ವಚನ ದಾಸೋಹ
ವಚನ:
#ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ.
ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ,
ಒಂದು ಮಾತಿನೊಳಗೆ ವಿಚಾರವಿದೆ; ಕನ್ನಡಿಯೊಳಗೆ ಕಾರ್ಯವಿದೆ,
ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ ? / 683
ಅರ್ಥ:
ವ್ಯೋಮಕಾಯ ಅಲ್ಲಮಪ್ರಭುಗಳು ಶಿವಯೋಗದ ದೃಷ್ಠಿಯೋಗ ಅನೇಕ ಪ್ರಕಾರದ ಯೋಗ ವಿಧಾನಗಳಲ್ಲಿಯೆ ಅತ್ಯಂತ ಸುಲಭವಾದ ಯೋಗ ಮಾರ್ಗವೆಂದು ಅದರ ವಿಧಾನ ತಿಳಿಸುತ್ತಾರೆ.
*ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ.*
ಕಾಲಸಡಗರ ಅಂದರೆ ನಾವು ನಡೆಯುತ್ತಿರುವ ಪಾಲಿಸುತ್ತಿರುವ ಪಂಚಾಚಾರಗಳು ಸದಾಚಾರ, ಲಿಂಗಾಚಾರ ಶಿವಾಚಾರ,ಗಣಾಚಾರ ಭೃತ್ತಾಚಾರ.ಇದು ನಮ್ಮ ಕಾಲುಗಳು ನಡೆಯುತ್ತಿರುವ ಸಾಧನಾ ಪಥ. ಕೈಯ ಸಡಗರ ಕರಸ್ಥಲಕ್ಕೆ ಲಿಂಗವೆ ಭೂಷಣ, ಅದರೊಂದಿಗೆ ಕಂಗಳ ಗಳು ಇಷ್ಟಲಿಂಗದಲ್ಲಿ ದೃಷಿಯೋಗದ ಸಡಗರ ಸಂಭ್ರಮ ಮಾಡುತ್ತವೆ.
*ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ*
ಏಕೆಂದರೆ ಲಿಂಗಾಂಗ ಸಾಮರಸ್ಯಕ್ಕೆ ಕಂಗಳೇ ಕಾರಣವಾಗಿವೆ, ತ್ರಾಟಕದ ದೃಷ್ಟಿಯೋಗವೇ ಕಾರಣವಾಗಿದೆ.
*ಒಂದು ಮಾತಿನೊಳಗೆ ವಿಚಾರವಿದೆ*
ಕರಸ್ಥಲದಲ್ಲಿ ಇಷ್ಟಲಿಂಗ, ಆ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಆ ದೃಷ್ಟಿಯೋಗದಿಂದ ಅಂಗಲಿಂಗ ಸಾಮರಸ್ಯ, ಇದು ಅನುಭವದ ಮಾತು. ಈ ನುಡಿ ಚಿಕ್ಕದಾದರೂ ಶಿವಯೋಗ ದ ವಿಚಾರವನ್ನೆಲ್ಲ ಒಳಗೊಂಡಿದೆ.
*ಕನ್ನಡಿಯೊಳಗೆ ಕಾರ್ಯವಿದೆ*
ಕನ್ನಡಿಯಲ್ಲಿ ಬೃಹತ್ ಕಾಯವ ಪ್ರತಿಬಿಂಬಿತಗೊಳ್ಳುತ್ತದೆ. ಅದರಲ್ಲಿ ಅಡಗುತ್ತದೆ. ಹಾಗೆಯೆ ದೃಷ್ಟಿಯೋಗಕ್ಕೆ ಸ್ಥಾನವಾದ ಇಷ್ಟಲಿಂಗದಲ್ಲಿ ವಿಶ್ವವ್ಯಾಪಕವಾದ ತೇಜೋಮೂರ್ತಿ ಮಹಾಲಿಂಗವೇ ಅಡಗಿದೆ. ಪಂಚಾಚಾರಗಳ ಪಾಲನೆ, ಕರಸ್ಥಲದ ಇಷ್ಟಲಿಂಗವು ಕುರುಹಿನಲ್ಲಿ ದೃಷ್ಟಿಯೋಗ, ಅದರಿಂದ ಮನೋಮಗ್ನತೆ ಮತ್ತು ಲಿಂಗಾಂಗಸಾಮರಸ್ಯದ ಅನುಭಾವ ಪಡೆಯುವುದೇ ಶಿವಯೋಗ. ಈ ಒಂದು ಮಾತಿನಲ್ಲಿ ದೃಷ್ಟಿಯಿಂದ ಸಾಕ್ಷಾತ್ಕಾರ ಪಡೆಯುವ ದೃಷ್ಟಿಯೋಗದ ಸಾರವೇ ಅಡಗಿದೆ. ಕರಿಯು ಕನ್ನಡಿಯಲ್ಲಿ ಅಡಗಿದಂತೆ ಅಂದರೆ ನೋಡಲು ಸಣ್ಣದಾದ ಕನ್ನಡಿಯಲ್ಲಿ ದೊಡ್ದ ಕಾಯದ ಆನೆ ಕಾಣುವಂತೆ,ಕರಸ್ಥಲದ ಇಷ್ಟಲಿಂಗದಲ್ಲಿ ವಿಶ್ವವ್ಯಾಪಿ ಮಹಾಲಿಂಗ ಸಾಧಕನಿಗೆ ಗೋಚರಿಸುವುದು.
*ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ*
ಇಷ್ಟು ಸುಲಭವೂ ಸರಳವೂ ಆದ ಶಿವಯೋಗವು ಇರುವಾಗ ಜನರಿಗೆ ಅದೇಕೆ ತಿಳಿಯುತ್ತಿಲ್ಲ? ಅಲ್ಲಮರಿಗೆ ಈ ವಿಷಯದಲ್ಲಿ ಅಚ್ಚರಿಯುಂಟಾಗಿದೆ.
#*ಶಿವಯೋಗ:*
ಯೋಗ ಅಂದರೆ 'ವಸ್ತು ಪರವಸ್ತುವಿನಲ್ಲಿ ಸಂಯೋಗವಾಗುವದು ' ಅಥವಾ
'ಆತ್ಮ ಪರಮಾತ್ಮನಲ್ಲಿ ಸಂಯೋಗ ವಾಗುವದು' ಯೋಗ ತನ್ನಲ್ಲಿಯೇ ತನ್ನ ಶರೀರದ ಮುಖಾಂತರವಾಗಿ ಪಡೆಯುವ ಒಂದು ವಿಶೇಷ ಅವಸ್ಥೆಯಾಗಿದೆ. ಯೋಗಿ ಯೋಗದಿಂದ ಉಂಟಾಗುವ ಅನುಭವವನ್ನು ತನ್ನ ಅಂತರಂಗದಲ್ಲಿಯೇ
ಕಾಣುತ್ತಾನೆ. ೧೨ ನೆಯ ಶತಮಾನದ ಶರಣರು ಎಲ್ಲ ಯೋಗಗಳನ್ನು ಅರಿತು ಸಾಕ್ಷಾತ್ಕಾರವಾಗಿಸಿಕೊಂಡು, ಚಿತ್ತವೃತ್ತಿಗಳನ್ನು ನಿಗ್ರಹಿಸುವ ಇಷ್ಟಲಿಂಗದ ಆಯತ, ಸ್ವಾಯತ ಮತ್ತು ಸನ್ನಿಹಿತ ಅಳವಡಿಸಿಕೊಂಡು, ಶಟ್ಸ್ಥ ಲದ ಮಾರ್ಗದಲ್ಲಿ ಸಾಗುವ, ತಮ್ಮದೇ ಆದ 'ಲಿಂಗಾಂಗಯೋಗ ' ಪ್ರತಿಪಾದಿಸಿ ಅದನ್ನೇ 'ಶಿವಯೋಗ 'ವೆಂದರು. ಇಪ್ಪತ್ತೈದು ಅಂಗತತ್ವಗಳು ಹನ್ನೊಂದು ಲಿಂಗತತ್ವ ಗಳೊಡನೆ ಕೂಡಿ ಲಿಂಗಾಂಗ ಸಾಮರಸ್ಯದಿಂದ ಮಾನವ ಮಹಾದೇವನಾಗುವದೇ ಶಿವಯೋಗ.
ಶಿವಯೋಗದಲ್ಲಿ ವಾಮಮಾರ್ಗಗಳಿಲ್ಲ . ಭಕ್ತಿಯೋಗ, ನಿಷ್ಕಾಮ ಕಾಯಕ ಯೋಗ, ಜ್ಞಾನಯೋಗ ಮೂರನ್ನೂ ಶಿವಯೋಗದಲ್ಲಿ ಮತ್ತು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡರು.ಶರಣರು ಪ್ರತಿಪಾದಿಸಿದುದು ಅನುಭಾವ ಮಾರ್ಗವನ್ನು. ಪೂಜೆ ಪ್ರಾರ್ಥನೆಗಳೇ ಅಂತ್ಯವಲ್ಲ. ಅವು ಆರಂಭ. ಆದರೆ ಅವೇ ಅಂತ್ಯವಲ್ಲ. ಅವೇ ಬದುಕಿನ ಉದ್ದೇಶವೂ ಅಲ್ಲ. ಸತ್ಯದರ್ಶನವೇ ಅಂತಿಮ ಗುರಿ. 'ಆರಾಧನೆಯಿಂದ ಅನುಭಾವಕ್ಕೆ' ಇದೇ ಅವರ ಶಟ್ಸ್ಥಲದ ಮಾರ್ಗ. ಇಡೀ ಬ್ರಹ್ಮಾಂಡವನ್ನು ಲಿಂಗರೂಪದಲ್ಲಿ ಆರಾಧನೆಯಾಗಿ ಮಾಡಿ ಲಿಂಗಾಂಗ ಸಾಮರಸ್ಯದಿಂದಲೇ ಬ್ರಹ್ಮಾಂಡದ ಸತ್ಯದರ್ಶನ ಮಾಡಿದ ಅನುಭಾವಿಗಳು ನಮ್ಮ ಶರಣರು.
ಗುರು ಬಸವಣ್ಣನವರು ಶಿವಯೋಗ ಹೀಗೆ ವರ್ಣಿಸುತ್ತಾರೆ.
#ಆಹ್ವಾನಿಸಿ ಕರೆವಲ್ಲಿ ಎಲ್ಲಿರ್ದನೋ,
ಈರೇಳು ಲೋಕ ಹದಿನಾಲ್ಕು ಭುವನಂಗಳನೊಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿ ಅಡಗಿರ್ದನೋ ಮುಳ್ಳೂರ
ತೆರಹಿಲ್ಲದಿರ್ಪ ಅಖಂಡ ವಸ್ತು ?
ಬರಿಯ ಮಾತಿನ ಬಳಕೆಯ ತೂತ ಜ್ಞಾನವ ಬಿಟ್ಟು, ನೆಟ್ಟನೆ ತನ್ನ
ಕರಸ್ಥಲದೊಳಗಿರುತಿರ್ಪ ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯ ನಿಶ್ಚಯ ಒದಗೆ
ಈ ದಿವ್ಯ ನಿಶ್ಚಯದಿಂದ ಕುಳವಡಗಿ ಅದೈತವಪ್ಪುದು !
ಇದು ಕಾರಣ, ನಮ್ಮ ಕೂಡಲಸಂಗನ ಶರಣ ಆಹ್ವಾನ ವಿಸರ್ಜನೆಯೆಂಬುಭಯ ಜಡತೆಯ ಬಿಟ್ಟು ತಮ್ಮ ತಮ್ಮ ಕರಸ್ಥಳದಲ್ಲಿ ನಿಶ್ಚಯಿಸಿದವರಿಗೆ ಸ್ವಯಂ ಲಿಂಗವಾದ ಕಾಣಿರೋ! /-ಬ.ಷ.ವ. ೧೨೧೫
- ✍️Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು
#ಕಾಲ_ಸಡಗರ_ಕೈಯಲದೆ_ಕೈಯ_ಸಡಗರ
Comments
Post a Comment