ವಚನ ದಾಸೋಹ

#ವಚನ:
#ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವ ನಾನಯ್ಯಾ.
ಎನ್ನ ಕಾಲೇ ಕಂಭ, ದೇಹವೇ ದೇಗುಲ,
ಶಿರ ಹೊನ್ನ ಕಳಶವಯ್ಯಾ.
ಕೂಡಲ ಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
- ಗುರು ಬಸವಣ್ಣನವರು
ಅರ್ಥ:
ಈ ವಚನದಲ್ಲಿ ಬಸವಣ್ಣನವರು ತಮ್ಮ ದೇಹವನ್ನೇ ದೇವಾಲಯವನ್ನಾಗಿ ಕಂಡು, ಅದನ್ನು  ಕಲ್ಲು-ಮಣ್ಣುಗಳನ್ನು ಬಳಸಿ ಕಟ್ಟಿಸುವ ಶಿವಾಲಯದ ಸ್ವರೂಪಕ್ಕೆ ಹೋಲಿಸಿ ನೋಡಿದ್ದಾರೆ. ನಮ್ಮ ದೇಹವೇ ದೇವಾಲಯ. ಆತ್ಮಲಿಂಗವೇ ದೇವರು. ಇದು ಶರಣ ಧರ್ಮದ ತಿರುಳು.

*ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವ ನಾನಯ್ಯಾ.*

 ‘ಉಳ್ಳವರು’ ಅಂದರೆ ಶ್ರೀಮಂತರು ದೇವಾಲಯ ಕಟ್ಟಿಸುವರು. ಆದರೆ ನಾನು ಬಡವ. ಆದ್ದರಿಂದ ಯಾವ ದೇವಾಲಯವನ್ನೂ ಕಟ್ಟಿಸಲಾರೆ. ಗುರು ಬಸವಣ್ಣನವರು ಆಸ್ಥಾನದಲ್ಲಿ ಮಂತ್ರಿಯಾಗಿ ಮಹಾ ದಂಡನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ತಮ್ಮ ಸಮಸ್ತ  ಸಂಪತ್ತನ್ನು ದಾಸೋಹಕ್ಕೆ ವಿನಯೋಗಿಸುತ್ತಿದ್ದರು. ಹಾಗಾಗಿ ಹಣಸಂಚಯ ಮಾಡದ ಕಾರಣ ನಾನು ಬಡವ ದೇವಾಲಯ ಕಟ್ಟಲಾರೆ ಎನ್ನುತ್ತಾರೆ.

*ಎನ್ನ ಕಾಲೇ ಕಂಭ, ದೇಹವೇ ದೇಗುಲ,
ಶಿರ ಹೊನ್ನ ಕಳಶವಯ್ಯಾ.
ಕೂಡಲ ಸಂಗಮದೇವಾ, ಕೇಳಯ್ಯಾ*

ನನ್ನ ಕಾಲೇ ಕಂಭ, ದೇಹವೇ ದೇವಾಲಯ. ಆ ದೇಹವೆಂಬ ದೇವಾಲಯಕ್ಕೆ ನನ್ನ ಶಿರವೇ ಬಂಗಾರದ ಕಳಸ ಅಂದರೆ ಬಸವಣ್ಣನವರು ಕಲ್ಪಿಸುವ ದೇವಾಲಯಕ್ಕೆ ಅವರ ಕಾಲುಗಳೇ ಕಂಭಗಳು, ಶಿರವೇ ಹೊನ್ನಿನ ಕಳಸ , ಇಡೀ ದೇಹವೇ ದೇಗುಲ. ಸಾಕ್ಷಾತ್ ಶಿವನು, ಕೂಡಲ ಸಂಗಯ್ಯನು ಪ್ರಾಣಲಿಂಗದ ಸ್ವರೂಪದಲ್ಲಿ ನೆಲೆನಿಂತ ಭವ್ಯ ದೇವಾಲಯವಾಗಿತ್ತು ಅವರ ದೇಹ.

*ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.*

ಸ್ಥಾವರವೆಂದರೆ,  ಕಲ್ಲು-ಮಣ್ಣು ಬೆಟ್ಟ-ಗುಡ್ಡ  ಮುಂತಾದ ಚಲನೆಯಿಲ್ಲದ ಅಚೇತನ ವಸ್ತುಗಳು. ಈ ಜಡವಸ್ತುಗಳಿಂದ ಕಟ್ಟಿದ ದೇವಾಲಯವು ಸ್ಥಾವರವೇ.
ಜಂಗಮವೆಂದರೆ ಚಲನಶೀಲವಾದದ್ದು. ಶರಣ ಧರ್ಮದಲ್ಲಿ ಜಂಗಮ ಎಂದರೆ ಲೋಕಸಂಚಾರಿಯಾಗಿ ಧರ್ಮದ ತತ್ವಪ್ರಸಾರ ಮಾಡುವ ಶಿವಭಕ್ತ ಶರಣ. ಇದನ್ನೇ ಇನ್ನೂ ವ್ಯಾಪಕವಾದ ದೃಷ್ಟಿಯಿಂದ  ಶರಣರು  ಜಂಗಮವೆಂದರೆ ಸದಾ ಚಲನಶೀಲವಾದ ಚೈತನ್ಯ ಎಂದು ವ್ಯಾಖ್ಯಾನಿಸಿದರು.  ಶಿವನ ಚಿತ್ ಶಕ್ತಿಯಾಗಿ  ಹೊರಹೊಮ್ಮಿದ ಚೈತನ್ಯವು ದೇಹದಲ್ಲಿ ಆತ್ಮವಾಗಿಯೂ, ವಿಶ್ವದಲ್ಲಿ  ವಿಶ್ವವ್ಯಾಪಿ ಶಿವಶಕ್ತಿ ತತ್ವವಾಗಿಯೂ ವ್ಯಾಪಿಸಿದೆ. ಇದು ಅವಿನಾಶಿಯಾದುದು.  ಯಾವ ಚೈತನ್ಯದ ಕಾರಣದಿಂದ ದೇಹವು ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಗುವುದೊ, ಆ ಚೈತನ್ಯವೇ ಆತ್ಮ. ಈ ಆತ್ಮವು ನಾಶವಿಲ್ಲದ್ದು, ಶಾಶ್ವತವಾದುದು.
ಅಳಿವು ಅಂದರೆ ನಾಶ, ಸಾವು ಅಥವಾ ಶಿಥಿಲತೆ  ಎಂದು ಅರ್ಥ.
ಹೀಗೆ ಜಡವಸ್ತುಗಳಾದ ಕಲ್ಲುಮಣ್ಣುಗಳಿಂದ ಕಟ್ಟಿದ ದೇವಾಲಯ ನಾಶವಾಗಬಹುದು, ಆದರೆ ಜಂಗಮಸ್ವರೂಪವಾದ ಆತ್ಮಕ್ಕೆ ಅಳಿವೆಂಬುದು ಇಲ್ಲ ಎನ್ನುತ್ತಾರೆ ಗುರು ಬಸವಣ್ಣನವರು.
*ಭಾವ:*
ಇದು ಪ್ರಾಣಲಿಂಗಿಯ ಪ್ರಾಣಲಿಂಗಿ ಸ್ಥಲದ ವಚನ. 
 ಕಾಲುಗಳು ಕಂಬ, ದೇಹವೇ ದೇಗುಲ, ತಲೆಯೇ ಆ ದೇಗುಲದ ಚಿನ್ನದ ಕಳಸ - ಈ ಅತ್ಯಂತ ಉನ್ನತ ಸ್ಥಿತಿ ತಲುಪಿದ ದೇಹವು ಚಲಿಸುವ ದೇವಾಲಯ ಅಂದರೆ ಜಂಗಮ ದೇವಾಲಯವಾಗುತ್ತದೆ.
ಕಲ್ಲು ಮಣ್ಣಿನಿಂದ ಕಟ್ಟಿರುವ ದೇವಾಲಯ ಸ್ಥಾವರ, ಅದಕ್ಕೆ ಅಳಿವುಂಟು. ಆದರೆ ಈ ಜಂಗಮದೇವಾಲಯಕ್ಕೆ ಅಳಿವಿಲ್ಲ.
ಈ ದೇಹ ಶಾಶ್ವತವಿಲ್ಲದಿದ್ದರೂ  ಒಳಗಿರುವ  ಚೈತನ್ಯ, ಈ ಗುಡಿಯ ಒಳಗಿರುವ ಒಡೆಯ, ಅವನು ಶಾಶ್ವತ. ಆ ಶಾಶ್ವತ ತತ್ವಕ್ಕೆ ಅಳಿವಿಲ್ಲ. ಅದು ಅವಿನಾಶಿ.  ಪ್ರಾಣಲಿಂಗ ಜಂಗಮವಾದುದು. ಈ ಪ್ರಾಣಲಿಂಗವನ್ನು ಸದಾ ಮನಸ್ಸಿನಲ್ಲಿ ಗ್ರಹಿಸಿಕೊಂಡಿರುವುದೇ ಪ್ರಾಣಲಿಂಗಿ ಸ್ಥಲ. ಹೀಗೆ ಪ್ರಾಣಲಿಂಗಾನುಸಂಧಾನದ ಎತ್ತರಕ್ಕೆ ವಚನ ಏರುತ್ತದೆ. ಅಂತರಂಗದಲ್ಲಿ ಅಂತರ್ಯಾಮಿಯಾಗಿರುವ ಈ ಪ್ರಾಣಶಕ್ತಿಯು ಜಂಗಮ; ಅದರ ಅನುಭವವೇ, ಅಮೃತಾನುಭವ, ಅನುಭಾವ.
"ನಮ್ಮ ದೇಹವೇ ದೇವಾಲಯ.
ಆತ್ಮಲಿಂಗ (ಪ್ರಾಣಲಿಂಗ)ವೇ ದೇವರು".

ಶರಣರು, ದೇವಸ್ಥಾನ ಕೇಂದ್ರಿತವಾದ ಸಾಕಾರ ಶಿವ, ಸ್ಥಾವರ ಲಿಂಗ ಪೂಜೆಗಳನ್ನು ದೇವಸ್ಥಾನದ ಸಮೇತ ನಿರಾಕರಿಸಿ, ದೈವತ್ವದ ಕಲ್ಪನೆಯ ಸಾಂಕೇತಿಕ ರೂಪವನ್ನಾಗಿ ಇಷ್ಟಲಿಂಗವನ್ನು ಸ್ವೀಕರಿಸಿ ಲಿಂಗದೀಕ್ಷೆ ಮೂಲಕ ತಮ್ಮ ಕೊರಳಲ್ಲಿ ಕಟ್ಟಿಕೊಂಡರು. ಇಷ್ಟಲಿಂಗ, ನಿರಾಕಾರ ಶಿವನ ಒಂದು ಕುರುಹು.  ನಿಜವಾಗಿ ಪೂಜೆ ಮಾಡುವುದು ನಮ್ಮ ದೇಹದಲ್ಲಿ ಇರುವ ನಿರಾಕಾರ ಶಿವನ ಅಂಶವಾದ "ಅವಿನಾಶಿ ಪ್ರಾಣಲಿಂಗಕ್ಕೆ". ಶಿವಯೋಗವೇ ಪೂಜೆ ವಿಧಾನ. ಲಿಂಗಾಂಗ ಸಾಮರಸ್ಯಯೇ ಶರಣನ ಸಾಧನೆ.

ಹೀಗೆ ಪರಶಿವನ ಕಲ್ಪನೆಯನ್ನು ದೇವಾಲಯದಿಂದ ಮತ್ತು ಪುರಾಣಗಳಿಂದ ಬಿಡಿಸಿ, ಮನುಷ್ಯನ ಶರೀರಕ್ಕೆ ಸ್ಥಳಾಂತರ ಮಾಡುವುದರ ಮೂಲಕ, ಮನುಷ್ಯನ ಶರೀರವನ್ನೇ ದೇವಸ್ಥಾನವನ್ನಾಗಿ ಮಾಡಿದ್ದಲ್ಲದೆ ಆ ಕಾರಣದಿಂದ ಮನುಷ್ಯತ್ವಕ್ಕೆ ಒಂದು ಘನತೆ ಗೌರವವನ್ನು ವಚನಕಾರರು ತಂದುಕೊಟ್ಟರು.

ಶರಣರ ದೇವಾಲಯದ ನಿರಾಕರಣೆಯ ಹಿಂದೆ ಇನ್ನೂ ಒಂದು ಉದ್ದೇಶವಿತ್ತು.
ಭಕ್ತನಿಗೂ ದೇವರಿಗೂ ದೇವಾಲಯದ ಕಾರಣದಿಂದ ನಡುವೆ ಸ್ಥಾಪಿತವಾದ ‘ಪೂಜಾರಿ’ಯ ಮಾಧ್ಯಮವನ್ನು ನಿರಾಕರಿಸಿ, "ಭಕ್ತಿ ಎನ್ನುವುದು ಭಕ್ತ ಹಾಗೂ ದೇವರ ನಡುವಣ ಅತ್ಯಂತ ಆತ್ಮೀಯ ಹಾಗೂ ವ್ಯಕ್ತಿನಿಷ್ಠ ಅನುಸಂಧಾನ' ಎನ್ನುವ ಭಾವನೆಯನ್ನು ಶರಣರು ಪ್ರತಿಪಾದಿಸಿದರು.
ವೈಯಕ್ತಿಕ, ಆತ್ಮೀಯ ಹಾಗೂ ವ್ಯಕ್ತಿನಿಷ್ಠ ಅನುಸಂಧಾನದಿಂದ ಮಾಡಿದ ಪೂಜೆ ಮಾತ್ರ ಶಿವನನ್ನು ಮುಟ್ಟುತ್ತದೆ.

12 ನೆಯ ಶತಮಾನದಲ್ಲಿ ಸಮಾಜದ ಕೆಳವರ್ಗದ  ಶರಣರಿಗೆ, ದೇವಾಲಯ ಪ್ರವೇಶವನ್ನು ನಿಷೇಧಿಸಲಾಗಿತ್ತು. ಎಲ್ಲ ವರ್ಗಗಳಿಂದ ಬಂದ ಶರಣರು ಈ ಪ್ರವೃತ್ತಿಯನ್ನು ದೇವಾಲಯ ನಿರಾಕರಣೆಯ ಮೂಲಕ, ದೇಹವನ್ನೇ ದೇಗುಲವನ್ನಾಗಿ ಮಾಡಿಕೊಳ್ಳುವ ಮೂಲಕ ಪ್ರತಿಭಟಿಸಿದ ಕ್ರಮ ತೀರಾ ವಿಶಿಷ್ಟವಾಗಿದೆ. ದೇಹವೇ ದೇವಾಲಯವೆಂಬ ಕಲ್ಪನೆಯನ್ನು ಹಾಗೂ ಇಷ್ಟಲಿಂಗ ನಿಷ್ಠೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಶರಣರು  ದೇವಾಲಯಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳನ್ನೂ, ಅತ್ಯಂತ ತೀವ್ರವಾಗಿ ನಿರಾಕರಿಸಿದರು. ‘ಏಕದೈವ’ವಾದ ‘ಶಿವ’ ಇಷ್ಟಲಿಂಗ ರೂಪದಿಂದ ತನ್ನ ಕರಸ್ಥಲ ಹಾಗೂ ಉರಸ್ಥಲಗಳಲ್ಲಿಯೇ ಇದ್ದಾನೆ ಮತ್ತು ಆ ಮೂಲಕ ತನ್ನ ದೇಹವೇ ದೇಗುಲವಾಗಿದೆ. ಈ ರೀತಿ ದೇಹವನ್ನು ದೇಗುಲವನ್ನಾಗಿ ಮಾಡಿಕೊಂಡ ತಾವೆಲ್ಲರೂ ವರ್ಣ ವರ್ಗಗಳ ತಾರತಮ್ಯವಿಲ್ಲದೆ ಆಧ್ಯಾತ್ಮಿಕವಾಗಿ ಸಮಾನರು ಎಂಬ ಧರ್ಮಶ್ರದ್ಧೆ ಹಾಗೂ ಸಮಾನತೆಯ ಭಾವನೆಯನ್ನು ಮತ್ತು ಆತ್ಮಪ್ರತ್ಯಯವನ್ನು ಮೂಡಿಸಿದರು. ದೇವಾಲಯ ನಿರಾಕರಣೆಯಿಂದ ಮತ್ತು ಇಷ್ಟಲಿಂಗದ ನಿಷ್ಠೆಯನ್ನು ದೃಢಗೊಳಿಸುವ ಈ ವಿಧಾನದಿಂದ, ಸಮಾನತೆಯೇ ತಳಹದಿಯಾದ ಶರಣ ಧರ್ಮ ಶೀಘ್ರ ದಲ್ಲಿ ಜನಪ್ರಿಯತೆ ಪಡೆದು ವಿಸ್ತಾರಹೊಂದಿ ದೇವಾಲಯಕ್ಕೆ ಬರುವ ಆದಾಯ ಮತ್ತು ಆರತಿ ತಟ್ಟೆಗೆ ಬರುವ ಆದಾಯ ಕುಂಠಿತವಾದ್ದರಿಂದ ಪುರೋಹಿತ ವರ್ಗದ ಸಿಟ್ಟಿಗೆ ಗುರಿಯಾಗಬೇಕಾಯಿತು. ಸುಳ್ಳು ಆರೋಪಗಳನ್ನು ಮಾಡಿ ಮೇಲಿಂದ ಮೇಲೆ ಗುರು ಬಸವಣ್ಣನವರ ವಿರುಧ್ಧ ಬಿಜ್ಜಳ ರಾಜನಲ್ಲಿ ಆರೋಪಿಸುತ್ತಿದ್ದರು.

ಬಸವಣ್ಣನವರು  ಶೋಷಣಾರಹಿತವಾದ ಸಾಮಾಜಿಕ ಸಮಾನತೆಯನ್ನು ಎತ್ತಿ ಹಿಡಿದರು. ಎಷ್ಟೋ ಮೇಲುವರ್ಗಗಳಿಂದ ಬಂದ ಶರಣರು ಅಸ್ಪುರುಷತೆ  ಅಸಮಾನತೆಯನ್ನು,  ದೇವಾಲಯ ನಿರಾಕರಣೆಯ ಮೂಲಕ, ಪ್ರತಿಭಟಿಸಿದ ಕ್ರಮ ತೀರಾ ವಿಶಿಷ್ಟ ಆಗಿದೆ. ಅದು ಶರಣಪಥದ ಮಾನವೀಯತೆಯ, ಸಮಾನತೆಯ ನೀತಿ  ಎನ್ನಬಹುದು. 
ದೇಹವನ್ನೇ ದೇವಾಲಯ ಮಾಡಿಕೊಂಡು ಪ್ರಾಣಲಿಂಗ, ಭಾವಲಿಂಗ ಸಾಕ್ಷತ್ಕರಿಸಿಕೊಂಡು  ಶಿವಯೋಗ ಸಾಧನೆಯಿಂದ ಉದಾತ್ತವಾದ ಅಂತರಂಗದ ಪೂಜೆ, ಶಿವಯೋಗ ಸಾಧನೆಯಿಂದ ಅಂತರ್ಮುಖ ವಿಕಾಸವನ್ನೂ ರೂಪಿಸಿದರು.
- ✍️Dr Prema Pangi,
#ಪ್ರೇಮಾ_ಪಾಂಗಿ,#ಗುರು_ಬಸವಣ್ಣನವರು, 
#ಉಳ್ಳವರುಶಿವಾಲಯವಮಾಡುವರು,

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma