ವಚನ ದಾಸೋಹ
ವಚನ:
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ?
ಹೊಗಬಾರದು, ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.
- ವೀರ ವಿರಾಗಿಣಿ ಅಕ್ಕ ಮಹಾದೇವಿ
ಭಾವಾರ್ಥ:
ಕಲ್ಯಾಣಕ್ಕೆ ಮಹಾದೇವಿ ನಮಿಸಿ ಅದರೊಳಗೆ ಪ್ರವೇಶಿಸುವ ಕಾಲದಲ್ಲಿ ನುಡಿದ ವಚನವಿದು. ಈ ವಚನ ಕಲ್ಯಾಣ ಶರಣರ ಆಧ್ಯಾತ್ಮ ಸಾಧನೆಯ ಎತ್ತರವನ್ನು ಮನವರಿಕೆ ಮಾಡಿಕೊಡುವುದು.
ಕಲ್ಯಾಣವೆಂಬ ಪುಣ್ಯ ನೆಲಕ್ಕೆ ಎಲ್ಲರೂ ಹೋಗಲು ಸಾಧ್ಯವಿಲ್ಲ. ಯಾರು ಕಲ್ಯಾಣಕ್ಕೆ ಹೋಗಬೇಕು? ಆಸೆ ಅಮಿಶ ಅಳಿದವರು, ಒಳಗೂ ಹೊರಗೂ ಅಂತರಂಗ ಮತ್ತು ಬಹಿರಂಗ ಶುದ್ಧವಿದ್ದವರು, ತನ್ನನ್ನು ತಾನು ಅರಿವಿನಿಂದ ಅರಿತವರು, ತಾನು ಶಿವಾಂಶ ಎಂದು ಅರಿತವರು, ನೀ ನಾನು ಎಂಬುದು ಹರಿದವರು ಮಾತ್ರ ಕಲ್ಯಾಣಕ್ಕೆ ಹೋಗಬಹುದು. ಒಳಗಿನ ಅರಿವು ಮತ್ತು ಹೊರಗಿನ ಆಚಾರ ನುಡಿಗಳಲ್ಲಿ ಸಮನ್ವಯತೆ ಇದ್ದವರು, ನಾನೆಂಬ ಅಹಂಕಾರ, ನಾನು ನೀನೆಂಬ ಭಿನ್ನಭಾವ ಅಳಿದ ಶರಣರು ಕಲ್ಯಾಣಕ್ಕೆ ಹೋಗಬಹುದು. ತನಗೆ ಚೆನ್ನಮಲ್ಲಿಕಾರ್ಜುನ ಒಲಿದ್ದದ್ದರಿಂದಲೇ ಇದೆಲ್ಲ ಸಾಧ್ಯವಾಗಿ ತನಗೆ ಕಲ್ಯಾಣಕ್ಕೆ ಬರಲು ಸಾಧ್ಯವಾಯಿತು ಎಂದು ಮಹಾದೇವಿ ನುಡಿಯುತ್ತಾರೆ.
ಮರಳಿ ಕಲ್ಯಾಣಕ್ಕೆ ಎನ್ನುವ ಭಕ್ತರು, ಮತ್ತೇ ಕಲ್ಯಾಣ ಕಟ್ಟುವ ಕನಸು ಕಾಣುವವರು ಅಕ್ಕ ಮಹಾದೇವಿ ಹೇಳುವ ಶರಣಗುಣಗಳನ್ನು ಅಳವಡಿಸಿಕೊಳ್ಳುವದು ಅವಶ್ಯ. ಕಲ್ಯಾಣ ವೆಂದರೆ ಅದು ಬರೀ ಊರಾಗಿರಲಿಲ್ಲ. ಅದು ಶ್ರೇಷ್ಠ ಶಿವಶರಣರ ಬೀಡಾಗಿತ್ತು. ಅನುಭವ ಮಂಟಪವೆಂದರೆ ಬರೀ ಕಟ್ಟಡವಾಗಿರಲಿಲ್ಲ. ಶರಣರು ವಿಚಾರ ವಿನಯಮ ಮಾಡಿ ಶರಣಧರ್ಮ ಕಟ್ಟಿದ ಬೆಳಸಿದ ಸ್ಥಳವಾಗಿತ್ತು. ಸಾಮಾನ್ಯರನ್ನು ಶರಣರನ್ನಾಗಿ ಮಾಡಿದ ತಾಣ ವಾಗಿತ್ತು. ನಮ್ಮ ಮಠಗಳು ಸಹ ಭವಿಗಳನ್ನು ಶರಣರನ್ನಾಗಿ ಮಾಡುವ ತಾಣಗಳಾಗಬೇಕು. ಹಾಗೆ ಆದ ನಿಜ ಶರಣರು ಮಾತ್ರ ಕಲ್ಯಾಣಕ್ಕೆ ಹೋಗಬೇಕು ಎಂದು ಅಕ್ಕಮಹಾದೇವಿಯವರ ಅಭಿಪ್ರಾಯ.
-✍️Dr Prema Pangi
#ಪ್ರೇಮಾ_ಪಾಂಗಿ,#ಅಕ್ಕಮಹಾದೇವಿ,
#ಕಲ್ಯಾಣವೆಂಬುದಿನ್ನಾರಿಗೆ_ಹೊಗಬಹುದು?
Comments
Post a Comment