ವಚನ ದಾಸೋಹ : ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು
#ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು
ಲೆಕ್ಕಗೊಳ್ಳರಯ್ಯಾ.
ಗುರು ಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ
ಆಗು ಹೋಗೆಂಬುದನರಿಯರು.
ಭಕ್ತಿಯನರಿಯರು, ಯುಕ್ತಿಯನರಿಯರು, ಮುಕ್ತಿಯನರಿಯರು ಮತ್ತೂ
ವಾದಕ್ಕೆಳಿಸುವರು. ಹೋದರು ಗುಹೇಶ್ವರಾ, ಸಲೆ ಕೊಂಡ ಮಾರಿಂಗೆ. / 72
- ಅಲ್ಲಮ ಪ್ರಭುಗಳು
*ಅರ್ಥ* :
12 ಶತಮಾನದಲ್ಲಿ ವಿದ್ಯೆ, ಅಕ್ಷರಜ್ಞಾನ ಕೇವಲ ಕೆಲವರ ಪಾಲಾಗಿತ್ತು. ಅಕ್ಷರವನ್ನು ಕಲಿತು ವೇದ ಶಾಸ್ತ್ರಗಳನ್ನು ಓದಿಕೊಂಡು, ಇತರರಿಗಿಂತ ತಾವೇ ದೊಡ್ಡವರೆಂದು ಅಹಂಕಾರದಿಂದ ಮೆರೆಯುತ್ತಾ ವಾದ ವಿವಾದಗಳಲ್ಲಿಯೇ ಕಾಲ ಕಳೆಯುತ್ತಿದ್ದವರನ್ನು ನಿಷ್ಠುರವಾಗಿ ಟೀಕಿಸಿದ್ದಾರೆ ಅಲ್ಲಮ ಪ್ರಭುಗಳು. ಕೇವಲ ಮಾತಿನ ಚತುರತೆಯಿಂದಲೇ ಎಲ್ಲವನ್ನೂ ಗೆಲ್ಲುತ್ತ , ಇತರ ಜನಸಮುದಾಯದ ಒಳಿತನ್ನು ಕಡೆಗಣಿಸುವಂತಹ ವ್ಯಕ್ತಿಗಳನ್ನು ಅಲ್ಲಮಪ್ರಭುಗಳು ಕಟುವಾಗಿ ಅಲ್ಲಗಳೆದಿದ್ದಾರೆ.
*ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ*
ಕೆಲವರು ತಾವು ಅಕ್ಷರ, ಓದುಬರಹ ಬಲ್ಲೆವು, ಎಲ್ಲ ವೇದ ಶಾಸ್ತ್ರಗಳನ್ನು ಬಲ್ಲೆವು ಎಂದು ತಿಳಿದು ಭ್ರಮಿಸಿ ಅಹಂಕಾರಕ್ಕೆ ಒಳಗಾಗುತ್ತಾರೆ. ಅದಕ್ಕೇ ತಾವೇ ದೊಡ್ಡವರು, ಉತ್ತಮರು, ಮೇಲಿನವರು ಎಂಬ ಅಹಂಕಾರಕ್ಕೆ ಒಳಗಾಗಿ, ಇತರರ ಬಗ್ಗೆ ಒಲವು ನಲಿವಿನಿಂದ ನಡೆದುಕೊಳ್ಳದೆ, ಎಲ್ಲರನ್ನೂ ಕೀಳಾಗಿ ಕಾಣುತ್ತಾರೆ. ಅವರು ಯಾರನ್ನೂ ಲೆಕ್ಕಿಸುವುದಿಲ್ಲ. ಎಲ್ಲವೂ ಶಾಸ್ತ್ರದ ಒಳಹೊರಗನೆಲ್ಲ ತಮಗೆ ತಿಳಿದಿದೆ. ತಮಗೆ ತಿಳಿಯದಿರುವದು ಯಾವುದೂ ಇಲ್ಲ ಎಂಬ ಅಹಂಕಾರ ಭಾವನೆ ಅವರ ತಲೆ ತುಂಬಿರುತ್ತದೆ. ಆದರೆ ಅವರು ಕೇವಲ ಶಾಸ್ತ್ರಗಳ ಶಾಬ್ದಿಕ ವ್ಯಾಸಂಗ ಮಾಡಿದವರು.
*ಗುರು ಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ
ಆಗು ಹೋಗೆಂಬುದನರಿಯರು*.
ಗುರು ಹಿರಿಯರ ತಿಳಿಸಿದ ಉಪದೇಶದಿಂದ ಅವರು ಕಲಿಸಿದ ವಿದ್ಯೆಯಿಂದ ಅದ್ವೈತ ನುಡಿಯುವವರು. ಹೀಗೆ ತಮ್ಮ ಪಾಂಡಿತ್ಯವನ್ನು ಹೆಚ್ಚಿಸಿಕೊಂಡ ಈ ವಿದ್ವಾಂಸರು ವಾಗದ್ವೈತಿಗಳು. ಚರ್ಚೆಯ ಸನ್ನಿವೇಶದಲ್ಲಿ ಎದುರಾಳಿಯನ್ನು ಸೋಲಿಸುವಂತಹ ಮಾತುಗಾರಿಕೆಯಲ್ಲಿ ಹೆಚ್ಚಿನ ಜಾಣ್ಮೆಯನ್ನು ಕರಗತ ಮಾಡಿಕೊಂಡಿರುವವರು. ಜೀವ-ಶಿವ, ದ್ವೈತ-ಅದ್ವೈತ ತತ್ವವನ್ನು ಅನುಭಾವ ವಿಲ್ಲದೇ, ಶಬ್ದ ಮಾತ್ರದಲ್ಲಿ ತಿಳಿದು ವಾದಿಸುತ್ತಾರೆ. ಆಗು ಹೋಗುವುದು ಏನು, ಶಿವಾನುಭಾವದ ಅದ್ವೈತ, ಅನುಭಾವದಿಂದ ಅದ್ವೈತ ಅರಿಯರು. ಅವರು ತಾವು ಗಳಿಸಿದ ಶಾಬ್ದಿಕ ಜ್ಞಾನವನ್ನು ವಾದ ವಿವಾದಕ್ಕೆ ಬಳಿಸುತ್ತಾರೆ .
ಇವರು ವಾದಿಪರು, ಯಾವುದೇ ಸಂಗತಿಯನ್ನು ಕುರಿತು ಚರ್ಚಿಸುವಾಗ ತಾವಾಡುವ ಮಾತುಗಳು ತಮ್ಮ ನಿಲುವೇ ಸರಿಯೆಂಬ ವಾದವನ್ನು ಮಾಡುತ್ತಾರೆಯೇ ಹೊರತು, ಲೋಕದಲ್ಲಿನ ಜನಸಮುದಾಯದ ಆಗು, ಹೋಗು, ನೋವು, ನಲಿವು ಎಂಬುದು ಅವರಿಗೆ ತಿಳಿದಿಲ್ಲ. ಸುತ್ತಮುತ್ತಲಿರುವ ನಿಜ ಜ್ಞಾನಿಗಳನ್ನು, ಸಂತ-ಶರಣರನ್ನು, ಅನುಭಾವಿಗಳನ್ನು ಅವರ ತಿಲಮಾತ್ರವೂ ಲೆಕ್ಕಿಸುವುದಿಲ್ಲ.
*ಭಕ್ತಿಯನರಿಯರು, ಯುಕ್ತಿಯನರಿಯರು, ಮುಕ್ತಿಯನರಿಯರು.
ಮತ್ತೂ ವಾದ ಕೇಳಿಸುವರು.
ಹೋದರು ಗುಹೇಶ್ವರಾ,
ಸಲೆ ಕೊಂಡ ಮಾರಿಂಗೆ*
ಭಕ್ತಿ, ಯುಕ್ತಿ, ಮುಕ್ತಿ ಅರಿಯರು. ದೇಹ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು ಜಗದ ಜನರ ಒಳಿತಿನ ನಡೆನುಡಿಗಳಿಂದ ಬಾಳುವ ವಿಧಾನ ತಿಳಿಯದವರು.
ಅವರು ಶಿವ-ಜೀವರ ಸಾಮರಸ್ಯ ಸ್ಥಿತಿಯನ್ನಾಗಲಿ ಅನುಭಾವವನ್ನಾಗಲಿ ಅರಿಯರು. ದೇವರಲ್ಲಿ ಅನನ್ಯ ಭಕ್ತಿ ಇಲ್ಲ. ಭವ ಬಂಧನದಿಂದ ಬಿಡಿಸಿಕೊಳ್ಳುವ ಯುಕ್ತಿ ಇಲ್ಲ. ಶಿವ ಜೀವರ ಸಮರಸದ ಯುಕ್ತಿ ವಿಧಾನ ಗೊತ್ತಿಲ್ಲ. ಜೀವ ಭಾವ ಅಡಗಿದ ಮುಕ್ತಿಯ ಹೊಳಹಿಲ್ಲ. ಮುಕ್ತಿಯ ಅನುಭೂತಿ ಇಲ್ಲ. ಹೀಗಿದ್ದರೂ ಬರೀ ವಾದವನ್ನು ಮಾಡುವುದಕ್ಕೆ ಹಂಬಲಿಸುತ್ತಾರೆ. ಗುಹೇಶ್ವರಾ(ಶಿವ), ಇವರು ಮಾರಿ ದೇವತೆಯ ಕ್ರೂರನೋಟಕ್ಕೆ ಸಿಲುಕಿ ಸಂಪೂರ‍್ಣವಾಗಿ ನಾಶವಾದರು.
ಶಾಸ್ತ್ರಗಳ ಅಧ್ಯಯನ ಮಾಡಿದರೆ, ಅದರಿಂದ ಪರಮ ಸತ್ಯದ, ಸತ್ ಚಿತ್ ಆನಂದಸ್ವರೂಪ ಅರಿಯಬೇಕು. ಕಾಯಭಾವ, ಮನೋಭಾವ ಅಳಿದು ಸಕಲಚರಾಚರ ಜಗತ್ತೆಲ್ಲವೂ ಪರಬ್ರಹ್ಮ ಪರಶಿವ ಎಂದು ಅರಿತಾಗ ಮಾತ್ರ ಅದ್ವೈತ, ಇಲ್ಲದಿದ್ದರೇ ಅದು ಬರಿ ವಾದಿಪಅದ್ವೈತ. ಭಕ್ತಿಮಾರ್ಗದಲ್ಲಿ ನಡೆದು ಲಿಂಗಾಂಗ ಸಾಮರಸ್ಯ ಅನುಭಾವಿಸಿ ಐಕ್ಯಸ್ಥಲದಲ್ಲಿ ಪರಮಾತ್ಮನಲ್ಲಿ ಒಂದಾಗಬೇಕು, ಲೀನವಾಗಬೇಕು. ಅದು ಶಿವಾದ್ವೈತ. ಆಗಲೇ ಶಾಸ್ತ್ರಗಳ ಅಧ್ಯಯನದ ಸ್ವಾರ್ಥಕತೆ.
- ✍️Dr Prema Pangi
#ಅಕ್ಷರವ_ಬಲ್ಲೆವೆಂದು
Comments
Post a Comment