ವಚನ ದಾಸೋಹ

#ವಚನ:
#ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ,
ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ.
ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ,
ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ, ಎನ್ನ ಅಜಗಣ್ಣನ ಯೋಗಕ್ಕೆ. / 25
- ಶರಣೆ ಮುಕ್ತಾಯಕ್ಕ
ಅರ್ಥ:
೧೨ನೇ ಶತಮಾನದ ಶಿವಶರಣೆ ಮುಕ್ತಾಯಕ್ಕ ತುಂಬ ಎತ್ತರದ ಅನುಭಾವಿಕ ನೆಲೆಯನೆರಿದ ಶರಣೆ. ಬೆಡಗಿನ ವಚನ ರಚನಕಾರ್ತಿ. ಅಣ್ಣ ಅಜಗಣ್ಣ ಲಿಂಗೈಕ್ಯನಾದ ಸುದ್ದಿ ತಿಳಿದು ಆತನ ಅಗಲಿಕೆಯ ದುಃಖವನ್ನು ಪರಿಹರಿಸುವವರಾರು ಎಂದು ಹಲುಬುತ್ತಾಳೆ. ನಿತ್ಯಜಂಗಮ ಅಲ್ಲಮಪ್ರಭುದೇವರು, ಮುಕ್ತಾಯಕ್ಕನಿಗೆ ಮುಸುಕಿದ ಮಾಯೆಯನ್ನು ದೂರಮಾಡುತ್ತಾರೆ. ದು:ಖಿಯಾದ ಈಕೆಯನ್ನು ಅಲ್ಲಮಪ್ರಭು ಅರಿವಿನ ಕಣ್ಣು ತೆರೆಸುವ ಮೂಲಕ ಸಾಂತ್ವನ ಪಡಿಸುತ್ತಾರೆ. ಈ ಸಂದರ್ಭದಲ್ಲಿ ಅಲ್ಲಮಪ್ರಭು ಮತ್ತು ಮುಕ್ತಾಯಕ್ಕರ ಸಂವಾದ, ಅಧ್ಯಾತ್ಮಿಕ ಜಿಜ್ಞಾಸೆ, ಬದುಕಿನ ಸತ್ಯಗಳನ್ನು ಅನಾವರಣ ಮಾಡುತ್ತದೆ.  ಅಲ್ಲಮಪ್ರಭು ಮತ್ತು ಮುಕ್ತಾಯಕ್ಕನ ನಡುವೆ ನಡೆಯುವ ಶೂನ್ಯಸಂಪಾದನೆಯ ವಾಗ್ವಾದಗಳು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯ ಅತ್ಯುನ್ನತ ಬೌದ್ಧಿಕ ಚರ್ಚೆಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿವೆ.
 ಮೊಸಳೆಕಲ್ಲಿನಲ್ಲಿ ಮುಕ್ತಾಯಕ್ಕ ಹೆಸರಿನ ದೇವಾಲಯವಿದೆ. ಈ ಗ್ರಾಮದ ಹತ್ತಿರದಲ್ಲಿ ಗೊಗಲ್ಲು ಎಂಬಲ್ಲಿ ಅಲ್ಲಮಪ್ರಭುದೇವರು ಮುಕ್ತಾಯಕ್ಕನ ದುಃಖವನ್ನು ದೂರಮಾಡಿ, ಜೀವನ ಮರಣದ ತತ್ವಗಳನ್ನು ಅರುಹಿದರು.

ಶರಣ, ಗುರು, ಮತ್ತು ಅಣ್ಣನಾದ  ಅಜಗಣ್ಣ ಮಾಡುವ ಶಿವಯೋಗವ ಕಂಡು ಬೆರಗಾದೆ ಎಂದು ಅವನ ಅವಳಿ ತಂಗಿಯಾದ  ಶರಣೆ ಮುಕ್ತಾಯಕ್ಕ ಈ ವಚನದಲ್ಲಿ  ಅದ್ಭುತ ಅಲೌಕಿಕ ರೂಪಕಗಳೊಂದಿಗೆ ಅರುಹಿದ್ದಾಳೆ.

*ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ, 
ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ.*

ಅಣ್ಣ ಅಜಗಣ್ಣನ ಅನುಭಾವವನ್ನು, ಲಿಂಗ ಪೂಜೆಯನ್ನು ವರ್ಣಿಸಲಿಕ್ಕೆ ಮುಕ್ತಾಯಕ್ಕ ಅದ್ವಿತಿಯವಾದ, ಸುಲಭವಾಗಿ ಅರುಹಿಗೆ ನಿಲುಕದ ರೂಪಕ ಕಟ್ಟಿದ್ದಾಳೆ. "ನೀರಬೊಂಬೆ" ಕಲ್ಪಿಸಲಿಕ್ಕೂ ಆಗದ ನಿರಾಕಾರ ಸ್ವರೂಪ. ಅದಕ್ಕೆ ನಿಶ್ಚಿಂತವಾದ, ನಿರ್ಮಲವಾದ ನಿರಾಳದ ಗೆಜ್ಜೆಯ ಕಟ್ಟಿ ; ಹೀಗೆ ಅಲಂಕೃತಗೊಂಡ ನೀರಬೊಂಬೆ ಅದು ನಿರಾಕಾರ ನಿರ್ಗುಣ ನಿರಾಳ  ನಿರಾಮಯ ಲಿಂಗ. ಅದನ್ನು  ಬಯಲ ಬೊಂಬೆಯಾದ ಅಂದರೆ ಬಯಲು ಸ್ವರೂಪಿ ಯೋಗಿ ಅಜಗಣ್ಣ ತನ್ನ ಕೈಯಲ್ಲಿಯೇ ಮುದ್ದಾಡಿಸುತ್ತಿದ್ದನು. ಇಲ್ಲಿ ಅಮೂರ್ತವಾದ ಅಭಿವ್ಯಕ್ತಿತನ ಶಕ್ತಿಶಾಲಿಯಾಗಿ ಮೂಡಿದೆ. ಶರಣ ಅಜಗಣ್ಣನೂ ಬಯಲು ರೂಪದ ಅಮೂರ್ತ; ಅವನು ಮುದ್ದಾಡಿಸುತ್ತಿರುವ ನಿರಾಳ ಲಿಂಗವೂ ಅಮೂರ್ತ. ಅನುಭಾವದ ಶಿಖರವೇರಿದ  ಶರಣನ ವರ್ಣನೆಯನ್ನು ಅವನಷ್ಟೇ ಅನುಭಾವಿಯಾದ ಶರಣೆ ಮುಕ್ತಾಯಕ್ಕ  ಅಪೂರ್ವವಾಗಿ ವರ್ಣಿಸಿದ್ದಾಳೆ. ತನ್ನ ಅಣ್ಣ ಅಜಗಣ್ಣ ಪಶ್ಚಿಮಚಕ್ರ, ನಿರಾಲಂಬ ಸ್ಥಲದ ಬಯಲುರೂಪ ಸಾಧಿಸಿದ್ದ ಶರಣ ಎಂದು  ಬಯಲು ಬೊಂಬೆ ರೂಪಕದ ಮೂಲಕ ಅವನು ಮಹಾನ್ ಶಿವಯೋಗಿ ಎಂದು ಸೂಪ್ತವಾಗಿ ತಿಳಿಸುತ್ತಾಳೆ.
ನಿರಾಕಾರ ನಿರ್ಗುಣ ಚಿದ್ಲಿಂಗವನ್ನೇ ಸಾಕಾರ ಇಷ್ಟಲಿಂಗವ ಮಾಡಿ ಸತ್ಕ್ರಿಯೋಪಚಾರಗಳಿಂದ ಮುದ್ದಾಡಿಸುತ್ತಿದ್ದಾನೆ ಅನುಭಾವಿ ಅಜಗಣ್ಣ. 

ಮತ್ತೊಂದು ಅಷ್ಟೇ ವಿಶಿಷ್ಟವಾದ ರೂಪಕವನ್ನು ಶರಣೆ ಮುಕ್ತಾಯಕ್ಕ ಕೊಡುತ್ತಾಳೆ. 

*ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ, 
ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ *

ಅಗ್ನಿಯ ಸಿಂಹಾಸನದ ಮೇಲೆ ಕರ್ಪೂರದ ಪುತ್ಥಳಿಯನ್ನು ಪ್ರತಿಷ್ಟಾಪಿಸಿದರೆ  ಏನಾಗುತ್ತದೆ? ಕರ್ಪೂರದ ಪುತ್ಥಳಿ ಅಗ್ನಿಯಲ್ಲಿ ಕರಗಿ ಹೋಗಬೇಕಾಗಿತ್ತು. ಆದರೆ ಅಜಗಣ್ಣನ ಯೋಗ ಹೇಗಿತ್ತು ಎಂದರೆ ಅಗ್ನಿಯೇ ಕರಗಿ, ಕರ್ಪೂರ ಲಿಂಗಸಾಹಿತ್ಯದ ಸುವಾಸನೆಯೊಂದಿಗೆ ಉಳಿದುಕೊಳ್ಳುತ್ತದೆ!!
ಮುಕ್ತಾಯಕ್ಕಗೆ ಆಧ್ಯಾತ್ಮಕ ಪಯಣದ ಮಾರ್ಗದರ್ಶಕನಾಗಿ  ಗುರು ಅಜಗಣ್ಣ ಎಷ್ಟು ಮುಖ್ಯವೋ; ಅಷ್ಟೇ ಮುಖ್ಯ  ಅವಳ ಮನದಲ್ಲಿ ನೆಲೆಯೂರಿದ ಅವನ ಶರಣ ಮೂರ್ತಿ. 

*ಬೆರಗಾದೆನಯ್ಯಾ, ಎನ್ನ ಅಜಗಣ್ಣನ 
ಯೋಗಕ್ಕೆ*. 

ಮುಕ್ತಾಯಕ್ಕನ ಈ ವಚನದ ಸಂವೇದನೆ ತತ್ವಾನುಭೂತಿಯನ್ನು ಕೊಡುವುದರ ಜೊತೆಗೆ ಗುರುವಾದ ಅಜಗಣ್ಣನನ್ನು ವ್ಯಕ್ತಿ ವಿಶಿಷ್ಟ ಶ್ರೇಷ್ಟ ಶಿವಯೋಗ ಸಾಧಕನಂತೆ ಪರಿಚಯಿಸಿ ಅವನ ವ್ಯಕ್ತಿತ್ವ, ಸಾಧನೆಗೆ ಬೆರಗು ಕೊಡುತ್ತಾಳೆ.
ಭಾವ:
ವರ್ಣಿಸಲು ಬಾರದ ಅಮೂರ್ತವಾದ ಆಧ್ಯಾತ್ಮಿಕ ಅನುಭವಗಳನ್ನು ತಮ್ಮ ಸೂಕ್ತ ಸುಂದರ ಅಮೋಘ ರೂಪಕಗಳ ಮುಖಾಂತರ ಶಬ್ದಗಳ ಅನುಸಂಧಾನ ಮಾಡಿದ್ದಾರೆ ಶರಣೆ ಮುಕ್ತಾಯಕ್ಕ.
ನೀರ ಬೊಂಬೆಗೆ ನಿರಾಳ ಗೆಜ್ಜೆ ಕಟ್ಟಿ, ಶಿವಚೈತನ್ಯ ತುಂಬಿ, ಇಷ್ಟಲಿಂಗವಾಗಿಸಿ  ಬಯಲು ಬೊಂಬೆ ಬಯಲು ಸ್ವರೂಪಿ  ಅಜಗಣ್ಣನ  ಕೈಯಲ್ಲಿ  ಪೂಜೆ ಮಾಡಿಸುತ್ತಾಳೆ. ಕರ್ಪೂರದ ಪುತ್ಥಳಿ  ಬೆಂಕಿಯಲ್ಲಿ ದಹಿಸುವಾಗ ಅನುಭಾವ, ಅರಿವು, ಬೆಳಕಾಗಿ ಕರ್ಪೂರದ ಪುತ್ಥಳಿ ಪ್ರಕಾಶಿಸಿಸಿದೆ. ನಿರಾಳ ಶಿವತತ್ವಕ್ಕೆ ಕರ್ಪೂರದ ಸುವಾಸನೆಯನ್ನು ಕೊಟ್ಟಿರುವುದು ಆಕೆಯ ಆಳವಾದ, ಬೆಡಗಿನ ಅನುಭಾವವೆಂದು ಹೇಳಬಹುದು.

ಮುಕ್ತಾಯಕ್ಕನು ತನ್ನ ಅಣ್ಣನಾದ ಅಜಗಣ್ಣನ ಆಲೋಚನೆ, ಜೀವನ ನಡೆನುಡಿಗಳು,ಭಕ್ತಿಯ ಆಚರಣೆ ವ್ಯಕ್ತಿತ್ವದ ಆಧಾರವಾಗಿಟ್ಟು ಬರೆದ  ಇನ್ನೊಂದು ವಚನ ಹೀಗಿದೆ.
 
#*ಅಲರೊಳಡಗಿದ ಪರಿಮಳದಂತೆ,
ಪತಂಗದೊಳಡಗಿದ ಅನಲನಂತೆ,
ಶಶಿಯೊಳಡಗಿದ ಷೋಡಶಕಳೆಯಂತೆ,
ಉಲುಹಡಗಿದ ವಾಯುವಿನಂತೆ,
ಸಿಡಿಲೊಳಡಗಿದ ಗಾತ್ರದ ತೇಜದಂತೆ
ಇರಬೇಕಯ್ಯಾ ಯೋಗ, ಎನ್ನ ಅಜಗಣ್ಣತಂದೆಯಂತೆ*.
 
ಅಜಗಣ್ಣನ ಧ್ಯಾನ, ಯೋಗಸಾಧನೆ ಯಾವ ಮಟ್ಟದ್ದಾಗಿತ್ತು ಎಂದು ಮುಕ್ತಾಯಕ್ಕ ಈ ವಚನದಲ್ಲಿ ವಿವರಿಸಿದ್ದಾಳೆ. ಹೂವಿನಲ್ಲಿಯ ಪರಿಮಳವು, ಸೂರ್ಯನಲ್ಲಿಯ ಬೆಂಕಿಯು, ಚಂದ್ರನಲ್ಲಿಯ ಷೋಡಶಕಳೆಯು, ಸಿಡಿಲಲ್ಲಿಯ ತೇಜವು ಇವು ಕಣ್ಣಿಗೆ ಕಾಣುವದಿಲ್ಲ, ಸೂಪ್ತ ವಾಗಿರುತ್ತವೆ. ಆದರೂ ತಮ್ಮ ಇರುವಿಕೆಯನ್ನು ತೋರಿಸುತ್ತವೆ. ಅದೇ  ರೀತಿಯಲ್ಲಿಯೇ ಅಜಗಣ್ಣನ ಯೋಗಸಾಧನೆ ಸೂಪ್ತವಾಗಿದ್ದರೂ ಹೂವಿನ ಪರಿಮಳದಂತೆ, ಸೂರ್ಯನ ಪ್ರಜ್ವಲತೆಯಂತೆ, ಚಂದ್ರನ  ಷೋಡಶಕಳೆಯಂತೆ, ಸಿಡಿಲಿನ ತೇಜಸ್ಸಿನಂತೆ  ಪ್ರಕಟವಾಗುತ್ತಿತ್ತು ಎಂದು ತನ್ನ ಅಣ್ಣ ಅಜಗಣ್ಣನ ಮಹತ್ ಯೋಗಸಾಧನೆಯನ್ನು ವರ್ಣಿಸುತ್ತಾರೆ ಶರಣೆ ಮುಕ್ತಾಯಕ್ಕ.🙏
- ✍️Dr Prema Pangi
#ಪ್ರೇಮಾ_ಪಾಂಗಿ,#ಶರಣೆ_ಮುಕ್ತಾಯಕ್ಕ
#ನೀರಬೊಂಬೆಗೆ_ನಿರಾಳದ_ಗೆಜ್ಜೆಯ_ಕಟ್ಟಿ
#ಅಲರೊಳಡಗಿದ_ಪರಿಮಳದಂತೆ,
Picture post created by me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma