ವಚನ ದಾಸೋಹ

ವಚನ :
#ನೀರಿಂಗೆ ನೈದಿಲೆಯೆ ಶೃಂಗಾರ,
ಸಮುದ್ರಕ್ಕೆ ತೆರೆಯೆ ಶೃಂಗಾರ,
ನಾರಿಗೆ ಗುಣವೆ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ. / 841
- ಗುರು ಬಸವಣ್ಣನವರು
ಅರ್ಥ:
ವಚನದಲ್ಲಿ ವಿಭೂತಿಯ ಆಹ್ಲಾದಕರ ಗುಣವನ್ನು ಗುರು ಬಸವಣ್ಣನವರು ಕೆಲವು ಸುಂದರ ಸಾದೃಶ್ಯಗಳನ್ನು ಬಳಸಿ ಹೇಳುತ್ತಾರೆ. 

*ನೀರಿಂಗೆ ನೈದಿಲೆಯೆ ಶೃಂಗಾರ,*

ಸುಂದರವಾದ ಸರೋವರಕ್ಕೆ ಅಲ್ಲಲ್ಲಿ ಬಣ್ಣದ ಅಲಂಕಾರವಾಗಿ ತೋರುವ ಶುಭ್ರವಾದ ನೈದಿಲೆ ಹೂಗಳು ಅಂದರೆ ಬಿಳಿಯ ಕಮಲದ ಹೂಗಳು(Nymphaea nouchali flowers) ಅದರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹೀಗೆ ನೈದಿಲೆ ನೀರಿಗೆ ಶೃಂಗಾರ.

*ಸಮುದ್ರಕ್ಕೆ ತೆರೆಯೆ ಶೃಂಗಾರ,*

ಸಮುದ್ರ ನಿತ್ಯ ನೂತನವಾಗಿ ಅತಿ ಆಕರ್ಷಕವಾಗಿ ಕಾಣುವುದು ದಡಕ್ಕೆ ಬಂದು ಅಪ್ಪಳಿಸಿ ತಿರುಗುವ ಅಲೆಗಳಿಂದ. ಹೀಗೆ ಅಲೆಗಳೇ ಸಮುದ್ರಕ್ಕೆ ಶೃಂಗಾರ.

*ನಾರಿಗೆ ಗುಣವೆ ಶೃಂಗಾರ,*

 ಹೆಣ್ಣಿಗೆ ಬಾಹ್ಯ ಸೌಂದರ್ಯಕ್ಕಿಂತ  ಆಂತರಿಕ ಸೌಂದರ್ಯವಾದ  ಒಳ್ಳೆಯ ಗುಣ ಮತ್ತು ವ್ಯಕ್ತಿತ್ವವೇ ಶೃಂಗಾರ' ಎಂದು ಹೇಳಿರುವುದು ಅರ್ಥವತ್ತಾಗಿದೆ. 

* ಗಗನಕ್ಕೆ ಚಂದ್ರಮನೆ ಶೃಂಗಾರ,*

ರಾತ್ರಿ ನೀಲಾಕಾಶಕ್ಕೆ ಬೆಳದಿಂಗಳ ಚೈತನ್ಯವನ್ನು ನೀಡುವವನು ಚಂದ್ರಮನು. ಹೀಗೆ ಗಗನಕ್ಕೆ ಚಂದ್ರಮನೇ ಶೃಂಗಾರ. ಚಂದ್ರ ನಿಲ್ಲದ ಅಮಾವಾಸ್ಯೆಯ ಆಕಾಶಕ್ಕಿಂತ ಪೂರ್ಣ ಚಂದ್ರ ಇರುವ ಹುಣ್ಣಿಮೆಯ ಆಕಾಶ ಹೆಚ್ಚು ಸುಂದರ ಹೆಚ್ಚು ಆಹ್ಲಾದಕರ.

*ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ*

ಸರೋವರದ ನೀರಿಗೆ ಬಿಳಿ ಕಮಲಗಳು, ಸಮುದ್ರಕ್ಕೆ ತೆರೆಗಳು, ನಾರಿಗೆ ಗುಣಗಳು, ಗಗನಕ್ಕೆ ಚಂದ್ರಮನು, ಹೇಗೆ ಶೋಭೆ ಕೊಡುತ್ತವೆಯೋ ಹಾಗೆಯೇ ಶರಣರಿಗೆ
ಹಣೆಯ ಮೇಲಿನ ವಿಭೂತಿ ಶೋಭೆ ಕೊಡುತ್ತದೆ. ಹೀಗೆ ಪ್ರಕೃತಿಯ ಸಾದೃಶ್ಯಗಳನ್ನು ಸುಂದರ ರೂಪಕಗಳಾಗಿ ಹೇಳುತ್ತಾ ಬಂದ ಗುರು ಬಸವಣ್ಣನವರು ನಮ್ಮ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ ಎಂದು ನಿತ್ಯ ವಿಭೂತಿ ಧರಿಸಲು ತಿಳಿಸಿದ್ದಾರೆ.
ವಿಭೂತಿಯ ಶೃಂಗಾರ ಕೇವಲ ಬಾಹ್ಯ ಅಲಂಕಾರವಲ್ಲ, ಅದರ ಜೊತೆಗೆ ಅದಕ್ಕಿಂತ ಹೆಚ್ಚಾಗಿ ಅಂತರಂಗದಲ್ಲಿಯ ಸದ್ಗುಣಗಳನ್ನು ಅರಳಿಸಿ ಮಾನಸಿಕ ವಿಕಾಸಕ್ಕೆ ಕಾರಣವಾಗುತ್ತದೆ. ವಿಭೂತಿ ಸಾಧಕನ ಅಷ್ಟಾವರಣಗಳಲ್ಲಿ ಒಂದು.
ಮನಸ್ಸೆಂಬ ಸರೋವರದಲ್ಲಿ ಶುಭ್ರ ನೈದಿಲೆ ಸಾತ್ವಿಕ ಗುಣದ ಪ್ರತೀಕವಾಗಿದೆ. ಅದೇ ರೀತಿ ವಿಭೂತಿ ಸಾತ್ವಿಕ ಗುಣದ ಪ್ರತೀಕವಾಗಿದೆ.  ಪರಾಶಕ್ತಿ ರೂಪವಾದ ಸ್ತ್ರೀಗೆ ಅವಳ ಸನ್ನಡತೆ ಸದು ನುಡಿ, ಒಳ್ಳೆಯ ಗುಣಗಳೇ ಸೌಂದರ್ಯದ ಆಭರಣಗಳಾಗುತ್ತವೆ. ನೀಲ ಆಗಸದಲ್ಲಿಯ  ಚಂದ್ರನಂತೆ  ಶರಣನು ನೊಸಲಿಗೆ ವಿಭೂತಿ ಧರಿಸಿ ತಾತ್ವಿಕಜ್ಞಾನವನ್ನು ಕೊಡುವ ಅನುಭಾವಿಯಾಗುತ್ತಾನೆ.
*ಭಾವ:*
ವಿಭೂತಿ:
ಮೂರು ಬೆರಳುಗಳಿಂದ ಮೂರು ರೇಖೆಗಳು ಮೂಡುವಂತೆ ಧರಿಸುವ ತ್ರಿಪುಂಡ ಧಾರಣ ಕ್ರಮವೇ ಸರ್ವಶ್ರೇಷ್ಠವಾದದ್ದು. ಮನಸ್ಸಿನ ಕಾಮನೆಗಳನ್ನು ಗೆದ್ದು ಪರಿಶುದ್ಧವಾದುದನ್ನು ಅದು ಪ್ರತಿಬಿಂಬಿಸುತ್ತದೆ. 
ಮೊದಲ ಸಾಲು ಅಹಂ ಅನ್ನು ತೆಗೆದು ಹಾಕಿದರೆ ಎರಡನೆ ಸಾಲು ಅಜ್ಞಾನವನ್ನು ತೆಗೆದು ಹಾಕುತ್ತದೆ. ಮೂರನೆ ಸಾಲು ಕೆಟ್ಟ ಕಮ೯ಗಳನ್ನು ತೆಗೆದು ಹಾಕುವುದು.
ವಿಭೂತಿ  ಧರಿಸಲು ಹೆಣ್ಣು-ಗಂಡು ಎಂಬ ಲಿಂಗ ಬೇದವಿಲ್ಲ, ಜಾತಿ ಬೇದವಿಲ್ಲ, ವಗ೯ಬೇದವಿಲ್ಲ, ಸನ್ಯಾಸಿ-ಸಂಸಾರಿ, ಆಶ್ರಮ ಬೇದವಿಲ್ಲ.
 ನಿತ್ಯ ಎಲ್ಲ ಕಾಲದಲ್ಲಿಯೂ ಧರಿಸಬಹುದು.
ಸಾತ್ವಿಕ ಕಳೆ ವೃದ್ದಿಯಾಗುಲು (ಕಾಯವು ಮಂತ್ರ ಪಿಂಡವಾಗುತ್ತದೆ.)
ಪ್ರಸಾದಿಕರಿಸುವದು : ಹೊಸ ವಸ್ತುಗಳನ್ನು ಉಪಯೋಗಿಸುವ ಮೊದಲು.
ವಿಭೂತಿ ದಾರಣದ ಮುಖ ನೋಡಿದವರಿಗೆ  ಶುಭಕರ ಚಿನ್ಹೆ.
 ವಿಭೂತಿಯಲ್ಲಿ  ರೋಗನಿವಾರಣ ಶಕ್ತಿ ಇರುತ್ತದೆ .
 ಮುಖದಲ್ಲಿ ಚಿತ್ಕಳೆ, ಸಾತ್ವಿಕತೆ ವೃದ್ಧಿ ಯಾಗುವದು.
 ವಿಭೂತಿಧಾರಣದಿಂದ ಮನಸು ಶಾಂತಿಯ ಕಡೆ ವಾಲುತ್ತದೆ.
 ಇದು ಬಾಹ್ಯ ಶರೀರದ ರಕ್ಷಕ ಹಾಗೂ 
ಆಧ್ಯಾತ್ಮ ವಿಕಾಸಕ್ಕೆ ಅನುಕೂಲ.
ದುಗ೯ಣ ಸುಟ್ಟು , ಜ್ಞಾನನೇತ್ರ ಪಡೆಯಲು ಬೇಕು.
ಬರಿ ಪೂಜಾ ಸಾದನೆಯಾಗದೇ, ಭಕ್ತಿಗೆ ಮುಕ್ತಿಗೆ ಸಾದನ.
 ಮಲತ್ರಯ (ಕಾಮಿ೯ಕ, ಮಾಯ, ಅಣವ) ಗಳು ಕಳೆಯುತ್ತವೆ .
ಅರಿವು, ಆಚಾರ, ಅನುಭಾವ ಅಳವಡುವದು.
ಧರಿಸಿದವರ ಮೇಲೆ  ಗೌರವ ಭಾವನೆ ತಂದುಕೊಡುತ್ತದೆ.
ಅರಿಷಡ್ವರ್ಗಗಳನ್ನು ಸುಟ್ಟು ದೈವತ್ವವನ್ನು ತಂದುಕೊಡುತ್ತದೆ.
ಇದು ಬಹಿರಂಗದ ಆಚರಣೆಯಾದರೂ ಅಂತರಂಗದಲ್ಲಿ  ಅಗೋಚರವಾಗಿರುವ ದಿವ್ಯ ಪ್ರಭೆಗಳನ್ನು ಬಹಿರಂಗವಾಗಿಸುತ್ತದೆ.
 ಶಿವನ ಆರಾಧನಾ ಅಂಶವಾದ ವಿಭೂತಿ ಯಿಂದ ಆದ್ಯಾತ್ಮದ ಶಕ್ತಿ ಲಭಿಸುತ್ತದೆ. ಅನಾರೋಗ್ಯ, ನಕಾರಾತ್ಮಕ ಶಕ್ತಿಗಳಿಂದ  ರಕ್ಷಣೆ ನೀಡುತ್ತದೆ. ಆರೊಗ್ಯವನ್ನು ಗುಣಪಡಿಸುವ  ಶಕ್ತಿಯಿದೆ. 

ಗುರು ಬಸವಣ್ಣನವರು ವಿಭೂತಿ ಧರಿಸದವರ ಮುಖ ನೋಡಲಾಗದು ಎನ್ನುವರು.
#ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು
ಲಿಂಗ ದೇವರಿಲ್ಲದ ಠಾವು ನರವಿಂಧ್ಯ, ಹೋಗಲಾಗದು
ದೇವಭಕ್ತರಿಲ್ಲದೂರುಸಿನೆ ಹಾಳು,
 ಕೂಡಲ ಸಂಗಮದೇವಾ.

ಅದೇ ರೀತಿ ಅವಿರಲ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ವಿಭೂತಿಯ ಮಹತ್ವ  ಈ ರೀತಿ ತಿಳಿಸಿದ್ದಾರೆ.                                                      
#ಅಯ್ಯಾ ಎನಗೆ ವಿಭೂತಿಯೆ ಕುಲದೈವ;
ಅಯ್ಯಾ ಎನಗೆ ವಿಭೂತಿಯೆ ಮನೆದೈವ;
ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ;
ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ;
ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ;
ಅಯ್ಯಾ ಕೂಡಲಚೆನ್ನಸಂಗಮದೇವಾ
ಶ್ರೀಮಹಾಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ,
ಎನಗೆ ವಿಭೂತಿಯೆ ಸರ್ವಸಾಧನ.
-✍️ Dr Prema Pangi
#ಪ್ರೇಮಾ_ಪಾಂಗಿ,#ವಿಭೂತಿ
#ನೀರಿಂಗೆ_ನೈದಿಲೇ_ಶೃಂಗಾರ,
#ಅಡ್ಡ_ವಿಭೂತಿಯಿಲ್ಲದವರ_ಮುಖ_ಹೊಲ್ಲ
#ಅಯ್ಯಾ_ಎನಗೆ_ವಿಭೂತಿಯೆ_ಕುಲದೈವ;
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma