ವಚನ ದಾಸೋಹ - ಅರಿಯದ ಗುರು ಅರಿಯದ ಶಿಷ್ಯಂಗೆ

ವಚನ ದಾಸೋಹ - 
ಅರಿಯದ ಗುರು ಅರಿಯದ ಶಿಷ್ಯಂಗೆ
*ವಚನ* :
ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೋ.
ಅಂಧಕನ ಕೈಯನಂಧಕ ಹಿಡಿದಡೆ
ಮುಂದನಾರು ಕಾಬರು ಹೇಳೆಲೆ ಮರುಳೇ?
ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ/6/39
 - ಶರಣ ಅಂಬಿಗರ ಚೌಡಯ್ಯ
ಅರ್ಥ:
ಅಂಬಿಗರ ಚೌಡಯ್ಯನವರು ಹನ್ನೆರಡನೆಯ ಶತಮಾನದ ಶರಣರು. ಇವರ ವಚನಗಳು ನೇರ ಮತ್ತು ಅತೀ ನಿಷ್ಠುರ. ಅಂಬಿಗರ ಚೌಡಯ್ಯನವರ ವಚನಗಳು ಬರೀ ವಚನಗಳಲ್ಲ. ಅವು ವಾಗ್ಬಾಣಗಳು.
ಪ್ರಸ್ತುತ ವಚನದಲ್ಲಿ ಅಷ್ಟಾವರಣದಲ್ಲಿ ಮೊದಲನೆಯದಾದ ಗುರು ಕುರಿತು ಮತ್ತು ಯೋಗ್ಯ ಗುರುಗಳಿಲ್ಲದೆ ಹೋದರೆ ಏನಾಗುತ್ತದೆ ಎಂಬುದನ್ನು ಉಪಮೆಗಳ ಮುಖಾಂತರ ವಿವರಿಸಿದ್ದಾರೆ.

*ಅರಿಯದ ಗುರು ಅರಿಯದ ಶಿಷ್ಯಂಗೆ ಅನುಗ್ರಹವ ಮಾಡಿದಡೇನಪ್ಪುದೆಲವೊ?*

ಅಜ್ಞಾನಿ ಗುರು ಅಜ್ಞಾನಿ ಶಿಷ್ಯನಿಗೆ ಗುರುವಾಗಿ ಅನುಗ್ರಹಮಾಡಿದರೆ,
ಅದೇನು ಬದಲಾವಣೆಯಾದೀತು?
ಏನೂ ಬದಲಾವಣೆಯಾಗುವುದಿಲ್ಲ. ಅದರಿಂದ ಏನೂ ಪ್ರಯೋಜನವಿಲ್ಲ .

*ಅಂಧಕನ ಕೈಯನಂಧಕ ಹಿಡಿದಡೆ, ಮುಂದನಾರು ಕಾಬರು ಹೇಳೆಲೆ ಮರುಳೆ?*

ಇದರ ಅರ್ಥ ಕುರುಡನ ಕೈಯನ್ನು ಹಿಡಿದು ಕುರುಡ ನಡೆಯಿಸಿಕೊಂಡಿದ್ದರೆ ಮುಂದಿರುವ ದಾರಿಯನ್ನು ತೋರಿಸುವವರು ಯಾರು? ಸ್ವತಃ ಗುರುವೇ ಕುರುಡನಾಗಿದ್ದರೆ ಆತ ತನ್ನನ್ನೇ ನಂಬಿಕೊಂಡಿರುವ ಕುರುಡ ಶಿಷ್ಯರಿಗೆ ಅದು ಹೇಗೆ ದಾರಿಯನ್ನು ತೋರಿಸಬಲ್ಲ?  ಚೌಡಯ್ಯನವರು ಇದಕ್ಕೊಂದು ಸುಂದರ ಉಪಮೆ ಕೊಡುತ್ತ, ಅಂಧಕನ ಕೈಯನಂಧಕ ಹಿಡಿದಡೆ ಅಂದರೆ ಗುರುವೇ ಕತ್ತಲೆಯಲ್ಲಿದ್ದರೆ, ಆತ ತನ್ನನ್ನೇ ನಂಬಿಕೊಂಡಿರುವ ಕುರುಡ ಶಿಷ್ಯರಿಗೆ ಅದು ಹೇಗೆ ಬೆಳಕನ್ನು ತೋರಿಸಬಲ್ಲ? ಎಂದು ಕೇಳುತ್ತಾರೆ.

*ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ*

ಈಜು ಬಾರದವನು ತೊರೆಯಲಿದ್ದವನನ್ನು, ಪ್ರವಾಹದಲ್ಲಿ ಸಿಲುಕಿದವನನ್ನು ಅದು ಹೇಗೆ ಕಾಪಾಡುತ್ತಾನೆ?  'ಈಸಲರಿಯದವ' ಅಂದರೆ ಈಜು ಬಾರದ ವ್ಯಕ್ತಿ ಅದು ಹೇಗೆ ಮುಳುಗುತ್ತಿರುವವನನ್ನು ರಕ್ಷಿಸಬಲ್ಲ?
ಗುರುಗಳೇ ಶಿಷ್ಯರನ್ನು ಶರಣಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ವಚನ ಚಿಂತನ:
*ಶರಣ ಧರ್ಮದಲ್ಲಿ ಗುರು* :
ಅಷ್ಟಾವರಣದಲ್ಲಿ ಮೊದಲ ಆವರಣವೇ ಗುರು. ಶಿಷ್ಯನ ಅಜ್ಞಾನವನ್ನು ತೊಲಗಿಸಿ ಪರಮಾತ್ಮನ ಜ್ಞಾನವನ್ನು ಮೂಡಿಸುವವನೇ ಗುರು. ಅಷ್ಟಾವರಣದಲ್ಲಿ  ಎರಡೂ ತರ. ಬಹಿರಂಗ ಮತ್ತು ಅಂತರಂಗ ಅಷ್ಟಾವರಣಗಳು. ಬಹಿರಂಗ ಅಷ್ಟಾವರಣದಲ್ಲಿ ಗುರುವು ಬಹಿರಂಗ ಸ್ವರೂಪಿ; ವ್ಯಕ್ತಿ ಅಥವಾ ಜ್ಞಾನ ಕೊಡುವ ಸಾಹಿತ್ಯ ವಾಗಬಹುದು. ಅಂತರಂಗ ಅಷ್ಟಾವರಣದಲ್ಲಿ  "ಅರಿವೇ ಗುರು". ಈ ವಚನ ವ್ಯಕ್ತಿಸ್ವರೂಪ 
ಗುರುವಿನ ಅರ್ಹತೆಯನ್ನು ವಿವೇಚಿಸಿದೆ. 
ಪರಮ ನಿರಂಜನನ ಕುರುಹು ಇಷ್ಟಲಿಂಗವೆಂಬುದನ್ನು  ನಿರೂಪಿಸಿ, ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯನ್ನೂ, ಜ್ಞಾನದ ಬೆಳಗನ್ನೂ ತೋರಿಸುವವನು ಗುರು. ಆ ಬೆಳಗಿನಲ್ಲಿ ಶಿವ-ಜೀವರ ಐಕ್ಯವನ್ನೂ ಸಾಧಿಸುವ ರಹಸ್ಯವನ್ನು ಅರುಹುತ್ತಾನೆ. ಯೋಗ್ಯ ಗುರುವಿನಿಂದ ಯೋಗ್ಯ ಶಿಷ್ಯನಿಗೆ ಲಭಿಸಿದ ದೀಕ್ಷೆ ಸಾರ್ಥಕವಾಗುತ್ತದೆ. ಅದಿಲ್ಲದೆ
 “ಉಪಚಾರದ ಗುರುವಿಂಗೆ, ಉಪಚಾರದ ಶಿಷ್ಯನು, ಉಪಚಾರದ ಲಿಂಗವು, ಉಪಚಾರದ ಜಂಗಮವು, ಉಪಚಾರದ ಪ್ರಸಾದವು ; ಇಂತಹ ಗುರುವಿಂಗೆ ಭಾವದ ಲೆಂಕನಾಗಿ ಅಂಧಕನ ಕೈಯ ಅಂಧಕ ಹಿಡಿದಂತೆ ಇವರೆಲ್ಲರೂ ಹೊಲಬುಗೆಟ್ಟರು" ಎಂದು ನಿಷ್ಠುರವಾಗಿ ನುಡಿದಿದ್ದಾರೆ ವ್ಯೋಮಕಾಯ ಅಲ್ಲಮಪ್ರಭುಗಳು. "ಉಪಾಧಿವಿಡಿದು ಉಪದೇಶ ಮಾಡುವವನು ಗುರುವಲ್ಲ; ಉಪಾಧಿಯಲ್ಲಿ ದೀಕ್ಷೆ ಕೊಂಬಾತ ಶಿಷ್ಯನಲ್ಲ, ಇದು ಠಕ್ಕನ ಮನೆಗೆ ಠಕ್ಕ ಬಂದಂತೆ" ಎನ್ನುತ್ತಾರೆ ಅವಿರಳಜ್ಞಾನಿ ಚನ್ನಬಸವಣ್ಣನವರು. 
-✍️ Dr Prema Pangi
#ಪ್ರೇಮಾ_ಪಾಂಗಿ,#ಅಂಬಿಗರ_ಚೌಡಯ್ಯ,
#ಅರಿಯದ_ಗುರು_ಅರಿಯದ_ಶಿಷ್ಯಂಗೆ
Picture post designed and created by me.Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma