ವಚನ ದಾಸೋಹ

#ವಚನ :
#ಮಡಿಕೆಯ ಮಾಡುವರೆ ಮಣ್ಣೇ ಮೊದಲು, ತೊಡಗೆಯ ಮಾಡುವರೆ ಹೊನ್ನೆ ಮೊದಲು, ಶಿವಪಥವರಿವೆಡೆ ಗುರುಪಥವೆ ಮೊದಲು ಕೂಡಲಸಂಗಮ ದೇವನರಿವೆಡೆ ಶರಣರ ಸಂಗವೆ ಮೊದಲು.
- ಗುರು ಬಸವಣ್ಣನವರು
ಅರ್ಥ:
ಶಿವಪಥವನರಿಯುವ ಪ್ರಯತ್ನದಲ್ಲಿ ಗುರುವಿನ ಮತ್ತು ಶರಣರ ಸತ್ಸಂಗದ  ಅವಶ್ಯಕತೆಯನ್ನು  ಹೇಳುತ್ತಿದ್ದಾರೆ ಗುರು ಬಸವಣ್ಣನವರು. ಮಣ್ಣಿನ ಮಡಿಕೆ ಮಾಡುವದಕ್ಕೆ ಮಣ್ಣು ಮೊದಲ ಅವಶ್ಯಕತೆ, ಚಿನ್ನದ ಆಭರಣ ಮಾಡಬೇಕಾದರೆ ಬಂಗಾರ ಮೊದಲ ಅವಶ್ಯಕತೆ. ಹೀಗೆ ಮಡಕೆಯನ್ನು ಮಾಡುವುದಕ್ಕೆ ಮಣ್ಣೆ ಮತ್ತು ಒಡವೆಯನ್ನು ಮಾಡುವುದಕ್ಕೆ ಚಿನ್ನವೇ ಮೂಲಸಾಮಗ್ರಿಯಾಗಿರುವಂತೆ ಶಿವಪಥವನ್ನರಿಯಲು ಗುರುಪಥವೇ ಮೊದಲು ಎಂಬ ಮಾತು ಸಾಧನೆಯಲ್ಲಿ ಗುರುವಿನ ಮಹತ್ವವನ್ನು ಅರ್ಥಪೂರ್ಣವಾಗಿ ಹಿಡಿದಿಟ್ಟಿದೆ. ಶಿವಪಥವನ್ನರಿಯುವುದು ಎಂದರೆ ಶಿವಯೋಗ ಮಾರ್ಗದಲ್ಲಿ ನಡೆಯುವುದು.  'ಗುರುಪಥ' ಎಂದರೆ ಲಿಂಗದೀಕ್ಷೆಯ ಆವಶ್ಯಕತೆ. ಗುರು ಲಿಂಗದೀಕ್ಷೆಯನ್ನಿತ್ತು ಶಿವನತ್ತ ಸಾಧಕನನ್ನು ಕೊಂಡೊಯ್ಯುವ ಶಿವಪಥದಲ್ಲಿ ತೊಡಗಿಸು ತ್ತಾನೆ. ಶಿವಪಥದಲ್ಲಿ ಮುನ್ನಡೆಯಬೇಕಾದರೆ ಶರಣರ ಅಂದರೆ ಅನುಭಾವಿಗಳ ಸಂಗ ಆವಶ್ಯಕ. ಆದುದರಿಂದಲೇ ಬಸವಣ್ಣನವರು “ಕೂಡಲಸಂಗನನರಿವೊಡೆ ಶರಣರಸಂಗವೆ ಮೊದಲು” ಎನ್ನುತ್ತಾರೆ. ಲಿಂಗದೀಕ್ಷೆ ಯನ್ನೀಯುವ ಗುರುಕರುಣೆಯ ಜೊತೆಗೆ, ಅದರಲ್ಲಿ ಆತ್ಮವೀಕ್ಷಣೆಯಿಂದ ಮುಂದುವರಿ ಯುವುದಕ್ಕೆ ಶರಣರ ನಿರಂತರ ಒಡನಾಟವೂ ಆವಶ್ಯಕವೆಂಬ ಬಸವಣ್ಣನವರ ಈ ಮಾತು ಮನನ ಮಾಡಬೇಕಾದುದು.  
ಭಾವ:
