ವಚನ ದಾಸೋಹ
*ವಚನ*:
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು,
ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ. / 765
- ಗುರು ಬಸವಣ್ಣನವರು
*ಅರ್ಥ*:
ಇದು ಗುರು ಬಸವಣ್ಣ ಅವರ ಭಕ್ತಸ್ಥಲ (ಭಕ್ತ ಜ್ಞಾನಿಸ್ಥಲ) ದ ವಚನ. ಇಲ್ಲಿ ಶಿವನ ಒಲುಮೆಗೆ ಶ್ರದ್ಧೆ ಮತ್ತು ನಿಷ್ಟೆ ಬೇಕೆಂಬುದನ್ನು ಸುಂದರವಾದ ಒಂದು ಕಾವ್ಯ ಪ್ರತಿಮೆಯ ರೂಪಕದ ಮೂಲಕ ಗುರು ಬಸವಣ್ಣನವರು ಪ್ರತಿಪಾದಿಸಿದ್ದಾರೆ.
*ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ*,
*ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ*.
ಮಹಾದೇವ ನಮ್ಮ ಭೂಮಿಯ ಮೇಲೆ ಶೆಟ್ಟಿಯಾಗಿ ಒಂದು ಅಂಗಡಿಯನ್ನಿಟ್ಟುಕೊಂಡು ಕುಳಿತಿದ್ದಾನೆ.ಹೀಗಾಗಿ ಈ ವ್ಯಾಪಾರ ಮಾಡುವ ಶೆಟ್ಟಿಯ ಹೆಸರು ಮಹಾದೇವ ಶೆಟ್ಟಿ. ಅವನದು ಸಾಮಾನ್ಯ ಅಂಗಡಿಯಲ್ಲ. 'ಹಿರಿದಪ್ಪ ಅಂಗಡಿ'. ಅಂದರೆ ಎಲ್ಲ ಸರಕುಗಳನ್ನೂ ಇಟ್ಟುಕೊಂಡಿರುವ ದೊಡ್ದ ಅಂಗಡಿ.
*ಒಮ್ಮನವಾದಡೆ ಒಡನೆ ನುಡಿವನು*,
*ಇಮ್ಮನವಾದಡೆ ನುಡಿಯನು*.
ಆ ಮಹಾದೇವಶೆಟ್ಟಿ ಚತುರನಾದ ವಣಿಕ. ಒಮ್ಮನವಾದರೆ ಮಾತ್ರ ಆತ ನುಡಿಯುತ್ತಾನೆ. ಇಮ್ಮನವಾದರೆ ನುಡಿಯುವುದಿಲ್ಲ. ಒಮ್ಮನ ಅಂದರೆ ಒಂದೇ ಮನಸ್ಸು ಅಂದರೆ ಏಕೈಕ ನಿಷ್ಠೆ ಮತ್ತು ಶ್ರದ್ಧೆ. ನಿಷ್ಠೆ ಒಡೆದು ಬೇರೆ ಬೇರೆ ಯಾದರೆ ಇಮ್ಮನವಾಗುತ್ತದೆ. ಆಗ ಆತ ನುಡಿಯುವುದಿಲ್ಲ.
*ಕಾಣಿಯ ಸೋಲ*, *ಅರ್ಧಗಾಣಿಯ ಗೆಲ್ಲ*,
*ಜಾಣ ನೋಡವ್ವಾ*, *ನಮ್ಮ ಕೂಡಲಸಂಗಮದೇವ*.
ಕಾಣಿ ಅಂದರೆ ಕಾಸು. ಅರ್ಧಕಾಸನ್ನೂ ಆತ ಕಡಿಮೆ ತೆಗೆದುಕೊಳ್ಳುವುದಿಲ್ಲ; ಅರ್ಧ ಕಾಸನ್ನು ಹೆಚ್ಚಾಗಿಯೂ ತೆಗೆದುಕೊಳ್ಳುವುದಿಲ್ಲ. ಒಂದು ತಟ್ಟೆಯಲ್ಲಿ ನಮ್ಮ ಭಕ್ತಿ ನಿಷ್ಠೆ ಯಾದರೆ ಇನ್ನೊಂದು ತಟ್ಟೆಯಲ್ಲಿ ದೇವರ ಅನುಗ್ರಹ. ಸರಕು ಕೊಡುವಾಗ ಅವನ ತಕ್ಕಡಿ ಯಾವಾಗಲೂ ಸಮತೋಲನದಲ್ಲಿಯೇ ಇರುತ್ತದೆ. ಮೇಲೆ ಕೆಳಗೆ ಇರುವದಿಲ್ಲ. ಈ ವಿಚಾರದಲ್ಲಿ ಆತ ಬಹಳ ಕಟ್ಟುನಿಟ್ಟು. ಆತನಿಗೆ ಬೇಕಾದದ್ದು ನಮ್ಮ ಶ್ರದ್ಧೆ, ನಿಷ್ಟೆ, ಪ್ರೇಮ ಮತ್ತು ಭಕ್ತಿ. ಇವೇ ಕಾಣಿಗಳು (ಕಾಸುಗಳು). ಬಾಹ್ಯ ಆಡಂಬರದ ಭಕ್ತಿಯನ್ನು ಹೆಚ್ಚಾಗಿ ಕೊಡುತ್ತೇನೆಂದರೂ ಆತ ತೆಗೆದುಕೊಳ್ಳುವುದಿಲ್ಲ. ಹೀಗೆ ತನಗೆ ಬೇಡವಾದುದನ್ನು ತೆಗೆದುಕೊಳ್ಳುವುದಿಲ್ಲ. ಬೇಕಾದುದನ್ನು ಬಿಡುವುದಿಲ್ಲ. ಈ ಅಂಗಡಿಯ ಸರಕು ಎಂದರೆ ಪರಮಾತ್ಮನ ಒಲುಮೆ ಅಥವಾ ಅನುಗ್ರಹ. ನಮ್ಮ ಭಕ್ತಿ ನಿಷ್ಠೆ ಎಂಬ ಕಾಸಿಗೆ ಬೆಲೆಕಟ್ಟಿ ಅನುಗ್ರಹವೆಂಬ ಸರಕು ಮಾರುವುದರಲ್ಲಿ ಆತ ಜಾಣ, ಆತನನು ವಂಚಿಸುವುದು ಸಾಧ್ಯವಿಲ್ಲ ಎಂದು ಗುರು ಬಸವಣ್ಣನವರು ಹೇಳುತ್ತಾರೆ.
ಭಕ್ತನಿಗೆ ಮಹಾದೇವನ ಅಂಗಡಿಯಲ್ಲಿ ಏನನ್ನು ಹೇಗೆ ಕೊಳ್ಳಬೇಕೆಂಬ ವಿವೇಕದ ಜೊತೆಗೆ ಅದನ್ನು ಪಡೆದೇ ತೀರುವೆನೆಂಬ ನಿಷ್ಠೆಯೂ ಬೇಕು. ಮಹಾದೇವಶೆಟ್ಟಿಯ ಈ ಅಂಗಡಿಯ ಚಿತ್ರ ಪರಿಭಾವಿಸಿದಷ್ಟೂ ಅರ್ಥವನ್ನು ಕೊಡುವ ಒಂದು ಸುಂದರ ಪ್ರತಿಮೆಯ ರೂಪಕ. ಹಿರಿದಪ್ಪ ಅಂಗಡಿ ಅಂದರೆ ಈ ವಿಶಾಲವಾದ ವಿಶ್ವ. ಈ ವಿಶ್ವವೇ ಜಗದಗಲ ಮಿಗೆಯಗಲ ಮಹಾದೇವನ ಹಿರಿದಿಪ್ಪ ಅಂಗಡಿ. ಶ್ರದ್ದೆ ನಿಷ್ಟೆ ಭಕ್ತಿಗಳೇ ನಾವು ಕೊಡುವ ಕಾಣೆ ಅಥವಾ ಕಾಸು. ಭಗವಂತ ಮತ್ತು ಜೀವ ಇವರ ಈ ಲೆಕ್ಕದಲ್ಲಿ ಭಕ್ತ ತೆರಬೇಕಾದುದು ಒಮ್ಮನದ ಸತ್ಪರವಾದ ಶ್ರದ್ಧೆ ಮತ್ತು ನಿಷ್ಠೆ, ಅದರಲ್ಲಿ ಕೊರತೆಯಾದರೆ ಭಗವಂತನ ಒಲುಮೆ ಸಾಧ್ಯವಿಲ್ಲ. ಆತನ ಅಂಗಡಿಯಿಂದ ನಾವು ಕೊಳ್ಳುವ ಅಮೂಲ್ಯವಾದ ಸರಕೆಂದರೆ ಆತನ ಕರುಣೆ ಮತ್ತು ಅನುಗ್ರಹ. ಆ ಕರುಣೆಯನ್ನು ವಸ್ತುಗಳ ಮೂಲಕ ಅನುಭವಿಸುತ್ತೇವೆ. ಅದಕ್ಕೆ ಕೊಡುವ ಹಣ ಒಂದೇ ಮನಸ್ಸಿನ ಶ್ರದ್ಧೆ. ಅದರಲ್ಲಿ ಕೊರತೆ ಆಗಬಾರದು. ಇಮ್ಮನವಾಗಿ ಹರಿದು ಹಂಚಿ ಹೋಗಬಾರದು. ಭಗವಂತನ ಅಂಗಡಿಯ ವಸ್ತುಗಳ ಭವ್ಯತೆಯನ್ನು ಈ ಭೂಮಿಯ ಮೇಲೆ ಅನುಭವಿಸುತ್ತಲೇ ಅದರ ಹಿಂದಿರುವ ಆತನ ಕರುಣೆ, ಅನುಗ್ರಹ ಆಶೀರ್ವಾದವನ್ನು ಪಡೆಯುವುದು ಈ ವ್ಯಾಪಾರದಲ್ಲಿ ನಾವು ಸಾಧಿಸಬೇಕಾದ ಕುಶಲತೆ. ಅದೇ ಜೀವನದ ಕೌಶಲ್ಯ. ಹೀಗೆ ಒಟ್ಟು ಜೀವನದ ದೃಷ್ಟಿಯನ್ನೇ ಜನ ಸಾಮಾನ್ಯರಿಗೆ ಅವರಿಗೆ ಅರ್ಥವಾಗುವಂತೆ ತೆರೆದಿಡುತ್ತಾ ಹೋಗುತ್ತಾರೆ ಗುರು ಬಸವಣ್ಣನವರು.🙏🙏🙏
- ✍️ Dr Prema Pangi
#ಪ್ರೇಮಾ_ಪಾಂಗಿ,#ಗುರು_ಬಸವಣ್ಣನವರು
#ಧರಣಿಯ_ಮೇಲೊಂದು_ಹಿರಿದಪ್ಪ_ಅಂಗಡಿ
Comments
Post a Comment