ವಚನ ದಾಸೋಹ
#ವಚನ:
#ಕಾಲೆ ಕಂಭಗಳಾದವೆನ್ನ,
ದೇಹವೆ ದೇಗುಲವಾಯಿತ್ತಯ್ಯಾ,
ಎನ್ನ ನಾಲಗೆಯೆ ಗಂಟೆ,
ಶಿರ ಸುವರ್ಣದ ಕಲಶ; ಇದೇನಯ್ಯಾ!
ಸರವ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ. ಗುಹೇಶ್ವರಾ, ನಿಮ್ಮ ಪ್ರಾಣಲಿಂಗಪ್ರತಿಷ್ಠೆ
ಪಲ್ಲಟವಾಗದಂತಿದ್ದನಯ್ಯಾ!
- ವ್ಯೋಮಕಾಯ ಅಲ್ಲಮ ಪ್ರಭುಗಳು
*ಅರ್ಥ:*
ಪ್ರಾಣಲಿಂಗಾನುಸಂಧಾನದ ಅಂತಿಮ ನಿಲವನ್ನು ಅಲ್ಲಮ ಪ್ರಭುಗಳು ಇಲ್ಲಿ ನಿರೂಪಿಸಿದ್ದಾರೆ. ಸುನಾದ, ಬಿಂದು, ಪ್ರಣವಗಳಿಂದ ನಾದಾನುಸಂಧಾನ, ಬಿಂದಾನುಸಂಧಾನ, ಮಂತ್ರಾನುಸಂಧಾನವಾಗಿ ; ಈ ಮೂರರ ಅನುಸಂಧಾನಗಳ ಕಡೆಯಲ್ಲಿ ಶಿವಯೋಗ ಅಳವಡುತ್ತದೆ.
*ಕಾಲೆ ಕಂಭಗಳಾದವೆನ್ನ,
ದೇಹವೆ ದೇಗುಲವಾಯಿತ್ತಯ್ಯಾ,
ಎನ್ನ ನಾಲಗೆಯೆ ಗಂಟೆ,
ಶಿರ ಸುವರ್ಣದ ಕಲಶ; ಇದೇನಯ್ಯಾ! *
ಲೌಕಿಕ ಭವಿಗಳ ದೃಷ್ಟಿಯಲ್ಲಿ ದೇಹವು ಅದರಲ್ಲಿರುವ ಇಂದ್ರಿಯಗಳಿಂದ ವಿವಿಧ ಅನುಭವಗಳನ್ನು ಪಡೆಯುವ ಭೋಗಸಾಧನ. ಅವನಿಗೆ ಜೀವನ
ಸುಖ ದುಃಖ, ಮೋಹ ದ್ವೇಷ, ಕಾಮ ಕ್ರೋಧ ಮದ ಮತ್ಸರಗಳ ಕೂಟ. ಆದರೆ ಶರಣನ ದೃಷ್ಟಿಯೇ ಬೇರೆ. ಅವನಿಗೆ ದೇಹವೆಂದರೆ ದೇಗುಲ. ಆ ದೇಹವನ್ನು ಹೊತ್ತ ಕಾಲುಗಳು ಕಂಭಗಳು, ಓಂಕಾರ ನಾದ ಉಲಿವ ನಾಲಗೆಯೇ ಘಂಟೆ, ಜ್ಞಾನದ ಕಳೆಯ ಹೊಂದಿದ ಶಿರವೆ ಆ ದೇಗುಲದ ಬಂಗಾರದ ಕಲಶ. ಇದು ಅಂತರಂಗದಲ್ಲಿ ಪ್ರಾಣಲಿಂಗ ಪ್ರತಿಷ್ಠಾನ ಮಾಡಿಕೊಂಡ ಪ್ರಾಣಲಿಂಗಿಯ ದೃಷ್ಟಿ!
*ಸರವ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ. ಗುಹೇಶ್ವರಾ, ನಿಮ್ಮ ಪ್ರಾಣಲಿಂಗಪ್ರತಿಷ್ಠೆ
ಪಲ್ಲಟವಾಗದಂತಿದ್ದನಯ್ಯಾ!*
'ಸರ' ಎಂದರೆ ಸ್ವರ, ಓಂಕಾರ ಪ್ರಣವ ವೆಂಬದು ಪವಿತ್ರ ನಾದ. ಆ ನಾದವು ದೇಹದೇಗುಲದ ಹೃದಯಮಂದಿರದಲ್ಲಿ ತುಂಬಿಕೊಂಡಿದೆ. ಅಲ್ಲಿಯೇ ಸಿಂಹಾಸನ, ಆ ಸಿಂಹಾಸನದಲ್ಲಿ ಪ್ರಜ್ಜ್ವಲಿಸುವ ಒಂದು ಜ್ಯೋತಿ. ಅದುವೇ ಪ್ರಾಣಲಿಂಗ.
ಆ ಪ್ರಾಣಲಿಂಗದ ಭಕ್ತನೆ ಪ್ರಾಣಲಿಂಗಿ. ಅವನ ಅಂತರಂಗದಲ್ಲೆಲ್ಲ ಪ್ರಾಣಲಿಂಗದ ಭಾವ ಪ್ರತಿಷ್ಠಿತವಾಗಿದೆ. ಎಂದೆಂದಿಗೂ ಪಲ್ಲಟವಾಗದಷ್ಟು ಸ್ಥಿರಗೊಂಡಿದೆ. ಇದು ಮರಳಿಪಲ್ಲಟವಾಗದ ಪ್ರಾಣಲಿಂಗ ಪ್ರತಿಷ್ಠಾನ. ಪ್ರಾಣಲಿಂಗಿಯ ಬದುಕೆಲ್ಲಾ ಆ ಲಿಂಗದ ನೆನಹಿನಿಂದ ಬೆಳಕುಗೊಂಡಿದೆ.
*ಭಾವ:*
ಇದು ಪ್ರಾಣಲಿಂಗಿಯ ಪ್ರಾಣಲಿಂಗಿ ಸ್ಥಲದ ವಚನ.
ತದೇಕ ಚಿತ್ತದಿಂದ ಅನಿಮಿಷದೃಷ್ಟಿಯಿಂದ ಇಷ್ಟಲಿಂಗ ದೃಷ್ಟಿಸಲು ಅ ದೃಷ್ಟಿಯ ದೃಶ್ಯ ಅಂತರಂಗದಲ್ಲಿ ತುಂಬಿ ಪ್ರಾಣಲಿಂಗ ವಾಗುತ್ತದೆ. ಪ್ರಾಣಲಿಂಗಾನುಭಾವಿಯ ದೃಷ್ಟಿಯಲ್ಲಿ ದೇಹವು ಒಂದು ದೇಗುಲ. ಕಾಲುಗಳೇ ಕಂಭಗಳು. ನುಡಿವ ನಾಲಗೆಯೇ ಘಂಟೆ. ಜ್ಞಾನದ ತಾಣವಾದ ಶಿರವೇ ಸುವರ್ಣದ ಕಲಶ. ಇದು ಅದ್ಭುತವಾದ ಕಲ್ಪನೆ! ಈ ಎಂದೆಂದೂ ಅಗಲದ ಪ್ರಾಣಲಿಂಗವನ್ನು ಪರಿಭಾವಿಸಬೇಕು. ಅನನ್ಯ ಭಾವದಿಂದ ಅನುಸಂಧಾನ ಮಾಡಿದರೆ ಸತ್ಯದ ದರ್ಶನವಾಗುತ್ತದೆ. ಆ ಬೆಳಗಿನಲ್ಲಿ ಒಂದಾಗಬೇಕು. ಅದುವೇ "ಪ್ರಾಣ ಲಿಂಗಾನುಭವ ".ಪ್ರಾಣಲಿಂಗಕ್ಕೆ ಓಂಕಾರನಾದವೇ ಭಾವಸಿಂಹಾಸನ, ಆ ಭಾವಸಿಂಹಾಸನದ ಮೇಲೆ ತೇಜೋಮಯವಾದ 'ಪ್ರಾಣಲಿಂಗ' . ಈ ವಿಶೇಷ ದೇಗುಲವೇ ಆದ ಅನುಭಾವಿಯಲ್ಲಿ ಪ್ರಾಣಲಿಂಗಪ್ರಜ್ಞೆ ಸದೈವ ಜಾಗೃತ. ಅದರಲ್ಲಿ ವ್ಯತ್ಯಾಸವಾಗುವ ಪ್ರಮೇಯವೇ ಇಲ್ಲ.
ಸೃಷ್ಟಿರಚನೆಯಲ್ಲಿ ಆದಿಯೊಳಗಿರುವ ಪ್ರಣವ "ಓಂ" ಕಾರ ನಾದ. ಅದುವೇ ಮಹಾಲಿಂಗ. ಆ ಮಹಾಲಿಂಗ ತೇಜವು ಶಿವಯೋಗಸಾಧನೆಯಲ್ಲಿ ಹೃದಯದಲ್ಲಿ ಅಭಿವ್ಯಕ್ತವಾದಾಗ ಪ್ರಾಣಲಿಂಗ ವೆನಿಸುತ್ತದೆ. ಆದ್ದರಿಂದ ಪ್ರಾಣಲಿಂಗವೂ ಕೂಡ ಪ್ರಣವವೇ. ವಾಯುವನ್ನು ನಿರೋಧಿಸಿ ದೃಷ್ಟಿಯನ್ನು ಅನಿಮಿಷಗೊಳಿಸಿ ಹೃದಯಕಮಲದಲ್ಲಿ ಲಿಂಗಸಾಧನೆಗೆ ತೊಡಗಿದ ಸಾಧಕನ ಪ್ರಶಾಂತ ಮನಸ್ಸಿನಲ್ಲಿ ಆದಿ ಪ್ರಣವದ ಅವಿರ್ಭಾವ (ಭಾವಾನುಸಂಧಾನ) ವಾಗುತ್ತದೆ. ಆಗ ಸಾಧಕ ಪ್ರಾಣಲಿಂಗಿ ಸ್ಥಲದಲ್ಲಿ ತನ್ಮಯ ಸ್ಥಿತಿ ಮುಟ್ಟುತ್ತಾನೆ. ಆಗ ನಿರ್ವಿಷಯ ಆನಂದ ಆ ಹೃದಯವನ್ನು ತುಂಬಿಕೊಳ್ಳುತ್ತದೆ. ಪ್ರಾಣಲಿಂಗದ ಧ್ಯಾನದಲ್ಲಿ ನಿಮಗ್ನನಾದ ಶರಣನು ಆ ಅಲೌಕಿಕ ಆನಂದ ರಸವನ್ನು ಆಸ್ವಾದಿಸುತ್ತಾನೆ ಅದರಲ್ಲಿಯೇ ಮೈಮರೆಯುತ್ತಾನೆ.
- ✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು,
#ಕಾಲೆ_ಕಂಭಗಳಾದವೆನ್ನ
Comments
Post a Comment