ವಚನ ದಾಸೋಹ

ವಚನ:
#ಶಿವಭಕ್ತಿಯುಳ್ಳವಂಗೆ;
ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ;
ಮೋಹ ಬೇಡ, ಮದ ಬೇಡ, ಮತ್ಸರ ಬೇಡ.
ಶಿವಭಕ್ತಿಯುಳ್ಳವಂಗೆ;
ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು,
ಮೋಹ ಬೇಕು, ಮದ ಬೇಕು, ಮತ್ಸರ ಬೇಕು.
ಬೇಕೆಂಬುದಕ್ಕಾವ ಗುಣ ?
ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ,
ಲೋಭ ಬೇಕು ಪಾದೋದಕ ಪ್ರಸಾದದಲ್ಲಿ,
ಮೋಹ ಬೇಕು ಗುರುಲಿಂಗ ಜಂಗಮದಲ್ಲಿ,
ಮದ ಬೇಕು ಶಿವಚಾರದಿಂದ ಘನವಿಲ್ಲವೆಂದು,
ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ- ಇಂತೀ ಷಡ್ಗುಣವಿರಬೇಕು.
ಬೇಡವೆಂಬುದಕ್ಕಾವುದು ಗುಣ ?
ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ,
ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ,
ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.-
ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ / 1493
- ಅವಿರಳ ಜ್ಞಾನಿ ಚೆನ್ನಬಸವಣ್ಣನವರು
ಭಾವಾರ್ಥ:
*ಶಿವಭಕ್ತಿಯುಳ್ಳವಂಗೆ;
ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ;
ಮೋಹ ಬೇಡ, ಮದ ಬೇಡ, ಮತ್ಸರ ಬೇಡ.*
ಅರ್ಥ:
ಶಿವಭಕ್ತರಿಗೆ ಕಾಮ,ಕ್ರೋಧ,ಲೋಭ,ಮೋಹ, ಮದ, ಮತ್ಸರ ಇರಬಾರದು. ಅರಿಷಡ್ವರ್ಗಗಳು ನಮ್ಮೊಳಗೇ ಇದ್ದುಕೊಂಡು ನಮ್ಮನ್ನು ನಿಯಂತ್ರಿಸುವ ಭಾವಗಳಾಗಿವೆ. ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮಾತ್ಸರ್ಯ ಈ ಆರು ವೈರಿಗಳೇ ನಮ್ಮ ಪರಮವೈರಿಗಳು. ಇವು ಮನುಷ್ಯನ ಮನಶ್ಶಾಂತಿಯನ್ನು ಕದಡುವ ಭಾವನೆಗಳು.  ಇವು ಆರೂ ಅಂತಃಶತ್ರುಗಳು. ಶಿವ ಭಕ್ತ ನಾದವ ಈ ಆರನ್ನೂ ಜಯಿಸಬೇಕು. ಇವನ್ನು ಗೆದ್ದರೆ ಮನುಷ್ಯ ಲೋಕವನ್ನೇ ಗೆದ್ದಂತೆ; ಇವನ್ನು ಗೆಲ್ಲದೆ ಲೋಕವನ್ನೇ ಗೆದ್ದರೂ ಪರಾಜಿತನಾದಂತೆ.

*ಬೇಡವೆಂಬುದಕ್ಕಾವುದು ಗುಣ ?
ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ,
ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ,
ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.*
ಅರ್ಥ:
ಅರಿಷಡ್ವರ್ಗಗಳು ಯಾವುದರಲ್ಲಿ ಇರಬಾರದು? ಯಾವುದರಲ್ಲಿ ಇರದಿದ್ದರೆ ಅದು ಗುಣ ವಾಗುವುದು?
ಶಿವಭಕ್ತರಿಗೆ  
ಪರಸ್ತ್ರೀಯರಲ್ಲಿ  ಕಾಮ,   
ಗುರುವಿನಲ್ಲಿ ಕ್ರೋಧ,
ತನು ಮನ ಧನದಲ್ಲಿ  ಲೋಭ,   ಸಂಸಾರದಲ್ಲಿ ಮೋಹ,
ಇತರ ಶಿವಭಕ್ತರಲ್ಲಿ ಮದ, ಮತ್ತು ಸಕಲಪ್ರಾಣಿಗಳಲ್ಲಿ ಮತ್ಸರ ಇರಬಾರದು. ಇವುಗಳಲ್ಲಿ ಈ ಅರಿಷಡ್ವರ್ಗಗಳು ಇರದಿದ್ದರೆ ಆತನು ಸದ್ಗುಣಿ ಎಂದು ಕರೆಯಲ್ಪಡುತ್ತಾನೆ.

*ಬೇಕೆಂಬುದಕ್ಕಾವ ಗುಣ ?
ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ,
ಲೋಭ ಬೇಕು ಪಾದೋದಕ ಪ್ರಸಾದದಲ್ಲಿ,
ಮೋಹ ಬೇಕು ಗುರುಲಿಂಗ ಜಂಗಮದಲ್ಲಿ,
ಮದ ಬೇಕು ಶಿವಚಾರದಿಂದ ಘನವಿಲ್ಲವೆಂದು,
ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ-ಇಂತೀ ಷಡ್ಗುಣವಿರಬೇಕು.*
ಅರ್ಥ:
ಅರಿಷಡ್ವರ್ಗಗಳು ಎಲ್ಲಿ ಬೇಕು? ಎಲ್ಲಿ ಇದ್ದರೆ ಅವು ಸದ್ಗುಣಗಳಾಗುತ್ತವೆ?
ಲಿಂಗದಲ್ಲಿ ಕಾಮ,   
ಕರಣಂಗಳಲ್ಲಿ ಕ್ರೋಧ,
ಪಾದೋದಕ ಪ್ರಸಾದದಲ್ಲಿ ಲೋಭ,
ಗುರುಲಿಂಗ ಜಂಗಮದಲ್ಲಿ ಮೋಹ,
ಶಿವಚಾರಕ್ಕಿಂತ ಘನ ಮಹತ್ವದ್ದು ಯಾವುದೂ ಇಲ್ಲವೆಂಬ ಮದ,
ಹೊನ್ನು ಹೆಣ್ಣು ಮಣ್ಣು ಗಳಲ್ಲಿ ಮತ್ಸರ ಇದ್ದರೆ ಅವು ಸದ್ಗುಣ ಷಡ್ಗುಣಗಳಾಗುತ್ತವೆ.

*ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ*
ಅರ್ಥ:
ಇಂತೀ ಷಡ್ಗುಣವನ್ನು ಅರಿತು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ನಾಗುತ್ತಾನೆ.
ಭಾವ:
ನಮ್ಮ ಇಚ್ಛಾ ಶಕ್ತಿಯಿಂದ ಪಂಚೇಂದ್ರಿಯಗಳನ್ನು ನಮ್ಮ ವಶದಲ್ಲಿ ಇಟ್ಟುಕೊಂಡು ಅಂತರಂಗ ಶುದ್ದಿಗೊಳಿಸಿ ದೇಹವನ್ನೇ ದೇವಾಲಯ ಮಾಡಿಕೊಂಡು ಅರಿಷಡ್ವರ್ಗಗಳನ್ನು ಗೆಲ್ಲಬೇಕು. ನಾವು ಅವುಗಳನ್ನು ನಿಯಂತ್ರಣದಲ್ಲಿಡಬೇಕು ಹೊರತು ಅವು ನಮ್ಮನ್ನು ನಿಯಂತ್ರಿಸಬಾರದು. ಅವಿರಳ ಜ್ಞಾನಿ ಚೆನ್ನಬಸವಣ್ಣನವರು ಮೇಲಿನ ವಚನದಲ್ಲಿ ಅರಿಷಡ್ವರ್ಗಗಳನ್ನು ಲೌಕಿಕ ಲೋಕದಿಂದ ಪಾರಮಾರ್ಥಿಕ ಲೋಕದ ಕಡೆಗೆ , ವ್ಯಕ್ತಿಯಿಂದ ದೇವರ ಕಡೆ ತಿರುಗಿಸಿದರೆ ಅವು ವೈರಿಗಳಾಗದೆ ಸದ್ಗುಣಗಳೇ ಆಗುತ್ತವೆ ಎಂದಿದ್ದಾರೆ.
 ಮನಸ್ಸು ಸ್ವಚ್ಛ ನಿರಾಳವಾಗಿ ಇದ್ದರೆ ಪ್ರಸನ್ನವಾದ ಸ್ಥಿತಿ, ದುಃಖಾತೀತ ಆನಂದದ ಸ್ಥಿತಿ ಲಭ್ಯವಾಗುತ್ತದೆ. ಯಾವುದನ್ನು ಕೇಳಿದರೂ, ಯಾವುದನ್ನು ನೋಡಿದರೂ ಅದರ ಹಿಂದೆ ಇರುವ ಜಗತ್ತಿನ ಮೂಲಶಕ್ತಿಯ ಚಿಂತನೆ ಮನಸ್ಸಿಗೆ ಬರುತ್ತದೆ.  ಮನಸ್ಸಿನಲ್ಲಿ ದೇವರು ತುಂಬಿದ ಅಂದರೆ ಸರ್ವವೂ ಆನಂದಮಯ. ಇಂತಹ ಮನಸ್ಸಿಗೆ  ರಾಗ-ದ್ವೇಷ ರಹಿತವಾದ, ಸಮತೋಲನದ  ಸ್ಥಿತಿ ಲಭ್ಯವಾಗುವುದು. ಅರಿಷಡ್ವರ್ಗಗಳು ವ್ಯಕ್ತಿ ಮತ್ತು ವಿಷಯಗಳಲ್ಲಿ ಕೇಂದ್ರಿತವಾದರೆ ಬಂಧನ ವಾಗುತ್ತದೆ. ದೇವರಲ್ಲಿ ಕೇಂದ್ರಿತವಾದರೆ ನಾವು ಮುಕ್ತರಾಗುತ್ತೇವೆ .
 ಎಲ್ಲರ ಮತ್ತು ಎಲ್ಲವುದರಗಳ ಜೊತೆಗಿದ್ದು,  ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸಬೇಕು. ಆದರೆ ಅತಿ ವ್ಯಾಮೋಹಕ್ಕೆ ಒಳಗಾಗಬಾರದು.
- Detached attachment. ಇದೇ ಸಾಧನೆಯ, ಸಂತೋಷದ ಮೂಲ ಮಂತ್ರ.
- ✍️Dr Prema Pangi
#ಪ್ರೇಮಾ_ಪಾಂಗಿ,#ಚೆನ್ನಬಸವಣ್ಣನವರು
#ಶಿವಭಕ್ತಿಯುಳ್ಳವಂಗೆ_ಕಾಮ_ಬೇಡ

Picture post created by me. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma