ವಚನ ದಾಸೋಹ

#ವಚನ:
#ಒಳಗ ತೊಳೆಯಲರಿಯದೆ ಹೊರಗ ತೊಳೆದು ಕುಡಿವುತ್ತಿರ್ದರಯ್ಯಾ,
ಪಾದೋದಕ ಪ್ರಸಾದವನರಿಯದೆ.
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ. / 534
 - ವ್ಯೋಮಕಾಯ ಅಲ್ಲಮಪ್ರಭುಗಳು
*ಅರ್ಥ*:
ಹನ್ನೆರಡನೇ ಶತಮಾನದ ಶರಣ ಕ್ರಾಂತಿಗೆ ಅಧಿಕೃತ ಸ್ವರೂಪದ ಮುದ್ರೆಯನೊತ್ತಿದವರು ಅಲ್ಲಮಪ್ರಭುಗಳು. ಆ ಕ್ರಾಂತಿಯ ರೂವಾರಿ ಗುರು ಬಸವಣ್ಣನವರಾದರೆ ಅದರ ಜೀವಾಳ ಅಲ್ಲಮಪ್ರಭುಗಳು. ವಿಶ್ವದ ಬೆಳಕು ಬಸವಣ್ಣನವರಾದರೆ ವಿಶ್ವ ಕಂಡ ಬೆರಗು ಅಲ್ಲಮಪ್ರಭುಗಳು. ಜ್ಞಾನದ ಮೇರುಶಿಖರ  ಅಲ್ಲಮರು ತುಂಬ ಆಳವಾದ ಆಧ್ಯಾತ್ಮಿಕ ಸಾಧನೆ, ಅನುಭಾವ, ಅರಿವುಗಳಿಂದ, ಲೋಕದ ಜನರು  ಅರಿಯದೆ ಮಾಡುವ ಅಂಧ ಆಚರಣೆಗಳನ್ನು ಲೇವಡಿ ಮಾಡುವ ಪರಿ ಅಸಮಾನ್ಯವಾದುದು.

*ಒಳಗ ತೊಳೆಯಲರಿಯದೆ ಹೊರಗ ತೊಳೆದು ಕುಡಿವುತ್ತಿರ್ದರಯ್ಯಾ,
ಪಾದೋದಕ ಪ್ರಸಾದವನರಿಯದೆ.*

ಒಳಗ ತೊಳೆಯಲರಿಯದವರು ಅಂದರೆ ಮನದೊಳಗಿನ ಮಾಲಿನ್ಯವನ್ನು ತೊಳೆಯಲರಿಯದವರು, ಬರಿ ಹೊರಗಿನ ಗುರು, ಲಿಂಗ, ಜಂಗಮರ ಪಾದಗಳನ್ನು ತೊಳೆದು ಅದನ್ನೇ ಪಾದೋದಕವೆಂದು  ಕುಡಿಯುತ್ತಲಿದ್ದಾರೆ. ಪಾದೋದಕ ಪ್ರಸಾದಗಳ ನಿಜಸ್ವರೂಪವನ್ನು ಅರಿಯದ ಅವರು ಭವದಲ್ಲಿ ಮುಳುಗಿ ತೇಲುತ್ತಲಿದ್ದಾರೆ.

*ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ. *

ಈ ಪಾದೋದಕ ಮತ್ತು ಪ್ರಸಾದ ವಿಧಾನಗಳನ್ನು ಯಥಾವತ್ತಾಗಿ, ಭಾವಪೂರ್ಣವಾಗಿ ಭಕ್ತಿನಿರ್ಭರವಾಗಿ ಆಚರಿಸಿದರೆ 'ಬಂದ ಬಟ್ಟೆ' ಅಂದರೆ ಭವ ಹಿಂಗಿ ಹೋಗುತ್ತದೆ. ನಿರಂತರ ಹುಟ್ಟುಸಾವುಗಳಿಂದ ಮುಕ್ತನಾಗುತ್ತಾನೆ. ಭಕ್ತ ಸ್ವಾನಂದಲೋಲನಾಗುತ್ತಾನೆ. ಇದು ಪಾದೋದಕ-ಪ್ರಸಾದಗಳ ಮಹಿಮೆ, ಇದರ ಸೂಕ್ಷ್ಮ ಜ್ಞಾನವಿರದ ಬಹುಜನರು ಬರಿ ಹೊರಹೊರಗೆ ತೊಳೆದು ಸೇವಿಸುವ ಕ್ರಿಯೆಗಳನ್ನು ಆಚರಿಸಿ, ಭವದಬಟ್ಟೆಯಲ್ಲಿ ನಿರಂತರವಾಗಿ ಭ್ರಮಿಸುತ್ತಾರೆ.

*ಭಾವ*:
ಮನಸ್ಸಿನ ಮಾಲಿನ್ಯಗಳು ಮೂರು, ಅಜ್ಞಾನ, ಅಹಂಕಾರ ಮತ್ತು ಭೇದಭಾವ, ಅಮೃತತ್ತ್ವವನ್ನು ಪಡೆಯಲೆಳಸುವ ಮನುಷ್ಯ ಈ ಮೂರನ್ನು ತೊಳೆಯಬೇಕು. ಗುರುವಿನ ಕರುಣೆಯಿಂದ ಅಜ್ಞಾನವೆಂಬ ಮಾಲಿನ್ಯ ತೊಳೆದುಹೋಗುತ್ತದೆ. ಲಿಂಗದ ಅನುಸಂಧಾನದಿಂದ ಅಹಂಕಾರವೆಂಬ ಮಾಲಿನ್ಯ ನಷ್ಟವಾಗುತ್ತದೆ. ಅನುಭಾವಿಯಾದ ಜಂಗಮನ ಸಂಗದಿಂದ ಭೇದಭಾವ ವೆಂಬ ಮಾಲಿನ್ಯ ಇಲ್ಲದಾಗುತ್ತದೆ. ಈ ರೀತಿ ಗುರು ಲಿಂಗ ಜಂಗಮದ ಕರುಣೆಯಿಂದ, ಅಜ್ಞಾನ, ಅಹಂಕಾರ, ಬೇಧಭಾವ ವೆಂಬ ಒಳಗಿನ ಮಾಲಿನ್ಯಗಳನ್ನು ಕಳೆಯಲು ಅರಿಯದ ಮೂಢ ಜನ, ಗುರು, ಲಿಂಗ, ಜಂಗಮದ ಪಾದಗಳನ್ನು ತೊಳೆದು ಕುಡಿದು ಕೃತಾರ್ಥರಾದವೆಂದು ತಿಳಿದಿದ್ದಾರೆ. ಇದು ಮೂಢ ನಂಬಿಕೆ.
ಪಾದೋದಕ:
ಪಾದೋದಕವೆಂದರೆ ಪಾದಜಲ, ಇದು ಮೂರು ಪ್ರಕಾರ.
1."ಗುರುಪಾದೋದಕ ಅಂದರೆ ಕರುಣಾಜಲ". ಇದರಿಂದ ಅಜ್ಞಾನ ಎಂಬ ಮಾಲಿನ್ಯದ ನಾಶ.
2. "ಲಿಂಗಪಾದೋದಕ ಅಂದರೆ ವಿನಯಜಲ". ಇದರಿಂದ ಅಹಂಭಾವ ಎಂಬ ಮಾಲಿನ್ಯದ ನಾಶ. 
3."ಜಂಗಮಪಾದೋದಕ ಅಂದರೆ ಸಮತಾಜಲ". ಇದರಿಂದ ಭೇದಭಾವ ಎಂಬ ಮಾಲಿನ್ಯದ ನಾಶ.
ಗುರುವಿನ ಕರುಣಾಜಲ, ಲಿಂಗದ ವಿನಯಜಲ, ಜಂಗಮದ ಸಮತಾಜಲ ಇವುಗಳನ್ನು ಸೇವಿಸುವುದೇ "ತ್ರಿವಿಧಪಾದೋದಕ ಸೇವನೆ".
ಪ್ರಸಾದ:
ಪ್ರಸಾದವೆಂದರೆ ಅರ್ಪಿತ, ಅರ್ಪಿತಗೊಂಡು ಪವಿತ್ರವಾದ ಪದಾರ್ಥ. ಇದು ಮೂರು ಬಗೆ.  1.ಶುದ್ಧ ಪ್ರಸಾದ ಇಲ್ಲಿ ಅರ್ಪಿತ ಪದಾರ್ಥವು ರೂಪ. 
2.ಸಿದ್ಧಪ್ರಸಾದ, ಇಲ್ಲಿ ಅರ್ಪಿತ ಪದಾರ್ಥವು ರಸ. 
 3.ಪ್ರಸಿದ್ಧ ಪ್ರಸಾದ. ಇಲ್ಲಿ ಅರ್ಪಿತ ಪದಾರ್ಥವು ತೃಪ್ತಿ.

ಗುರು-ಲಿಂಗ-ಜಂಗಮಕ್ಕೆ ನಿರ್ಮಲಭಾವದಿಂದ ಬಾಹ್ಯದ್ರವ್ಯವನ್ನು ಅರ್ಪಿಸಬೇಕು. ಹಾಗೆ ಅರ್ಪಿತವಾದಂತಹ ಸ್ವರೂಪ  ಬಾಹ್ಯದ್ರವ್ಯವೇ ಶುದ್ಧಪ್ರಸಾದವೆನಿಸುತ್ತದೆ. ಅದನ್ನು ಆ ಭಾವದಿಂದ ಸ್ವೀಕರಿಸಿದರೆ ತನು ಪರಿಶುದ್ಧವಾಗುತ್ತದೆ. 
ಆ ಶುದ್ಧಪ್ರಸಾದವನ್ನು ಸೇವಿಸುವ ಅನುಭವವನ್ನು ಅಂದರೆ ಆ ಅರ್ಪಿತಪದಾರ್ಥಗಳ ರಸಾನುಭವವನ್ನು ಪ್ರಾಣಲಿಂಗಕ್ಕೆ ಅರ್ಪಿಸಿದರೆ ಆ ರಸವು ಸಿದ್ಧಪ್ರಸಾದವೆನಿಸುತ್ತದೆ. ಆ ಸಿದ್ಧಪ್ರಸಾದವನ್ನು ಸ್ವೀಕರಿಸಿದ ಭಕ್ತನ ಮನಸ್ಸು ಪರಿಶುದ್ಧವಾಗುತ್ತದೆ. ಆ ಸಿದ್ಧಪ್ರಸಾದವನ್ನು ಅನುಭವಿಸಿದಾಗ ಉಂಟಾಗುವುದು ತೃಪ್ತಿ. 
ಆ ತೃಪ್ತಿಯನ್ನೇ ಭಾವಲಿಂಗಕ್ಕೆ ಅರ್ಪಿಸಿದರೆ ಅದು ಪ್ರಸಿದ್ಧ ಪ್ರಸಾದ. ಆ ಪ್ರಸಿದ್ಧ ಪ್ರಸಾದವನ್ನು ಸ್ವೀಕರಿಸಿದಾಗ ಭಕ್ತನ ಭಾವವೆಲ್ಲ ಸುನಿರ್ಮಲವಾದ ಲಿಂಗನಿಲಯವಾಗುತ್ತದೆ. ಶುದ್ಧಪ್ರಸಾದದಿಂದ ತನುವಿನ ಮೋಹ, ಸಿದ್ಧಪ್ರಸಾದದಿಂದ ಮನಸ್ಸಿನ ಚಾಂಚಲ್ಯ-ಚಾಪಲ್ಯ, ಪ್ರಸಿದ್ಧ ಪ್ರಸಾದದಿಂದ ಭಾವದ ಕಾಳಿಕೆ ಅಳಿದು ಇವೆಲ್ಲ ನಿರ್ಮಲ ವಾಗುತ್ತವೆ.
-✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು.
#ಒಳಗ_ತೊಳೆಯಲರಿಯದೆ_ಹೊರಗ
Picture post created by me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma