. ಆತನ ಪೂಜೆಯಲ್ಲಿ ಅರ್ಪಣದ ಭಾವವಿರಬೇಕು. 
 ಪೂಜೆಯಲ್ಲಿ ಎರಡು ಅಂಗಗಳು. ಬಾಹ್ಯಾಂಗ ಪೂಜೆ ಮತ್ತು ಅಂತರಂಗ ಪೂಜೆ. ಅರ್ಪಣಾರೂಪದಲ್ಲಿರುವ ಪೂಜೆ  ಬಾಹ್ಯಾಂಗ ಪೂಜೆ ಆದರೆ  ಸರ್ವಸಮರ್ಪಣಾರೂಪದ ತನ್ನನ್ನೇ ಸಮರ್ಪಿಸುವ ಭಾವವು ಅಂತರಂಗದ ಪೂಜೆ. ಇವೆರಡೂ ಕೂಡಿ ಸಾಗಬೇಕು.  ಬಹಿರಂಗದ ಆಚರಣೆಗಳ  ಪೂಜೆಗೆ ಮರುಳಾಗಿ  ಬಹುಜನರು ಅಭಿಷೇಕ, ಪತ್ರಿ, ಪುಷ್ಪ, ಧೂಪ, ದೀಪ ಮುಂತಾದ ಪರಿಕರಗಳಿಂದ ದೇವರನ್ನು  ಪೂಜಿಸುತ್ತಾರೆ.  ಅವರಿಗೆ ಪೂಜೆ ಎಂದರೇನು ತಿಳಿಯದು. ಅದನ್ನು ಮಾಡುವುದು ಹೇಗೆ ಎಂಬುದು ಅರಿಯರು, ಬರಿ ಅಂಧಾನುಕರುಣೆ. ಅವರು ದೇವನ ಕೃಪೆ ಕಾಣರು, ಆತ್ಮವಿಕಾಸ ಹೊಂದರು. ಹೀಗೆ ಪೂರ್ಣ ದೃಷ್ಟಿಯಿಂದ ಸೃಷ್ಟಿಯ ರಹಸ್ಯವನ್ನು ಪರಾಮರ್ಶಿಸುವ ಮತ್ತು ಅದರಿಂದ ಅಂಗೀಕರಿಸಿದ ಆದರ್ಶಗಳನ್ನು ಅನುಷ್ಠಾನಕ್ಕೆ ತರುವ ನಿರಂತರ ಆತ್ಮ ಜಾಗೃತಿಯ ಪ್ರಯತ್ನ ಶರಣರಲ್ಲಿ ಕಂಡುಬರುತ್ತದೆ.  
ಅರಿವಿನಿಂದ ಪರಾಮರ್ಶಿಸಿ, ಸರಿ ಎನಿಸಿದರೆ ಆಚರಣೆಗಳನ್ನು ಅಂಗೀಕರಿಸಿ ಆಚರಿಸಬೇಕು. ಒಳಿತು ಕೆಡುಕುಗಳನ್ನು ವೈಚಾರಿಕವಾಗಿ ಪರಿಶೀಲಿಸಬೇಕು. ಅರಿವು ಬೇರೊಬ್ಬರಲ್ಲಿ ಅರಿಸುವದಲ್ಲ. ಅದು ನಮ್ಮೊಳಗಿನ ಅಗಮ್ಯ ಚೇತನ. ಅರಿವು ಸ್ವಯಂವಾದ ಬಳಿಕ ಅನ್ಯರ ಕೇಳಲುಂಟೆ ?" ಎಂದರು ವೈರಾಗ್ಯನಿಧಿ ಅಕ್ಕಮಹಾದೇವಿಯವರು.
ನೈಷ್ಠಿಕ ಭಕ್ತಿಗಳ ಹಿನ್ನೆಲೆಯಲ್ಲಿ ಆಚಾರ ಮತ್ತು ವಿಚಾರಗಳೆರಡಕ್ಕೂ ಸಮಾನ ಸ್ಥಾನ. ಆಧ್ಯಾತ್ಮಿಕ ಸಾಧನೆಯ ವಿಕಾಸಕ್ಕೆ ಇವೆರಡೂ ಭದ್ರವಾದ ಬುನಾದಿಯನ್ನು ಹಾಕಿಕೊಡುತ್ತದೆ.
-✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು,
#ಮಜ್ಜನಕ್ಕೆರೆದು_ಫಲವ_ಬೇಡುವರಯ್ಯಾ,
#ಲೋಕೋಪಚಾರಕ್ಕೆ_ಮಜ್ಜನಕ್ಕೆರೆವೆನಯ್ಯಾ
Picture post created me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma