ವಚನ ದಾಸೋಹ

#ವಚನ:
#ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ ನೆರೆ ಮೂರುಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ.
- ಅಲ್ಲಮ ಪ್ರಭುಗಳು
*ಅರ್ಥ*:
ತಾವು ಮಾಡಬೇಕಾದ ಸಾಧನೆಯಲ್ಲಿ ಅಚಲ ನಿಷ್ಟೆ, ಆಸಕ್ತಿ ಇಲ್ಲದೇ ಸಾಧನೆಯನ್ನು ಪೂರ್ಣವಾಗಿ ಅರಿಯದೇ, ಹಲವು ಬಗೆಯ ನೆಪಗಳನ್ನೊಡ್ಡಿ, ಕಾಲ ಕಳೆದರೆ ಅವರು ವೀರರೂ ಧೀರರೂ ಅಲ್ಲ. ಅಂತಹ ಸಾಧಕರು  ಲಿಂಗದೇವ(ಗುಹೇಶ್ವರ)ನನ್ನು ಅರಿಯಲು ಸಾಧ್ಯವಿಲ್ಲ ಎಂದು  ಅಲ್ಲಮಪ್ರಭುಗಳು ಟೀಕಿಸಿದ್ದಾರೆ.

 *ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ಧೀರರೂ ಅಲ್ಲ*

ತಮಗೆ ನೀಡಿದ  ಕುದುರೆಯನ್ನೇರಬೇಕು. ನಿಯಂತ್ರಿಸಬೇಕು. ಅದು ವೀರತನ, ಅದು ಧೀರತನ. ದೂರದ ಪಯಣಕ್ಕಾಗಿ ಇಲ್ಲವೇ ಕಾಳಗದ ಕಣಕ್ಕೆ ತೆರಳುವುದಕ್ಕಾಗಿ ಕೊಟ್ಟಿರುವ ಕುದುರೆಯನ್ನು ಹತ್ತಿ, ಅದನ್ನು ಹತೋಟಿಯಲ್ಲಿಟ್ಟುಕೊಂಡು ಸವಾರಿ ಮಾಡುತ್ತ ಮುನ್ನಡೆಸುವ ಕುಶಲತೆ, ಜಾಣ್ಮತೆ ಬೇಕು. ತನ್ನ ಗುರಿಯ ಸಾಧಿಸಬೇಕು. ತಲುಪಬೇಕಾದ ಎಡೆಯತ್ತ ಹೋಗಬೇಕು. ತಮಗೆ ಕೊಟ್ಟ ಕುದುರೆಯನ್ನು ಏರಲು ಅರಿಯದೆ  ಕುದುರೆಯಲ್ಲಿ ದೋಷಗಳನೆಣಿಸಿ ಬೇರೆ ಕುದುರೆಗಳನ್ನು ಬಯಸುವವರು ವೀರರಲ್ಲ, ಧೀರರಲ್ಲ.  

*ಇದು ಕಾರಣ ನೆರೆ ಮೂರುಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ*

ಕೊಟ್ಟ ಕುದುರೆಯ ದೋಷವನ್ನರಸುತ್ತ ಹೋಗುವ ಜನ ಆ ಹಲ್ಲಣವನ್ನು (ಕುದುರೆಯ ಮೇಲೆ ಹಾಕುವ ಜೀನು) ಯಾವ ಕುದುರೆಯ ಮೇಲೂ ಹಾಕದೆ  ತಾವೇ ಹೊತ್ತುಕೊಂಡು ಬಳಲುತ್ತಾರೆ. ದೇವಲೋಕ, ಭೂಲೋಕ, ಪಾತಾಳಲೋಕ ವೆಂಬ ಸಂಪೂರ್ಣ ಮೂರುಲೋಕವೆಲ್ಲದರಲ್ಲಿ ಹೀಗೆಯೇ ಬಳಲುತ್ತಿದ್ದಾರೆ.

ನಿಷ್ಟೆ ಇಲ್ಲದ ವ್ಯಕ್ತಿಗಳು, ತಮ್ಮ ಕಣ್ಣಮುಂದಿರುವ ಕುದುರೆಯನ್ನು “ಸವಾರಿಗೆ ಲಾಯಕ್ಕಾಗಿಲ್ಲ” ಎಂದು ಆರೋಪಿಸಿ, ಕುದುರೆಯ ಮೊಗಕ್ಕೆ ಹಾಕುವ ಕಡಿವಾಣ ಮತ್ತು ಅದರ ಬೆನ್ನಿನ ಮೇಲೆ ಹಾಕಬೇಕಾದ ಜೀನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮತ್ತೊಂದು ಕುದುರೆಗಾಗಿ ಹುಡುಕಾಡುತ್ತ ಅಲೆಯುತ್ತಿರುವ ಸಂಗತಿಯೊಂದನ್ನು ಒಂದು ರೂಪಕವನ್ನಾಗಿ, ಲೌಕಿಕ ಅನುಭವವಾಗಿ ಅಲ್ಲಮಪ್ರಭುಗಳು  ಚಿತ್ರಿಸಿದ್ದಾರೆ. 

*ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ*

ಅಲ್ಲಮಪ್ರಭುಗಳು  ಜನರು ತಮ್ಮ ಪಾಲಿನ ಕಾಯಕವನ್ನು, ಸಾಧಕರು ಸಾಧನೆಯನ್ನು  ಕಡೆಗಣಿಸುವದನ್ನು ಕುರಿತು “ಗುಹೇಶ್ವರನೆಂಬ ಲಿಂಗವನು ಅವರೆತ್ತ ಬಲ್ಲರೋ” ಎಂದು  ಟೀಕಿಸಿದ್ದಾರೆ. ಇಂಥವರು ನಿಷ್ಟೆಯಿಂದ ಕಾಯಕ ಮಾಡದೇ, ಸಾಧನೆ ಮಾಡದೇ ದೇವರನ್ನ ಅರಿಯುವದಿಲ್ಲ. ಇವರಿಗೆ ಅನುಭಾವ ಅಸಾಧ್ಯ.
*ಭಾವ* : 
ಇದು ಮಾಹೇಶ್ವರ ಸ್ಥಲದ ವಚನ.
 ದೇವನಿತ್ತ ಬದುಕನ್ನು ಪರಮಸಿದ್ಧಿಯ ಸಾಧನೆಗಾಗಿ ಬಳಸಲು ಅಸಮರ್ಥರಾದ ಸಾಧಕರು ಬರಿ ಆ ಸಿದ್ಧಿಯ ಬಯಕೆಯನ್ನು ಹೊತ್ತು ಏನನ್ನೂ ಸಾಧಿಸಲಾರದೆ ಬಳಲುತ್ತಾರೆ. ಸಾಧನೆಯಲ್ಲಿ ನಿಷ್ಠೆಗೆ ಪ್ರಥಮಸ್ಥಾನ. ಸಾಧಕನಲ್ಲಿ  ನಿಷ್ಠೆ ಇಲ್ಲವಾದರೆ ಲಿಂಗಾನುಭವ ಅಸಾಧ್ಯ. ಈ ಲಿಂಗಾನುಭೂತಿಯ ಪರಮಸಿದ್ಧಿಯನ್ನು ಹೊಂದುವದು ಒಂದು ಸಾಧನೆ, ಅದು ವೀರನಿಷ್ಠೆ. ಅದನ್ನು ಅರಿಯದೆ ಜನರು ಬರಿ ದೋಷಗಳನೆಣಿಸಿ ಸಾಧನೆಯಿಂದ ಹಿಮ್ಮುಖರಾಗುತ್ತಾರೆ. ಈಶ್ವರನನ್ನು ಅರಿಯಲು ಕೂಡಲು ಬಹಳ ಪಥಗಳಿವೆ. ಯಾವುದೇ ಒಂದು ಪಥವನ್ನು ಆರಿಸಿಕೊಂಡು ಅಚಲ ನಿಷ್ಠೆಯಿಂದ ಸಾಧನೆ ಮಾಡಬೇಕಲ್ಲದೇ ಪಥದಲ್ಲಿಯೆ ತಪ್ಪು ಹುಡುಕುತ್ತ ಕಾಲ ಕಳೆದರೆ ಈಶ್ವರನನ್ನು ಅರಿಯುವುದು ಅಸಾಧ್ಯವೆನ್ನುತ್ತಾರೆ ಅಲ್ಲಮ ಪ್ರಭುಗಳು. 

ಇದೇ ಮಾತನ್ನು ಸಾಮಾಜಿಕ ವಲಯದಲ್ಲಿಯೂ ಅನ್ವಯಿಸಿ ಕೊಳ್ಳಬಹುದು. ತಾವು ಮಾಡಬೇಕಾದ ಕೆಲಸದಲ್ಲಿ ನಿಷ್ಟೆ, ಆಸಕ್ತಿ ಮತ್ತು ಕರ್ತವ್ಯಪ್ರಜ್ಞೆ ಇಲ್ಲದೇ, ಇದು ಸರಿಯಿಲ್ಲ, ಅದು ಸರಿಯಿಲ್ಲ ಎಂಬ ಹಲವು ಬಗೆಯ ನೆಪಗಳನ್ನೊಡ್ಡಿ, ಕಾಲ ಕಳೆದರೆ ಅಂಥವರು ವೀರರೂ ಧೀರರೂ ಅಲ್ಲ. ನಿಷ್ಟೆಯಿಂದ ಕಾಯಕ ಮಾಡದಿದ್ದರೆ, ಕೆಲಸದ ವಿಧಾನ ಅರಿವಾಗುವದಿಲ್ಲ. ಅಂಥವರಿಗೆ ಅನುಭವ, ಕಾರ್ಯದಲ್ಲಿ ಕುಶಲತೆ, ಕ್ಷಮತೆ  ಅಸಾಧ್ಯ. ಇದನ್ನೇ ಜಾನಪದ ಭಾಷೆಯಲ್ಲಿ ಕುಣಿಯಬಲ್ಲದವರು ನೆಲ ಡೊಂಕು ಎಂದಂತೆ ಎಂದು ಜನರು ಹಾಸ್ಯ ಮಾಡುತ್ತಾರೆ. ತಾವು ಮಾಡಬೇಕಾಗಿರುವ ಕೆಲಸದಲ್ಲಿ ಕುಂದುಕೊರತೆಗಳನ್ನು ಹುಡುಕಿ, ಹಲವು ನೆಪಮಾಡಿ ಮುಂದೊಡ್ಡುವುದರಲ್ಲಿ ಜಾಣರಾಗಿರುತ್ತಾರೆಯೇ ಹೊರತು, ತಮ್ಮ ಪಾಲಿನ ಕೆಲಸವನ್ನು ಚೆನ್ನಾಗಿ  ಮಾಡುವುದಕ್ಕಾಗಿ ಜಾಣತನ, ಕುಶಲತೆ ಒಗ್ಗೂಡಿಸಿ ದುಡಿಯಬೇಕೆಂಬ ಮನಸ್ಸನ್ನು ಹೊಂದಿರುವುದಿಲ್ಲ. ಇಂಥವರು ಸುಮ್ಮನೆ ಬಳಲುತ್ತಿದ್ದಾರೆ ಎಂದು ಎನ್ನುತ್ತಾರೆ ಅಲ್ಲಮ ಪ್ರಭುಗಳು.
-✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು #ಕೊಟ್ಟ_ಕುದುರೆಯನೇರಲರಿಯದೆ
Picture post created by me. Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma