ವಚನ ದಾಸೋಹ
ವಚನ:
ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ,
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವುದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
- ಶರಣ ಒಕ್ಕಲಿಗ ಮುದ್ದಣ್ಣ
Translation :
To read the Vedas and scriptures, I am not a Brahmin;
To fight and kill and shine and flaunt, I am not a Kshatriya;
To indulge in trade, I am not a Vaishya;
Don't consider the faults of this humble sowing peasant son
Accept me,you all knowing Kaamabhima Jivadhanadodeya .
- Sharana Vokkaliga Muddanna
ಅರ್ಥ:
ವೇದಶಾಸ್ತ್ರ ಗಳನ್ನು ಓದುವುದಕ್ಕೆ ನಾನು ಬ್ರಾಹ್ಮಣನಲ್ಲ.
ಯುದ್ಧ ಮಾಡಿ ವೈರಿಗಳನ್ನು ಕೊಂದು ಮೆರೆವುದಕ್ಕೆ ನಾನು ಕ್ಷತ್ರಿಯನಲ್ಲ.
ವ್ಯಾಪಾರ ವ್ಯವಹಾರ ಮಾಡಿ ಧನ ಗಳಿಸುವುದಕ್ಕೆ ನಾನು ವೈಶ್ಯನಲ್ಲ. ಚಾತುರ್ವಣ್ರ್ಯಗಳಲ್ಲಿ ಮೊದಲ ಮೂರಕ್ಕೆ ನಾನು ಸೇರಿದವನಲ್ಲ. ನಾನು ಒಬ್ಬ ಉಳುವ ಒಕ್ಕಲಿಗ. ಈ ಒಕ್ಕಲಮಗನ ತಪ್ಪು ನೋಡದೆ ಒಪ್ಪುಗೊಳ್ಳಯ್ಯಾ ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸುವನು. ನಾನೊಬ್ಬ ರೈತನು, ಭೂಮಿ ಉಳುಮೆ ಮಾಡುವ ಕಾಯಕ ಮಾಡುವ ಒಕ್ಕಲಿಗನ ಮಗನು. ಈ ಒಕ್ಕಲಿಗ ಮಾಡಿದ ಯಾವುದೇ ತಪ್ಪು ನೋಡದೆ ಒಪ್ಪಿಕೋ, ನನ್ನನ್ನೂ ನೀನೇ ಬಲ್ಲೆ ಎಂದು ಸೂಚಿಸುತ್ತಾನೆ.
ಜಾತಿ ಪದ್ದತಿ:
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬುದು ವರ್ಣವ್ಯವಸ್ಥೆ. ಹುಟ್ಟಿನಿಂದ ಬರುವಂತದ್ದಲ್ಲ. ಜಾತಿ ಪದ್ಧತಿ ಬೇರೆ. ವರ್ಣ ವ್ಯವಸ್ಥೆ ಬೇರೆ ಬೇರೆ.
ವರ್ಣವ್ಯವಸ್ಥೆ:
ವರ್ಣದ ಮೂಲಧಾತು ವೃ-ವರಣೆ ಅಂದರೆ ಆರಿಸುವಿಕೆ. ಯಾವುದನ್ನು ಆರಿಸಿಕೊಳ್ಳುತ್ತೇವೋ ಅದು ವರ್ಣ. ಆರಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯವಿದೆ, ಅವಕಾಶವಿದೆ. ಹೀಗೆ ಆರಿಸಿಕೊಂಡು ಸಾಧನೆಮಾಡಿ ತನ್ನದಾಗಿಸಿಕೊಳ್ಳುವುದು ವರ್ಣ. ವೃತ್ತಿ ಆರಿಸಿಕೊಳ್ಳುವದರ ಮೂಲಕ ಶೂದ್ರ ಬ್ರಾಹ್ಮಣನಾಗಬಹುದು. ಬ್ರಾಹ್ಮಣ ಶೂದ್ರನಾಗಬಹುದು.
ಜಾತಿ:
ಜಾತಿ ಎಂದರೆ ಹುಟ್ಟಿನಿಂದ ಬರುವಂತಹದ್ದು ಎಂದು ಅರ್ಥ. ಇಲ್ಲಿ ಆರಿಸಿಕೊಳ್ಳಲು ಸಾಧ್ಯವಿಲ್ಲ. 'ಜನ್ಮನ ಜಾತಿ' ಅಂದರೆ ಹುಟ್ಟಿನಿಂದ ಜಾತಿ. ಆದರೆ ಹುಟ್ಟಿನಿಂದ ಬಂದದ್ದು ನಮ್ಮೆಲ್ಲರಿಗೂ ದೇವರಿಂದ ಪ್ರಕೃತಿಯಿಂದ ಪ್ರಾಕೃತವಾಗಿ ಬಂದಿರುವುದು, ಬಯಾಲಜಿ ಪ್ರಕಾರ ಮನುಷ್ಯ (Homo sapiens)ಎಂಬ ಜಾತಿ ಮಾತ್ರ. "ಮನುಷ್ಯ ವೆಂಬುದೇ ನಮ್ಮ ಜಾತಿ ". ಇದು ಸಹಜವಾಗಿ ಉಂಟಾಗಿರುವ ವಿಭಾಗ. We are Homo sapiens. It means 'Wise Human'. Homo is the Latin word for 'human' and sapiens is Latin word for 'wise' or 'astute'.
ಅಂದರೆ ವರ್ಣ ನಮ್ಮ ಆಸಕ್ತಿ, ಸಾಮರ್ಥ್ಯಕ್ಕನುಗುಣವಾಗಿ ನಾವು ಆರಿಸಿಕೊಂಡಿದ್ದು. ಆದರೆ ಜಾತಿಪದ್ಧತಿಯಲ್ಲಿ ಈ ಆಯ್ಕೆ ಇಲ್ಲ. ಬ್ರಾಹ್ಮಣನ ಮಗ ಬ್ರಾಹ್ಮಣ, ಕ್ಷತ್ರಿಯನ ಮಗ ಕ್ಷತ್ರಿಯ, ವೈಷ್ಯನ ಮಗ ವೈಶ್ಯ, ಶೂದ್ರನ ಮಗ ಶೂದ್ರ. ಯಾವ ಆಯ್ಕೆ ಸಾಧ್ಯ ವಿಲ್ಲ. ಅರ್ಹತೆ ಸಾಮರ್ಥ್ಯಕ್ಕೆ ಬೆಲೆ ಇಲ್ಲ. ಇದು ಕೆಲವರ ದುರಾಶೆಯಿಂದ ಆದ ಘೋರ ತಪ್ಪು. ಜಾತಿ ಪದ್ದತಿ ದುರಾಶೆಯ, ಅನ್ಯಾಯದ, ಸ್ವಾರ್ಥದ, ಕೀಳು ಮನಸ್ಥಿತಿಯ ಪರಮಾವಧಿ. ಒಂದು ಕಾಲದಲ್ಲಿ ಅತ್ಯಂತ ಉಚ್ಚಮಟ್ಟದಲ್ಲಿದ್ದ ಭಾರತೀಯ ಸಂಸ್ಕೃತಿಯ ಅಧಃಪತನ ಶುರುವಾದದ್ದು ಅಲ್ಲಿಂದ. ಇದು ಒಂದು ಪ್ರಕಾರ ಹೇಳುವದಾದರೆ 100% ರಿಸರ್ವೇಶನ್ ವ್ಯವಸ್ಥೆ. ಜ್ಞಾನ ವಿಲ್ಲದ ಬ್ರಾಹ್ಮಣರು, ಶೌರ್ಯವಿಲ್ಲದ ಕ್ಷತ್ರಿಯರು, ವ್ಯಾಪಾರ ಕೌಶಲ್ಯ ವಿಲ್ಲದ ವೈಶ್ಯರು, ದುಡಿಯಲಾರದ ಶೂದ್ರರು ತಯಾರಾಗಿ ಭಾರತೀಯ ಸಂಸ್ಕೃತಿಯ ಅಧಃಪತನ ವಾಯಿತು. ಅವರ ಸಾಮರ್ಥ್ಯ ಮತ್ತು ಇಚ್ಛೆಗೆ ಅನುಗುಣವಾಗಿ ವೃತ್ತಿ ಆರಿಸಿ ಕೊಳ್ಳಲಾಗಲಿಲ್ಲ. ಸಮಾಜ ಒಡೆದ ಮನೆ ಯಾಗಿ ಹಲವು ವರ್ಷ ಪರಕೀಯರ ದಾಸ್ಯದಲ್ಲಿ ಉಳಿಯಬೇಕಾಯಿತು. ಇದು ಸುಮಾರು 3000 ವರ್ಷಗಳ ಹಿಂದೆ ಮನುವಿನ ಕಾಲದಲ್ಲಿ ಆಗಿರಬಹುದು ಎಂದು ವಿದ್ವಾoಸರ ಅಭಿಪ್ರಾಯ. ವೇದ ಉಪನಿಷತ್ತು ಗಳ ಕಾಲದಲ್ಲಿ ವರ್ಣ ವ್ಯವಸ್ಥೆ ಇತ್ತು. ಜಾತಿಪದ್ದತಿ ಇರಲಿಲ್ಲ. ವೇದಗಳು ಮತ್ತು ಉಪನಿಷತ್ತಗಳು ಎಲ್ಲ ವರ್ಣಗಳಿಂದ ಬಂದ ವೃತ್ತಿ ಬ್ರಾಹ್ಮಣರು, ಮಹಿಳೆಯರು ಕೂಡಿಕೊಂಡು ರಚಿಸಿದ ಗ್ರಂಥಗಳು. ಜಾತಿ ಪದ್ದತಿಯಿಂದ ದಲಿತರು (ವಾಲ್ಮೀಕಿ, ವೇದವ್ಯಾಸ, ಮಾತಂಗಿ ಮುನಿ ಮುಂತಾದವರು) ಮತ್ತು ಮಹಿಳೆಯರು ( ಅಪಾಲಾ, ಲೋಪಾಮುದ್ರೆ, ಮೈತ್ರೇಯಿ, ಗಾರ್ಗಿ, ಉಭಯಭಾರತಿ ಮುಂತಾದವರು) ವಿದ್ಯೆಯಿಂದ ಅವರೇ ಬರೆದ ವೇದ ಉಪನಿಷತ್ತು ರಾಮಾಯಣ ಮಹಾಭಾರತ, ಗೀತಾ ಜ್ಞಾನ ಗ್ರಂಥಗಳಿಂದ ವಂಚಿತರಾದರು.
12 ನೆಯ ಶತಮಾನದಲ್ಲಿ ಗುರು ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲಾ ಲಿಂಗ ಜಾತಿ ವರ್ಗ ವರ್ಣದ ಕಾಯಕ ಜೀವಿಗಳನ್ನು ಒಗ್ಗೂಡಿಸಿ, ಅವರ ವಿಚಾರಗಳನ್ನು ವಚನ ರೂಪಕಗಳಾಗಿ ವ್ಯಕ್ತ ಪಡಿಸಲು ಒಂದು ವೇದಿಕೆ ಕಲ್ಪಿಸಿಕೊಟ್ಟರು. ವಿದ್ಯೆಯಿಂದ ವಂಚಿತರಾದ ಕಾಯಕಜೀವಿಗಳಿಗೆ ಕನ್ನಡದಲ್ಲಿಯೇ ಸರಳ ವಾಗಿ ಜ್ಞಾನ ಉಣಬಡಿಸಿ ಉನ್ನತವಿಚಾರದ ಶರಣರನ್ನಾಗಿ ಮಾಡಿದರು.
ಗುರು ಬಸವಣ್ಣನವರು ಜಾತಿಪದ್ಧತಿ ನಿರಾಕರಿಸಿ ಎಲ್ಲರನ್ನು ಒಳಗೊಳ್ಳುವ ಲಿಂಗಾಯತ ಧರ್ಮ ಸ್ಥಾಪಿಸಿದರು. ಮನುಷ್ಯಜಾತಿ ಒಂದೇ ಎಂದು ತಾತ್ವಿಕವಾಗಿ ತಿಳಿಸಿದರು.
ವಚನ.
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ,
ಜಲ-ಬಿಂದುವಿನ ವ್ಯವಹಾರವೊಂದೆ
ಆಶೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೇ,
ಏನನೋದಿ, ಏನಕೇಳಿ, ಏನುಫಲ ?
ಕುಲಜನೆಂಬುದಕ್ಕಾವುದು ದೃಷ್ಟ ?
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುಧ್ಬವಂ
ಆತ್ಮ ಜೀವ ಸಮಾಯಕ್ತಂ ವರ್ಣಾನಾಂ ಕಿಂ ಪ್ರಯೋಜನಂ ?
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೋಳಗೆ ?
ಇದು ಕಾರಣ ಕೂಡಲ ಸಂಗಮದೇವಾ ಲಿಂಗಸ್ಥಲವನರಿದವನೆ ಕುಲಜನು !
ಬಸವಾದಿ ಶರಣರು ತಿಳಿ ಹೇಳಿದ ಮಾತುಗಳು ಈಗಲೂ ಪ್ರಸ್ತುತ. ನಮ್ಮಲ್ಲಿಯೂ ವೃತ್ತಿ ಕಾಯಕಗಳೂ ಜಾತಿಯಾಗಿವೆ. ವೃತ್ತಿ ಜಂಗಮರು ಜಾತಿ ಜಂಗಮರಾಗಿ ಪಾದಪೂಜೆ ಪಲ್ಲಕ್ಕಿ ಸೇವೆ ಮಾಡಿಸಿ ಕೊಳ್ಳುವುದು ಇನ್ನೂ ನಡೆದಿದೆ. ಜಾತಿ ಜಂಗಮರು ಮತ್ತೇ ವೃತ್ತಿ ಜಂಗಮರಾಗಲಿ. ಒಳಜಾತಿಗಳು ಮತ್ತೇ ಕಾಯಕ ಮಾತ್ರ ಆಗಿ ಸಮ ಸಮತ್ವದಲ್ಲಿ ಇರಲಿ. ಮುಗ್ಧ ಭಕ್ತರು ಬಸವ ಪ್ರಜ್ಞೆಯಿಂದ ಎಚ್ಚೆತ್ತುಗೊಂಡು ಗೊಡ್ಡು ಸಂಪ್ರದಾಯಗಳನ್ನು ತಿರಸ್ಕರಿಸಿ ಗುರು ಬಸವಣ್ಣನವರ ಕನಸಿನ ಸಮ ಸಮಾಜ ರಚಿಸಲಿ.
-✍️ Dr Prema Pangi
#ಪ್ರೇಮಾ_ಪಾಂಗಿ,#ಒಕ್ಕಲಿಗ ಮುದ್ದಣ್ಣ, #ವೇದಶಾಸ್ತ್ರವನೋದುವುದಕ್ಕೆ_ಹಾರುವನಲ್ಲ
Comments
Post a Comment