ವಚನ ದಾಸೋಹ

#ತನು ಕರಗದವರಲ್ಲಿ
ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ
ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ
ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ
ಆರತಿಯನೊಲ್ಲೆಯಯ್ಯಾ ನೀನು.
ಭಾವಶುದ್ಭವಿಲ್ಲದವರಲ್ಲಿ
ಧೂಪವನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ
ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ
ತಾಂಬೂಲವನೊಲ್ಲೆಯಯ್ಯಾ ನೀನು.
ಹೃದಯಕಮಲ ಅರಳದವರಲ್ಲಿ
ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ? / 218
- ವೀರ ವಿರಾಗಿಣಿ ಅಕ್ಕ ಮಹಾದೇವಿ
ಅರ್ಥ:
ಇಷ್ಟಲಿಂಗ ಪೂಜೆಯಲ್ಲಿ ಮಗ್ನಳಾಗಿರುವ ಅಕ್ಕಮಹಾದೇವಿಯು ಕರಸ್ಥಳದ ಇಷ್ಟಲಿಂಗವೇ ತಾನು ಒಲಿದಿರುವ ತನ್ನ ಇಷ್ಟದೇವ ಚೆನ್ನಮಲ್ಲಿಕಾರ‍್ಜುನ ಎಂದು ಭಾವಿಸಿ ಅವನೊಡನೆ ಆತ್ಮೀಯ, ಅನನ್ಯ ಪ್ರೀತಿಯ ಸಂಭಾಷಣೆಯ ಈ ನುಡಿಗಳನ್ನಾಡುತ್ತಿದ್ದಾಳೆ.
ಅಂತರಂಗದ ಶುದ್ಧತೆ, ಸದಾಚಾರ ವಿಲ್ಲದೆ ಬರೀ ಬಹಿರಂಗದ ಆಚರಣೆ, ಪೂಜೆಗಳನ್ನು ಮಾಡಿ  ಚೆನ್ನಮಲ್ಲಿಕಾರ್ಜುನ ದೇವರನ್ನು ಓಲೈಸಲು ಸಾಧ್ಯವಿಲ್ಲ ಎಂದು ಅಕ್ಕಮಹಾದೇವಿಯು ಈ ವಚನದಲ್ಲಿ ಹೇಳಿದ್ದಾಳೆ.
ಅಕ್ಕಮಹಾದೇವಿಯು ಹಂತಹಂತವಾಗಿ ಅಷ್ಟವಿಧಾರ್ಚನೆಯ ಪೂಜೆ ವರ್ಣಿಸಿದ್ದಾಳೆ. ಅಷ್ಟವಿಧಾರ್ಚನೆ ಅಂದರೆ ಎಂಟು ಪದಾರ್ಥಗಳಿಂದ ಮಾಡುವ ಪೂಜೆ. ಅವು- ೧) ಮಜ್ಜನ, ೨) ಗಂಧ, ೩) ಅಕ್ಷತೆ, ೪) ಪುಷ್ಪ, ೫) ಧೂಪ, ೬) ದೀಪ, ೭) ನೈವೇದ್ಯ, ೮) ತಾಂಬೂಲ. ನಾವು ಮಾಡುವ ಇಂಥ ಪೂಜೆ ಪರಶಿವನಿಗೆ ಅರ್ಪಿತವಾಗಬೇಕಾದರೆ, ಅವನ ಅನುಗ್ರಹ ದೊರಕಬೇಕಾದರೆ, ನಾವು ಶರಣರ ತತ್ವಗಳನ್ನು, ಅವರು ತಿಳಿಸಿದ ಸದಾಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುತ್ತಾಳೆ  ಅಕ್ಕಮಹಾದೇವಿ. ಶರಣ ಸಂಸ್ಕೃತಿಯಲ್ಲಿ ಅಕ್ಕ, ಅನರ್ಘ್ಯವಾದ ಯೋಗಿನಿ, ಕವಿಯತ್ರಿ ಮತ್ತು ಅನುಭಾವಿ. ಅಕ್ಕನ ವಚನಗಳ ಅನುಭಾವ ತೀವ್ರತೆ ಮತ್ತು ಅನುಭವದ ಶ್ರೀಮಂತಿಕೆ ಎಷ್ಟು ಮಹತ್ವಪೂರ್ಣವೋ ಅಷ್ಟೇ ಮನೋಹರವಾದುದು ಅವುಗಳ ಅಭಿವ್ಯಕ್ತಿ ಸೌಂದರ್ಯ.

*ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು*

  ತನು ಕರಗದವರು ಅಂದರೆ  ದುಡಿಮೆಯನ್ನು ಮಾಡದವರು, ಶುದ್ಧ ಮನಸ್ಸಿನಿಂದ ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ಕಾಯಕವನ್ನು ಮಾಡದವರಿಂದ ನೀನು, ನೀರು-ಹಾಲು-ಜೇನುಗಳನ್ನು ಎರೆದು ಮಾಡುವ ಮಜ್ಜನವನ್ನು  ಸ್ವೀಕರಿಸುವುದಿಲ್ಲ.

*ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು*

ಮನ ಕರಗದವರು ಅಂದರೆ ಇತರರ ಸಂಕಟವನ್ನು ಕಂಡು ಮರುಕಗೊಂಡು ಅವರಿಗೆ ನೆರವಾಗದವರು, ಪರರ ಹಸಿವು, ಬಡತನ, ನೋವನ್ನು ಕಂಡು ಕರಗದವರಿಂದ ನೀನು, ಪುಷ್ಪ ಹೂವು ಸ್ವೀಕರಿಸುವುದಿಲ್ಲ.

*ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು*

ಹದುಳಿಗರಲ್ಲದವರು ಅಂದರೆ ನಂಬಿಕೆಗೆ ಯೋಗ್ಯರಲ್ಲದವರಿಂದ, ನೀನು ಗಂಧ ಮತ್ತು ಅಕ್ಷತೆ (ಅಕ್ಕಿಯ ಕಾಳು) ಸ್ವೀಕರಿಸುವುದಿಲ್ಲ.

*ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು*

ಅರಿವು ಕಣ್ದೆರೆಯದವರು ಅಂದರೆ ಸುಜ್ಞಾನ ಪ್ರಜ್ಞೆ ಹೊಂದದವರಿಂದ ನೀನು, ಆರತಿತಟ್ಟೆಯಲ್ಲಿ ದೀಪಗಳ ಜ್ಯೋತಿಯ ಪೂಜೆ ಸ್ವೀಕರಿಸುವುದಿಲ್ಲ.

*ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು*

 ಭಾವಶುದ್ಧವಿಲ್ಲದವರು ಅಂದರೆ  ಇತರರಿಗೆ ಕೇಡನ್ನು ಕೆಟ್ಟದ್ದನ್ನು ಯೋಚಿಸುವವರಿಂದ ನೀನು, ಸಾಂಬ್ರಾಣಿ ಧೂಪದ ಪರಿಮಳವನ್ನು  ಸ್ವೀಕರಿಸುವುದಿಲ್ಲ.

*ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು*

  ಪರಿಣಾಮಿಗಳಲ್ಲದವರು ಅಂದರೆ ಪೂಜೆ ಅನುಭಾವದಿಂದ ಸಂಪೂರ್ಣ ಬದಲಾಗಿ ತೃಪ್ತಿ ಪಡೆಯದವರಿಂದ  ನೀನು, ನೈವೇದ್ಯವನ್ನು ಸ್ವೀಕರಿಸುವುದಿಲ್ಲ.

*ತ್ರಿಕರಣ ಶುದ್ಧವಿಲ್ಲದವರಲ್ಲಿ
ತಾಂಬೂಲವನೊಲ್ಲೆಯಯ್ಯಾ ನೀನು.*

 ತ್ರಿಕರಣ ಶುದ್ಧವಿಲ್ಲದವರು ಅಂದರೆ ದೇಹ , ಮನಸ್ಸು, ಮಾತು ಶುದ್ಧವಿಲ್ಲದವರಿಂದ ನೀನು, ಅಡಕೆ, ಸುಣ್ಣ, ವೀಳೆಯದ ಎಲೆಯ  ತಾಂಬೂಲವನ್ನು  ಸ್ವೀಕರಿಸುವುದಿಲ್ಲ.

*ಹೃದಯಕಮಲ ಅರಳದವರಲ್ಲಿ
ಇರಲೊಲ್ಲೆಯಯ್ಯಾ ನೀನು.*

ಹೃದಯಕಮಲ ಅರಳದವರು ಅಂದರೆ  ಸಂಕುಚಿತವಾದ ಮನಸ್ಸಿನವರಿಂದ  ಇತರರ ಒಳಿತಿನ್ನು ಕಂಡು ಕರುಬುವವರ ಹೃದಯದಲ್ಲಿ ನೀನು  ನೆಲೆಸಲು ಬಯಸುವುದಿಲ್ಲ .

*ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ? *

ನನ್ನಲ್ಲಿ, ನನ್ನ ನಡೆನುಡಿಗಳಲ್ಲಿ  ನೀನು, ಯಾವ ಒಳ್ಳೆಯ ಗುಣವನ್ನು ಕಂಡು ನನಗೆ ಒಲಿದು, ನನ್ನ ಕರಸ್ಥಳದಲ್ಲಿ ಬಂದು ನೆಲೆಸಿರುವಿರಿ ಚೆನ್ನಮಲ್ಲಿಕಾರ್ಜುನಯ್ಯಾ“ ಎಂದು ಅಕ್ಕಮಹಾದೇವಿಯು ಅಚ್ಚರಿ ಮತ್ತು ಭಾವಾನಂದದಿಂದ ತನ್ನ ಇಷ್ಟದೇವ ಚೆನ್ನಮಲ್ಲಿಕಾರ್ಜುನನ್ನು ಕೇಳುತ್ತಿದ್ದಾಳೆ.
ಭಾವ:
 ಸದಾಚಾರದ ಪಾಲನೆ ಇಲ್ಲದೆ ಮಾಡುವ ಅಷ್ಟವಿಧ ಪೂಜೆಯಾದರೂ ಅದು ವ್ಯರ್ಥ.  ಪರಶಿವನಿಗೆ ಅದು ಅರ್ಪಿತವಾಗುವದಿಲ್ಲ. ಪಂಚಾಚಾರಗಳಲ್ಲೆಲ್ಲಾ ಸದಾಚಾರ ಬಹಳ ವ್ಯಾಪಕವಾದದ್ದು, ಪರಿಶುದ್ಧವಾದ ಸಾತ್ವಿಕ ಜೀವನಕ್ಕೆ ಆಧಾರಭೂತವಾದದ್ದು. ಪೂಜೆ, ಪುನಸ್ಕಾರಗಳಿಗಿಂತ ಶರಣರು ನೈತಿಕ ಜೀವನಕ್ಕೆ ಹೆಚ್ಚು ಮಹತ್ವ ಕೊಟ್ಟರು. ಹುಸಿ ಕಳವು ಕೋಪ ವಂಚನೆ ಕಪಟ ಮೊದಲಾದ ರ್ದುಗಣಗಳನ್ನು ತುಂಬಿಟ್ಟು ಕೊಂಡು ಹೊರಗೆ ತೋರಿಕೆಗೆ ಮಾಡುವ ಲಿಂಗಭಕ್ತಿ, ಲಿಂಗಪೂಜೆ, ಅಷ್ಟವಿಧಾರ್ಚನೆ ವ್ಯರ್ಥವೆಂದು ಸಾರಿದರು ಶರಣರು. 
“ಅಟ್ಟವನೇರುವುದಕ್ಕೆ ನಿಚ್ಚಣಿಕೆಯೇ ಸೋಪಾನವಯ್ಯ, ಹರಪದವನೇರುವುದಕ್ಕೆ ಶ್ರೀಗುರು ಹೇಳಿದ ಸದಾಚಾರವೇ ಸೋಪಾನವಯ್ಯ.” ಎಂದು ಹೇಳುತ್ತಾರೆ ಶರಣರು. ದಯೆಯೇ ಧರ್ಮದ ಮೂಲವಯ್ಯ ಎಂದು ದಯೆ, ಶಾಶ್ವತವಾದ ಮೌಲ್ಯವೆಂದು ತಿಳಿಸಿದರು. ಜಗವೆಲ್ಲಾ ಪರಮಾತ್ಮನೇ ಆಗಿರುವಾಗ ಯಾರನ್ನು ಹಿಂಸಿಸಿದರೂ ಅದು ಆತ್ಮ ಹಿಂಸೆಯೇ ಆಗುತ್ತದೆ. ಮೀನುಗಾರನನ್ನು ಕಂಡು ಅಕ್ಕಮಹಾದೇವಿ ಹೇಳುವ ಮಾತುಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. “ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, ಹಲವು ಪ್ರಾಣಿಯ ಕೊಂದು ನಲಿನಲಿದಾಡುವ; ತನ್ನ ಮನೆಯಲೊಂದು ಶಿಶು ಸತ್ತಡೆ ಮರುಗುವಂತೆ ಅವನೇಕೆ ಮರುಗನು?” ಎಂದು ಕೇಳುತ್ತಾಳೆ 
ಅಕ್ಕಮಹಾದೇವಿ. ನಡೆನುಡಿ ಒಂದಾಗಬೇಕು. “ನಡೆಯೊಳಗೆ ನುಡಿ ತುಂಬಿ, ನುಡಿಯೊಳಗೆ ನಡೆ ತುಂಬಿ, ನಡೆ ನುಡಿ ಎರಡನ್ನು ಪರಿಪೂರ್ಣ ತುಂಬಿ ಲಿಂಗವ ಕೂಡಬಲ್ಲಾತ' ಮಾತ್ರ ಶರಣನಾಗುತ್ತಾನೆ. ಸದಾಚಾರದ ಇನ್ನೊಂದು ವ್ರತ, ಸತ್ಯನಿಷ್ಠೆ. 
ಸತ್ಯವೇ ಶಿವನ ಆವಾಸಸ್ಥಾನ. “ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ, ಅಸತ್ಯದ ಮನೆಯಲ್ಲಿ ಶಿವನಿರ್ಪನೇ?” ಎಂದು ಕೇಳುತ್ತಾರೆ ಶರಣರು. ಒಬ್ಬರ ಮನವ ನೋಯಸಿ ಒಬ್ಬರ ಮನೆಯ ಘಾತವ ಮಾಡಿ ಗಂಗೆಯಲ್ಲಿ ಮುಳುಗಿದರೆ ಆಗುವದೇನಯ್ಯ ?” ಎನ್ನುತ್ತಾರೆ ಶರಣರು. ಪರರ ಮನಸ್ಸನ್ನು ನೋಯಿಸಿ ಅವರಿಗೆ ಕೆಡಕನ್ನು ಬಯಿಸಿ ಅನ್ಯಾಯ, ಅಸತ್ಯದ ಕಾಯಕದಿಂದ ಬಂದ ರತ್ನಖಚಿತ ಚಿನ್ನದ ಕಾಣಿಕೆಗಳನ್ನು ಕೊಟ್ಟು  ಆಡಂಬರದ ಪೂಜೆ ಮಾಡಿದರೆ ಪರಶಿವನ ಅನುಗ್ರಹ ಸಾಧ್ಯವಿಲ್ಲ. ಶುದ್ಧ ಕಾಯಕದಿಂದ ಬಂದ ಕಾರೆ ಸೊಪ್ಪಾದರೂ ಸರಿ, ಅದು ಶಿವನಿಗೆ ಅರ್ಪಿತವಾಗುತ್ತದೆ.  ಸತ್ಯಶುದ್ಧ ಕಾಯಕ, ಸಕಲಪ್ರಾಣಿಗಳಲ್ಲಿ ದಯಾ ಭಾವನೆ, ಭಾವಶುದ್ಧಿ, ಅರಿವು, ತ್ರಿಕರಣ ಶುದ್ಧಿ(ದೇಹ, ಮನಸ್ಸು, ಮಾತಿನ ಶುದ್ಧಿ), ನುಡಿದಂತೆ ನಡೆ ಇವುಗಳಿಂದ ಪರಶಿವನನ್ನು ಪೂಜಿಸಿದರೆ ಮಾತ್ರ ಅವನ ಒಲುಮೆ ಕೃಪೆ ಸಾಧ್ಯ. ಅಂತಹ ಒಲುಮೆ, ಪರಶಿವನ ಕೃಪೆ, ಅನುಗ್ರಹ ಸಿಕ್ಕಿದ್ದಕ್ಕೆ ಅಕ್ಕಮಹಾದೇವಿ ಕೃತಾರ್ಥ ಳಾಗಿ ನುಡಿದ ವಚನವಿದು.
- ✍️ Dr Prema Pangi
#ಪ್ರೇಮಾ_ಪಾಂಗಿ,#ಅಕ್ಕ_ಮಹಾದೇವಿ,
#ತನು_ಕರಗದವರಲ್ಲಿ_ಮಜ್ಜನವನೊಲ್ಲೆಯಯ್ಯಾ ನೀನು
Picture post created by me. Hope you all will like it.A small service to popularise Vachana Sahitya.
Listen to this beautiful song.
https://youtu.be/PEIbg9eLr9A

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma