ವಚನ ದಾಸೋಹ
ವಚನ:
ಸಮರಸದೊಳಗಣ ಸ್ನೇಹ
ಮತ್ಸ್ಯ ಕೂರ್ಮ ವಿಹಂಗದಂತೆ;
ಸ್ನೇಹದ ನೋಟದಲ್ಲಿಯೇ ತೃಪ್ತಿ,
ಸ್ನೇಹದ ನೆನಹಿನಲ್ಲಿಯೇ ತೃಪ್ತಿ,
ಸ್ನೇಹದ ಸ್ಪರ್ಶನದಲ್ಲಿಯೇ ತೃಪ್ತಿ.
ಈ ಪರಿಯಲ್ಲಿ ಎಮ್ಮ ಮಹಾಲಿಂಗ ಗಜೇಶ್ವರನಲ್ಲಿ ಲಿಂಗೈಕ್ಯವು!
ವಾರಿಕಲ್ಲ ಪುತ್ಥಳಿ ಕರಗಿ ಅಪ್ಪುವನೊಡಗೂಡಿದಂತಾಯಿತ್ತು. / 63
- ಶರಣ ಗಜೇಶ ಮಸಣಯ್ಶ
ಅರ್ಥ:
ಶರಣ ಗಜೇಶ ಮಸಣಯ್ಯಯವರು ಲಿಂಗೈಕ್ಯ ಸ್ಥಿತಿಯು ಅಂಗಲಿಂಗ ಸಮರಸ, ಅಲೌಕಿಕ ಸ್ನೇಹವಿದ್ದಂತೆ, ನೋಟ ನೆನಹು ಸ್ಪರ್ಶ ಎಲ್ಲದರಲ್ಲೂ ಸಂತೃಪ್ತಿ ಭಾವ ಕಂಡು ಹಿಮದ ಬಂಡೆ ಕರಗಿ ನೀರಿನೊಳಗೆ ಕೂಡಿದಂತೆ ಎಂದು ವರ್ಣಿಸಿದ್ದಾರೆ. ಬೇರ್ಪಡಿಸಲು ಸಾಧ್ಯವೇ ಇಲ್ಲದಂತೆ ಕೂಡಿದ್ದು ಅಂಗ ಲಿಂಗ ಸಮರಸ.
*ಸಮರಸದೊಳಗಣ ಸ್ನೇಹ
ಮತ್ಸ್ಯ ಕೂರ್ಮ ವಿಹಂಗದಂತೆ;
ಸ್ನೇಹದ ನೋಟದಲ್ಲಿಯೇ ತೃಪ್ತಿ,
ಸ್ನೇಹದ ನೆನಹಿನಲ್ಲಿಯೇ ತೃಪ್ತಿ,
ಸ್ನೇಹದ ಸ್ಪರ್ಶನದಲ್ಲಿಯೇ ತೃಪ್ತಿ.
ಈ ಪರಿಯಲ್ಲಿ ಎಮ್ಮ ಮಹಾಲಿಂಗ ಗಜೇಶ್ವರನಲ್ಲಿ ಲಿಂಗೈಕ್ಯವು!*
ಶರಣ ಗಜೇಶ ಮಸಣಯ್ಶನವರು ಲಿಂಗಾಂಗ ಸಾಮರಸ್ಯದ ಅನುಭವವನ್ನು, ಲಿಂಗೈಕ್ಯದ ಸ್ಥಿತಿಯನ್ನು, "ಅಂಗಲಿಂಗ ಸಮರಸದೊಳಗಿನ ಸ್ನೇಹ" ವೆಂದು ಕರೆದಿದ್ದಾರೆ. ಅದನ್ನು ಪ್ರಕೃತಿಯ ಅದ್ಭುತ ವಿಸ್ಮಯಕಾರಿ ಉಪಮೆಗಳೊಂದಿಗೆ ವಿವರಿಸಿರುವರು. ಅದು ಮಸಣಯ್ಯನವರು ಪ್ರಾಣಿ ಪಕ್ಷಿಗಳ ಪ್ರಕೃತಿಯ ಮೇಲೆ ಅಪಾರ ಜ್ಞಾನವನ್ನು ಹೊಂದಿದ್ದರು ಎಂದು ವಿವರಿಸುತ್ತದೆ. ಮತ್ಸ್ಯ(ಮೀನು), ಕೂರ್ಮ(ಆಮೆ), ವಿಹಂಗ(ಪಕ್ಷಿ) ಗಳು ತಮ್ಮ ಮುಂದಿನ ಪೀಳಿಗೆಯ ತತ್ತಿ ಮತ್ತು ಮರಿ ಸಾಕುವ ವಿಧಾನಗಳು ವಿವಿಧವಾಗಿವೆ. ಲಿಂಗಾಂಗ ಸಾಮರಸ್ಯ ಸಾಧನೆಯ ವಿಧಾನವನ್ನು ಮತ್ಸ್ಯದ ನೋಟಕ್ಕೆ, ಕೂರ್ಮದ ನೆನಹಿಗೆ ಮತ್ತು ವಿಹಂಗದ ಸ್ಪರ್ಶಕ್ಕೆ ಹೋಲಿಸಿರುವರು. ಮತ್ಸ್ಯ, ಕೂರ್ಮ ವಿಹಂಗ ಗಳು ಈ ಮೂರೂ ಪ್ರಾಣಿಗಳು ತಮ್ಮ ಮರಿಗಳನ್ನು ಸಲಹುವ ರೀತಿ ಪ್ರಕೃತಿಯ ಒಂದು ಅದ್ಭುತವಾದ ಸೋಜಿಗವಾಗಿದೆ. ಮೀನು ಸಮುದ್ರ ತಟದಲ್ಲಿರುವ ತನ್ನ ಮೊಟ್ಟೆಗಳನ್ನ ತನ್ನ ನೋಟದಿಂದ ಸಲಹಿದರೆ, ಕೂರ್ಮ(ಆಮೆ) ತನ್ನ ನೆನಹಿನಿಂದ ಮತ್ತು ವಿಹಂಗ (ಪಕ್ಷಿ) ಮೊಟ್ಟೆಗಳ ಮೇಲೆ ಕುಳಿತು ತನ್ನ ದೇಹದ ಸ್ಪರ್ಶದಿಂದ ಮೊಟ್ಟೆ ಗಳನ್ನು ಸಲಹುತ್ತವೆ. ಹೀಗೇ ಲಿಂಗಾಂಗ ಸಂಬಂಧವು ವಿವಿಧ ತೆರಣದ್ದು. ಮತ್ಸ್ಯ ತನ್ನ ಮರಿಗಳನ್ನು ನೋಟದಲ್ಲಿ ಸಲಹುವಂತೆ (ಮತ್ಸ್ಯದ ನೋಟದಂತೆ) ಶರಣ ಇಷ್ಟಲಿಂಗದಲ್ಲಿ ತದೇಕವಾಗಿ ಅನಿಮಿಷ ದೃಷ್ಠಿ ಉಳ್ಳವನಾಗುತ್ತಾನೆ. , ಆಮೆ ನೆನಪಿನ ಎಚ್ಚರದಿಂದ (ಕೂರ್ಮದ ನೆನಹು) ಮರಿಗಳನ್ನು ಸಲಹುವಂತೆ ಲಿಂಗವನ್ನು ಸದಾಕಾಲ ನೆನೆಯುತ್ತಾನೆ. ಪಕ್ಷಿಗಳು ತಮ್ಮ ಮರಿಗಳನ್ನು ಸ್ಪರ್ಶದಿಂದ ಸಲಹುವಂತೆ (ವಿಹಂಗದ ಸ್ಪರ್ಶದಂತೆ) ಲಿಂಗ ಸ್ಪರ್ಶ ಮಾಡಿ ಲಿಂಗಪೂಜೆ ಮಾಡುತ್ತಾನೆ.
*ವಾರಿಕಲ್ಲ ಪುತ್ಥಳಿ ಕರಗಿ ಅಪ್ಪುವನೊಡಗೂಡಿದಂತಾಯಿತ್ತು.*
ಆಲಿಕಲ್ಲಿನ ಗೊಂಬೆ ಅಂದರೆ ಆಲಿಕಲ್ಲಿನ ಸ್ವರೂಪ ಕರಗಿ ನೀರಿನಲ್ಲಿ ಒಂದಾದಂತೆ ಲಿಂಗೈಕ್ಯವು. ಆಲಿಕಲ್ಲು ಸಂಪೂರ್ಣವಾಗಿ ಕರಗಿ ತನ್ನ ಸ್ವರೂಪ ಕಳೆದುಕೊಂಡು ನೀರಾಗುವಂತೆ, ಶರಣ ಸಾಧಕನ ಅಂಗತ್ರಯ ಗಳು ಲಿಂಗತ್ರಯಗಳಾಗಿ ಸರ್ವಾಂಗ ಲಿಂಗಮಯನಾಗಿ ಲೀನನಾಗುತ್ತಾನೆ. ಆಲಿಕಲ್ಲು ಕರಗಿದ ನಂತರ ನೀರಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ. ಅದರಂತೆಯೇ ಲಿಂಗೈಕ್ಯನನ್ನು ಲಿಂಗದಿಂದ ಬೇರ್ಪಡಿಸಲು ಸಾಧ್ಯವಿಲ್ಲ.
*ಭಾವ:*
ಅಣುಗಳಲ್ಲಿ ಅಣುವಾಗಿಯೂ, ಮಹತ್ತಿನಲ್ಲಿ ಮಹತ್ತಾಗಿಯೂ ಇರುವ ಸರ್ವಗತ ಸರ್ವಾಂತರ್ಯಾಮಿಯಾದ, ವಿಶ್ವವ್ಯಾಪಿ ಪರಮಸತ್ಯದ ಸ್ವರೂಪ ಸತ್ ಚಿತ್ ಆನಂದ, ನಿರಾಕಾರ ನಿರ್ಗುಣ ನಿರಾಳ ನಿರ್ಮಾಯ ಶಿವನನ್ನು ಅರಿದು, ಅರಿದ ಅರಿವನ್ನ ಮೀರಿ, ಅನುಭವಿಸಿ ಅದರಲ್ಲೇ ಸಂಪೂರ್ಣ ಲೀನವಾಗುವಂತಹದು ಲಿಂಗೈಕ್ಯ. ಲಿಂಗವೇ ತಾನಾಗಿ ಪರಿಣಮಿಸುತ್ತಾನೆ ಸಾಧಕ. ಅಂಗ ಲಿಂಗಗಳಲ್ಲಿ ಎರಡು ಎಂಬ ಭಾವವಳಿದು ಏಕೋಭಾವ ಮೂಡುತ್ತದೆ.
ಭಿನ್ನ ಭಿನ್ನವೆಂಬ ಪ್ರಾಪ್ತಿ ಅಳಿದು ಅವಿರಳ ಸಮರಸ ಸೌಖ್ಯದ "ಶಿವಾದ್ವೈತ" ಸಿದ್ಧಿಸುತ್ತದೆ. ನದಿಯೊಳಗೆ ನದಿ ಬೆರೆದಂತಾಗುತ್ತದೆ. ತನು ಮನ ಪ್ರಾಣ ಭಾವಗಳು ನಿವೃತ್ತಿಯಾಗಿ ಲಿಂಗ ಸ್ವರೂಪವಾಗುತ್ತವೆ. ಲಿಂಗಲೀಯ ವಾಗುತ್ತವೆ. ಇದು "ಭಾವವಿಲ್ಲದ ಬಯಲು ಬಯಲಿಲ್ಲದ ಭಾವ".
"ಐಕ್ಯ" ವೆಂದರೆ ಒಂದಾಗು ಅಥವಾ ಕೂಡಿ ಕೊಳ್ಳು ಅಂಥ ಅರ್ಥ. ಲಿಂಗೈಕ್ಯ ಅಂದರೆ ಲಿಂಗದಲ್ಲಿ ಕೂಡಿಕೊಳ್ಳು ಎಂದು ಅರ್ಥ. (To become one with Linga.)
ಲೌಕಿಕರು ಸತ್ತ ಮೇಲೆ ಐಕ್ಯ ವೆಂದರೆ,
ಶರಣರು ಸತ್ತ ಬಳಿಕ ಐಕ್ಯ ಎನ್ನುವುದರಲ್ಲಿ ನಂಬಿಕೆ ಇಡಲಿಲ್ಲ. ಬದಲಾಗಿ ಕಾಯ ಇರುವಾಗಲೇ ಐಕ್ಯ ಎನ್ನುವುದರಲ್ಲಿ ನಂಬಿಕೆಯಿರಿಸಿ ಅದರಂತೆಯೇ ನಡೆದು ತೋರಿ ಆ ಸ್ಥಿತಿಗೆ 'ನಿಜೈಕ್ಯ' ಎಂದರು. ಇದೇ ನಿಜವಾದ ಐಕ್ಯ ಎಂದು ಅರ್ಥ.
ಐಕ್ಯವು ಷಟ್ಸ್ಥಲದ ಆರನೆಯ ಸ್ಥಲದ ಸ್ಥಿತಿ. ಅದು ಸಾಧಕನು ಲಿಂಗ, ಬಯಲು, ನಿರ್ವಯಲು, ಶಿವನಲ್ಲಿ ಐಕ್ಯನಾಗುವ ಸ್ಥಿತಿಯನ್ನು ಸೂಚಸಿರುವುದು. ಗುರು ಬಸವಣ್ಣನವರು ಒಂದು ವಚನದಲ್ಲಿ ಈ ಸ್ಥಿತಿಯನ್ನು ಹೀಗೆ ವರ್ಣಿಸಿದ್ದಾರೆ.
#ಕಂಗಳು ತುಂಬಿದ ಬಳಿಕ ನೋಡಲಿಲ್ಲ,
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ,
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,
ಮನ ತುಂಬಿದ ಬಳಿಕ ನೆನೆಯಲಿಲ್ಲ,
ಮಹಂತ ಕೂಡಲಸಂಗಮದೇವನ. / 446
*ಶರಣ ಪರಿಚಯ:*
ಶರಣ ಗಜೇಶ ಮಸಣಯ್ಯ ಅಕ್ಕಲಕೋಟೆ ಸಂಸ್ಥಾನದ ಕರ್ಜಗಿ ಗ್ರಾಮಕ್ಕೆ (ಈಗಿನ ವಿಜಯಪುರ ಜಿಲ್ಹೆ) ಸೇರಿದವರು. ಅನುಭವ ಮಂಟಪದ ೭೭೦ ಅಮರ ಗಣಂಗಳ ಲ್ಲಿ ಶರಣಸತಿ ಲಿಂಗಪತಿ ಭಾವದ ಶ್ರೇಷ್ಠ ವಚನ ಕಾರ ಶರಣರಿವರು.ಇವರು 'ಮಹಾಲಿಂಗ ಗಜೇಶ್ವರ' ಅಂಕಿತದಲ್ಲಿ ರಚಿಸಿದ ೭೦ ವಚನಗಳು ಲಭ್ಯವಾಗಿವೆ. ಕರ್ಜಿಗೆಯ ಗಜೇಶ್ವರ ಇವರ ಇಷ್ಟಲಿಂಗ ದೈವ. ಅದನ್ನೇ ತಮ್ಮ ವಚನಾಂಕಿತವಾಗಿಸಿಕೊಂಡಿದ್ದಾರೆ. ವಚನಗಳು ಅವರು ಸಾಧಿಸಿದ ಲಿಂಗೈಕ್ಯದ ಸ್ಥಲವನ್ನು, ಶರಣಸತಿ ಲಿಂಗಪತಿ ಭಾವದ ಉತ್ಕಟತೆಯನ್ನು ಪ್ರಕಟಿಸುತ್ತವೆ. ಸರಳ ಭಾಷೆ, ಮಧುರ ಭಾವ, ಕಾವ್ಯಾತ್ಮಕ ಶೈಲಿಯಿಂದ ಅವರ ಪ್ರಕೃತಿ ಜ್ಞಾನ ದಿಂದ ಮನ ಸೆಳೆಯುತ್ತವೆ. ಇವರ ಪುಣ್ಯ ಸ್ತ್ರೀ ಮಸಣಮ್ಮ ಕೂಡಾ ವಚನಕಾರ್ತಿ ಶರಣೆ. ಕಲ್ಯಾಣದ ಶರಣರ ಜೊತೆ ಅನುಭಾವ ಗೋಷ್ಠಿಗಳಲ್ಲಿ ಪಾಲ್ಗೊಂಡ ಗಜೇಶ ಮಸಣಯ್ಯ ಶರಣರು ಕಲ್ಯಾಣಕ್ರಾಂತಿಯ ನಂತರ ತಮ್ಮ ಕೊನೆಗಾಲದಲ್ಲಿ ಗುಲಬರ್ಗಾ ಜಿಲ್ಲೆಯ ಅಳಂದ ತಾಲೂಕಿನ ಮನಹಳ್ಳಿ ಎಂಬ ಗ್ರಾಮದಲ್ಲಿದ್ದು, ಅಲ್ಲಿಯೇ ಐಕ್ಯರಾದರೆಂದು ತಿಳಿದು ಬರುತ್ತದೆ. ಅಲ್ಲಿ ಇವರ ಹೆಸರಿನ ದೇವಾಲಯವಿರುವುದು ಇದಕ್ಕೆ ನಿದರ್ಶನವಾಗಿದೆನ್ನಲಾಗಿದೆ.
- ✍️Dr Prema Pangi
#ಪ್ರೇಮಾ_ಪಾಂಗಿ,#ಗಜೇಶ_ಮಸಣಯ್ಶ
#ನಿಜೈಕ್ಯ,#ಗುರು_ಬಸವಣ್ಣನವರು,
Comments
Post a Comment