ವಚನ ದಾಸೋಹ - ಎನ್ನ ಮಾಯದ ಮದವ ಮುರಿಯಯ್ಯ
ವಚನ ದಾಸೋಹ -
ಎನ್ನ ಮಾಯದ ಮದವ ಮುರಿಯಯ್ಯ
#ಎನ್ನ ಮಾಯದ ಮದವ ಮುರಿಯಯ್ಯ
ಎನ್ನ ಕಾಯದ ಕಳವಳವ ಕೆಡಿಸಯ್ಯ
ಎನ್ನ ಜೀವದ ಜಂಜಡವ ಬಿಡಿಸಯ್ಯ
ಎನ್ನ ದೇವ ಮಲ್ಲಿಕಾರ್ಜುನಯ್ಯ,
ಎನ್ನ ಸುತ್ತಿದ ಮಾಯಾಪ್ರಪಂಚವ ಬಿಡಿಸಾ ನಿಮ್ಮ ಧರ್ಮ!
- ವೀರ ವಿರಾಗಿಣಿ ಅಕ್ಕ ಮಹಾದೇವಿ
ಅರ್ಥ:
ಅಕ್ಕ ಮಹಾದೇವಿ ಈ ವಚನದಲ್ಲಿ ಇಷ್ಟದೇವ ಮಲ್ಲಿಕಾರ್ಜುನನಲ್ಲಿ ತನ್ನನ್ನು ಮಾಯೆಯ ಪ್ರಪಂಚದಿಂದ ಬಿಡಿಸು ಎಂದು ಕೇಳಿ ಕೊಂಡಿದ್ದಾಳೆ. ಲೋಕಮಾರ್ಗಕ್ಕೆ ಇದೇ ಸಹಜವಾದುದು. ಇದಕ್ಕೆ ಅತೀತವಾಗಿ ವಿರಾಗಿಣಿಯಾಗಿ ನಡೆಯುವ ಮಾರ್ಗ ನಾನು ಆಯ್ದುಕೊಂಡಿದ್ದೇನೆ. ನಾನು ಬೇಡವೆಂದರೂ ಈ ಮಾಯಾ ಪ್ರಪಂಚ ನನ್ನನ್ನು ಸುತ್ತುತ್ತಿದೆ. ಈ ಮಾಯೆಯ ದೌರ್ಬಲ್ಯವನ್ನು ಕಳಚಿ ಸಾಧನೆಯ ಮೆಟ್ಟಿಲು ಮೇಲೇರುತ್ತಿರುವ ನನ್ನನ್ನು ಮಾಯೆಯ ಮದದಿಂದ ರಕ್ಷಿಸು. ನನ್ನ ಸುತ್ತಿದ ಮಾಯಾಪ್ರಪಂಚದಿಂದ ನನ್ನನು ಬಿಡಿಸುವುದು ನಿಮ್ಮ ಕರ್ತವ್ಯ. ಸಾಧನಾ ಪಥದಲ್ಲಿರುವ ಭಕ್ತರನ್ನು ಮಾಯೆಯಿಂದ ರಕ್ಷಿಸುವುದು ಸಹ ನಿಮ್ಮ ಕರ್ತವ್ಯ (ಧರ್ಮ) ಎಂದು ಇಷ್ಟದೇವ ಚೆನ್ನ ಮಲ್ಲಿಕಾರ್ಜುನ ನಲ್ಲಿ ನೆನಪಿಸುತ್ತಾರೆ.
ಅನುಭವ ಮಂಟಪದಲ್ಲಿ ಮಾಯೆ ಎಂದರೆ ಏನು ಎಂಬ ವಿಷಯ ಹಲವು ಬಾರಿ ಚರ್ಚೆ ಆಗಿದೆ. ಹಲವು ಶರಣರು ವಚನಗಳ ಮೂಲಕ ತಮ್ಮ ತಮ್ಮ ವಿಚಾರಗಳನ್ನು ತಿಳಿಸಿದ್ದಾರೆ.
ಮಾಯೆಯ ವಿಷಯದ ಚರ್ಚೆಯಲ್ಲಿ ಗುರು ಬಸವಣ್ಣನವರು ಈ ರೀತಿ ಹೇಳುತ್ತಾರೆ.
#ಜನಿತಕ್ಕೆ ತಾಯಾಗೀ ಹೆತ್ತಳು ಮಾಯೇ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೇ
ಆಲ ಪರಿಯಲ್ಲಿ ಕಾಡಿತ್ತು ಮಾಯೇ
ಮಾಯೆಯ ಕಳೆವಡೆ ಎನ್ನಳವಲ್ಲಾ ನೀವೇ ಬಲ್ಲಿರಿ ಕೂಡಲಸಂಗಮದೇವಾ
ಮನುಷ್ಯನು ಹಲವು ಬಗೆಯ ಮಾಯೆಯ ಬಂಧನಕ್ಕೆ ಸಿಲುಕಿದ್ದಾನೆ. ಮನುಷ್ಯನ ಹುಟ್ಟಿಗೆ ಕಾರಣವಾದ ತಾಯಿಯ ಮಮತೆ ಮತ್ತು ಪ್ರೀತಿಯು, ಮುದ್ದಿನ ಮಗಳ ಮೇಲಿನ ಪ್ರೀತಿ, ಮನುಷ್ಯನ ಬದುಕಿನ ಅವಿಭಾಜ್ಯ ಅಗತ್ಯವಾದ ಮಡದಿಯ ಪ್ರೇಮ ಇವೂ ಕೂಡ ಮಾಯೆಯಲ್ಲವೇ ಎಂದು ಪ್ರಶ್ನೆ ಮಾಡಿಕೊಳ್ಳುವ ಬಸವಣ್ಣನವರು ಹಲವು ಪರಿಯಲ್ಲಿ ಕಾಡುವ ಮಾಯೆಯನ್ನು ಕಳೆದು ಕೊಳ್ಳುವ ವಿಧಾನ ನೀವೇ ಬಲ್ಲಿರಿ ಕೂಡಲಸಂಗಮದೇವಾ ಎನ್ನುತ್ತಾರೆ.
ಅಕ್ಕಮಹಾದೇವಿ ತಮ್ಮ ಇನ್ನೊಂದು ವಚನದಲ್ಲಿ ಪುರುಷನಿಗೆ ಸ್ತ್ರೀ ಮಾಯೆಯಾದರೆ , ಸ್ತ್ರೀ ಗೆ ಪುರುಷನೂ ಮಾಯೆಯೇ ಎಂದು ಇಬ್ಬರೂ ಅಧ್ಯಾತ್ಮಿಕ ಸಾಧನೆಯಲ್ಲಿ ವಿಷಯದಲ್ಲಿಯೂ ಸರಿ ಸಮಾನರು ಎನ್ನುತ್ತಾರೆ.
#ಪುರುಷರ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು ನೋಡಾ!
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ!
ಲೋಕವೆಂಬ ಮಾಯೆಗೆ
ಶರಣಚಾರಿತ್ರ ಮರುಳಾಗಿ ತೋರುವುದು ನೋಡಾ!
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ
Translation :
Maya haunts the ego of a man
In the form of a woman.
Maya haunts the ego of a woman
In the form of a man.
To this world of Maya
a Sharana’s character seems like madness.
For a Sharana who is blessed by Chennamallikarjuna,
there is no Maya, no madness, no ego.
ಈ ವಚನದಲ್ಲಿ ಶರಣೆ ಅಕ್ಕಮಹಾದೇವಿ ನುಡಿದಿರುವಂತೆ, ಸ್ತ್ರೀ, ಪುರುಷರಿಬ್ಬರಿಗೂ ಮಾಯೆ ಆಕರ್ಷಣೆಗಳುಂಟಾಗುವುದು ಸಹಜ. ಇವುಗಳೆಲ್ಲವನ್ನು ನಿರಾಕರಿಸಿ ಚೆನ್ನ ಮಲ್ಲಿಕಾರ್ಜನನೆಂಬ ದೇವರ ಮೇಲೆ ಭಕ್ತಿ, ನಿಷ್ಠೆ ಮತ್ತು ಸಮರ್ಪಣೆ ಬೆಳಸಿಕೊಂಡ ಶರಣರಿಗೆ ಯಾವುದೇ ಮೋಹಪಾಶಗಳಿರುವುದಿಲ್ಲ ಎಂದು ವೀರವಿರಾಗಿಣಿ ಅಕ್ಕ ನುಡಿದಿದ್ದಾರೆ.
ಸಾಧನಾ ಮಾರ್ಗದಲ್ಲಿ 'ಮಾಯೆಯೆಂದರೆ ಹೆಣ್ಣು', ಅವಳು ಅಧ್ಯಾತ್ಮಿಕ ಸಾಧನೆಯಲ್ಲಿ ಅಡಚಣಿ ಎಂದು ಹೆಣ್ಣನ್ನು ಆತ್ಮವಿದ್ಯೆಯಿಂದ ದೂರವಿರಿಸಲಾಗಿತ್ತು. ಮಾಯೆ ಹೆಣ್ಣು ಎಂಬ ಕಳಂಕ ಬೇಧಭಾವ ಬೇಡ. ಮಾಯೆ ಎನ್ನುವದು ಗಂಡೂ ಅಲ್ಲ. ಹೆಣ್ಣೂ ಅಲ್ಲ. ಸಾಧನಾ ಮಾರ್ಗದಲ್ಲಿ ಹೆಣ್ಣು ಗಂಡು ಇಬ್ಬರೂ ಸಮಾನರು. ಹೀಗೆ ಮಾಯದ ಪಾಶಕ್ಕೆ ಒಳಗಾದ ಲೋಕದ ಜನರಿಗೆ ಶರಣಚಾರಿತ್ರ ಮರುಳಾಗಿ ತೋರುವುದು. ಚೆನ್ನಮಲ್ಲಿಕಾರ್ಜುನ( ಶಿವ) ಒಲಿದ ಶರಣರಿಗೆ ಮಾಯೆಯಿಲ್ಲ.
ಚರ್ಚೆಯ ಕೊನೆಯಲ್ಲಿ ಅನುಭವ ಮಂಟಪದ ಅಧ್ಯಕ್ಷ ಅಲ್ಲಮ ಪ್ರಭುಗಳು
ಮಾಯೆ ಏನೆಂಬುದನ್ನು ತಿಳಿಸಿದ ಪರಿ:
#ಹೊನ್ನು ಮಾಯೆಯೆಂಬರು,
ಹೆಣ್ಣು ಮಾಯೆಯೆಂಬರು,
ಮಣ್ಣು ಮಾಯೆಯೆಂಬರು.
ಹೊನ್ನು ಮಾಯೆಯಲ್ಲ,
ಹೆಣ್ಣು ಮಾಯೆಯಲ್ಲ,
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೆ ಮಾಯೆ
ಕಾಣಾ ಗುಹೇಶ್ವರಾ !
- ಅಲ್ಲಮ ಪ್ರಭುದೇವರು
ಹೊನ್ನು, ಹೆಣ್ಣು, ಮಣ್ಣುಗಳು ಮಾಯೆಯಲ್ಲ. ಮಾಯೆ ಎಂಬುದು ಮನಸ್ಸಿನಲ್ಲಿ ಮೂಡುವ ನಮ್ಮ ಆಸೆಗಳು. ಹೆಣ್ಣನ್ನು ಕಂಡು ಮನಸ್ಸಿನಲ್ಲಿ ಆಸೆ ಮೂಡಿದರೆ, ಅದಕ್ಕೆ ಆ ಹೆಣ್ಣೇ ಕಾರಣ ಅಂದು ದೂಷಿಸುವದು ತಪ್ಪು. ಹೆಣ್ಣು ಮಾಯೆ ಎಂದು ಅದರಿಂದ ತಪ್ಪಿಸಿಕೊಳ್ಳಲು ಅನೇಕ ಕಟ್ಟುಪಾಡು, ವಿಧಿ ವಿಧಾನಗಳು, ತಪಸ್ಸು, ಕಠಿಣ ಶಿಕ್ಷೆಗಳನ್ನು ವಿಧಿಸಲಾಗಿದ್ದ ವು. ಆಸೆ ಹುಟ್ಟಿದ್ದು ನಮ್ಮ ಮನಸ್ಸಿನಲ್ಲಿ ಎಂಬ ಅರಿವು ಬಂದರೆ ಹೆಣ್ಣನ್ನು ಕುರಿತ ಧೋರಣೆ ಬದಲಾಗುವುದು. ಇದೇ ಮಾತು ಹೊನ್ನಿಗೂ ಸರಿಯೇ. ದುಡ್ಡು ಬೇಕು ಅನ್ನುವುದು ಮನಸ್ಸಿನ ಆಸೆ. ದುಡ್ಡೇನೂ ಹಾಗೆ ತನ್ನನ್ನು ಕೂಡಿಟ್ಟುಕೋ ಎನ್ನುವುದಿಲ್ಲ. ಈ ಭೂಮಿ ಯಾರದೂ ಅಲ್ಲ, ಅದು ಎಲ್ಲರದೂ ಹೌದು. ಆದರೆ ಭೂಮಿ ನನ್ನದೇ ಆಗಬೇಕೆಂಬ ಆಸೆ ಮಾತ್ರ ನಮ್ಮ ಮನಸ್ಸಿನೊಳಗೇ ಹುಟ್ಟಿದ್ದು. ಹೀಗೆ ಆಸೆ ವಸ್ತುಗಳಲ್ಲಿ ಇಲ್ಲ, ಬಯಸುವ ಮನಸ್ಸಿನಲ್ಲಿ ಇದೆ. ಇವೆಲ್ಲ ಬಯಸುವುದು ಸಹಜ ಎಂದು ತಿಳಿಯುವ ನಮ್ಮ ಸಾಮಾಜಿಕ ಅಂತಸ್ತು ಧೋರಣೆಗಳಲ್ಲಿ ಇದೆ. ನಮ್ಮ ಮನಸ್ಸಿನ ಆಸೆಗಳ ಮೂಲವನ್ನು ನಮ್ಮಿಂದ ಹೊರಗೆ ಹುಡುಕುತ್ತ, ನಮ್ಮ ತಪ್ಪು ಹೊರಗಿನವರ ಮೇಲೆ ಹಾಕುವುದು ದೊಡ್ಡ ತಪ್ಪು. ಆ ಹೊರಗಿನ ಸಂಗತಿಗಳನ್ನು ದೂಷಿಸುವದೇ ಒಂದು ದೊಡ್ಡ ಮಾಯೆ. ಹೀಗೆ ನಮ್ಮ ಮನದ ಮುಂದಣ ಆಸೆಯೇ ಮಾಯೆ ಎಂಬುದು ಅಲ್ಲಮ ಪ್ರಭುಗಳು ತಿಳಿ ಹೇಳಿದರು. ಮಾಯೆ ಎಂಬುದು ನಮ್ಮ ಮನದಲ್ಲಿಯೇ ಇರುವ ಮೋಹದ ಪಾಶ. ಹೊನ್ನು, ಹೆಣ್ಣು, ಮಣ್ಣು ಮಾಯೆ ಎನ್ನುವದಕ್ಕಿಂತ ನಿಜವಾದ ಮಾಯೆಯಾದ ಮನದಲ್ಲಿ ಸುಳಿಯುವ ಆಸೆಗಳನ್ನು ತೆಗೆದುಹಾಕಬೇಕು.
ಮಾಯೆಯ ಅರ್ಥ ಭ್ರಮೆ, ಭ್ರಾಂತಿ, ಅಜ್ಞಾನ, ತಮೋಗುಣ, ಅತಿಯಾದ ಪ್ರೀತಿ, ವ್ಯಾಮೋಹ. ಈ ಸೃಷ್ಠಿ ರಚನೆ ಯಾಗುವುದೇ ಮಾಯೆಯ ಹೊದಿಕೆಯಲ್ಲಿ ಎಂದು ಅರಿತು ಮಾಯೆಯು ಪ್ರಕೃತಿಯ (ಪಾರ್ವತಿ) ಒಂದು ರೂಪವಾಗಿ ವೇದಾಂತದಲ್ಲಿ ವರ್ಣಿಸಲ್ಪಟ್ಟಿದೆ. ಮಾಯೆಯದು ಸೂಕ್ಷ್ಮಾತಿ ಸೂಕ್ಷ್ಮ ರೂಪ. ಒಬ್ಬ ಮನುಷ್ಯ ಹೆಮ್ಮೆ ಪಡುವ ಅಷ್ಟಮದಗಳಾದ ಧನಮದ, ಕುಲಮದ, ವಿದ್ಯೆಮದ, ರೂಪಮದ, ಯೌವ್ವನಮದ, ಬಲಮದ, ಪರಿವಾರಮದ ಹಾಗೂ ಆಧಿಕಾರ ಮದ ಇವೆಲ್ಲಾ ಮಾಯೆಯ ವಿವಿಧ ರೂಪಗಳೇ.
ನಿಜಗುಣ ಶಿವಯೋಗಿಗಳು ಮಾಯೆಯ ಬಂಧನ ದಿಂದ ಬಿಡಿಸಿ ಕೊಳ್ಳುವ ಮಾರ್ಗ ತಿಳಿಸುತ್ತಾ "ಅಹಂ" ಅಳಿಯುವದು , ನಾ ನೀ ಎಂಬ ಉಭವ ಅಳಿಯುವದು ಎನ್ನುತ್ತಾರೆ..
#ಆನುಳ್ಳನ್ನಕ್ಕ ನೀನುಂಟಲೆ ಮಾಯೆ ಆನಿಲ್ಲದಿರ್ದಡೆ ನೀನಿಲ್ಲ. ಆನು ನೀನೆಂಬುಭಯವಳಿಯಲು ಆನಂದ ನಿಜಗುಣಯೋಗ.
ಎನ್ನುತ್ತಾರೆ ನಿಜಗುಣ ಶಿವಯೋಗಿಗಳು. ನಾನಿರುವುದಕ್ಕೆನೆ ಮಾಯೆ ನೀನು ಇರುವೆ ನಾನೆ ಇಲ್ಲದಿದ್ದ ಸ್ಥಳದಲ್ಲಿ ನೀನು ಇಲ್ಲ ಅಂದರೆ ಮಾನವನಲ್ಲಿ ನಾನು ನನ್ನದು ಇರುವವರೆಗೆ ಈ ಮಾಯೆಯು ಕಾಡುತ್ತಲೆ ಇರುತ್ತದೆ. ನಾನು ನನ್ನದು ಎಂಬ ಅಹಂ ಅಳಿದಾಗ ಅಲ್ಲಿ ಮಾಯೆ ಉಳಿಯುವದಿಲ್ಲ. ಅದೆ ನಾ ನೀ ಎಂಬ ಉಭಯ ಅಳಿಯಲು ಮಾಯೆ ಅಡಗಿ ಸತ್ ಚಿತ್ ಆನಂದ ಮಾತ್ರ ಉಳಿಯುವುದು.
ಶರಣಧರ್ಮ ಸಿದ್ಧಾಂತದಲ್ಲಿ ಮಾಯೆ ಎಂದರೆ ದೇವರು ಜೀವರು ಬೇರೆ ಬೇರೆ ಎಂಬ ಭ್ರಮೆ. ಈ ಭ್ರಮೆ ಅಣವಮಲಗಳ ಅಜ್ಞಾನದಿಂದ ಆದದ್ದು. ಅಜ್ಞಾನದಿಂದ ಆದ ಮಾಯೆಯ ಪಾಶಯಿಂದ ಹೊರಬಂದು ತನ್ನ ನಿಜ ಸ್ವರೂಪ ಅರಿತು ಪರಶಿವನೆಂಬ ಪರಮಾತ್ಮನಲ್ಲಿ ಐಕ್ಯನಾಗುವುದೇ ಶಿವಾದ್ವೈತ.
-✍️ Dr Prema Pangi
#ಎನ್ನ_ಮಾಯದ_ಮದವ_ಮುರಿಯಯ್ಯ
#ಪುರುಷರ_ಮುಂದೆ_ಮಾಯೆ
#ಹೊನ್ನು_ಮಾಯೆಯೆಂಬರು
Comments
Post a Comment