ವಚನ ದಾಸೋಹ
*ವಚನ* :
ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ ?
ತಂದು ಸುವರ್ಣವ ಕಡಿದೊರೆದಡೆ ಬೆಂದು ಕಳಂಕ ಹಿಡಿಯಿತ್ತೆ ?
ಸಂದುಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೇ ಹಾನಿ.
ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕೊಂದಡೆಯೂ ಶರಣೆಂಬುದ ಮಾಣೆ.
- *ವೀರ ವಿರಾಗಿಣಿ ಅಕ್ಕ ಮಹಾದೇವಿ*
ಅರ್ಥ:
*ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ* ?
ಶ್ರೀಗಂಧವನ್ನು ತಂದು ಕತ್ತರಿಸಿ, ತೇದರೂ ಅದು ತನಗೆ ನೋವಾಗಿದೆ ಎಂದು ತನ್ನ ಸುಗಂಧ ಬೀರುವ ಗುಣವನ್ನು ಬಿಡುವದಿಲ್ಲ.
*ತಂದು ಸುವರ್ಣವ ಕಡಿದೊರೆದಡೆ ಬೆಂದು ಕಳಂಕ ಹಿಡಿಯಿತ್ತೆ*?
ಬಂಗಾರವನ್ನು ತಂದು ಕತ್ತರಿಸಿ ಸುಟ್ಟರೂ ಅದು ದೋಷ ಹೊಂದುವುದಿಲ್ಲ. ಕಳಂಕ ಹೊಂದುವುದಿಲ್ಲ.
*ಸಂದುಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ*?
ಕಬ್ಬನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಗಾಣದಲ್ಲಿ ಹಾಕಿ ಅರೆದು ಕಾವಿನಲ್ಲಿ ಕುದಿಸಿ ಪಾಕ ತಯಾರಿಸಿ ಸಕ್ಕರೆ ಮಾಡಿದರೂ ಅದು ತಾನು ನೊಂದೆ ನೆಂದು ತನ್ನ ಸಿಹಿ ಗುಣ ಬಿಡುವುದೇ? ಕಬ್ಬು ಇಷ್ಟೆಲ್ಲಾ ಕಷ್ಟ ಪಟ್ಟರೂ ತನ್ನ ಸಿಹಿಯಾದ ಗುಣ ಬಿಡುವದಿಲ್ಲ.
*ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೇ ಹಾನಿ.
ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕೊಂದಡೆಯೂ ಶರಣೆಂಬುದ ಮಾಣೆ*.
ಹಿಂದೆ ಮಾಡಿದ ಹೀನ ಕಾರ್ಯಗಳನ್ನು ಎನ್ನ ಮುಂದೆ ತಂದಿಟ್ಟರೆ ನಿಮಗೇ ಹಾನಿ. ನನ್ನ ಸರ್ವಸ್ಸು ನಿಮಗೇ ಅರ್ಪಿತವಾಗಿರುವಾಗ ನನ್ನ ಪಾಪ ಪುಣ್ಯ ಎಲ್ಲವೂ ನಿಮ್ಮವೇ.
ದೇವಾ ಎನ್ನ ತಂದೆ ಎನ್ನನ್ನು, ನೀನು ಕೊಂದು ಹಾಕಿದರೂ ನಿನ್ನಲ್ಲಿ ಶರಣಾಗದೆ ಬಿಡೆನು. ಯಾವುದೇ ಕಷ್ಟ ನಷ್ಟವಾದರೂ ಎಂಥ ಸಂದಿಗ್ಧ ಪ್ರಸಂಗ ಬಂದರೂ ನಾನು ನಿಮಗೆ ಶರಣಾಗುವದನ್ನು ಬಿಡುವದಿಲ್ಲ.
ಇದು ಮಹೇಶ್ವರ ಸ್ಥಲದ ವಚನ. ಸಾಧಕ ಕೈಕೊಂಡ ಮಾರ್ಗದಲ್ಲಿ ಅಪಾರವಾದ ಶ್ರದ್ಧೆಯಿಂದ ಮುನ್ನಡೆಯುತ್ತಾ, ಸ್ವಸ್ವರೂಪ ದರ್ಶನದ ಪ್ರಯತ್ನದಲ್ಲಿರುವ ಭಕ್ತರಿಗೆ ಅಗತ್ಯವಾಗಿದ್ದು ಅದನ್ನು ಹಾಗೆಯೇ ಬೆಳೆಸಿಕೊಂಡು ಹೋಗಬೇಕಾದ 'ಏಕೈಕ ನಿಷ್ಠೆ'.
ಶ್ರದ್ದೆ ಮತ್ತು ನಿಷ್ಠೆ ಎರಡು ಸಾಧಕ ಜೀವನದ ಎರಡು ಆಧಾರಸ್ತಂಭಗಳು, ಮಹೇಶ್ವರಸ್ಥಲದಲ್ಲಿ ಉದ್ದಕ್ಕೂ ಕಾಣುವ ನಿಲುವು ಈ ನಿಷ್ಠೆ. ಭಕ್ತಸ್ಥಲದಲ್ಲಿ ಶ್ರದ್ಧಾ ಭಕ್ತಿ ಇದ್ದರೆ ,ಇಲ್ಲಿನ ಭಕ್ತಿಯನ್ನು 'ನಿಷ್ಟಾಭಕ್ತಿ' ಎಂದು ಕರೆಯಲಾಗಿದೆ. ಸಾಧನೆಯ ಎಲ್ಲಾ ಹಂತಗಳಲ್ಲಿ ಈ ನಿಷ್ಟಾಭಕ್ತಿ ಅಚಲವಾಗಿ ಅಳವಡಬೇಕು. ವಿಚಾರ ಆಚಾರಗಳಿಂದ ಗಟ್ಟಿಗೊಂಡ ಅಚಲವಾದ ನಿಷ್ಠೆ ಇಲ್ಲಿ ಬೆಳೆಯುತ್ತದೆ.
ನಮ್ಮ ಕೆಲಸ ಮಾಡುವಾಗ ಕಠಿಣ ಶ್ರಮ ಪಡಬೇಕು. ಕಾಯಕದಲ್ಲಿ ಎದುರಾಗುವ ಕಷ್ಟ ನಷ್ಟಗಳಿಗೆ ಕೊರಗಿಕೊಂಡು ಹಿಡಿದ ಕೆಲಸ ಬಿಡಬಾರದು. ಎಷ್ಟೇ ಕಷ್ಟ ಬಂದರೂ ನಮ್ಮ ಒಳ್ಳೆಯ ಗುಣಗಳನ್ನು ಬಿಡಬಾರದು. ಅಕ್ಕ ಮಹಾದೇವಿ ಹೇಳುತ್ತಾರೆ ನಾನು ಚಂದನದಂತ ಕಂಪಿನ, ಸಕ್ಕರೆಯಂತೆ ಸಿಹಿಯಾದ, ಚಿನ್ನದಂತೆ ಕಲಂಕರಹಿತ ಗುಣಗಳನ್ನು ಎಷ್ಟೇ ಕಷ್ಟಗಳು ಎದುರಾದರೂ ಬಿಡುವದಿಲ್ಲ. ಮೃತ್ಯು ಎದುರಾದರೂ ನಿನ್ನಲ್ಲಿ (ದೇವರಲ್ಲಿ) ನಂಬಿಕೆ ಮತ್ತು ನಿಷ್ಟೆ ಕಳೆದು ಕೊಳ್ಳುವದಿಲ್ಲ. ಶರಣತ್ವ ಬಿಡುವುದಿಲ್ಲ.
ನೈತಿಕ ನಿಷ್ಠೆ ಅಚಲವಾಗಿರಬೇಕು ಎಂದು ಲಿಂಗಾಯತ ಗುರು ಬಸವಣ್ಣನವರ ಪ್ರತಿಪಾದನೆ.
ಭಕ್ತಿಯ ಮಾಡುವಲ್ಲಿ ಹಿಡಿದದ್ದನ್ನು, ಬಿಡೆನೆಂಬ ಛಲಬೇಕು. ನಿಷ್ಠೆಯುಳ್ಳ ಭಕ್ತ ಆದದ್ದಾಗಲಿ ಎಂದು ಉದಾಸೀನ ಮಾಡುವಾತನಲ್ಲ. ಬಂದದ್ದನ್ನು ಧೈರ್ಯದಿಂದ ಎದರಿಸುವಾತ. ಒಮ್ಮೆ ಆ ಮಾರ್ಗವನ್ನು ಅವಲಂಬಿಸಿದ ಮೇಲೆ ಏನೇ ಕಷ್ಟ ನಿಷ್ಟುರಗಳು ಬಂದರೂ ಅಂಜದೆ ಅಳುಕದೆ ಆ ಮಾರ್ಗದಲ್ಲಿ ನಡೆಯಬೇಕು.
Message:
Noble men and women do not drift away from their good nature even when they are facing bad difficult times.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಕ್ಕ_ಮಹಾದೇವಿ
#ಚಂದನವ_ಕಡಿದು_ಕೊರೆದು_ತೇದಡೆ
Comments
Post a Comment