ವಚನ ದಾಸೋಹ
#ವಚನ :
#ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,
ನಿಮ್ಮ ನಿಜವನಾರಯ್ಯಾ ಬಲ್ಲವರು
ವೇದಂಗಳಿಗಭೇದ್ಯನು ಶಾಸ್ತ್ರಂಗಳಿಗಸಾಧ್ಯನು
ಪುರಾಣಕ್ಕೆ ಆಗಮ್ಯನು ಆಗಮಕ್ಕೆ ಅಗೋಚರನು ;
ತರ್ಕಕ್ಕೆ ಅತರ್ಕ್ಯನು
ವಾಙ್ಮನಾತೀತವಾಗಿಪ್ಪ ಪರಶಿವಲಿಂಗವನು
ಕೆಲಂಬರು ಸಕಲನೆಂಬರು ; ಕೆಲಂಬರು ನಿಃಕಲನೆಂಬರು
ಕೆಲಂಬರು ಸೂಕ್ಷ್ಮನೆಂಬರು ; ಕೆಲಂಬರು ಸ್ಥೂಲನೆಂಬರು
ಈ ಬಗೆಯ ಭಾವದಿಂದ, ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ,
ಕಾಲ, ಕಾಮ, ದಕ್ಷ, ದೇವ, ದಾನವ, ಮಾನವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು.
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು
ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ
ವೀರಶೈವ ಮಾರ್ಗವನರುಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿ ರುದ್ರಾಕ್ಷಿಧಾರಕನು,
ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗ ಸಂಬಂಧಿ,
ನಿತ್ಯ ಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣಸಂಗಮೈಶ್ವರ್ಯನು, ತ್ರಿವಿಧಕ್ಕಾಯತನು,
ತ್ರಿಕರಣ ಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವ ಸ್ಮರಣೆಯ ಹೊದ್ದ, ಭವಿಸಂಗವ ಮಾಡ,
ಭವಿಪಾಕವ ಕೊಳ್ಳ, ಪರಸತಿಯ ಬೆರಸ,
ಪರಧನವನೊಲ್ಲ, ಪರನಿಂದೆಯನಾಡ, ಅನೃತವ ನುಡಿಯ,
ಹಿಂಸೆಯ ಮಾಡ, ತಾಮಸಭಕ್ತಸಂಗವ ಮಾಡ,
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ
ಮುಂತಾದವೆಲ್ಲವ ಸಮರ್ಪಿಸಿ,
ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದೆಯ ಸೈರಿಸ,
ಪ್ರಸಾದನಿಂದೆಯ ಕೇಳ, ಅನ್ಯರನಾಸೆಗೆಯ್ಯ,
ಪಾತ್ರಪಾತ್ರವನರಿದೀವ, ಚತುರ್ವಿಧಪದವಿಯ ಹಾರ,
ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ,
ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪವಿಕಲ್ಪವ ಮಾಡುವನಲ್ಲ,
ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್ಸ್ಥಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ.
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ
ಮೆರೆದ ನಮ್ಮ ಬಸವಣ್ಣನು.
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ ನಮೋ ನಮೋ
ಎಂದು ಬದುಕಿದೆನು ಕಾಣಾ, ಚೆನ್ನಮಲ್ಲಿಕಾರ್ಜುನಾ / 374
ಅರ್ಥ:
ಈ ವಚನವು ಶರಣರು ಅರಿತು ಅನುಭಾವಿಸಿದ ಶಿವನನ್ನು ಮತ್ತು
ಧರ್ಮಗುರು ಬಸವಣ್ಣನವರನ್ನು ಅರಿಯಲು ಬಹಳ ಮಹತ್ವದ್ದಾಗಿದೆ. ವೀರ ವಿರಾಗಿಣಿ ಅಕ್ಕ ಮಹಾದೇವಿ ಶರಣಮಾರ್ಗದಲ್ಲಿಯ ಎರಡೂ ಅತ್ಯಂತ ಪ್ರಮುಖ ವಿಷಯಗಳಾದ ಧರ್ಮಗುರು ಮತ್ತು ನಿಷ್ಟೆಯಿಂದ ಏಕದೇವೋಪಾಸನೆಯ ಮಾಡುವ ಶರಣಧರ್ಮದ ದೇವರು ಶಿವನ ಸ್ವರೂಪ ವಿವೇಚಿಸಿದ್ದಾರೆ. ಧರ್ಮಗುರು ಬಸವಣ್ಣನವರ 52 ಶ್ರೇಷ್ಟ ಗುಣಗಳನ್ನು ಸುಧೀರ್ಘವಾಗಿ ವಿವರಿಸಿದ್ದಾರೆ. ಅವರು ಭೂಲೋಕಕ್ಕೆ ಬಂದ ಕಾರಣವನ್ನು, ಶರಣರು ಕಂಡ ಶಿವನ ಸ್ವರೂಪವನ್ನು ವಿವರಿಸಿದ್ದಾರೆ..
ಶಿವ ಶಿವಾ, ಆದಿ ಮತ್ತು ಅನಾದಿಗಳೆರಡೂ ಇಲ್ಲದ ನಿರವಯ ಶಿವ. ನಿಮ್ಮ ನಿಜ ಸ್ವರೂಪ ವನ್ನು ಯಾರು ಬಲ್ಲವರು?
*ಶರಣರು ಕಂಡ ಶಿವ*:
ಶರಣರು ದೈವತ್ವದ ತಮ್ಮ ಅತ್ಯುನ್ನತ ಕಲ್ಪನೆಯನ್ನು ಶಿವ, ಪರಶಿವ, ಶೂನ್ಯಲಿಂಗ
ಮೊದಲಾದ ಹೆಸರುಗಳಿಂದ ನಿರ್ದೇಶಿಸಿದರು. ಆದಿ ಮತ್ತು ಅನಾದಿ ಹುಟ್ಟು ಸಾವುಗಳೆರಡೂ ಇಲ್ಲದ ನಿರವಯ (ಅವಯವಗಳಿಲ್ಲದ) ನಿರಾಕಾರ ನಿರ್ಗುಣ ಅಗಮ್ಯ ಶಿವ. ಶಿವನ ಆ ನಿಲವನ್ನು ಬೌದ್ಧಿಕವಾಗಿ ಅರಿಯಲು ಬಾರದು. ಇದ್ದೂ ಇಲ್ಲದಂತಿರುವ ಆ ನಿರಂಜನ ತತ್ವವು ಧ್ಯಾನಗೋಚರ ಅನುಭಾವಗೋಚರ ಮಾತ್ರವಾದದ್ದು.
ಶಿವನು ವೇದಗಳಿಗೆ ಅಭೇದ್ಯನು. ಶಾಸ್ತ್ರಗಳಿಗೆ ಅಸಾಧ್ಯನು. ಪುರಾಣಕ್ಕೆ ಆಗಮ್ಯನು. ಆಗಮಕ್ಕೆ ಅಗೋಚರನು. ತರ್ಕಕ್ಕೆ ಅತರ್ಕ್ಯನು. ವಾಙ್ಮನಾತೀತನು. ಅದಕ್ಕೇ
ಶಿವನು ವೇದ, ಶಾಸ್ತ್ರ ಪುರಾಣ, ಆಗಮ, ತರ್ಕಗಳಿಗೆ ಎಟುಕದ ಪರವಸ್ತು.
ಅವನು ಸಾಕಾರನೂ ಹೌದು, ನಿರಾಕಾರನೂ ಹೌದು; ಸಾಕಾರ ನಿರಾಕಾರಗಳಿಗೆ ಮೀರಿದ ನಿರಂಜನನೂ ಹೌದು. ಪರಶಿವಲಿಂಗವನ್ನು ಕೆಲವರು ಸಕಲನು ಇನ್ನೂ ಕೆಲವರು ನಿಃಕಲನು ಎನ್ನುತ್ತಾರೆ.
"ಗುಹೇಶ್ವರಲಿಂಗವು ಶಕ್ತಿಗೊಳಗಾಯಿತ್ತಾಗಿ ಬಚ್ಚಬರಿಯ ಬಯಲೆಂಬುದಕ್ಕೆ ಉಪಾಯವಿಲ್ಲ” ಎಂಬ ಅಲ್ಲಮ ಪ್ರಭುವಿನ ಮಾತನ್ನು ಇಲ್ಲಿ ಗಮನಿಸಬೇಕು. ಬಚ್ಚಬರಿಯ ಬಯಲಾಗಿದ್ದ ನಿರಾಕಾರ ನಿಃಕಲ ಶಿವನು, ಲೀಲೆಯನ್ನು ಕೈಕೊಂಡು ಸೃಷ್ಟಿಮುಖನಾಗಿ ಸಾಕಾರವಾಗಿ ಸಕಲವಾಗಿ ಪರಿಣಮಿಸಿದ್ದಾನೆ. ಇಲ್ಲಿ ಪರಿಣಮಿಸಿದ್ದಾನೆ ಎನ್ನುವ ಪದ ಬಹಳ ಮುಖ್ಯ. ಶಿವನು ಸೃಷ್ಟಿಯನ್ನು ರಚಿಸಲಿಲ್ಲ. ತನ್ನದೇ ಚಿದ್ ಶಕ್ತಿಯಿಂದ ತಾನೇ ಸೃಷ್ಟಿಯಾಗಿ ಪರಿಣಮಿಸುತ್ತಾನೆ. ಅದಕ್ಕೇ ಪ್ರತಿ ಅಣು ರೇಣುವಿನಲ್ಲಿಯೂ, ವಿಶ್ವವಾಗಿಯೂ ವ್ಯಾಪಿಸಿದ್ದಾನೆ. ಅದಕ್ಕೆ ಸಕಲನು ಹೌದು, ನಿಃಕಲನೂ ಹೌದು. ಸಕಲ ನಿಃಕಲ ಮೀರಿದ ನಿರಂಜನನೂ ಹೌದು.
ಕೆಲವರು ಸೂಕ್ಷ್ಮನು ಇನ್ನೂ ಕೆಲವರು ಸ್ಥೂಲನು ಎನ್ನುತ್ತಾರೆ. ಸೂಕ್ಷ್ಮ, ಸ್ಥೂಲ ಎರಡೂ ಜಗತ್ತುಗಳಿಗೆ ಕಾರಣಿಭೂತನಾಗಿದ್ದಾನೆ.
ಈ ಬಗೆಯ ಭಿನ್ನ ತಿಳಿಯದರಿಂದ, ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ, ಕಾಲ, ಕಾಮ, ದಕ್ಷ, ದೇವ, ದಾನವ, ಮಾನವ ಇವರೆಲ್ಲರಿಗೂ ಶಿವನನ್ನು ಅರಿಯಲಾರದೆ ಅಜ್ಞಾನದಿಂದ ಭವಭಾರಿಗಳಾದರು.
ಹೀಗೆ ಈ ದಿವ್ಯಜ್ಞಾನ ಅಜ್ಞಾನದಿಂದ ಯಾರಿಗೂ ತಿಳಿಯದೇ ಹೋಗಬಾರದೆಂದು ಈ ನಮ್ಮ ಬಸವಣ್ಣನು
ಜಗತ್ತಿನ ಉದ್ಧಾರಕ್ಕೆ ಜಗದ್ಧಿತಾರ್ಥವಾಗಿ ಭೂಲೋಕ ಎಂಬ ಮರ್ತ್ಯಕ್ಕೆ ವೀರಶೈವ ಮಾರ್ಗವನ್ನು ತಿಳಿಸುವುದಕ್ಕೆ ಅವತರಿಸಿದರು ಎನ್ನುತ್ತಾರೆ ಪರಮ ಶರಣೆ ಅಕ್ಕಮಹಾದೇವಿ.
ಗುರು ಬಸವಣ್ಣನವರು ಜ್ಞಾನ ಭಕ್ತಿ ಭಾವದಿಂದ ವಿವರವನ್ನು ಒಳಗೊಂಡು ಅರಿತುಕೊಂಡು ಎಲ್ಲರಿಗೂ ತಿಳಿಸಿ ಆಚರಿಸಿದರು. ಕಾರಣ ಅವರು 52 ವಿಧದಲ್ಲಿ ತಮ್ಮ ನಿಪುಣತೆಯನ್ನು ಮೆರೆದರು. ಅಕ್ಕ ಮಹಾದೇವಿ ಕಂಡ, ನೆನೆದ ಬಸವಣ್ಣನವರ ಗುಣಗಳು ಇಂತಿವೆ. ಒಂದೊಂದು ಗುಣಗಳ ಮೇಲೆ ಒಂದೊಂದು ಪ್ರಭಂಧವೇ ಬರೆಯಬಹುದಷ್ಟು ಪದಗಳು ವ್ಯಾಪಕ ಅರ್ಥ ಒಳಗೊಂಡಿವೆ. ಸಂಕ್ಷಿಪ್ತ ಅರ್ಥ ನೀಡಲಾಗಿದೆ.
1.ಗುರುಕಾರುಣ್ಯವೇದ್ಯನು,
2.ವಿಭೂತಿ ರುದ್ರಾಕ್ಷಿಧಾರಕನು,
3.ಪಂಚಾಕ್ಷರೀ(ನಮಃಶಿವಾಯ) ಭಾಷಾಸಮೇತನು,
4.ಲಿಂಗಾಂಗ ಸಂಬಂಧಿ (ಶಿವಯೋಗದ ಲಿಂಗಾಂಗಯೋಗ ಸಂಪನ್ನ)
5.ನಿತ್ಯ ಲಿಂಗಾರ್ಚಕನು,
6.ಅರ್ಪಿತದಲ್ಲಿ ಅವಧಾನಿ,
7.ಪಾದೋದಕ ಪ್ರಸಾದ ಗ್ರಾಹಕನು,
8.ಗುರುಭಕ್ತಿ ಸಂಪನ್ನನು,
9.ಏಕಲಿಂಗ ನಿಷ್ಠಾಪರನು,
10.ಚರಲಿಂಗ ಲೋಲುಪ್ತನು,
11.ಶರಣಸಂಗವೇ ಐಶ್ವರ್ಯ ಎಂದು ತಿಳಿದವನು,
12.ತ್ರಿವಿಧಕ್ಕಾಯತನು,
13.ತ್ರಿಕರಣ ಶುದ್ಧನು(ದೇಹ, ಮನ, ನುಡಿ ಶುದ್ಧ)
14.ತ್ರಿವಿಧ ಲಿಂಗಾಂಗಸಂಬಂಧಿ(ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಸಂಬಂಧಿ),
15.ಅನ್ಯದೈವ ಸ್ಮರಣೆಯ ಮಾಡದವ,
16.ಭಕ್ತಿ ಇಲ್ಲದವರ(ಭವಿ) ಸಂಗವ ಮಾಡ,
17.ಭಕ್ತಿ ಇಲ್ಲದವರ ಸಂಗ ಪಾಕವ ಮಾಡ,
18.ಪರಸತಿಯ ಬೆರಸನು,
19.ಪರಧನವ ನೊಲ್ಲನು,
20.ಪರನಿಂದೆಯ ನಾಡನು,
21. ಅನೃತವ (ಹುಸಿಯ)ನುಡಿಯನು,
22.ಹಿಂಸೆಯ ಮಾಡನು,
23.ತಾಮಸಭಕ್ತ (ಉಗ್ರಭಕ್ತ ವಾಮಮಾರ್ಗಿ)ಸಂಗವ ಮಾಡನು,
24.ಗುರು ಲಿಂಗ ಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನ ಅಹಂ ಸಮರ್ಪಿಸಿ,
ಪ್ರಸಾದ ಭೋಗಿಸುವನು,
25.ಜಂಗಮ ನಿಂದೆಯ ಸೈರಿಸನು,
26.ಪ್ರಸಾದ ನಿಂದೆಯ ಕೇಳನು,
27.ಅನ್ಯರನಾಸೆಗೆಯ್ಯ,
28.ಪಾತ್ರಪಾತ್ರವನರಿದೀವ,
29.ಚತುರ್ವಿಧಪದವಿಯ ಹಾರ,
30.ಅರಿಷಡ್ವರ್ಗ (ಕಾಮ ಕ್ರೋಧ ಮದ ಮತ್ಸರ ಮೋಹ ಲೋಭ)ಗಳಿಗೆ ಅಂಜದವನು.
31.ಕುಲಾದಿಮದಂಗಳ(ಅಷ್ಟ ಮದಗಳು) ಬಗೆಗೊಳ್ಳ,
32.ದ್ವೈತ ಅದ್ವೈತವ ನುಡಿವವನಲ್ಲ, (ಶರಣಸಿದ್ಧಾಂತ ದ್ವೈತವೂ ಅಲ್ಲ, ಅದ್ವೈತವೂ ಅಲ್ಲ)
33.ಸಂಕಲ್ಪ ವಿಕಲ್ಪವ ಮಾಡುವನಲ್ಲ,
34.ಕಾಲೋಚಿತವ ಬಲ್ಲ,
35.ಕ್ರಮಯುಕ್ತನಾಗಿ ಷಟ್ಸ್ಥಲ ಭರಿತ ಸಾಧನೆ ಮಾಡುವವ,
39.ಸರ್ವಾಂಗಲಿಂಗಿ(ಶಿವಯೋಗದಲ್ಲಿ ಉಚ್ಛ ಸ್ಥಲ)
40.ದಾಸೋಹಸಂಪನ್ನ............
ಹೀಗೆ ಐವತ್ತೆರಡು ವಿಧದಲ್ಲಿ ನಿಪುಣನಾಗಿ
ಮೆರೆದ ನಮ್ಮ ಬಸವಣ್ಣನು.
ಆ ಬಸವಣ್ಣನ ಶ್ರೀಪಾದಕ್ಕೆ ನಾನು
ಹಗಲು ರಾತ್ರಿಯಲ್ಲಿ ನಮೋ ನಮೋ
ಎಂದು ಬದುಕಿದೆನು ಕಾಣಾ, ಎಂದು ತಮ್ಮ ಇಷ್ಟದೇವರಾದ ಚೆನ್ನಮಲ್ಲಿಕಾರ್ಜುನನನ್ನು ನೆನೆಯುತ್ತಾರೆ.
ಇದೇ ತರಹದ ವಚನವನ್ನು ಗುರುಸಿದ್ಧ ಶಿವಯೋಗಿಗಳು "ಸಂಗನ ಬಸವೇಶ್ವರ" ವಚನಾಂಕಿತದೊಡನೆ ಇನ್ನೂ ವಿಸ್ತಾರವಾಗಿ ನಿರೂಪಿಸಿದ್ದಾರೆ. ಧೀರ್ಘ ಇರುವದರಿಂದ ಇಲ್ಲಿ ಹಾಕಿಲ್ಲ.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಕ್ಕ_ಮಹಾದೇವಿ
Comments
Post a Comment