ಗುರು ಬಸವಣ್ಣನವರು ಮಡಿಕೆ ಮಾಡಲು ಮಣ್ಣು ಹೇಗೆ ಮುಖ್ಯವಾಗಿ ಬೇಕಾಗುವದೋ, ಆಭರಣ ಮಾಡಲು ಹೊನ್ನು ಹೇಗೆ ಮುಖ್ಯವಾಗಿ ಬೇಕಾಗುವದೋ ಹಾಗೆ  ಶಿವನ ನೆಲೆಯನ್ನು ಕಂಡುಕೊಳ್ಳಲು ಗುರುವಿನ ಮಾರ್ಗದರ್ಶನ ಬೇಕು ಶರಣರ ಸತ್ಸಂಗ ಬೇಕು ಎಂದು  ಎಂಬ ಭಾವವನ್ನು ಗುರು ಬಸವಣ್ಣ ತಿಳಿಸಿದ್ದಾರೆ.
* ಗುರು *:
"ಗು"ಕಾರವು ತ್ರಿಗುಣಗಳನ್ನು‌ ಮೀರಿದ ಸ್ಥಿತಿ
"ರು"ಕಾರವು  ದೇಹಭಾವವಳಿದು ದೇವಭಾವವಾದ  ಪರಶಿವನ ರೂಪ. ಹೀಗೆ
ದೇಹಭಾವ ವರ್ಜಿಸಿದ್ದ ಪರಶಿವನೇ ಗುರು. ಶಿವನೇ ಆದಿಗುರು. ಶಕ್ತಿಗೆ, ಸಪ್ತಋಷಿಗಳಿಗೆ ಆತ್ಮಜ್ಞಾನ, ವಿಶ್ವದ ರಹಸ್ಯ ಅರುಹಿದ ಆದಿ ಗುರು ಶಿವ ಎಂದು ವೇದ ಶ್ರುತಿ ಆಗಮಗಳು ಹೇಳುತ್ತವೆ.
* ಶರಣ ಧರ್ಮದ ಅಷ್ಟಾವರಣದಲ್ಲಿ ಮೊದಲ ಆವರಣವೇ ಗುರು*.
ಗುರು ಇಲ್ಲದೆ ದೀಕ್ಷೆಯಿಲ್ಲ; ದೀಕ್ಷೆಯಿಲ್ಲದೆ ಸಾಧನೆಯಿಲ್ಲ. ಸಾಧನಾಪಥದಲ್ಲಿ ಗುರುವಿಗಿಂತ ಅಧಿಕರಾದವರು ಯಾರೂ ಇಲ್ಲ. ಶಿಷ್ಯನ ಅಜ್ಞಾನವನ್ನು ತೊಲಗಿಸಿ ಪರಮಾತ್ಮನ ಜ್ಞಾನವನ್ನು ಮೂಡಿಸುವವನೇ ಗುರು. ಪರಮ ನಿರಂಜನನ ಕುರುಹು ಇಷ್ಟಲಿಂಗವೆಂಬುದನ್ನು ಗುರು ನಿರೂಪಿಸುತ್ತಾನೆ. ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯನ್ನೂ, ಜ್ಞಾನದ ಬೆಳಗನ್ನೂ ತೋರಿಸುತ್ತಾನೆ. ಆ ಬೆಳಗಿನಲ್ಲಿ ಶಿವ-ಜೀವರ ಐಕ್ಯವನ್ನೂ ಸಾಧಿಸುವ ರಹಸ್ಯವನ್ನು ಅರುಹುತ್ತಾನೆ. ಯೋಗ್ಯ ಗುರುವಿನಿಂದ ಯೋಗ್ಯ ಶಿಷ್ಯನಿಗೆ ಲಭಿಸಿದ ದೀಕ್ಷೆ ಸಾರ್ಥಕವಾಗುತ್ತದೆ. ಅದಿಲ್ಲದೆ
 “ಉಪಚಾರದ ಗುರುವಿಂಗೆ ಉಪಾಚಾರದ ಶಿಷ್ಯನು, ಉಪಚಾರದ ಲಿಂಗವು, ಉಪಚಾರದ ಜಂಗಮವು, ಉಪಚಾರದ ಪ್ರಸಾದವು ; ಇಂತಹ ಗುರುವಿಂಗೆ ಭಾವದ ಲೆಂಕನಾಗಿ ಅಂಧಕನ ಕೈಯ ಅಂಧಕ ಹಿಡಿದಂತೆ ಇವರೆಲ್ಲರೂ ಹೊಲಬುಗೆಟ್ಟರು ಎನ್ನುತ್ತಾರೆ ಅಲ್ಲಮಪ್ರಭುಗಳು. 

