ವಚನ ದಾಸೋಹ
ವಚನ:
#ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ
ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ
ಪರಕೆ ಪರವಾದ ಪರಾಪರವು ತಾನೆ ನೋಡಾ,
ಆ ಪರಾಪರವು ತಾನೆ
ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ,
ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ.
ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ.
ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು.
ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ.
ಆ ಚಿದದ್ವಯವಾದ ಬಸವಣ್ಣನೇ
ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ,
ಎನ್ನ ಸರ್ವಾಂಗಲಿಂಗವು ಕಾಣಾ.
ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು
ಬಸವಣ್ಣನಾದ ಕಾರಣ,
`ಬಸವಲಿಂಗ ಬಸವಲಿಂಗ ಬಸವಲಿಂಗಾ' ಯೆಂದು ಜಪಿಸಿ
ಭವಾರ್ಣವ ದಾಂಟಿದೆನು ಕಾಣಾ.
ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ
ಶರಣನಾದೆನು ಕಾಣಾ.
ಬಸವನೇ ಲಿಂಗವಾದ ಕಾರಣ ನಾನಂಗವಾದೆನು.
ಕರ್ತೃವೇ ಬಸವಣ್ಣ, ಭೃತ್ಯನೇ ನಾನು.
ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ.
ಇದು ಕಾರಣ,
ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ,
ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ.
ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ
ನಾನು ಶರಣನಾದೆನು ಕಾಣಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
- ತೋಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು/ 478
ಲಿಂಗಾಯತ ಬಸವ ಪರಂಪರೆಯಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳದು ಅತ್ಯಂತ ಮಹತ್ವದ ಭೂಮಿಕೆ.
ಅಲ್ಲಮಪ್ರಭು ಸಂಪ್ರದಾಯದ ವಿರಕ್ತ ಶೂನ್ಯಪೀಠವನ್ನು ಆರೋಹಣ ಮಾಡಿ, ಬಸವಾದಿ ಶರಣರು ರಚಿಸಿದ ಬಿಡಿ ವಚನ ತಾಳೆಗರಿಗಳನ್ನು ಸಂಗ್ರಹಿಸಿ ಅವುಗಳ ಸಾರ ಅರಿದು ಅರ್ಥ ಮಾಡಿಕೊಂಡು, 12 ಶತಮಾನದ ನಂತರ ಪುರಾಣ ಕಥೆಗಳಂತೆ ರೂಪಿತರಾದ ಶರಣರನ್ನು ವಿಮೋಚನೆ ಗೊಳಿಸಿ ಕ್ರಾಂತಿ ಪುರುಷರನ್ನಾಗಿ ಪರಿಚಯಿಸಿದ ಕೀರ್ತಿ ಇವರದು. ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪದ ಪರಿಕಲ್ಪನೆ ಹದಿನೈದನೆ ಶತಮಾನದವರೆಗೂ ಪುನಃ ಆಕಾರ ಪಡೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಹದಿನೈದನೆಯ ಶತಮಾನದ ಮಧ್ಯದಲ್ಲಿ ತೋಂಟದ ಸಿದ್ಧಲಿಂಗೇಶ್ವರ ಯತಿಗಳು ಅದನ್ನು ಮತ್ತೆ ಅಸ್ತಿತ್ವಕ್ಕೆ ತಂದು ಪುನರುಜ್ಜೀವನಗೊಳಿಸಿದರು. ಮತ್ತೇ 701 ಚರ ಜಂಗಮರ ಪಡೆ ನಿರ್ಮಿಸಿ ದೇಶ ಸಂಚಾರ ಮಾಡಿ ಬಸವ ಶರಣಧರ್ಮ ಪ್ರಚಾರದ ಕಾರ್ಯ ಬಳಿಕೆಗೆ ತಂದರು. ಇವರ ಶಿಷ್ಯರಾದ ಘನಲಿಂಗಿದೇವರು ಇವರನ್ನು “ತೋಂಟದ ಅಲ್ಲಮ” "ದ್ವಿತೀಯ ಅಲ್ಲಮ" ಎಂದು ಕರೆದಿದ್ದಾರೆ.
ಶರಣರ ವಚನಗಳನ್ನು ವಿಂಗಡಿಸಿ ಅವಿರಲ ಜ್ಞಾನಿ ಚೆನ್ನಬಸವಣ್ಣ ನವರು ರೂಪಿಸಿದ ಷಟ್ ಸ್ಥಲ ಸಿದ್ಧಾಂತಗಳನ್ನು ವ್ಯಾಪಕವಾಗಿ ಪ್ರಸಾರಮಾಡಿ, ಹನ್ನೇರಡನೆಯ ಶತಮಾನದ ಅನುಭವ ಮಂಟಪದ ಸಂಸ್ಕೃತಿಯನ್ನು ಪುನರ್ ಸ್ಥಾಪಿಸಿದ ಮಹಾಪುರುಷರು ತೋಂಟದ ಸಿದ್ಧಲಿಂಗ ಶಿವಯೋಗಿಗಳು.
ಇವರು ಕಾಯಕದಿಂದ ಧರ್ಮ ಪ್ರಸಾರಕರು, ಗುರುಗಳು ಹಾಗೂ ಚರ ಜಂಗಮರು.
ಸಿದ್ಧಲಿಂಗ ಶಿವಯೋಗಿಗಳು 701 ವಚನಗಳನ್ನು ರಚಿಸಿದ್ದಾರೆ.'ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ' ಎಂಬುದು ಆವರ ಅಂಕಿತನಾಮ.
ಸಿದ್ಧಲಿಂಗ ಶಿವಯೋಗಿಗಳು ಬಾಳಿದುದು 15-16ನೇಯ ಶತಮಾನದಲ್ಲಿ
ಚಾಮರಾಜನಗರ ಜಿಲ್ಲೆಯ ಹರದನ ಹಳ್ಳಿ ಇವರ ಜನ್ಮಸ್ಥಳ. ತಂದೆ ಮಲ್ಲಿಕಾರ್ಜುನ, ತಾಯಿ ಜ್ಞಾನಾಂಬೆ. ಮನೆತನದ ವೃತ್ತಿ ವ್ಯಾಪಾರ. ಗೋಸಲ ಚೆನ್ನಬಸವೇಶ್ವರ ದೀಕ್ಷಾಗುರು, ಕಗ್ಗೆರೆಯ ತೋಟದಲ್ಲಿ 12 ವರ್ಷ ಅನುಷ್ಠಾನಗೈದ ಕಾರಣ 'ತೋಂಟದ ಸಿದ್ಧಲಿಂಗ' ಎಂದು ಹೆಸರು ಬಂದಿತು.
ಸಿದ್ಧಗಂಗೆ ಮೊದಲಾದ ಕ್ಷೇತ್ರದರ್ಶನ ಪಡೆದು, ಕೊನೆಗೆ ನಾಗಿಣೀನದಿ ತೀರದ ಎಡೆಯೂರಿಗೆ ಬಂದು, ಬೋಳ ಬಸವರಿಗೆ ನಿರಂಜನ ಪಟ್ಟಾಧಿಕಾರವನ್ನು ವಹಸಿಕೊಟ್ಟು, ದಾನಿವಾಸ ಗ್ರಾಮದ ಚೆನ್ನವೀರಪ್ಪ ಒಡೆಯರು ಕಟ್ಟಿಸಿಕೊಟ್ಟ ಕಲ್ಲು ಮಠದಲ್ಲಿ ತಾವು ನಿರ್ವಿಕಲ್ಪ ಸಮಾಧಿಯನ್ನು ಹೊಂದಿದರು ಎಂದು ಹೇಳಲಾಗುತ್ತದೆ.
12ನೆಯ ಶತಮಾನದ ಶರಣರಿಂದ ಹಿಡಿದು 21 ನೆಯ ಶತಮಾನದ ವರೆಗಿನ ಎಲ್ಲ ಶರಣರು ಗುರು ಬಸವಣ್ಣನವರನ್ನು ಗುರುವಾಗಿ , ಲಿಂಗವಾಗಿ, ಸಾಕ್ಷಾತ್ ದೇವರಾಗಿ ಕಂಡವರೇ ! ಆದರೆ ತೋಂಟದ ಸಿದ್ದಲಿಂಗೇಶ್ವರರು ಮಾಡಿದ ಬಸವಣ್ಣನವರ ವರ್ಣನೆಯ ಪರಿಯೇ ಅದ್ಭುತ ಅಮೋಘ!!
ಶ್ರೀ ತೋಂಟದ ಸಿದ್ಧಲಿಂಗೇಶ್ವರರು ಶಿವಾಯೋಗದ ತನ್ಮತೆಯ ಸ್ಥಿತಿಯನ್ನು, ಈ ವರ್ಣನಾತೀತ ಸ್ಥಿತಿಯನ್ನು , ಪರಮಾನಂದ ಸ್ಥಿತಿಯನ್ನು ' ಒಳಗೂ ಬಯಲು ಹೊರಗೂ ಬಯಲು. ಭಾವ ಬಯಲು' ಈ ಸ್ಥಿತಿಯನ್ನೇ "ಗುರು ಬಸವಣ್ಣ" ಎಂದು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಅವರ ವಚನದಿಂದ ಅವರು ಗುರು ಬಸವಣ್ಣನವರನ್ನು ಕಂಡ ಬಗೆ ಆರ್ಥ ಮಾಡಿಕೊಳ್ಳೋಣ.
#ವಚನ ನಿರ್ವಚನ:
*ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ
ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ
ಪರಕೆ ಪರವಾದ ಪರಾಪರವು ತಾನೆ ನೋಡಾ,*
ಸಪ್ತಕಮಲದ ಮಧ್ಯದಲ್ಲಿ ಶಿವಯೋಗದ ಸಪ್ತಚಕ್ರಗಳಲ್ಲಿ ಅಂದರೆ ಮೂಲಾಧಾರ, ಸ್ವಾದಿಷ್ಟಾನ, ನಾಭಿ, ಅನಾಹುತ, ವಿಶುದ್ಧ, ಆಜ್ಞಾ, ಸಹಸ್ರಾರ ಚಕ್ರಗಳ ಮಧ್ಯದ ಕಮಲಗಳಲ್ಲಿ ಉತ್ಪತ್ತಿಯಾದ ಪರಮ ಜ್ಯೋತಿ ಸ್ವರೂಪವೇ ಬಸವಣ್ಣ.
ತತ್ವ, ಬ್ರಹ್ಮಾಂಡ ಹುಟ್ಟುವುದಿಕ್ಕಿಂತ ಮೊದಲಿನ ಆದಿಯಾದ ಘನಕ್ಕೆ ಘನವಾದ ಪರಾವಸ್ತು ಬಸವಣ್ಣ.
ಪರಕೆ ಪರವಾದ ಪರಾಪರವೇ ಬಸವಣ್ಣ.
ಪರಮನಿಗೆ ಪರಮನಾದ ಪಾರಾಪರ.
*ಆ ಪರಾಪರವು ತಾನೆ
ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ,
ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ.*
ಆ ಪರಾಪರ ಶಕ್ತಿಯೇ ಬಸವಣ್ಣ, ಬಸವಣ್ಣ ನೇ ಆ ತತ್ವ. ಈ ಬ್ರಹ್ಮಾಂಡದ ಒಳಗೂ
ಹೊರಗೂ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ,
ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಯಾವುದೇ ಕಳಂಕವಿಲ್ಲದವನು ಬಸವಣ್ಣ.
*ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ.*
ಶಿವಯೋಗದಲ್ಲಿಯ ಚಕ್ರಗಳ ನಡುವೆ ಕಮಲಗಳ ಎಸುಳಗಳು, ಅವುಗಳ ಒಳಗೆ ಅಕ್ಷರಗಳು ಮತ್ತು ಲಿಂಗಗಳು ಇವೆ. ಸಪ್ತ ಚಕ್ರಗಳ ಒಳಗಿನ ಕಮಲದ ಎಸುಳುಗಳ ಒಳಗಿನ ಅಕ್ಷರಾತ್ಮಕ ಲಿಂಗವೇ ಬಸವಣ್ಣ.
*ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು.
ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ.*
ನವಚಕ್ರ ಕಮಲಗಳ ದಳ, ಕುಳ, ವರ್ಣ, ಆದಿದೇವತೆಗಳ ತೋರಿಕೆ ಇವು ಯಾವುದೇ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣ ಬಸವಣ್ಣನಿಗೆ ನಮೋ ನಮೋ ಎಂದಿದ್ದಾರೆ. ಆ ನಿರಾಮಯ ವಸ್ತುವೇ ಸಂಗನಬಸವಣ್ಣ. ನವ ಚಕ್ರಗಳೆಂದರೆ ಮೂಲಾಧಾರ, ಸ್ವಾದಿಷ್ಟಾನ, ನಾಭಿ, ಅನಾಹುತ, ವಿಶುದ್ಧ, ಆಜ್ಞಾ, ಸಹಸ್ರಾರ, ಶಿಖಾ ಮತ್ತು ಪಶ್ಚಿಮ ಚಕ್ರ. ಇವೆಲ್ಲವುಗಳಿಗೂ ಭಿನ್ನ ಭಿನ್ನ ದಳ ಸಂಖ್ಯೆ, ವರ್ಣ, ಆದಿದೇವತೆಗಳು ಇದ್ದಾರೆ. ಇವು ಯಾವುದೂ ಇಲ್ಲದ ನಿರಾಮಯ ವಸ್ತುವೇ ಬಸವಣ್ಣ.
*ಆ ಚಿದದ್ವಯವಾದ ಬಸವಣ್ಣನೇ
ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ,
ಎನ್ನ ಸರ್ವಾಂಗಲಿಂಗವು ಕಾಣಾ.*
ಶಿವನ ಚಿತ್ ದಿಂದ ಉದಯವಾದ ಆ ಬಸವಣ್ಣನೇ ನನ್ನ ಇಷ್ಟಲಿಂಗ, ನನ್ನ ಪ್ರಾಣಲಿಂಗ, ನನ್ನ ಭಾವಲಿಂಗ, ನನ್ನ ಸರ್ವಾಂಗಲಿಂಗವೂ ಬಸವಣ್ಣನೇ.
*ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು
ಬಸವಣ್ಣನಾದ ಕಾರಣ,
`ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ
ಭವಾರ್ಣವ ದಾಂಟಿದೆನು ಕಾಣಾ.*
ಶಟ್ಸ್ಥಲಗಳಾದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಸ್ಥಲ ಗಳಲ್ಲಿ ಉಚ್ಚರಿಸುವ ಮಂತ್ರ ಓಂ ನಮಃ ಶಿವಾಯ ವೆಂಬ ಷಡಕ್ಷರ ಮಂತ್ರವು ಬಸವಣ್ಣನೇ, ಅದಕ್ಕೆ
`ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ
ಭವ ಸಾಗರವನ್ನು ದಾಟಿದೆನು.
*ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ
ಶರಣನಾದೆನು ಕಾಣಾ.
ಬಸವನೇ ಲಿಂಗವಾದ ಕಾರಣ ನಾನಂಗವಾದೆನು.*
ಶಿವಯೋಗದ ಲಿಂಗಾಂಗ ಯೋಗದಲ್ಲಿ ಶಿವನೇ ಲಿಂಗ ಪತಿ ಶರಣನೆ ಅಂಗ ಸತಿ. ಬಸವಣ್ಣನೇ ಲಿಂಗ ವಾದ್ದರಿಂದ ಅವನೇ ಪತಿ, ನಾನೇ ಅಂಗ ವಾದ್ದರಿಂದ ನಾನೇ ಸತಿ. ಈ ರೀತಿ ನನ್ನ ಲಿಂಗಾಂಗ ಸಾಮರಸ್ಯ ದಿಂದ ಶರಣನಾದೆನು.
*ಕರ್ತೃವೇ ಬಸವಣ್ಣ, ಭೃತ್ಯನೇ ನಾನು.
ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ.*
ಬಸವಣ್ಣನೇ ನನ್ನ ಕರ್ತೃ, ನಾನು ಭೃತ್ಯ. ನನ್ನ ಸಕಲ ಕಾಯಕ ಮಾಡಿಸುವವನು ಬಸವಣ್ಣ. ನಾನು ಬರೀ ಆಜ್ಞಾಪಾಲಕ.
ಬಸವಣ್ಣನೇ ನನ್ನ ಒಡೆಯ, ನಾನು ಅವನ ಬಂಟ. ನನ್ನ ದೇಹದಲ್ಲಿ ಇರುವ ದೇಹಿಯೇ ಬಸವಣ್ಣನು ಅಯ್ಯ.
*ಇದು ಕಾರಣ,
ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ,
ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ.*
ನನ್ನ ನಡೆಯುವ ಚೇತನ ಬಸವಣ್ಣ, ನನ್ನ ನುಡಿಯುವ ಚೇತನ ಬಸವಣ್ಣ,
ನನ್ನ ನಡೆ ನುಡಿಯೊಳಗಿರುವ ಸರ್ವ ಚೈತನ್ಯದ ಆತ್ಮಕ ಬಸವಣ್ಣನು ಅಯ್ಯ.
.
*ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ
ನಾನು ಶರಣನಾದೆನು ಕಾಣಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.*
ಹೀಗೆ ಇರುವ ಬಸವಣ್ಣನವರ ಶ್ರೀಪಾದದಲ್ಲಿ ಇದ್ದುಕೊಂಡು ನಾನು ಶರಣನಾದೆನು ಎನ್ನುತ್ತಾರೆ. ಈ ವಚನ ಸ್ಪಷ್ಟವಾಗಿ ತಿಳಿಸುತ್ತದೆ - ತೋಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು ಅಲ್ಲಮ ಬಸವ ಸಂಪ್ರದಾಯದ ವಿರಕ್ತ ಗುರುಗಳು.
ಅವರಿಗೆ ನಮ್ಮ ಹೃದಯಪೂರ್ವಕ ನಮನಗಳು 🙏🙏🙏
-✍️ Dr Prema Pangi
#ಪ್ರೇಮಾ_ಪಾಂಗಿ,
#ಸಪ್ತಕಮಲದ_ಮಧ್ಯದಲ್ಲಿ_ಉತ್ಪತ್ತಿಯಾದ_ಪರಂಜ್ಯೋತಿ,
Comments
Post a Comment