"ಶಿಲಾಲಿಖಿತವ ಕಳೆದು, ಕಳಾಭೇದವನರಿದು ಕಳೆಯ ತುಂಬಿ ಕೊಡಬಲ್ಲರೆ ಗುರುವೆಂಬೆ, ಕೊಂಬಾತ ಶಿಷ್ಯನೆಂಬೆನಯ್ಯ” 
ಎನ್ನುತ್ತಾರೆ ತೋಂಟದ ಸಿದ್ಧಲಿಂಗಯತಿಗಳು. ಕಲ್ಲಿನ ಕಲ್ಲುತನವನ್ನು ಕಳೆದು ಅದರಲ್ಲಿ ಶಿಷ್ಯನ ಜೀವಕಳೆ ತುಂಬಬೇಕು ದೀಕ್ಷಾಗುರು.

ಸಾದಕ ಶಿಷ್ಯನಿಗೆ ಗುರುವಿನ ಮಾರ್ಗದರ್ಶನ ಯಾಕೆ ಬೇಕು ಎಂದು ಗುರು ಬಸವಣ್ಣನವರು 
ಹೀಗೆ ತಿಳಿಸಿದ್ದಾರೆ.

#ಅರಿದಿಹೆನೆಂದರೆ ಅರಿವಿಂಗಸಾಧ್ಯ, ನೆನೆದಿಹೆನೆಂದರೆ ನೆನಹಿಂಗಸಾಧ್ಯ
ಭಾವಿಸಿಹೆನೆಂದರೆ ಭಾವಕ್ಕಸಾಧ್ಯ, ವಾಙ್ಮನನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ ಗುರು ತೋರದನ್ನಕ್ಕರ ?
ಗುರುಶಿಷ್ಯರ ಮಥನದಲ್ಲಿ ಸ್ವಯಂಜ್ಯೋತಿರ್ಲಿಂಗವು
ಉದಯವಪ್ಪುದು ಎಂಬ ಶ್ರುತಿ ಹುಸಿಯೇ? ಕೂಡಲಸಂಗಮದೇವಾ,

ಅಂತರಂಗದಲ್ಲಿ ಆಗುವ ಅರಿವು ಅದು  ಕೊಂಡುಕೊಳ್ಳುವ ವಸ್ತುವಲ್ಲ. ಅದು ಅರಿವಿಗೆ, ನೆನಹಿಗೆ, ಭಾವಕ್ಕೆ ಸಿಗದ ಅಗೋಚರವಾದ ತನ್ನಷ್ಟಕ್ಕೆ ತಾನೇ ಆಗುವ ಸ್ಫುರಣ.  ಅದಕ್ಕಾಗಿ ಸಾಧನೆ ಬೇಕು, ಆ ಸಾಧನೆಗಾಗಿ ಮಾರ್ಗತೋರುವ ಗುರು ಬೇಕು.  ಕಲಿವ ಹಂಬಲ, ಸಾಧಿಸುವ ಅದಮ್ಯ ಬಯಕೆ, ಶ್ರದ್ಧೆ, ಮಾರ್ಗತೋರುವ ಗುರು ಈ ನಾಲ್ಕು ಇದ್ದರೆ ಅರಿವಿನ ಹಾದಿ ಗೋಚರಿಸುವುದು.
ಶರಣ ಅಂಬಿಗರ ಚೌಡಯ್ಯ ಗುರು ಹೇಗಿರಬೇಕು ಎಂದು ತಿಳಿಸಿದ್ದಾರೆ.
.#ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೋ.
ಅಂಧಕನ ಕೈಯನಂಧಕ ಹಿಡಿದಡೆ
ಮುಂದನಾರು ಕಾಬರು ಹೇಳೆಲೆ ಮರುಳೇ?
ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ/6/39
ಅಜ್ಞಾನಿಗುರು ಅಜ್ಞಾನಿ ಶಿಷ್ಯನಿಗೆ ಗುರುವಾಗಿ ಅನುಗ್ರಹಮಾಡಿದರೆ, ಶಿಷ್ಯನಲ್ಲಿ ಎನು ಬದಲಾವಣೆಯಾದೀತು?
 ಗುರುವೇ  ಕತ್ತಲೆಯಲ್ಲಿದ್ದರೆ ಆತ ತನ್ನನ್ನೇ ನಂಬಿಕೊಂಡಿರುವ ಕುರುಡ ಶಿಷ್ಯರಿಗೆ ಅದು ಹೇಗೆ ಬೆಳಕನ್ನು ತೋರಿಸಬಲ್ಲ'? ಈಜು ಬಾರದವನು ಪ್ರವಾಹದಲ್ಲಿ ಸಿಲುಕಿದವನನ್ನು ಅದು ಹೇಗೆ ಕಾಪಾಡುತ್ತಾನೆ? ಎನ್ನುತ್ತಾರೆ
ಶರಣ ಅಂಬಿಗರ ಚೌಡಯ್ಯ.

ಗುರುಗಳೇ ಶಿಷ್ಯರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
 #ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ ಅವಜಾತಿಯಲ್ಲಿ ಹುಟ್ಟಿದಾತನಾದರೂ ಆಗಲಿ,
ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗ ಧರಿಸಿದವನು,
ಅಚಾರ ಸಂಪನ್ನ ಸತ್ಯನಾದ ಮಹಾತ್ಮನೇ ಮೂರು ಲೋಕಕ್ಕೆ ಅಧಿಕಾರಿಯು ನೋಡಾ ಅಖಂಡೇಶ್ವರಾ.ಅನ್ನುತ್ತಾರೆ ಶರಣಗುರು
ನಿರಾವಾಲಂಬ ಶಿವಯೋಗಿಗಳು.

ಹೀಗೆ ಆಚಾರ ಸಂಪನ್ನ ಮತ್ತು ಸತ್ಕ್ರಿಯಾನಿರತನಾದವನು ಅಂಗದ ಮೇಲೆ ಲಿಂಗವನ್ನು ಧರಿಸಿ ತಾರತಮ್ಯ ಭಾವನೆಗಳನ್ನೆಲ್ಲಾ ಸುಟ್ಟು ಹಾಕಿ, ಸಾಧನೆಯಲ್ಲಿ ನಿರತನಾಗಲು ಗುರೂಪದೇಶ ಕಾರಣವಾಗುವಂತಾಗಬೇಕು. ಹೀಗಲ್ಲದೆ ಉಪಾಧಿವಿಡಿದು ಉಪದೇಶ ಮಾಡುವವನು ಗುರುವಲ್ಲ; ಉಪಾಧಿಯಲ್ಲಿ ದೀಕ್ಷೆ ಕೊಂಬಾತ ಶಿಷ್ಯನಲ್ಲ, ಇದು ಠಕ್ಕನ ಮನೆಗೆ ಠಕ್ಕ ಬಂದಂತೆ' ಎನ್ನುತ್ತಾರೆ ಚನ್ನಬಸವಣ್ಣನವರು.

ಲಿಂಗದೀಕ್ಷೆಯನ್ನಿತ್ತು ಸಾಧನೆಯಲ್ಲಿ ತೊಡಗಿಸುವವನು ಗುರು, ಗುರುವಿಲ್ಲದೆ ಲಿಂಗವಿಲ್ಲ. 
#“ಗುರುವಿಡಿದು ಕುರುಹ ಕಾಣಬೇಕು. ಗುರುವಿಡಿದು ಅರುಹ ಕಾಣಬೇಕು, ಗುರುವಿಡಿದು ಆಚಾರವ ಕಾಣಬೇಕು”, ಗುರುಕರುಣೆಯೇ ಸದಾಚಾರ, ಗುರು ಕರುಣೆಯೇ ಶಿವಾಚಾರ; ಮುಂದೆ ಗುರು, ಹಿಂದೆ ಲಿಂಗ, ಅಂಗದಲ್ಲಿ ಆಚಾರವನ್ನು ತೋರುವವನ್ನು ಗುರು; ಅಚಾರವೇ ಲಿಂಗ ಎಂದರುಹುವವನು ಗುರು ; ಪ್ರಾಣದಲ್ಲಿ ಆ ಆರಿವನ್ನು ನೆಲೆಗೊಳಿಸುವವನು ಗುರು, ಮಾಂಸಪಿಂಡವನ್ನು ಗುರು, ಮಂತ್ರ ಪಿಂಡವನ್ನಾಗಿಸುತ್ತಾನೆ ಗುರು. ದೀಕ್ಷೆಯಿಂದ. ಶಿವಪಥವಿದೆಂದು ತೋರಿದ ಸದ್ಗುರು ದೇವಂಗೆ ನಮೋನಮೋ ಎಂಬೆನಯ್ಯ ಮಹಾಲಿಂಗ ಗುರುಶಿವ ಸಿದ್ದೇಶ್ವರ ಪ್ರಭುವೇ,
ಎಂಬ ತೋಂಟದ ಸಿದ್ಧಲಿಂಗನ ವಚನವೂ ಬೆಳಕನ್ನು ಕೊಡುವ ಗುರುವಿನ ಸ್ವರೂಪವನ್ನು ಸೂಚಿಸುತ್ತದೆ. 
-✍️ Dr Prema Pangi
#ಪ್ರೇಮಾ_ಪಾಂಗಿ,#ಗುರು_ಬಸವಣ್ಣನವರು
#ಮಡಿಕೆಯ_ಮಾಡುವರೆ_ಮಣ್ಣೇ_ಮೊದಲು,
#ಅರಿದಿಹೆನೆಂದರೆ_ಅರಿವಿಂಗಸಾಧ್ಯ,
Picture post designed and created by me.Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma